ಹಕ್ಕು ಹೋರಾಟ 10: ಜನರೇಟರ್ ಸೆಟ್ ಬದಲಿಸಿ ಕೊಟ್ಟರು

ಖರೀದಿಸಿದ ದಿನದಿಂದಲೇ ದೋಷಪೂರಿತವಾಗಿದ್ದ ವಿದ್ಯುತ್ ಜನರೇಟರನ್ನು ಬಳಕೆದಾರರ ಸತತ ಪ್ರಯತ್ನದ ಫಲವಾಗಿ, ಸುಮಾರು ಒಂದು ವರ್ಷದ ಬಳಿಕ ಪೂರೈಕೆದಾರರು ಬದಲಾಯಿಸಿದರು. ಈ ಪ್ರಕರಣದಲ್ಲಿ ವೇದಿಕೆಯು ಪೂರೈಕೆದಾರರಿಗೆ ಕೇವಲ ಒಂದೇ ಒಂದು ಪತ್ರವನ್ನು ಬರೆದಿದ್ದು, ಉಳಿದಂತೆ ಬಳಕೆದಾರರೇ ಪತ್ರ ವ್ಯವಹಾರ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ
ಮಂಗಳೂರಿನ “ಮಂಗಳಜ್ಯೋತಿ” ಎಂಬ ಸಂಸ್ಥೆಯ ಪಾಲುದಾರರೊಬ್ಬರು ತಮ್ಮ ಸ್ವಂತ ಉಪಯೋಗಕ್ಕಾಗಿ ತಾ. 31-5-98ರಂದು ಮಂಗಳೂರಿನ ಅಧಿಕೃತ ದಾಸ್ತಾನುದಾರರಿಂದ “ಬಿರ್ಲಾ ಯಾಮಾಹಾ” ಜನರೇಟರ್ ಸೆಟ್ ಒಂದನ್ನು ಖರೀದಿಸಿದರು. ತಾನು ಇಷ್ಟಪಟ್ಟು ಕೇಳಿದ್ದ ಮಾಡೆಲ್‍ಗೆ ಬದಲಾಗಿ ಕಂಪೆನಿಯು ಹಳೆಯ ಮಾಡೆಲ್‍ನ ಜನರೇಟರ್ ಒದಗಿಸಿತ್ತು. ಆದರೂ ಅದನ್ನು ಸಹಿಸಿಕೊಂಡು ಜನರೇಟರನ್ನು ಉಪಯೋಗಿಸತೊಡಗಿದರು. ಸ್ವಲ್ಪ ಸಮಯದಲ್ಲಿಯೇ
ಜನರೇಟರಿನಲ್ಲಿ ತೊಂದರೆ ಕಾಣಿಸಿತು. ಪ್ರಾರಂಭದಿಂದಲೇ ಜನರೇಟರಿನಿಂದ ಸ್ವಲ್ಪ ಪ್ರಮಾಣದಲ್ಲಿ ಸೀಮೆ ಎಣ್ಣೆ ಸೋರತೊಡಗಿತು. ತಕ್ಷಣ ದಾಸ್ತಾನುದಾರರು ತಮ್ಮ ಟೆಕ್ನೀಷಿಯನ್‍ರನ್ನು ಕಳುಹಿಸಿ, ತಾತ್ಕಾಲಿಕವಾಗಿ ಸೋರುವಿಕೆಯನ್ನು ತಡೆಗಟ್ಟಿದರಾದರೂ, ಸ್ವಲ್ಪ ದಿನಗಳ ನಂತರ ಮತ್ತದೇ ತೊಂದರೆಯ ಪುನರಾವರ್ತನೆ, ಹೇಗೆ ನಾಲ್ಕು ತಿಂಗಳ ಅವಧಿಯಲ್ಲಿ ಐದು ಬಾರಿ ರಿಪೇರಿ ಕಂಡರೂ ಸೋರುವುದು ಮಾತ್ರ ನಿಲ್ಲಲಿಲ್ಲ. ಬೇಸತ್ತ ಬಳಕೆದಾರರು ತಾ. 10-10-98 ರಂದು ಬಿರ್ಲಾ ಯಾಮಾಹಾದ ಬೆಂಗಳೂರಿನ ಪ್ರಾದೇಶಿಕ ಕಾರ್ಯಾಲಯಕ್ಕೆ ಪತ್ರ ಬರೆದು ಜನರೇಟರನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡರು.

ಸರ್ವಿಸ್ ಇಂಜಿನಿಯರ್ ಆಗಮನ
ಬಳಕೆದಾರರ ಪತ್ರಕ್ಕೆ ಕೂಡಲೇ ಉತ್ತರಿಸಿದ ಬಿರ್ಲಾ ಯಾಮಾಹಾ, ಯಂತ್ರದಲ್ಲಿನ ದೋಷವನ್ನು ಕೂಡಲೇ ಸರಿಪಡಿಸಲಾಗುವುದೆಂದೂ, ಅದಕ್ಕಾಗಿ ತಮ್ಮ ಸರ್ವಿಸ್ ಇಂಜಿನಿಯರ್ ಒಬ್ಬರನ್ನು ಕಳುಹಿಸುತ್ತಿರುವುದಾಗಿಯೂ ತಿಳಿಸಿದರು.
ಆದರೆ ಇಂಜಿನಿಯರಿಂದಲೂ ಸೋರುವಿಕೆಯನ್ನು ಮಾತ್ರ ನಿಲ್ಲಿಸಲಾಗಲಿಲ್ಲ. ತಾ. 29-10-98ರಂದು ಬಳಕೆದಾರರು ಕಂಪೆನಿಗೆ ಮತ್ತೊಂದು ಪತ್ರ ಬರೆದು ಜನರೇಟರನ್ನು ತಕ್ಷಣ ಬದಲಾಯಿಸಬೇಕೆಂದೂ, ಇಲ್ಲದಿದ್ದರೆ ಇದರಿಂದಾಗಬಹುದಾದ ಆಸ್ತಿ ಅಥವಾ ಪ್ರಾಣ ಹಾನಿಗೆ ಅವರೇ ಜವಾಬ್ದಾರರೆಂದು ಎಚ್ಚರಿಸಿದರು. ಈ ಮಧ್ಯೆ, ಕಂಪೆನಿಯ ಸೇಲ್ಸ್ ಇಂಜಿನಿಯರ್ ಕೂಡಾ ಬಳಕೆದಾರರ ಮನೆಗೆ ಭೇಟಿಕೊಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿ ಹೋದರು.

ಕಂಪೆನಿಯಿಂದ ದೋಷ ನಿರಾಕರಣೆ
ಜನರೇಟರನ್ನು ಬದಲಾಯಿಸಿ ಕೊಡಬೇಕೆಂದು ಬಳಕೆದಾರರು ಬರೆದ ಪತ್ರಕ್ಕೆ ತಾ. 11-11-98ರಂದು ಉತ್ತರಿಸಿದ ಬಿರ್ಲಾ ಯಾಮಾಹಾ ಕಂಪೆನಿಯು ಜನರೇಟರಿನಲ್ಲಿ ತಯಾರಿಕಾ ದೋಷವಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾರಾಸಗಟಾಗಿ
ನಿರಾಕರಿಸಿತು. ಕಂಪೆನಿಯ ಸರ್ವಿಸ್ ಇಂಜಿನಿಯರ್ ನೀಡಿದ ಮಾಹಿತಿಯ ಪ್ರಕಾರ ಜನರೇಟರ್ ಸುಸ್ಥಿತಿಯಲ್ಲಿದ್ದು, ಬಳಕೆದಾರರ ಮನೆಯ ಇತರ ಸದಸ್ಯರು ಇದನ್ನು ದೃಢಪಡಿಸಿರುತ್ತಾರೆ.

ಆದರೂ ಆಗಾಗ್ಗೆ ಜನರೇಟರಿನ ನ್ಯೂನತೆಯ ಬಗ್ಗೆ ಮಾತಾಡುವುದು ನಿರಾಧಾರವಾಗಿದ್ದು, ಪೂರ್ವಾಗ್ರಹ ಪೀಡಿತವಾಗಿರುವುದೆಂದು ಆಕ್ಷೇಪಿಸಿದರು. ಇದರಿಂದ ಮನನೊಂದ ಬಳಕೆದಾರರು ತಾ. 17-11-98ರಂದು ಮತ್ತೊಂದು ಪತ್ರವನ್ನು ಪತ್ರವನ್ನು ಬರೆದು ಕಂಪೆನಿಯ ಸರ್ವಿಸ್ ಹಾಗೂ ಸೇಲ್ಸ್ ಇಂಜಿನಿಯರ್‍ಗಳು ತಮ್ಮ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು. ಜನರೇಟರನ್ನು ಸರಿಪಡಿಸುವ ಅಥವಾ ಬದಲಾಯಿಸುವ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆಯೇ ಹೊರತು, ವಾಸ್ತವವಾಗಿ ತನ್ನೆದುರು ಈ ಇಬ್ಬರೂ ಇಂಜಿನಿಯರುಗಳು ಜನರೇಟರನ್ನು ಬದಲಾಯಿಸುವುದಾಗಿ ವಾಗ್ದಾನವಿತ್ತಿರುವುದಾಗಿ ಹೇಳಿದರು.
ಇದಲ್ಲದೆ ಯಾವುದೇ ಒಬ್ಬ ಸರ್ವಿಸ್ ಇಂಜಿನಿಯರ್ ಒಂದು ಯಂತ್ರದ ಪರಿಶೀಲನೆ ನಡೆಸಿದ ಬಳಿಕ ಸೇವಾ ಮಾಹಿತಿಯ (Service Report) ಒಂದು ಪ್ರತಿಯನ್ನು ಗ್ರಾಹಕನಿಗೆ ನೀಡುವುದು ಕರ್ತವ್ಯವಾಗಿದ್ದು, ಪ್ರಸ್ತುತ ಪ್ರಕರಣದಲ್ಲಿ ಬಿರ್ಲಾ ಯಾಮಾಹಾದ ಇಂಜಿನಿಯರ್-ಗಳು ಸೇವಾ ಮಾಹಿತಿಯನ್ನು ತನ್ನಿಂದ ಮುಚ್ಚಿಟ್ಟು, ಕರ್ತವ್ಯ ಲೋಪವೆಸಗಿದ್ದಾರೆಂದು ಬಳಕೆದಾರರು ಆಪಾದಿಸಿದರು.

ಮುಂಬೈ ಕಾರ್ಯಾಲಯಕ್ಕೆ ದೂರು
ಮೇಲಿನ ಪತ್ರಕ್ಕೆ ಒಂದು ತಿಂಗಳು ಕಳೆದರೂ ಕಂಪೆನಿಯ ಬೆಂಗಳೂರು ಕಾರ್ಯಾಲಯದಿಂದ ಉತ್ತರ ಬಾರದಿದ್ದಾಗ, ಬಳಕೆದಾರರು ಕಂಪೆನಿಯ ಮುಂಬೈ ವಿಳಾಸಕ್ಕೆ ತಾ. 29-12-98ರಂದು ಪತ್ರ ಬರೆದು, ದೋಷಪೂರಿತ
ಜನರೇಟರನ್ನು 15 ದಿನಗಳೊಳಗೆ ಬದಲಾಯಿಸಬೇಕೆಂದು ಕೇಳಿಕೊಂಡರು. ಈ ಪತ್ರದ ಯಥಾಪ್ರತಿಗಳನ್ನು ಮಂಗಳೂರು ಹಾಗೂ ಬಸ್ರೂರು ಬಳಕೆದಾರರ ವೇದಿಕೆಗಳಿಗೆ ಕಳುಹಿಸಿಕೊಟ್ಟರು. ಸುಮಾರು ಒಂದೂವರೆ ತಿಂಗಳು ಕಳೆದರೂ ಉತ್ತರ ಬಾರದಿದ್ದಾಗ ಬಳಕೆದಾರರು ತಾ. 15-2-99ರಂದು ಜ್ಞಾಪನಾ ಪತ್ರವೊಂದನ್ನು ಬರೆದು, ಅದರ ಯಥಾಪ್ರತಿಗಳನ್ನು ಎರಡೂ ವೇದಿಕೆಗಳಿಗೆ ಕಳುಹಿಸಿಕೊಟ್ಟರು.

ಬಸ್ರೂರು ವೇದಿಕೆಯಿಂದ ಪತ್ರ
ಮೇಲಿನ ಪತ್ರಕ್ಕೂ ಉತ್ತರ ಬಾರದಿದ್ದಾಗ ಬಸ್ರೂರು ಬಳಕೆದಾರರ ವೇದಿಕೆಯು ತಾ. 6-3-99ರಂದು ಮೊದಲ ಪತ್ರವನ್ನು ಬರೆದು ಕಂಪೆನಿಯ ಗಮನ ಸೆಳೆಯಿತು. ಈ ಮಧ್ಯೆ ಬಳಕೆದಾರರು ದೂರನ್ನು ಬಿರ್ಲಾ ಯಾಮಾಹಾದ ಮಂಬೈ ಕಾರ್ಯಾಲಯಕ್ಕೆ ಕೊಂಡೊಯ್ದಿರುವುದನ್ನು ಅರಿತ ಬೆಂಗಳೂರಿನ ಸೇಲ್ಸ್ ಇಂಜಿನಿಯರ್ ಹಾಗೂ ಮಂಗಳೂರಿನ ಡೀಲರ್ ಬಳಕೆದಾರರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತಮ್ಮ ಪಾಲಿನ ಕರ್ತವ್ಯವನ್ನು ತಾವು ಸರಿಯಾಗಿ ನಿರ್ವಹಿಸಿದ್ದೇವೆ
ಎಂದು ತೋರಿಸಿಕೊಡಲು ಪ್ರಯತ್ನಿಸಿದರು.

ಜನರೇಟರನ್ನು ಬದಲಾಯಿಸಿದರು
ಪ್ರಕರಣವನ್ನು ಇನ್ನಷ್ಟು ಮುಂದುವರಿಯಲು ಬಿಟ್ಟು ಕಂಪೆನಿಯ ಘನತೆಗೆ ಮಸಿ ಬಳಿದುಕೊಳ್ಳಲು ಇಷ್ಟಪಡದ ಈ ಉನ್ನತ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಸ್ವಷ್ಟ ಸೂಚನೆಗಳನ್ನು ನೀಡಿ, ಜನರೇಟರನ್ನು ಬದಲಾಯಿಸುವಂತೆ ಆದೇಶಿಸಿದರು. ಅದರಂತೆ ತಾ. 24-5-99ರಂದು, ಅಂದರೆ ಜನರೇಟರ್ ಖರೀದಿಸಿದ ಸುಮಾರು ಒಂದು ವರ್ಷದ ಬಳಿಕ, ಕಂಪೆನಿಯ ಪ್ರತಿನಿಧಿಗಳು ಬಂದು ಹೊಸ ಜನರೇಟರನ್ನು ಕೊಟ್ಟು ಹಳೆಯದನ್ನು ಕೊಂಡೊಯ್ದಿದ್ದಾರೆ. ಅಲ್ಲದೆ, ಮತ್ತೊಂದು ವರ್ಷದ ಅವಧಿಗೂ ಗ್ಯಾರಂಟಿ ಪತ್ರವನ್ನು ಲಿಖಿತವಾಗಿ ಬಳಕೆದಾರರಿಗೆ ನೀಡಿದ್ದಾರೆ. ಇನ್ನು ಈ ಹೊಸ ಜನರೇಟರಿನ ಕಾರ್ಯಕ್ಷಮತೆಯನ್ನು ಕಾದು ನೋಡಬೇಕಾಗಿದೆ.


ಸೂಚನೆ
ಈ ಪ್ರಕರಣದಲ್ಲಿ ಬಳಕೆದಾರರು ತಮ್ಮ ಪತ್ರಗಳ ಪತ್ರಿಗಳನ್ನು ಮಂಗಳೂರು ಹಾಗೂ ಬಸ್ರೂರು - ಈ ಎರಡೂ ವೇದಿಕೆಗಳಿಗೆ ಕಳುಹಿಸುತ್ತಿದ್ದರು. ಹೀಗೆ ಒಂದಕ್ಕಿಂತ ಹೆಚ್ಚು ಬಳಕೆದಾರರ ವೇದಿಕೆಗಳಿಗೆ ಪತ್ರ ಕಳುಹಿಸುವುದರಿಂದ ಅಧಿಕ ಪ್ರಯೋಜನವೇನೂ ಇರುವುದಿಲ್ಲ. ಬದಲಿಗೆ ವೇದಿಕೆಗಳಿಗೆ ಇದರಿಂದ ತೊಂದರೆಯಾಗುವುದು, ವಾಸ್ತವವಾಗಿ ಎಲ್ಲಾ ಬಳಕೆದಾರರ ವೇದಿಕೆಗಳ ಕಾರ್ಯವೈಖರಿಯು ಸುಮಾರಾಗಿ ಒಂದೇ ತೆರನಾಗಿರುತ್ತದೆ; ಆದ್ದರಿಂದ, ಈಗಾಗಲೇ
ನಿರ್ವಹಿಸಲಾಗದಷ್ಟು ಪ್ರಕರಣಗಳಿಂದ ತುಂಬಿರುವ ವೇದಿಕೆಗಳ ಮೇಲೆ ಇನ್ನಷ್ಟು ಭಾರವನ್ನು ವೃಥಾ ಹೇರದೆ, ಬಳಕೆದಾರರು ಯಾವುದಾದರೂ ಒಂದು ವೇದಿಕೆಯ ಸಲಹೆಯನ್ನು ಮಾತ್ರ ಪಡೆಯಬೇಕಾಗಿದೆ. ಈಗೀಗ ಎಷ್ಟೋ ಪ್ರಕರಣಗಳನ್ನು ವೇದಿಕೆಯ ನೆರವಿಲ್ಲದೆ ಬಳಕೆದಾರರು ತಾವೇ ಸ್ವತ: ಬಗೆಹರಿಸಿಕೊಳ್ಳುತ್ತಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಬಳಕೆದಾರರ ವೇದಿಕೆಯ ಸ್ಥಾಪನೆಯ ಉದ್ದೇಶವೂ ಇದೇ ಆಗಿದೆ.


ಪ್ರಾತಿನಿಧಿಕ ಫೋಟೋ: ಜನರೇಟರ್ ಸೆಟ್

ಸಂಗ್ರಹ: ಬಳಕೆದಾರರ ಶಿಕ್ಷಣ, 20-6-1999