ಹಕ್ಕು ಹೋರಾಟ 2. ಬಿಲ್ ಬಾಕಿಯಿಲ್ಲದೆಯೂ ವಿದ್ಯುತ್ ಸಂಪರ್ಕ ಕಡಿದ "ಮೆಸ್ಕಾಂ"

ಗಿರಿಜಮ್ಮ ಶೆಡ್ತಿ,
D/o. ಸುಬ್ಬಕ್ಕ ಶೆಡ್ತಿ, ರಾಗಿಹಕ್ಲು - 576 224 - ಇವರಿಂದ,

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ,
ಬೈಂದೂರು - ಇವರಿಗೆ

ಮಾನ್ಯರೇ,
ವಿಷಯ: ಬಿಲ್ ಪಾವತಿಸಿರುವ ಹೊರತಾಗಿಯೂ ವಿದ್ಯುತ್ ಸಂಪರ್ಕ ಕಡಿದಿರುವ ಬಗ್ಗೆ.
ಉಲ್ಲೇಖ: ಸ್ಥಾವರ ನಂಬ್ರ ಬಿಬಿವೈ 11557

ಸದರಿ ವಿದ್ಯುತ್ ಸಂಪರ್ಕಕ್ಕೆ ಫೆಬ್ರವರಿ 2002ರ ತನಕದ ಬಿಲ್ ಬಂದಿದ್ದು ಅಲ್ಲಿಯ ವರೆಗಿನ ಬಿಲ್ ಬಾಬ್ತನ್ನು ಪಾವತಿಸಿ ರಶೀದಿಯನ್ನು ಪಡೆದಿರುತ್ತೇನೆ. ನಂತರ ಯಾವುದೇ ಬಿಲ್ ನನಗೆ ಬಂದಿಲ್ಲ. ಆದರೆ 30-9-02 ರಂದು ಯಾವುದೇ
ಮುನ್ಸೂಚನೆಯಿಲ್ಲದೆ ಸದರಿ ವಿದ್ಯುತ್ ಸಂಪರ್ಕವನ್ನು ಕಡಿದಿರುವಿರಿ. ಈ ರೀತಿಯ ನಿಮ್ಮ ‘ಸೇವೆ’ಯಿಂದ ನನಗೆ ಸಹಸ್ರಾರು ರೂಪಾಯಿಗಳ ನಷ್ಟದ ಜತೆ ಮಾನಸಿಕ ಹಿಂಸೆಯುಂಟಾಗಿದೆ.

ನನ್ನ ಮಗ ರವಿ ವಿಚಾರಣೆಗಾಗಿ ನಿಮ್ಮ ಕಚೇರಿಯನ್ನು ಸಂದರ್ಶಿಸಿದಾಗ ನಮ್ಮ ಸ್ಥಾವರ ಸಂಖ್ಯೆಯುಬದಲಾಗಿರುವುದರಿಂದ ಈ ಪ್ರಮಾದ ಉಂಟಾಗಿರುವುದಾಗಿ ನಿಮ್ಮ ಕಚೇರಿಯ ಗುಮಾಸ್ತರು ತಿಳಿಸಿದ್ದಾರೆ. ನಾನು 3087/- ರೂ.ಗಳನ್ನು ಪಾವತಿಸಬೇಕಾಗಿಯೂ ನಮ್ಮ ಸ್ಥಾಪರ ಸಂಖ್ಯೆ 11558 ಎಂದೂ ತಿಳಿಸಿರುತ್ತಾರೆ. ಇಲಾಖೆಯ ಬೇಕಾಬಿಟ್ ಟಿಕಾರ್ಯಾಚರಣೆಗೆ ನಾನು ಹೊಣೆಗಾರಳಲ್ಲ.

ಮುಂದಿನ ವಿಳಂಬವಿಲ್ಲದೆ ಸದ್ರಿ ವಿದ್ಯುತ್ ಸಂಪರ್ಕವನ್ನು ಬೇಶರತ್ ಜೋಡಿಸಿ ಇಲಾಖೆಯ ಗೌರವವನ್ನು ನೀವೇಕೆ ಉಳಿಸಿಕೊಳ್ಳಬಾರದು?
ಇತೀ ನಿಮ್ಮ ವಿಶ್ವಾಸಿ,
ಗಿರಿಜಮ್ಮ ಶೆಡ್ತಿ
ದಿನಾಂಕ: 6-11-2002

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು - 576 211.
ವಿವರಣೆ: ವಿದ್ಯುತ್ ಸಂಪರ್ಕ ಪುನರ್ ಜೋಡಣೆಯಾಯಿತು. ಗಿರಿಜಮ್ಮನವರಿಗೆ ‘ಮೆಸ್ಕಾಂ’ನಿಂದಾಗಿರುವ ಅನ್ಯಾಯವನ್ನು ವೇದಿಕೆ ಪ್ರಶ್ನಿಸಿತು. ಅಧಿಕಾರಿ ಉತ್ತರಿಸಲಿಲ್ಲ. ಆದರೆ ಕೊನೆಗೂ ಎಚ್ಚೆತ್ತ ಇಲಾಖೆ ತನ್ನ ಕಡಿದಿರುವ ವಿದ್ಯುತ್ ಸಂಪರ್ಕವನ್ನು ಮತ್ತೆ ಜೋಡಿಸಿರುವುದಾಗಿ ಗಿರಿಜಮ್ಮ ಶೆಡ್ತಿ ಇದೀಗ ವೇದಿಕೆಗೆ ತಿಳಿಸಿದ್ದಾರೆ.
ತನ್ನದಲ್ಲದ ತಪ್ಪಿಗೆ ಗಿರಿಜಮ್ಮ ಸುಮಾರು ನೂರು ದಿನಗಳ ಅವಧಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕಂಗೆಟ್ಟರು, ಬಳಕೆದಾರರನ್ನು ಅಮಾನವೀಯವಾಗಿ ಸತಾಯಿಸಿ ವಿಷಾದ ಸೂಚಿಸುವ ಸೌಜನ್ಯವಿರದ ಇಲಾಖೆ ಅದೆಷ್ಟು ಸಲ ಹೆಸರು ಬದಲಾಯಿಸಿಕೊಂಡರೂ ಸುಧಾರಣೆ ಆದೀತೇ?

ಫೋಟೋ: ಮೆಸ್ಕಾಂ ಲಾಂಛನ
ಸಂಗ್ರಹ: ಬಳಕೆದಾರರ ಶಿಕ್ಷಣ, 05-2-2003