ಯುಗಾದಿಯ ಸಂದರ್ಭದಲ್ಲಿ ನೆನಪಾಗುವ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡು:
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”
ಯುಗಯುಗಗಳ ಮುಂಚೆ ಆಚರಿಸುತ್ತಿದ್ದ ಯುಗಾದಿಯೇ ಮತ್ತೆ ಬಂದಿದೆಯಾದರೂ ಅದರಲ್ಲಿ ಹೊಸತನ್ನು ಕಾಣುವ, ಕಂಡು ಸಂಭ್ರಮಿಸುವ ತುಡಿತ ಇದೆಯಲ್ಲ, ಅದುವೇ ನಮರೆಲ್ಲರಿಗೂ ಹೊಸ ಹರುಷದ ಭರವಸೆಯ ಬೆಳಕು. ಎಂತಹ ಸಂದೇಶ!
ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ತಿಂಗಳಿನಲ್ಲಿ ಯುಗಾದಿ ಹಬ್ಬದ ಸಂಭ್ರಮ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ).
ಭಾರತದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಯುಗಾದಿಯ ಆಚರಣೆ ಒಂದೇ ದಿನ ನಡೆಯುವುದಿಲ್ಲ. ವಿಂಧ್ಯಾ ಪರ್ವತದ ಉತ್ತರ ಭಾಗದಲ್ಲಿ “ಬಾರ್ಹಸ್ಪತ್ಯಮಾನ" ಪಂಚಾಂಗದ ಅನುಸಾರ ನಿಗದಿತ ದಿನದಂದು ಯುಗಾದಿಯ ಆಚರಣೆ. ವಿಂಧ್ಯಾ ಪರ್ವತದ ದಕ್ಷಿಣ ಭಾಗದಲ್ಲಿ ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗದ ಪ್ರಕಾರ ಯುಗಾದಿಯ ದಿನ ನಿಗದಿ. ತಮಿಳುನಾಡಿನಲ್ಲಿ ಸೌರಮಾನ ಯುಗಾದಿ ಆಚರಣೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ.
ಚೈತ್ರ ಮಾಸದ ಮೊದಲ ದಿನ (ಅಂದರೆ ಅಮವಾಸ್ಯೆಯ ನಂತರದ ದಿನ) ಶುಕ್ಲ ಚಂದ್ರನ ಆಗಮನ. 2024ರಲ್ಲಿ ಎಪ್ರಿಲ್ 8ರಂದು ಅಮವಾಸ್ಯೆ. ಹಾಗಾಗಿ ಬೆಳಗುವ ಚಂದ್ರ ಕಾಣಿಸುವುದು ಎಪ್ರಿಲ್ 9ರಂದು. ಆದ್ದರಿಂದ ಅದೇ ದಿನ ಚಾಂದ್ರಮಾನ ಯುಗಾದಿಯ ಆಚರಣೆ. (2024ರಲ್ಲಿ ಎಪ್ರಿಲ್ 8ರ ಪೂರ್ವಾಹ್ನ ಚೈತ್ರಮಾಸದ ಮೊದಲ ತಿಥಿ ಶುರುವಾಗಿ ಎಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯ.)
ಸೌರಮಾನ ಪಂಚಾಂಗದಂತೆಯೂ ಹೊಸ ವರುಷದ ಮೊದಲ ದಿನ ಯುಗಾದಿ. ಅದರಂತೆ 2024ರಲ್ಲಿ ಎಪ್ರಿಲ್ 14 ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.
ಕರಾವಳಿಯಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.
ಅಂದರೆ, ದೇವರ ಮೂರ್ತಿಯೆದುರು ಮರದ ಮಣೆ ಇಟ್ಟು, ಅದರ ಮೇಲೆ ಜೋಡಿ ಬಾಳೆಲೆ. ಬಾಳೆಲೆಯಲ್ಲಿ ಬಾಳೆಹಣ್ಣು, ಮಾವು, ಪೇರಳೆ, ಕಿತ್ತಳೆ, ಲಿಂಬೆ, ಮುಸುಂಬಿ, ನೆಲ್ಲಿ, ಪಪ್ಪಾಯಿ, ಕಲ್ಲಂಗಡಿ, ಪುನರ್ಪುಳಿ, ರಾಮಫಲ, ಸೀತಾಫಲ, ಅನಾನಸ್ ಇತ್ಯಾದಿ ಹಣ್ಣುಗಳು. ಜೊತೆಗೆ ಸೌತೆ, ಮುಳ್ಳುಸೌತೆ, ಬದನೆ, ಬೆಂಡೆ, ತೊಂಡೆ, ಅಲಸಂಡೆ, ಬೀನ್ಸ್, ರೆಕ್ಕೆ ಬೀನ್ಸ್, ಚೀನಿಕಾಯಿ, ಕುಂಬಳಕಾಯಿ, ಹೀರೆಕಾಯಿ, ಪಡುವಲಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿಗಳು. ಎಲ್ಲವನ್ನೂ ಚಂದವಾಗಿ ಜೋಡಿಸಿ ಹೂಗಳಿಂದ ಅಲಂಕಾರ. ಅಕ್ಕಿ, ಹಾಲು, ತೆಂಗಿನಕಾಯಿ, ಅಡಿಕೆ ಮತ್ತು ವೀಳ್ಯದೆಲೆಗಳ ಸಮರ್ಪಣೆ. ಹೀಗೆ ಜೋಡಿಸಿಟ್ಟ "ಕಣಿ" ಆಯಾ ಕುಟುಂಬದ ಸಮೃದ್ಧಿಯ ಹಾರೈಕೆಯ ಸಂಕೇತ. ಈ "ಕಣಿ"ಯನ್ನು ತುಳಸಿಕಟ್ಟೆ ಅಥವಾ ಭೂತಾರಾಧನೆ ನಡೆಯುವ ಮನೆಗಳಲ್ಲಿ ಭೂತದ ಕೋಣೆಯಲ್ಲಿ ಇರಿಸುವುದೂ ಸಂಪ್ರದಾಯ.
ಯುಗಾದಿಯ ದಿನ ಬೆಳಗ್ಗೆ ಬೇಗನೇ ಎದ್ದು, ಮನೆಯನ್ನು ಶುಚಿ ಮಾಡಿ, ಮಾವು-ಬೇವಿನ ಎಲೆಗಳಿಂದ ಮನೆಗೆ ತೋರಣ ಕಟ್ಟುವುದು ವಾಡಿಕೆ. ಅನಂತರ ಎಣ್ಣೆ-ಸ್ನಾನ ಮಾಡಿ, ಹೊಸ ಉಡುಪು ಧರಿಸುವ ಸಂಭ್ರಮ. ನಂತರ ಮನೆಯ ಹಿರಿಯರಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ಸಂಪ್ರದಾಯ. ಯುಗಾದಿಯಂದು ಬೇವು-ಬೆಲ್ಲ ಸವಿಯಲೇ ಬೇಕು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲೇ ಬೇಕು. ಯುಗಾದಿಯ ದಿನ ಮನೆಯ ಯಜಮಾನ ಹಣದ ಪೆಟ್ಟಿಗೆ ತೆರೆಯಬಾರದು; ಯಾರಿಗೂ ಹಣ ಅಥವಾ ಬೀಜ ಕೊಡಬಾರದು ಎಂಬ ನಿಷೇಧಗಳಿವೆ.
ಕೃಷಿಕರಿಗಂತೂ ಕೃಷಿಯ ಆರಂಭದ ದಿನ ಯುಗಾದಿ. ಎತ್ತುಗಳನ್ನು ಹಳ್ಳಿಯ ಹಲವಾರು ಕೃಷಿಕರು ಸಾಕುತ್ತಿದ್ದ ಕಾಲದಲ್ಲಿ, ಮುಂಜಾನೆ ಅವನ್ನು ಹೊಲಕ್ಕೆ ಕರೆದೊಯ್ಯುತ್ತಿದ್ದರು. ಅನಂತರ ಹೊಲದಲ್ಲಿ ಬೀಜ ಬಿತ್ತುವ ವಾಡಿಕೆ ಇತ್ತು. ಇದಕ್ಕೆ ತುಳುವಿನಲ್ಲಿ "ಕೈ ಬಿತ್ತ್ ಬಿತ್ತುನ” ಎನ್ನುತ್ತಾರೆ.
ಕರ್ನಾಟಕದ ಹಳ್ಳಿಗಳಲ್ಲಿ ಯುಗಾದಿಯ ದಿನ ಇಳಿಹೊತ್ತಿನಲ್ಲಿ ಹೊನ್ನಾರು ಕಟ್ಟುವ ಪದ್ಧತಿಯಿದೆ. ಉಳುಮೆಯ ಪ್ರಾರಂಭದ ದಿನವಾದ ಯುಗಾದಿ ಹೊನ್ನಿಗೆ ಸಮನಾದ ಶುಭದಿನ. ಹಾಗಾಗಿ ಅದು “ಹೊನ್ನಾರು". ಆರಂಭ (ಕೃಷಿ)ಕ್ಕೆ ನೇಗಿಲಿಗೆ ನೊಗ ಹೂಡಿದ ಎತ್ತು ಕಟ್ಟಬೇಕು. ಅವನ್ನೆಲ್ಲ ಅಲಂಕರಿಸಿ ಮಂಗಲವಾದ್ಯದೊಂದಿಗೆ ಆರು ಹೂಡುವುದು ಸಂಪ್ರದಾಯ. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಶುರುವಾಗುವ ಹೊನ್ನಾರು, ಹಳ್ಳಿಯ ಎಲ್ಲ ಮನೆಗಳನ್ನು ಮೂರು ಸಲ ಸುತ್ತು ಹಾಕಿ ಮುಗಿಯುತ್ತದೆ.
(ಈಗ ಟ್ರಾಕ್ಟರ್, ಪವರ್-ಟಿಲ್ಲರುಗಳ ಭರಾಟೆಯಲ್ಲಿ ಇವೆಲ್ಲ ಯುಗಾದಿ ಆಚರಣೆಗಳು ಮರೆಯಾಗುತ್ತಿವೆ.)
ಹಬ್ಬ ಅಂದ ಮೇಲೆ ಹಬ್ಬದೂಟ ಇರಬೇಡವೇ? ಕರಾವಳಿಯಲ್ಲಿ ಯುಗಾದಿ ಹಬ್ಬದೂಟಕ್ಕೆ ಬಿಸಿಬಿಸಿ ಅನ್ನದ ಜೊತೆಗೆ ಸೌತೆ ಸಾಂಬಾರು, ಕಡಲೆ ಗಸಿ, ತೊಂಡೆ ಪಲ್ಯ, ಕಡಲೆ ಬೇಳೆ ಅಥವಾ ಹೆಸರುಬೇಳೆ ಪಾಯಸ, ಹಪ್ಪಳ , ಸಂಡಿಗೆ, ಉಪ್ಪಿನಕಾಯಿ ಇದ್ದರೆ ಅದುವೇ ಭರ್ಜರಿ ಊಟ. ಇಲ್ಲಿ ಯುಗಾದಿಯ ವಿಶೇಷ ತಿನಿಸು ಮೂಡೆ. ಹಲಸಿನ ಮೂರು ಎಲೆಗಳನ್ನು ಕಡ್ಡಿಯಿಂದ ಚುಚ್ಚಿ ಮಾಡಿದ ಲೋಟಕ್ಕೆ ಹಿಟ್ಟು ಹೊಯ್ದು, ಹಬೆಯಲ್ಲಿ ಬೇಯಿಸಿ ತಯಾರಿಸುವ ತಿನಿಸು. ಇದರ ಜೊತೆ ಮಾವಿನಕಾಯಿ ಚಟ್ನಿ ಇದ್ದರಂತೂ ಮೂರ್ನಾಲ್ಕು ಮೂಡೆ ತಿನ್ನದೆ ಏಳಲಾಗದು.
ಯುಗಾದಿಯ ದಿನ “ಬೇವು-ಬೆಲ್ಲ ಸವಿಯಬೇಕು” ಎಂಬ ರೂಢಿಯನ್ನು ಗಮನಿಸಿ. ಅದಕ್ಕಾಗಿ ಎಲ್ಲರೂ ಎಳ್ಳು-ಬೆಲ್ಲ ಹಂಚಿಕೊಳ್ಳುತ್ತಾರೆ. ಬೆಲ್ಲ ಸವಿ, ತಿನ್ನಲು ಸಿಹಿ. ಆದರೆ, ಬೇವು ಕಹಿ. ಇದನ್ನೂ “ಸವಿಯಬೇಕು" ಎಂದು ವಿಧಿಸುತ್ತದೆ ತಲೆತಲಾಂತರದಿಂದ ನಡೆದು ಬಂದ ರೂಢಿ. ಯಾಕೆ? ಯಾಕೆಂದರೆ, ಬದುಕಿನಲ್ಲಿ ಕೇವಲ ಬೆಲ್ಲವೇ ಇದ್ದರೆ ಬದುಕು ಪರಿಪೂರ್ಣವಾಗದು. ಬೆಲ್ಲದ ಜೊತೆಗೆ ಬೇವು ಇರಲೇ ಬೇಕು (ಬೇವು ಮೊದಲು, ನಂತರ ಬೆಲ್ಲ.) ಆಗಲೇ ಬದುಕಿನಲ್ಲಿ ಕಹಿ-ಸಿಹಿಗಳ ಬಗ್ಗೆ ಅಂದರೆ ನೋವು-ನಲಿವುಗಳ ಬಗ್ಗೆ ಸಮಭಾವ ಬೆಳೆಯಲು ಸಾಧ್ಯ. ಕಷ್ಟ ಅನುಭವಿಸಿದರೆ ಮಾತ್ರ ಸುಖದ ನಿಜವಾದ ಬೆಲೆ ಅರ್ಥವಾಗುತ್ತದೆ, ಅಲ್ಲವೆ?
ಅಂದ ಹಾಗೆ ಯಾವುದೇ ಮಂಗಳ ಕಾರ್ಯವನ್ನು ಮಾಡಲು ಯುಗಾದಿಯ ದಿನ ಅತ್ಯಂತ ಶುಭ ದಿನ. ಗೃಹಪ್ರವೇಶ, ಮನೆಗೆ ಅಡಿಪಾಯ ಹಾಕುವುದು, ವಾಹನ ಖರೀದಿ, ಕಿವಿ ಚುಚ್ಚುವುದು ಇತ್ಯಾದಿ ಶುಭಕಾರ್ಯಗಳಿಗೆ ಯುಗಾದಿ ಮಂಗಳಕರ ದಿನ.
ಮತ್ತೆ ನೆನಪಾಗುತ್ತದೆ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡಿನ ಸಾಲುಗಳು:
"ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ"
ಈ ಹಾಡಿನ ಅಮರ ಸಂದೇಶದಂತೆ ಕಳೆದ ವರುಷದ ಎಲ್ಲ ನೋವುಗಳನ್ನು, ಸೋಲುಗಳನ್ನು ಮರೆತು, "ಹೊಸ ವರುಷದಲ್ಲಿ ಎಲ್ಲವೂ ಒಳಿತಾಗಲಿದೆ” ಎಂಬ ಭರವಸೆಯಿಂದ ಮುಂದೆ ಸಾಗೋಣ.
ಫೋಟೋ: ಯುಗಾದಿ ಕಣಿ
(ಎಪ್ರಿಲ್ 2024)