ಹಕ್ಕು ಹೋರಾಟ 24: ವಿಮಾ ಪರಿಹಾರ ನಿರಾಕರಿಸಲು ಇಎಸ್ಐ ಸಂಸ್ಥೆಯ ನೆವನ

ಭರ್ಗುರಾಮ್ ಮಹಾಧಿಕ್ ಮುಂಬೈಯ ಧನ್ವಂತರಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಫಿಟ್ಟರ್ ಆಗಿ ರೂ.೬,೦೦೦ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದರು.

೨೭ ಮಾರ್ಚ್ ೨೦೧೨ರಂದು ಕೆಲಸ ಮಾಡುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿತು. ಅವರ ಸಹೋದ್ಯೋಗಿಗಳು ಅವರನ್ನು ಫ್ಯಾಕ್ಟರಿಯೊಳಗಿನ ವಿಶ್ರಾಂತಿ ಕೋಣೆಗೆ ಕರೆದೊಯ್ದು ವಿರಮಿಸಲು ಹೇಳಿದರು. ಆದರೆ ಅವರ ಎದೆನೋವು ಹೆಚ್ಚಾಯಿತು. ಹಾಗಾಗಿ ಅವರನ್ನು ವಾಶಿಯಲ್ಲಿರುವ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆಸ್ಪತ್ರೆಗೆ ಒಯ್ದರು.

ಆದರೆ ಮಹಾಧಿಕರು ಬದುಕಿ ಉಳಿಯಲಿಲ್ಲ. ಅದೇ ದಿನ ಆಸ್ಪತ್ರೆಯು ನೀಡಿದ ಸರ್ಟಿಫಿಕೇಟಿನ ಅನುಸಾರ “ಆಸ್ಪತ್ರೆಗೆ ಅವರನ್ನು ತರುವಾಗಲೇ ಪ್ರಾಣ ಹೋಗಿತ್ತು”. ಅನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ನೀಡಿದ ಸರ್ಟಿಫಿಕೇಟಿನಲ್ಲಿ ಬರೆಯಲಾದ ಅವರ ಸಾವಿನ ಕಾರಣ, “ಹೃದಯಾಘಾತ”. ಆಗ ಮಹಾಧಿಕರಿಗೆ ೫೦ ವರುಷ ವಯಸ್ಸು.

ಭರ್ಗುರಾಮ್ ಮಹಾಧಿಕ್ ಉದ್ಯೋಗಿಗಳ ರಾಜ್ಯ ವಿಮಾ ಸಂಸ್ಥೆಯ (ಇಎಸ್ಐಸಿ) ವಿಮಾ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದರು. ಆದ್ದರಿಂದ ಧನ್ವಂತರಿ ಇಂಜಿನಿಯರ್ಸ್ ಘಟಕವು ಮಹಾಧಿಕರ ವಾರೀಸುದಾರರ ಹಕ್ಕುಸಾಧನೆ ಅರ್ಜಿಯನ್ನು ಇಎಸ್ಐ ಕಾಯಿದೆ ಪ್ರಕಾರ ೧೧ ಎಪ್ರಿಲ್ ೨೦೧೨ರಂದು ಇಎಸ್ಐ ಸಂಸ್ಥೆಗೆ ಸಲ್ಲಿಸಿತ್ತು. ಆದರೆ ೧೪ ಮೇ ೨೦೧೨ರಂದು ಅದು ಆ ಅರ್ಜಿಯನ್ನು ಈ ಮುಖ್ಯ ಕಾರಣಕ್ಕಾಗಿ ನಿರಾಕರಿಸಿತು, “ಮೃತರಾದ ಮಹಾಧಿಕರನ್ನು ಇಎಸ್ಐಸ್ ಕಾಯಿದೆ ಪ್ರಕಾರ ಉದ್ಯೋಗಿ ಎಂದು ಪರಿಗಣಿಸಲಾಗದು.”

ಹಕ್ಕುಸಾಧನೆಯ ನಿರಾಕರಣ ಪತ್ರದಲ್ಲಿ ತಿಳಿಸಲಾದ ಇನ್ನೊಂದು ಕಾರಣ: ವಿಮಾ ಪಾಲಿಸಿದಾರನು ಸಹಜ ಕಾರಣಗಳಿಂದಾಗಿ ಮೃತನಾಗಿದ್ದಾನೆ; ಕೆಲಸದ ಒತ್ತಡ ಮತ್ತು ದಣಿವಿನಿಂದಾಗಿ ಅವನ ಸಾವು ಸಂಭವಿಸಿಲ್ಲ.



ಆದ್ದರಿಂದ ಮಹಾಧಿಕರ ಮಡದಿ ಭಾಗ್ಯಶ್ರೀ ಮಹಾರಾಷ್ಟ್ರ ಹೈಕೋರ್ಟಿನಲ್ಲಿ ತನ್ನ ಗಂಡನ ವಿಮಾ ಪರಿಹಾರಕ್ಕಾಗಿ ರಿಟ್ ಅರ್ಜಿ ಸಲ್ಲಿಸ ಬೇಕಾಯಿತು. ತನ್ನ ಪತಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿಯೇ ನಿಧನರಾದರು ಮತ್ತು ಕೆಲಸ ಮಾಡುತ್ತಿದ್ದಾಗಲೇ ಅವರ ಸಾವು ಸಂಭವಿಸಿತು; ಹಾಗಾಗಿ ಅವರ ಸಾವಿಗೆ ವಿಮಾ ಪರಿಹಾರ ನೀಡತಕ್ಕದ್ದು ಎಂದು ಆಕೆ ಅರ್ಜಿಯಲ್ಲಿ ವಾದಿಸಿದ್ದಳು. ಅವಳ ವಕೀಲರಾದ ಪ್ರೀತಿ ವಾಳಿಂಬೆ, ಮೃತರಾದ ಮಹಾಧಿಕರಿಗೆ ಇಎಸ್ಐಸಿ ವಿಮಾ ಯೋಜನೆ ಪ್ರಕಾರ ವಿಮಾ ರಕ್ಷಣೆ ಲಭ್ಯವಿರುವುದನ್ನು ಸ್ಪಷ್ಟ ಪಡಿಸಿದರು.

ಮಹಾರಾಷ್ಟ್ರ ಹೈಕೋರ್ಟಿನ ಮಾನ್ಯ ನ್ಯಾಯಾಧೀಶರಾದ ಕೆ.ಆರ್. ಶ್ರೀರಾಮ್ ಮತ್ತು ವಿ.ಎಮ್. ಕಾನಡೆ ಈ ಪ್ರಕರಣದ ವಿಚಾರಣೆ ನಡೆಸಿ, ೫ ಸಪ್ಟಂಬರ್ ೨೦೧೩ರಂದು ತೀರ್ಪು ನೀಡಿದರು. ಆ ತೀರ್ಪಿನಲ್ಲಿ, ಕೆಲಸದ ಜಾಗದಲ್ಲಿ ಹೃದಯಾಘಾತದಿಂದ ಸಂಭವಿಸಿದ ಈ ಸಾವು ಉದ್ಯೋಗಕ್ಕೆ ಸಂಬಂಧಿಸಿದ ಹಾನಿ (ಇಂಜುರಿ) ಎಂದು ಘೋಷಿಸಿದರು. ಆದ್ದರಿಂದ, ಉದ್ಯೋಗಿಗಳ ರಾಜ್ಯ ವಿಮಾ ಸಂಸ್ಥೆಯು ಭರ್ಗುರಾಮ್ ಮಹಾಧಿಕರ ಸಾವಿಗಾಗಿ ವಿಮಾ ಪರಿಹಾರವನ್ನು ಅವರ ಪತ್ನಿಗೆ ಒಂದು ತಿಂಗಳೊಳಗೆ ಪಾವತಿಸಬೇಕೆಂದು ಆದೇಶಿಸಿದರು.



ವಿವಿಧ ಹೈಕೋರ್ಟುಗಳಿಂದ ಹಾಗೂ ಸುಪ್ರೀಂ ಕೋರ್ಟಿನಿಂದ ಇಂತಹ ಹಲವಾರು ತೀರ್ಪುಗಳು ಬಂದಿದ್ದರೂ, ಇಎಸ್ಐ ಸಂಸ್ಥೆ ಪಾಠ ಕಲಿಯುತ್ತಿಲ್ಲ. ವಿಮಾ ರಕ್ಷಣೆ ಪಡೆದಿರುವ ಉದ್ಯೋಗಿಗಳು ಮೃತರಾದಾಗ, ವಾರೀಸುದಾರಿಗೆ ವಿಮಾ ಪರಿಹಾರ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತದೆ. ಈ ಪ್ರಕರಣದಲ್ಲಿ ಹಲವು ಸಹೋದ್ಯೋಗಿಗಳು ಸಾಕ್ಷಿಗಳಾಗಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದ್ದಕ್ಕೆ ಬಲವಾದ ಪುರಾವೆಯಿದ್ದ ಕಾರಣ ಇಎಸ್ಐ ಸಂಸ್ಥೆಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ವಿಮಾ ಪರಿಹಾರವನ್ನು ನಿರಾಕರಿಸಿದರೆ, ಮೃತರಾದವರ ವಾರೀಸುದಾರರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂಬ ಜೀವವಿಮಾ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ಇಎಸ್ಐ ಸಂಸ್ಥೆ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.
ಪ್ರಾತಿನಿಧಿಕ ಫೋಟೋ: ಇ.ಎಸ್.ಐ. ಕಾರ್ಪೊರೇಷನಿನ ಪ್ರಾದೇಶಿಕ ಕಚೇರಿ …. ಕೃಪೆ: ಪಿಕ್ಸಿ