ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ?
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು
ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ
“ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ ಮೂಲಕ ದೊಡ್ಡ ಸತ್ಯವೊಂದನ್ನು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ದೈವ ಎಲ್ಲದಕ್ಕೂ ಒಂದು ತೆರೆಯನ್ನು ಹೊದಿಸಿರುತ್ತದೆ. ಆ ತೆರೆ ಸರಿದಾಗ ವಿಧಿಯ ಉದ್ದೇಶ ತಿಳಿದೀತು – ವಿಷದ (ನಂಜು) ಬಟ್ಟಲಿನಲ್ಲಿ ಅಮೃತದ (ಸೊದೆಯ) ಪರಿಮಳ ಕಂಡುಬಂದಂತೆ – ಎಂದು ತಿಳಿಸುತ್ತಾರೆ ಅವರು.
ಕೆಲವು ಹೆತ್ತವರು ಮನೆಯ ಹತ್ತಿರದ ಶಾಲೆಗಳೆಲ್ಲ ಕೆಟ್ಟವು ಎಂದು ತೀರ್ಮಾನಿಸಿ, ಯಾವುದೋ ದೂರದ ಶಾಲೆಗೆ ಮಗುವನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸುತ್ತಾರೆ. ಇದರಿಂದಾಗಿ, ದಿನಕ್ಕೆ ಎರಡು-ಮೂರು ತಾಸು ಆ ಶಾಲೆಗೆ ಹೋಗಿ ಬರಲಿಕ್ಕಾಗಿ ಪ್ರಯಾಣಿಸುವ ಮಗು ದಣಿದು ಬಂದು ಚೆನ್ನಾಗಿ ಕಲಿಯಲಿಕ್ಕಿಲ್ಲ. ಅಲ್ಲಿನ ಹತ್ತಿರದ ಶಾಲೆಗೆ ಹೋಗಿ ಬರುವ ಇತರ ಮಕ್ಕಳು ಆ ಹೊತ್ತಿನಲ್ಲಿ ಚೆನ್ನಾಗಿ ಓದಿಕೊಂಡು ಒಳ್ಳೆಯ ಅಂಕ ಗಳಿಸುತ್ತಾರೆ. ಹಾಗಾದರೆ, ಯಾವ ಶಾಲೆ ಒಳ್ಳೆಯದು, ಯಾವುದು ಕೆಟ್ಟದು?
ಕೆಲವು ಯುವಕ – ಯುವತಿಯರು ತಮಗೆ ವೈದ್ಯಕೀಯ ಶಿಕ್ಷಣವೇ ಬೇಕು ಅಥವಾ ಇಂಜಿನಿಯರಿಂಗ್ ಶಿಕ್ಷಣವೇ ಬೇಕು; ಇದೇ ಒಳ್ಳೆಯದು, ಉಳಿದದ್ದೆಲ್ಲ ಕೆಟ್ಟದು ಎಂಬ ಹಟಕ್ಕೆ ಬೀಳುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಕಲಿಕೆಗೆ ಎರಡು ಸಾವಿರಕ್ಕಿಂತ ಜಾಸ್ತಿ ಕೋರ್ಸುಗಳು ಲಭ್ಯ. ಯಾವುದೇ ಕೋರ್ಸ್ ಕಲಿತರೂ ಸಂಬಳದ ಉದ್ಯೋಗಕ್ಕೆ ಅಥವಾ ಸ್ವಂತ ಉದ್ಯೋಗಕ್ಕೆ ಅವಕಾಶವಿದೆ. ಬಿ.ಕಾಂ. ಕಲಿತಿರುವ ಗಗನ್ ರಾಜ್, ಯಾವುದೇ ಉದ್ಯೋಗಕ್ಕೆ ಸೇರಿಕೊಳ್ಳಲಿಲ್ಲ; ಶ್ರೀರಂಗ ಪಟ್ಟಣದಲ್ಲಿ ನಾಟಿ ಕೋಳಿ ಫಾರ್ಮ್ ಶುರು ಮಾಡಿ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಮಾತ್ರವಲ್ಲ, ಹಲವರಿಗೆ ಉದ್ಯೋಗ ನೀಡಿದ್ದಾರೆ. ಆದ್ದರಿಂದ, ನಮ್ಮ ಆಸಕ್ತಿಗೆ ಹೊಂದುವ ಯಾವುದೇ ಕೋರ್ಸಿಗೆ ಸೇರಿ ಚೆನ್ನಾಗಿ ಕಲಿಯುವುದೇ ಒಳ್ಳೆಯದು, ಅಲ್ಲವೇ?
ಇನ್ನು ಕೆಲವರಿದ್ದಾರೆ. ತಾನು ಪ್ರೇಮಿಸಿದವಳನ್ನೇ ಅಥವಾ ಪ್ರೀತಿಸಿದವನನ್ನೇ ಮದುವೆಯಾಗಬೇಕೆಂಬ ಹಟಕ್ಕೆ ಬೀಳುವವರು. ಪ್ರಿಯತಮೆ ಅಥವಾ ಪ್ರಿಯಕರ ತನ್ನನ್ನು ಪ್ರೀತಿಸುತ್ತಿದ್ದಾರೆಯೇ ಎಂದು ಇವರು ಯೋಚಿಸುವುದೇ ಇಲ್ಲ. ಕುರುಡು ಪ್ರೀತಿಯಿಂದ ಮದುವೆಯಾದವರು ಕೆಲವೇ ತಿಂಗಳುಗಳಲ್ಲಿ ವಿವಾಹ – ವಿಚ್ಛೇದನಕ್ಕೆ ಅರ್ಜಿ ಹಾಕುವುದನ್ನು ಕಂಡರೂ ಇವರು ಪಾಠ ಕಲಿಯುವುದಿಲ್ಲ. ನಾವೊಂದು ಬಗೆದರೆ, ವಿಧಿ ಇನ್ನೊಂದು ಬಗೆಯುತ್ತದೆ, ಅಲ್ಲವೇ?
ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು
ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು
ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ
ನೆಲವೊಂದು ಬೆಳೆ ಹಲವು – ಮರುಳ ಮುನಿಯ
ಜಾಜಿ ಹೂವಿನ ಬಳ್ಳಿಯಲ್ಲಿ ಎಲೆ ಹಸಿರು, ಹೂ ಬಿಳಿ, ಇದೆಂತು? ಹಾಗೆಯೇ, ಮಾವು ಕಾಯಾಗಿದ್ದಾಗ ಹುಳಿ, ಹಣ್ಣಾದಾಗ ಸಿಹಿ, ಇದು ಹೇಗೆ? ಎಂಬ ಪ್ರಶ್ನೆಗಳ ಮೂಲಕ ಪ್ರಕೃತಿಯ ವೈಚಿತ್ರ್ಯಗಳನ್ನು ಎತ್ತಿ ತೋರಿಸುತ್ತಾ, ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ, ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು. ಈ ಭೂಮಿಯಲ್ಲಿರುವುದು ಒಂದೇ ನೆಲ. ಆದರೆ ಅದರಲ್ಲಿ ಬೆಳೆಯುವ ಬೆಳೆ ಹಲವು: ಭತ್ತ, ಗೋಧಿ, ರಾಗಿ, ಸಿರಿಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹೂಗಳು ಇತ್ಯಾದಿ. ಹಾಗೆಯೇ, ಒಂದೇ ಮಾಯಾಯಂತ್ರದಿಂದ ಒಳಿತು ಮತ್ತು ಕೆಡುಕು ಮೂಡಿ ಬರುತ್ತಿವೆ ಎಂದು ವಿವರಿಸುತ್ತಾರೆ.
ಅದೇ ಮಳೆ – ಜಗದ ಜೀವಿಗಳನ್ನೆಲ್ಲ ಬದುಕಿಸುವ ಜೀವಜಲ ಧಾರೆ ಎರೆಯುತ್ತದೆ. ಆದರೆ ಅದು ಅತಿಯಾದರೆ….. ಕೇದಾರನಾಥದಲ್ಲಿ, ಶ್ರೀನಗರದಲ್ಲಿ, ೨೦೧೫ರ ಡಿಸೆಂಬರಿನಲ್ಲಿ ಚೆನ್ನೈಯಲ್ಲಿ ಆದಂತೆ ಜೀವನಾಶಕ್ಕೆ ಕಾರಣ.
ಒಂದೇ ಅಣುಶಕ್ತಿ – ಅದರಿಂದ ವಿದ್ಯುತ್ ಉತ್ಪಾದಿಸಿದರೆ ಜನಜೀವನಕ್ಕೆ ಒಳಿತು. ಆದರೆ ವಿನಾಶಕ್ಕೆ ಬಳಸಿದರೆ….. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಎಸೆದಾಗ ಆದಂತೆ, ಲಕ್ಷಗಟ್ಟಲೆ ಜನರ ಸಾವು; ಸೊತ್ತು ನಾಶ ಮತ್ತು ದಶಕಗಳ ಕಾಲ ವಿಕಿರಣದ ಅಪಾಯ. ರಷ್ಯಾದ ಚೆರ್ನೊಬಿಲ್ನಲ್ಲಿ ಆದಂತೆ ಅಣುಶಕ್ತಿಯ ಅವಘಡ ಆದರೆ, ಸುತ್ತಲಿನ ಇನ್ನೂರು ಕಿಮೀ ಪ್ರದೇಶದಲ್ಲಿ ವಿಕಿರಣದಿಂದ ಸರ್ವನಾಶ.
ವಾಹನಗಳು, ವಿಮಾನಗಳು, ಮೊಬೈಲ್ ಫೋನುಗಳು, ಸ್ಮಾರ್ಟ್ ಫೋನುಗಳು, ಕಂಪ್ಯೂಟರುಗಳು, ಇಂಟರ್ನೆಟ್ – ಇವೆಲ್ಲ ತಂತ್ರಜ್ನಾನದಿಂದ ಒಳಿತೂ ಇದೆ, ಕೆಡುಕೂ ಇದೆ. ವಾಹನಗಳ ವೇಗ ಮಿತಿ ಮೀರಿದರೆ ಕಾದಿರುತ್ತದೆ ಅಪಘಾತ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ವದಂತಿ, ಪ್ರಚೋದನಕಾರಿ ಹೇಳಿಕೆ, ತಿರುಚಿದ ಚಿತ್ರಗಳನ್ನು ಪ್ರಚಾರ ಮಾಡಿದರೆ ತೊಂದರೆ ಖಂಡಿತ. ಆನ್-ಲೈನ್ ವ್ಯವಹಾರದಿಂದ ಸಾವಿರಾರು ಜನರಿಗೆ ಒಂದೇಟಿಗೆ ಮೋಸವಾದೀತು. ಭಾರೀ ವೇಗದ ವಿಮಾನವೊಂದು ದುರುಳನೊಬ್ಬನ ಕೈಗೆ ಸಿಕ್ಕರೆ ನ್ಯೂಯಾರ್ಕಿನಲ್ಲಿ ಆದಂತೆ, ಗಗನಚುಂಬಿ ಕಟ್ಟಡ ಧ್ವಂಸ ಮಾಡುವ ಸಾಧನವಾದೀತು. ಆದ್ದರಿಂದ ಒಳಿತು, ಕೆಡುಕುಗಳ ಬಗ್ಗೆ ನಿರಂತರ ಚಿಂತನೆ, ವಿವೇಚನೆ ಅಗತ್ಯ.