"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ ಅವರ ಅಗಾಧ ಅಧ್ಯಯನ ಹಾಗೂ ಜೀವನಾನುಭವ ಭಟ್ಟಿಯಿಳಿಸಿ, ಪ್ರಚಂಡ ಪ್ರತಿಭೆಯ ಬಲದಿಂದ ರಚಿಸಿದ ಮುಕ್ತಕಗಳೇ ತುಂಬಿವೆ. ಇಲ್ಲಿನ 824 ಮುಕ್ತಕಗಳಲ್ಲಿ ನಮ್ಮ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನೂ ಒಳನೋಟಗಳನ್ನೂ ನೀಡುವ ಕೆಲವು ಮುಕ್ತಕಗಳನ್ನು ಪರಶೀಲಿಸೋಣ.

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ / ಪೂರ್ವಕರ್ಮದ ಫಲಿತಶೇಷದಿಂದ ಕಹಿ //
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ / ಆವೇಶವೇತಕೋ - ಮರುಳ ಮುನಿಯ //

ದಿನದಿನದ ನಮ್ಮ ಊಟ ಬೇವುಬೆಲ್ಲಗಳ ಉಂಡೆ ಇದ್ದಂತೆ, ಅದರಲ್ಲಿ ಕಹಿಯೂ ಇದೆ, ಸಿಹಿಯೂ ಇದೆ. ಪೂರ್ವ ಜನ್ಮಗಳಲ್ಲಿ ನಾವು ಮಾಡಿದ ಕರ್ಮದ ಫಲದಿಂದ ನಮಗೆ ಕಹಿ ಸಿಗುತ್ತದೆ. ಹಾಗೆಯೇ ದೇವರ ಕೃಪೆಯಿಂದ ಸಿಹಿ ಸಿಗುತ್ತದೆ. ಇವು ಒಂದಕ್ಕೊಂದು ವಿರುದ್ಧವಾಗಿವೆ ಅನಿಸುತ್ತದೆ. ಆದರೆ ಇವು ಪಕ್ಕಾ ತಾರ್ಕಿಕವಾಗಿವೆ. ಹಾಗಿರುವಾಗ ದಿನದಿನದ ನಮ್ಮ ಬದುಕಿನ ಕಹಿಸಿಹಿಗಳ ಬಗ್ಗೆ ಆವೇಶವೇತಕ್ಕೆ? ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು. "ದೇವರು ನನಗೇ ಯಾಕೆ ಈ ಕಷ್ಟ ಕೊಟ್ಟ?” ಎಂದು ಹಲುಬುವವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ ಅದು ದೇವರು ಕೊಟ್ಟದ್ದಲ್ಲ ಬದಲಾಗಿ ತಾನು ಮಾಡಿದ್ದ ಕರ್ಮಗಳ ಫಲ ಎಂಬುದನ್ನು. ಆದ್ದರಿಂದ ತನಗೆ ಸಂತೋಷ ಬೇಕೆಂದರೆ ಹೆಚ್ಚೆಚ್ಚು ಒಳ್ಳೆಯ ಕಾಯಕ ಮಾಡಬೇಕು. ಈ ಅರಿವಿನ ದೀಪ ನಮ್ಮೊಳಗೆ ಬೆಳಗಿದಾಗ, ತಿಳಿವು ಮೂಡುತ್ತದೆ, ಅಲ್ಲವೇ?

ಜೀವನವೆ ಪರಮಗುರು, ಮಿಕ್ಕ ಗುರುಗಳಿನೇನು / ಭಾವಸಂಸ್ಕಾರ ಜೀವಾನುಭವಗಳಿಗೆ //
ನೋವು ನಲಿವುಗಳೊಲೆಯ ಸೆಕೆಯೆ ನಿನ್ನಾತ್ಮಕ್ಕೆ / ಪಾವಕವಿಧಾನವೆಲೊ - ಮರುಳ ಮುನಿಯ //

ಜೀವನವೆ ನಿನ್ನ ಪರಮಗುರು; ಹಾಗಿರುವಾಗ ಬೇರೆ ಯಾವುದೇ ಗುರುಗಳಿಂದ ಏನಾಗಬೇಕಾಗಿದೆ? ಎಂದು ಕೇಳುತ್ತಾರೆ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ. ಜೀವನದ ಅನುಭವಗಳಿಗೆ ಭಾವಸಂಸ್ಕಾರ ನಿರಂತರವಾಗಿ ಆಗುತ್ತಲೇ ಇರುತ್ತದೆ. ನೋವು ನಲಿವುಗಳು ಎಂದರೇನು? ಅವು ನಿನ್ನ ಆತ್ಮವನ್ನು ಶುದ್ಧವಾಗಿಸುವ ಒಲೆಯ ಧಗೆ ಇದ್ದಂತೆ. ಆ ತಾಪಕ್ಕೆ ಮತ್ತೆಮತ್ತೆ ಬಿಸಿಯಾಗುತ್ತಾ ತಣಿಯುತ್ತಾ ನಿನ್ನ ಆತ್ಮ ಪುಟವಿಟ್ಟ ಚಿನ್ನದಂತಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು / ಇರುಳು ಹಗಲುಗಳುಂಟು ಶಶಿರವಿಗಳುಂಟು //
ಕುರುಡು ಕತ್ತಲೆಯುಂಟು ಮುಗಿಲು ಸಿಡಿಲುಗಳುಂಟು / ಅರುಣೋದಯವುಮುಂಟು - ಮರುಳ ಮುನಿಯ //

ನೀನು ಕಾಣುವ ಹೊರ ಜಗತ್ತು ಇದೆ ಮತ್ತು ನಿನ್ನೊಳಗಿನ ಜಗತ್ತೂ ಇದೆ. ಇವೆರಡರಲ್ಲಿಯೂ ರಾತ್ರಿ-ಹಗಲುಗಳು ಮತ್ತು ಚಂದ್ರ-ಸೂರ್ಯರು ಇದ್ದಾರೆ. ಹಾಗೆಯೇ ಕಣ್ಣು ಕುರುಡಾಗಿಸುವ ಕತ್ತಲೆ ಹಾಗೂ ಮುಗಿಲು ಮತ್ತು ಸಿಡಿಲುಗಳೂ ಇವೆ. ಹಾಗಂತ ನೀನು ಕುಗ್ಗಬೇಕಾಗಿಲ್ಲ. ಯಾಕೆಂದರೆ ನಿನ್ನ ಬಾಹ್ಯ ಮತ್ತು ಅಂತರಂಗದ ಜಗತ್ತಿನಲ್ಲಿ ಬೆಳಕನ್ನೂ ಭರವಸೆಯನ್ನೂ ಕೊಡುವ ಅರುಣೋದಯವೂ ಇದೆ ಎಂದು ಬದುಕಿನ ಬಗ್ಗೆ ಮನಮುಟ್ಟುವಂತೆ ನುಡಿಯುತ್ತಾರೆ ಮಾನ್ಯ ಡಿ.ವಿ.ಜಿ.

ಜೀವನವೆ ಸಂಪತ್ತು; ಬೇರೆ ಸಂಪತ್ತೇನು? ಭೂವಿಯಚ್ಚಿತ್ರಗಳಿನಗಲ್ದ ತಿಳಿಗಣ್ಣು //
ಜೀವಲೋಕದ ದನಿಗೆ ಮರುದನಿಯ ಮಿಡಿಯುವುದೆ / ದೈವಪ್ರಸಾದವವು - ಮರುಳ ಮುನಿಯ //

ಜೀವನವೇ ಬಹು ದೊಡ್ಡ ಸಂಪತ್ತು. ಹಾಗಾಗಿ ಬೇರೆ ಯಾವ ಸಂಪತ್ತೂ ಬೇಕಾಗಿಲ್ಲ. ಭೂಮಿ ಮತ್ತು ಆಕಾಶ (ವಿಯತ್)ಗಳಲ್ಲಿ ಪ್ರಕೃತಿ ಸೃಷ್ಟಿಸಿರುವ ಚಿತ್ರಗಳನ್ನು ಕಂಡು ಬೆರಗಿನಿಂದ ಹಿಗ್ಗದಿರುವ ತಿಳಿಗಣ್ಣುಗಳು, ಈ ಜಗತ್ತಿನ ಅಸಂಖ್ಯಾತ ಜೀವಿಗಳ ದನಿಗೆ ಮರುದನಿಯಿತ್ತು ಮಿಡಿಯುವುದೇನು? ಎಂದು ಪ್ರಶ್ನಿಸುತ್ತಾ, ಈ ಜಗತ್ತಿನ ಆ ಎಲ್ಲ ಲೀಲೆಗಳೂ ದೇವರ ಪ್ರಸಾದಗಳು ಎಂದು ಸ್ಪಷ್ಟ ಪಡಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ / ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು / ಮೃಗಮಾತ್ರನಲ್ಲವೇಂ? - ಮರುಳ ಮುನಿಯ //


ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವೆರಡರಲ್ಲಿ ಯಾವುದು ಹೆಚ್ಚು? ಅದರಲ್ಲಿ ನಿನ್ನ ಕೊಡುಗೆ ಎಷ್ಟು? ಇವೆಲ್ಲ ಲೆಕ್ಕಾಚಾರಗಳನ್ನು ಮಾಡದೆ ಈ ಜಗತ್ತಿನ ಫಲಾಫಲಗಳನ್ನು ಅನುಭವಿಸುವವನು (ಉಣಿಸನು ಉಂಬವನು) ಮೃಗಕ್ಕೆ ಸಮಾನನು ಅಲ್ಲವೇ? ಎಂಬ ನೇರ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ನಮ್ಮನ್ನು ಬೆಚ್ಚಿಬೀಳಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಕೆಲವರಿದ್ದಾರೆ - “ಈ ಜಗತ್ತು ನನಗೇನು ಕೊಟ್ಟಿದೆ? ನನಗೆ ಸಿಕ್ಕಿದ್ದು ಕೈತುಂಬ ಕಷ್ಟ, ತಲೆತುಂಬ ಸಂಕಟ” ಎಂದು ಗೊಣಗುಟ್ಟುತ್ತಲೇ ಇರುತ್ತಾರೆ. ಈ ಜಗತ್ತಿಗೆ ತಾವೇನು ಕೊಟ್ಟಿದ್ದೇವೆ ಎಂದು ಅವರು ಯಾವತ್ತೂ ಆತ್ಮನಿರೀಕ್ಷಣೆ ಮಾಡಿಕೊಳ್ಳೋದಿಲ್ಲ. ಅಂಥವರಿಗೆ ಸರಿಯಾದ ಉತ್ತರ ಈ ಮುಕ್ತಕದಲ್ಲಿದೆ, ಅಲ್ಲವೇ?
(ಸಪ್ಟಂಬರ್ 2023)