ಲೇಖಕರು: ಆಯುರ್ವೇದ ಪರಿಣತರು
ಪ್ರಕಾಶಕರು: ಶ್ರೀ ಬೈಧ್ಯನಾಥ್ ಆಯುರ್ವೇದ ಭವನ ಪ್ರೈ. ಲಿ., ಗ್ರೇಟ್ ನಾಗ್ ರೋಡ್, ನಾಗಪುರ
ಪುಟ: 178 ಬೆಲೆ: ರೂ. 25/-
ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.
ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು ಮುದ್ರಿಸಲಾಗಿದೆ! ಕನ್ನಡದ ಪುಸ್ತಕಗಳ ಒಂದು ಸಾವಿರ ಪ್ರತಿಗಳನ್ನು ಮುದ್ರಿಸುವುದನ್ನು ನಿಯಮದಂತೆ ಪಾಲಿಸಲಾಗುತ್ತದೆ (ಇದಕ್ಕೆ ಕೆಲವು ವಿನಾಯ್ತಿಗಳಿವೆ). ಯಾಕೆಂದರೆ, ಬಹುಪಾಲು ಪುಸ್ತಕಗಳ ಒಂದು ಸಾವಿರ ಪ್ರತಿಗಳು ಮಾರಾಟವಾಗಲು 3ರಿಂದ 10 ವರುಷ ತಗಲುತ್ತದೆ! ಹಾಗಿರುವಾಗ, ವೈದ್ಯರು ಮಾತ್ರ ಓದುಗರಾಗಿರುವ ಈ ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದು ಪ್ರಕಾಶಕರ ಸಾಹಸ.
ಪ್ರಕಾಶಕರು ಆಯುರ್ವೇದಕ್ಕೆ ಸಂಬಂಧಿಸಿದ ಇತರ 43 ಪುಸ್ತಕಗಳನ್ನು ಸಂಸ್ಕೃತ, ಹಿಂದಿ ಭಾಷೆಗಳಲ್ಲಿಯೂ 11 ಪುಸ್ತಕಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ ಎಂಬುದು ಗಮನಾರ್ಹ. ಇವುಗಳ ಬಗ್ಗೆ ಚುಟುಕು ಮಾಹಿತಿ ಈ ಪುಸ್ತಕದಲ್ಲಿ ಲಭ್ಯ.
ಆಯುರ್ವೇದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಶ್ರೀ ಬೈಧ್ಯನಾಥ ಆಯುರ್ವೇದ ಭವನ ದೊಡ್ದ ಹೆಸರು. ಅವರ ನೂರಾರು ರಸಭಸ್ಮ, ಬಟಿ, ಗುಗ್ಗುಲು, ಚೂರ್ಣ, ಆಸವರಿಷ್ಟ ಹಾಗೂ ಪೇಟೆಂಟ್ ಔಷಧಿಗಳ ರೋಗಾಧಿಕಾರ ಮತ್ತು ಪ್ರಯೋಗ ವಿಧಿಗಳನ್ನು ಸಮಗ್ರವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಔಷಧೀಯ ತೈಲಗಳು, ಅಂಜನ, ವರ್ತಿ-ಸುರ್ಮ-ಮಂಜನ, ಘೃತ, ಶರಬತ್ - ಅರ್ಕ - ಪಾನಕಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಈ ಪುಸ್ತಕದಲ್ಲಿ (140ನೇ ಪುಟದ ವರೆಗೆ) ವಿವಿಧ ವರ್ಗದ ಔಷಧಿಗಳ ಪ್ರಧಾನ ಗುಣ ಮತ್ತು ಸೇವನೆ ಪ್ರಮಾಣ ಹಾಗೂ ವಿಧಾನದ ಮಾಹಿತಿ ನೀಡಲಾಗಿದೆ. ಉದಾಹರಣೆಗೆ “ಗುಗ್ಗುಲು" ವರ್ಗದ ಸುಪ್ರಸಿದ್ಧ ಔಷಧಿ:
ಮಹಾ ಯೋಗರಾಜ ಗುಗ್ಗುಲು (ಆಧಾರ: ಶ್ರಾಂಘಧರ ಸಂಹಿತಾ)
ಪ್ರಧಾನ ಗುಣ: ಇದು ತ್ರಿದೋಷಘ್ನ ರಸಾಯನ. ಎಲ್ಲ ಪ್ರಕಾರದ ವಾತವ್ಯಾಧಿ, ಆಮವಾತ, ಕೀಲುನೋವು, ಅಪಸ್ಮಾರ, ಸಂಧಿವಾತ, ವಾತರಕ್ತ (ಸಂಧಿನೋವು), ಉದಾವರ್ತ (ಹೊಟ್ಟೆ ಉಬ್ಬರ), ಮೇಧ ವೃದ್ಧಿ (ಕೊಬ್ಬು ಹೆಚ್ಚಳ), ಹೃದಯ ಹಿಂಡಿದಂತೆ ಆಗುವುದು, ಅಗ್ನಿಮಾಂದ್ಯ, ದಮ್ಮು, ಕೆಮ್ಮು, ಗಂಡಸರ ವೀರ್ಯದೋಷ, ಸ್ತ್ರೀಯರ ರಜೋದೋಷ ಮತ್ತು ಊತ, ರಕ್ತಾಲ್ಪತೆ, ಕಾಮಾಲಾ, ಕುಷ್ಠ, ಕಣ್ಣಿನ ರೋಗಗಳು ಇತ್ಯಾದಿಗಳಲ್ಲಿ ಅತ್ಯಂತ ಲಾಭದಾಯಕವಾಗಿದೆ. ತೀವ್ರ ವಿಕಾರಗಳಲ್ಲಿಯೂ ಇದರ ಪ್ರಯೋಗದಿಂದ ಶಮನಕ್ಕೆ ಸಹಾಯ.
ಮಹಾ ಯೋಗರಾಜ ಗುಗ್ಗುಲು: ಪ್ರಮಾಣ ಮತ್ತು ಉಪಯೋಗ:
1ರಿಂದ 2 ಮಾತ್ರೆ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸಬೇಕು.
ಮಾತ್ರೆ ಸೇವಿಸುವ ವಿಧಾನ: ಎಲ್ಲ ವಾತ ವಿಕಾರಗಳಲ್ಲಿ ಮಹಾರಾಸ್ನಾದಿ ಕಷಾಯದೊಂದಿಗೆ;
ವಾತರಕ್ತದಲ್ಲಿ ಅಮೃತಬಳ್ಳಿಯ ಕಷಾಯದೊಂದಿಗೆ;
ಮೇದಸ್ಸಿನ ವೃದ್ಧಿಯಲ್ಲಿ ಜೇನುತುಪ್ಪದೊಂದಿಗೆ;
ಪಾಂಡುರೋಗದಲ್ಲಿ ಗೋಮೂತ್ರದೊಂದಿಗೆ;
ಕುಷ್ಟರೋಗದಲ್ಲಿ ಬೇವಿನ ಚಕ್ಕೆಯ ಕಷಾಯದೊಂದಿಗೆ;
ಊತ, ನೋವಿನಲ್ಲಿ ಹಿಪ್ಪಲಿಯ ಕಷಾಯದೊಂದಿಗೆ;
ಹೊಟ್ಟೆಯ ರೋಗಗಳಲ್ಲಿ ತ್ರಿಫಲಾ ಕಷಾಯ ಅಥವಾ ಪುನರ್ನವಾದಿ ಕಷಾಯದೊಂದಿಗೆ.
ಪ್ರಮಾಣೀಕೃತ ಔಷಧಿಗಳ ಬಗ್ಗೆ ಪುಸ್ತಕದಲ್ಲಿ ನೀಡಲಾಗಿರುವ ವಿವರಣೆ: ಯಾವ ಔಷಧಿಗಳ ಸೂತ್ರ ಅಥವಾ ಪ್ರಯೋಗದ ಯೋಗ ಅತ್ಯಂತ ಗುಣಕಾರಿ ಎಂದು ಸಿದ್ಧವಾಗಿವೆಯೋ ಅವುಗಳನ್ನು ಪ್ರಮಾಣೀಕೃತ (ಅನುಭೂತ) ಔಷಧಿಗಳ ಹೆಸರಿನಲ್ಲಿ ಚಲಾವಣೆಗೆ ತಂದು, ಪ್ರಚಾರ ಮಾಡಿದೆ. ಭಾರತದ ಪ್ರಧಾನ ಚಿಕಿತ್ಸಕರ ಅನುಮೋದನೆ ಪಡೆದ ಈ ಔಷಧಿಗಳ ಸೇವನೆಯಿಂದ ರೋಗಿಗಳು ಶೀಘ್ರವಾಗಿ ರೋಗಮುಕ್ತರಾಗುತ್ತಾರೆ. ಇದರ “ಪ್ರಮಾಣ"ವನ್ನು ಶೀಷೆಯ ಹೊರಭಾಗದಲ್ಲಿ ಪ್ಯಾಕಿಂಗಿನಲ್ಲಿ ಮುದ್ರಿಸಲಾಗಿರುತ್ತದೆ. ಅಂತಹ ಕೆಲವು ಔಷಧಿಗಳ ಹೆಸರುಗಳು:
ಕಾಸಾಮೃತ (ಕೆಮ್ಮು, ನಾಯಿಕೆಮ್ಮು, ಶೀತ, ನೆಗಡಿ, ಶ್ವಾಸಕೋಶ ಪ್ರದಾಹ, ಕಂಠಗ್ರಂಥಿ ಪ್ರದಾಹ ಶಮನಕ್ಕೆ)
ಸಪ್ತ ಗುಣ ತೈಲ,
ಆಮ್ಲ ಪಿತ್ತಾಂತಕ ಯೋಗ (ಹುಳಿತೇಗು, ಅಜೀರ್ಣ, ಎದೆಉರಿ, ಅರುಚಿ, ಪಿತ್ತ ಶಮನಕ್ಕೆ)
ಗೈಸಾಂತಕ ವಟೀ (ಹೊಟ್ಟೆಯ ವಾಯು ಶಮನಕ್ಕೆ)
ಮಧುಮೇಹಾರಿ (ಮಧುಮೇಹ ನಿಯಂತ್ರಣಕ್ಕೆ)
ಮಾದೀಫಲ ರಸಾಯನ (ಹೊಟ್ಟೆ ಉರಿ, ಎದೆಯ ಸಂಕಟ, ಹೊಟ್ಟೆ ಉಬ್ಬರ, ವಾಂತಿ ಶಮನಕ್ಕೆ)
ರಕ್ತ ಶೋಧಕ ವಟಿ ಮತ್ತು ಸುರಕ್ತಾ
ಕಬ್ಜಹರ ಹರಳುಗಳು (ಮಲಬದ್ಧತೆ ನಿವಾರಣೆಗೆ)
ಮಹಾಸುದರ್ಶನ ಘನ ವಟಿ (ಎಲ್ಲ ತರಹದ ಜ್ವರ ಭಾಧೆ ಚಿಕಿತ್ಸೆಗೆ)
ಶ್ವಾಸ ಕಲ್ಪ ಮಾತ್ರೆಗಳು
ಶಿಲಾಜಿತ್ ಮಾತ್ರೆಗಳು
ಆಯುರ್ವೇದದ ಬಗ್ಗೆ ಟೀಕೆ ಮಾಡುವವರು ಹಲವರಿದ್ದಾರೆ. ಅವರು ಆಯುರ್ವೇದದ ಮೂಲತತ್ವಗಳನ್ನು ಅರ್ಥ ಮಾಡಿಕೊಂಡಿದ್ದರೆ, ಅಥವಾ ತಮ್ಮ ರೋಗಗಳಿಗೆ ಆಯುರ್ವೇದ ಔಷಧಿಗಳನ್ನು ಪರಿಣತ ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಅನುಸರಿಸಿ ಸೇವಿಸಿದ್ದರೆ ಹಾಗೆ ಟೀಕೆ ಮಾಡುತ್ತಿರಲಿಲ್ಲ.
“ಆಹಾರವೇ ಔಷಧಿ” ಎಂಬುದು ಆಯುರ್ವೇದದ ಪ್ರಧಾನ ಸೂತ್ರ. ಇದನ್ನು ಅರ್ಥಮಾಡಿಕೊಂಡು ಕಟ್ಟುನಿಟ್ಟಾಗಿ ಅನುಸರಿಸುವವರು ಎಷ್ಟು ಜನರಿದ್ದಾರೆ? ಇಂತಹ ಪುಸ್ತಕಗಳನ್ನು ಓದಿದರೆ, ಐದು ಸಾವಿರ ವರುಷಗಳ ಪರಂಪರೆ ಇರುವ ಆಯುರ್ವೇದದ ಬಗ್ಗೆ ಖಂಡಿತವಾಗಿ ಗೌರವ ಮೂಡುತ್ತದೆ.