ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು. ಶ್ರೀಮತಿ ಶೆಟ್ಟಿಯವರು ದಂಡನಾ ಶುಲ್ಕವನ್ನು ಪೂರ್ತಿಯಾಗಿ ಕಟ್ಟಿದ್ದರೂ ಕಡಿದ ಮರವನ್ನು ಸಾಗಿಸಲು ಈ ತನಕ ರಹದಾರಿ ನೀಡಿರಲಿಲ್ಲ.
ಕಾರ್ಕಳ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಈ ಬಗ್ಗೆ ಅನೇಕ ಸಲ ಸಂಪರ್ಕಿಸಿದರು. ಇವರ ಕಡತವು ಕಾರ್ಕಳ ಕಚೇರಿಯಿಂದ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ಮತ್ತು ಕುಂದಾಪುರದಿಂದ ಕಾರ್ಕಳಕ್ಕೆ ಓಡಾಡುತ್ತಿತ್ತೇ ವಿನಹ ಶ್ರೀಮತಿ ಶೆಡ್ತಿಯವರಿಗೆ ಸಾಗಾಟ ಪರ್ಮಿಟು ಸಿಕ್ಕಿರಲಿಲ್ಲ. ತಾ. 2-1-99ರಂದು ಶ್ರೀಮತಿ. ರಾಜೀವಿ ಬಿ.ಶೆಟ್ಟಿಯವರು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆದು ಅದರ ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು.
ಇವರ ಪತ್ರವನ್ನು ಅನುಸರಿಸಿ ವೇದಿಕೆಯು ತಾ. 25-2-99ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆಯಿತು. ಪರಿಣಾಮವಾಗಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಇದೀಗ ವೇದಿಕೆಗೆ ಪತ್ರ ಬರೆದಿದ್ದು ಶ್ರೀಮತಿ ರಾಜೀವಿ ಬಿ.ಶೆಟ್ಟಿಯವರಿಗೆ ರಹದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾತಿನಿಧಿಕ ಫೋಟೋ: ಸಾಗಾಟಕ್ಕೆ ತಯಾರಾದ ಮರದ ದಿಮ್ಮಿಗಳು