ಹಕ್ಕು ಹೋರಾಟ 11: ಪ್ರೆಸ್ಟೀಜ್ ಕುಕ್ಕರ್ ತಂದಿತು ‘ಪ್ರೆಷರ್’

ಇವರಿಂದ -ಯು.ಬಿ.ರಾಜಲಕ್ಷ್ಮೀ, ತಂತ್ರಿಗಳ ವಠಾರ,
ಕುಕ್ಕುಂದೂರು

ಇವರಿಗೆ - ಸಂಚಾಲಕರು, ಬಳಕೆದಾರರ ವೇದಿಕೆ, ಬಸ್ರೂರು.
ಮಾನ್ಯರೇ,
ವಿಷಯ: ಗ್ಯಾರಂಟಿ ಅವಧಿಯಲ್ಲಿ ಹಾಳಾಗಿರುವ ‘ಪ್ರೆಸ್ಟೀಜ್’ ಕುಕ್ಕರ್ ಬಗ್ಗೆ.
ಹತ್ತು ವರ್ಷಗಳ ಗ್ಯಾರಂಟಿಯುಳ್ಳ ‘ಪ್ರೆಸ್ಟೀಜ್’ ಕುಕ್ಕರೊಂದನ್ನು ಏಳು ವರ್ಷಗಳ ಹಿಂದೆ ಕಾರ್ಕಳದ ಮುಖ್ಯ ರಸ್ತೆಯಲ್ಲಿರುವ ಸರ್ವೀಸ್ ಸೆಂಟರಿನಲ್ಲಿ ಖರೀದಿಸಿದ್ದೆ. ಮೊನ್ನೆ ಅನ್ನ ಮಾಡುತ್ತಿದ್ದಾಗ ಅಡುಗೆಮನೆಯಲ್ಲಿ ಉಂಟಾದ ಸ್ಪೋಟದ ಶಬ್ದಕ್ಕೆ ಬೆಚ್ಚಿ ಬಿದ್ದು ನೋಡಿದರೆ ಕುಕ್ಕರಿನ ಮುಚ್ಚಳ ಜಗ್ಗಿ ಹೋಗಿತ್ತು. ಕುಕ್ಕರನ್ನು ಗ್ಯಾರಂಟಿ ಕಾರ್ಡ್ ಸಹಿತ ಮಾರಾಟಗಾರರಿಗೆ ಮರಳಿಸಿದಾಗ ಬದಲಿ ಕುಕ್ಕರನ್ನು ನನಗೆ ನೀಡಲು ಅವರೊಪ್ಪಿಕೊಂಡು ಕಂಪೆನಿಗೆ ಕೇಳಿ ತಿಳಿಸುತ್ತೇವೆ, ಆಗ ಬಂದು ಒಯ್ದರಾಯಿತು ಎಂದರು. ಕುಕ್ಕರ್ ನೀಡಿರುವುದಕ್ಕೆ ನನಗೊಂದು ರಶೀದಿ ದೊರೆಯಿತು.

ಇದಾಗಿ ಸುಮಾರು 53 ದಿನಗಳುರಳಿವೆ. ಐದಾರು ಸಲ ‘ಸರ್ವೀಸ್’ ಸೆಂಟರನ್ನು ಸಂದರ್ಶಿಸಿ ವಿಚಾರಿಸಿದೆ. ಪ್ರತಿಸಲವೂ ‘ಕಂಪೆನಿಯಿಂದ ಉತ್ತರ ಬಂದಿಲ್ಲ’ ಎನ್ನುವ ಉತ್ತರವಷ್ಟೇ ನನಗೆ ದೊರೆಯುತ್ತಿದೆ. ಕುಕ್ಕರಿನಲ್ಲೇ ಅಡುಗೆ ಮಾಡಿ ಕಚೇರಿಗೆ ಧಾವಿಸಬೇಕಾಗಿರುವುದರಿಂದ ಅಂಗಡಿ ಮಾಲೀಕರ ನಿರ್ಲಕ್ಷ್ಯ ತೊಂದರೆಯನ್ನುಂಟು ಮಾಡಿದೆ. ನೀವು ಶೀಘ್ರ ಪರಿಹಾರ ದೊರಕಿಸುವಿರೆನ್ನುವ ವಿಶ್ವಾಸದಿಂದ ಈ ಪತ್ರ ಬರೆಯುತ್ತಿದ್ದೇನೆ.

ವಿಶ್ವಾಸಪೂರ್ವಕ,
ಯು.ಬಿ. ರಾಜಲಕ್ಷ್ಮೀ

ದಿನಾಂಕ: 26-11-2002

ಯಥಾಪ್ರತಿ: 1.  ಸರ್ವೀಸ್ ಸೆಂಟರ್, ಕಾರ್ಕಳ 2. ಪ್ರೆಸ್ಟೀಜ್ ಕಂಪೆನಿ, ಬೆಂಗಳೂರು

ಹಾಳಾದ ಕುಕ್ಕರ್ ಬದಲಿಸಿದ ಟಿ.ಟಿ.ಕೆ
ಬಸ್ರೂರು ವೇದಿಕೆಯು ಸದರಿ ಪತ್ರದ ಪ್ರತಿಯನ್ನು ಕಾರ್ಕಳದ ವ್ಯಾಪಾರಿ ಸಂಸ್ಥೆಗೆ ಕಳುಹಿಸಿಪ್ರತಿಕ್ರಿಯೆಯನ್ನು ಆಹ್ವಾನಿಸಿತು. ಇದೀಗ ಸಮಸ್ಯೆ ಪರಿಹಾರವಾಗಿರುವುದನ್ನು ತಿಳಿಸುತ್ತಾ ದೂರುದಾರರು ವೇದಿಕೆಗೆ ಹೀಗೆ ಪತ್ರ ಬರೆದಿದ್ದಾರೆ:
"ಬಸ್ರೂರು ವೇದಿಕೆಯ ಸಂಚಾಲಕರಿಗೆ ವಂದನೆಗಳು,
ಟಿ.ಟಿ.ಕೆ ಸಂಸ್ಥೆಗೆ ನನ್ನ ಪತ್ರ ತಲುಪಿದಂತೆ ಆ ಸಂಸ್ಥೆಯ ಅಧಿಕಾರಿ ಸೋಮಶೇಖರ್ ನನ್ನ ಫೋನಿಗೆ ಕರೆ ಮಾಡಿ ಮುಚ್ಚಳ ಹಾಳಾಗಿದ್ದರೆ ಹೊಸ ಕುಕ್ಕರ್ ಕೊಡುವ ಕ್ರಮ ತಮ್ಮಲ್ಲಿಲ್ಲವೆಂದೂ ಇಂತಹ ಅನೇಕ ಪ್ರಸಂಗಗಳಲ್ಲಿ ಕೇವಲ ಮುಚ್ಚಳ ಮಾತ್ರ ಬದಲಿಸಿ ನೀಡಿರುವುದಾಗಿಯೂ ಅಲ್ಯುಮಿನಿಯಂ ಕುಕ್ಕರನ್ನು ಮಾತ್ರ ಬದಲಿಸಿ ನೀಡುತ್ತಿರುವುದಾಗಿಯೂ ಸಮರ್ಥಿಸಿಕೊಂಡರು. ಬದಲೀ ಸ್ಟೀಲ್ ಕುಕ್ಕರ್ ವಿತರಕರಿಂದಲೇ ಪಡೆದ ಉದಾಹರಣೆ ಇದೆಯೆಂದು ನಾನೂ ಪಟ್ಟು ಹಿಡಿದ ಬಳಿಕ ಹೊಸ್ ಕುಕ್ಕರ್ ನೀಡಲು ಒಪ್ಪಿದರು. ಇದಾಗಿ ನಾಲ್ಕು ದಿನಗಳಲ್ಲಿ ಇನ್ನುಳಿದ ಮೂರು ವರ್ಷದ ಗ್ಯಾರಂಟಿ ಕಾರ್ಡಿನ ಜತೆ ಹೊಸ ಕುಕ್ಕರ್ ನನಗೆ ಕಂಪೆನಿ ಒದಗಿಸಿದೆ. ಮಾತ್ರವಲ್ಲದೇ ಪ್ರೆಸ್ಟೀಜ್ ಸಂಸ್ಥೆಯ ಸದ್ರಿ ಅಧಿಕಾರಿ ನನಗೆ ಫೋನ್ ಮಾಡಿ ಕುಕ್ಕರ್ ತಲುಪಿದೆಯೇ? ಎಂದು ವಿಚಾರಿಸುವ ಸೌಜನ್ಯವನ್ನು ತೋರಿದ್ದಾರೆ.
ಬಳಕೆದಾರನಿಗೆ ನೈತಿಕ ಬೆಂಬಲ ನೀಡಿ ನ್ಯಾಯ ದೊರಕಿಸಲು ಕಾಳಜಿ ವಹಿಸಿರುವ ನಿಮ್ಮ ಸಂಸ್ಥೆಗೆ ಅನಂತ ಧನ್ಯವಾದಗಳು."

ವಿಶ್ವಾಸಪೂರ್ವಕ,
ಯು.ಬಿ. ರಾಜಲಕ್ಷ್ಮೀ

ಟಿಪ್ಪಣೆ: ಈ ಪ್ರಕರಣದಿಂದ ಗೃಹಣಿಯರು ಕಲಿಯಬೇಕಾಗಿರುವ ಅಂಶಗಳಿವು:
(ಅ) ಹತ್ತು ವರ್ಷಗಳ ಸುದೀರ್ಘಾವಧಿಯ ಗ್ಯಾರಂಟಿಯುಳ್ಳ ಕುಕ್ಕರಿನ ಗ್ಯಾರಂಟಿ ಕಾರ್ಡನ್ನು ಹತ್ತು ವರ್ಷವೂ
ಎಚ್ಚರಿಕೆಯಿಂದ ಕಾಪಾಡಬೇಕು.
(ಆ) ಮುಚ್ಚಳವಷ್ಟೇ ಹಾಳಾಗಿದೆಯೆಂದು ಹಳೆ ಕುಕ್ಕರನ್ನು ಹೊಸ ಮುಚ್ಚಳದ ಜತೆ ಉಪಯೋಗಿಸುವುದು ಕ್ಷೇಮಕರವಲ್ಲ.
(ಇ) ಶ್ರೇಷ್ಠ ಬ್ರಾಂಡಿನ ಕುಕ್ಕರುಗಳನ್ನೇ ಖರೀದಿಸಿ. ಯಾಕೆಂದರೆ ಆ ಕಂಪೆನಿಗಳು ತೀವ್ರ ಕಣ್ಗಾಪಿನಲ್ಲಿ ತಯಾರಿಸಿರುವ ಕುಕ್ಕರುಗಳನ್ನು ಕಠಿಣ ‘ಅಗ್ನಿ ಪರೀಕ್ಷೆ’ಗಳಿಗೆ ಒಳಪಡಿಸಿ ‘ಓ.ಕೆ’ ಆದವುಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ.
ಗೃಹಿಣಿಯರ ಒಡನಾಡಿ ಎನಿಸಿರುವ ಕುಕ್ಕರ್ ಬಳಸುವಾಗ ಅತೀ ಸೂಕ್ಷ್ಮ ಭಾಗಗಳ ಬಗ್ಗೆಯೂ ಮುನ್ನೆಚ್ಚರಿಕೆ
ಅತೀ ಅಗತ್ಯ. ಯಾಕೆಂದರೆ ‘ಕುಕ್ಕರ್ ಅಡುಗೆ ಮನೆಯ ಆಟಂಬಾಂಬ್’.

ಸಂಗ್ರಹ: ಬಳಕೆದಾರರ ಶಿಕ್ಷಣ, 05-2-2003