ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಇನ್ನೊಂದು ಪ್ರಕರಣ.
ಮಂಗಳೂರಿನ ಶ್ರೀ ಗೋಪಾಲಕೃಷ್ಣ ಎಂಬುವವರಿಂದ ಬಸ್ರೂರು ವೇದಿಕೆಗೆ ಒಂದು ಪತ್ರ ಬಂದಿತ್ತು. ಅದು ಜಿಲ್ಲಾ ಸಾರ್ವಜನಿಕ ದೂರು ಇತ್ಯರ್ಥ ಅಧಿಕಾರಿಗೆ ಬರೆದ ದೂರಿನ ಪ್ರತಿಯಾಗಿದ್ದು, ಅದರಲ್ಲಿ ಅವರು ತಾನು ರೂ. 325/- ಕೊಟ್ಟು ಖರೀದಿಸಿದ್ದ ಪ್ರಸಿದ್ಧ ಕಂಪೆನಿಯೊಂದರ ರೈನ್ ಕೋಟ್, ಖರೀದಿಸಿದ ಒಂದೇ ದಿನದಲ್ಲಿ ಹೊಲಿಗೆ ಬಿಚ್ಚಿ ಮಳೆ ನೀರು ಒಳಗೆ ಬರುತ್ತಿದ್ದುದಾಗಿ ದೂರಿದ್ದರು.
ಮಾರನೇ ದಿನ ಬೆಳಿಗ್ಗೆಯೇ ಅವರು ಅಂಗಡಿಗೆ ಹೋಗಿ, ಹೊಲಿಗೆ ಬಿಚ್ಚಿರುವುದನ್ನು ಅವರಿಗೆ ತೋರಿಸಿ, ಅದನ್ನು ಬದಲಾಯಿಸಿ ಕೊಡುವಂತೆ ಕೇಳಿದಾಗ ಅಂಗಡಿ ಮಾಲೀಕರು ಅದನ್ನು ಬದಲಾಯಿಸಲು ಅಥವಾ ಹಿಂದೆ ಪಡೆಯಲು ನಿರಾಕರಿಸಿದ್ದರು.
ದುಬಾರಿ ಬೆಲೆಯ ರೈನ್ ಕೋಟ್ ಕೂಡಾ ಒಂದೇ ದಿನದಲ್ಲಿ ಹೊಲಿಗೆ ಬಿಟ್ಟಿರುವುದರಿಂದ, ಗ್ರಾಹಕರಿಗೆ ತಾವುಪಡೆದ ವಸ್ತುವಿನ ಬಗ್ಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದುದರಿಂದ ತನಗೆ ಆಗಿರುವ ನಷ್ಟ ಭರಿಸಿ, ಅಂಗಡಿ ಮಾಲಿಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಶ್ರೀಯುತರು ಅಧಿಕಾರಿಯನ್ನು ವಿನಂತಿಸಿದ್ದರು. ದೂರಿನ ಯಥಾ ಪ್ರತಿಗಳನ್ನು ಬಸ್ರೂರು ವೇದಿಕೆಗೂ, ಅಂಗಡಿ ಮಾಲೀಕರಿಗೂ ಕಳುಹಿಸಿಕೊಟ್ಟರು. ದೂರಿನ ಪ್ರತಿ ತಲುಪಿದ ಕೂಡಲೇ ಅಂಗಡಿ ಮಾಲೀಕರು ಎಚ್ಚೆತ್ತು, ರೈನ್ ಕೋಟನ್ನು ಹಿಂದಕ್ಕೆ ಪಡೆದು ಗ್ರಾಹಕರಿಗೆ ಅವರ ಹಣ ಹಿಂದಿರುಗಿಸಿದರು!
ಸಂಗ್ರಹ: ಬಳಕೆದಾರರ ಶಿಕ್ಷಣ, 20-7-1999