ಪಾರಂಪರಿಕ ಜ್ನಾನದ ಉಳಿವಿಗೆ “ಮನೆಮದ್ದು ಶಿಬಿರ"

ಎಪ್ಪತ್ತು ವಯಸ್ಸಿನ ಅಜ್ಜಿ ಮುಂಜಾನೆ ಎದ್ದು, ಬಸ್ಸು ಹಿಡಿದು ಹಳ್ಳಿಯಿಂದ ಪೇಟೆಗೆ ಬಂದು, ಆಟೋರಿಕ್ಷಾ ಹತ್ತಿ, ಮಗನ ಮನೆಗೆ ಬಂದು ನೋಡುತ್ತಾರೆ – ಮಗ ಮತ್ತು ಸೊಸೆ ಆಗಲೇ ಕಾರು ಏರಿ, ನಾಲ್ಕು ವರುಷದ ಮೊಮ್ಮಗನೊಂದಿಗೆ ಎಲ್ಲಿಗೋ ಹೋಗಿದ್ದರು. ಅಜ್ಜಿ ಪಕ್ಕದ ಮನೆಗೆ ಹೋಗಿ ಕಾಯುತ್ತಾ ಕುಳಿತರು. ಮಧ್ಯಾಹ್ನದ ಹೊತ್ತಿಗೆ ಮಗ-ಸೊಸೆ  ಸುಸ್ತಾಗಿ ಮೊಮ್ಮಗನೊಂದಿಗೆ ವಾಪಾಸು ಬಂದರು.
“ಎಲ್ಲಿಗೆ ಹೋಗಿದ್ರಿ? ಎಂದು ಅಜ್ಜಿ ಕೇಳಿದಾಗ, ಒಂದೇ ಉಸಿರಿನಲ್ಲಿ ಮಗನ ಉತ್ತರ, “ಇವತ್ತು ದೊಡ್ಡ ರಾಮಾಯಣ ಆಯ್ತು. ಬೆಳಗ್ಗೆ ಮಗುವಿನ ಮೂಗಿನೊಳಗೆ ಅಂಗಿಯ ಬಟನ್ ಹೋಗಿ ಬಿಡ್ತು. ಅವನಿಗೆ ಉಸಿರಾಡೊದಕ್ಕೇ ಕಷ್ಟವಾಯ್ತು. ಏನ್ ಮಾಡಿದ್ರೂ ಬಟನ್ ಹೊರಗೆ ಬರಲಿಲ್ಲ. ಅದಕ್ಕೇ ಇ-ಎನ್-ಟಿ ಡಾಕ್ಟರಲ್ಲಿಗೆ ಹೋಗಿದ್ವಿ. ಅವರು ಕೊನೆಗೆ ಸಣ್ಣ ಆಪರೇಷನ್ ಮಾಡಿ, ಅವನ ಮೂಗಿಂದ ಆ ಬಟನ್ ಹೊರಗೆ ತೆಗೆದ್ರು. ಮೂರು ಸಾವಿರ ರೂಪಾಯಿ ಖರ್ಚಾಯ್ತು.”
“ಅಯ್ಯೋ, ಅದಕ್ಯಾಕೆ ಡಾಕ್ಟರ ಹತ್ರ ಹೋಗಿದ್ರಿ? ಇಷ್ಟಕ್ಕೆ ಆಪರೇಷನ್ ಬೇಕಾಗಿತ್ತಾ?” ಎಂಬುದು ಅಜ್ಜಿಯ ಪ್ರಶ್ನೆ. “ಮತ್ತೇನ್ ಮಾಡಬೇಕಾಗಿತ್ತು? ಮಗನ ಸವಾಲು. “ಮಗುವಿನ ಮೂಗಿಗೆ ಒಂದು ಚಿಟಿಕೆ ನಶ್ಯ ಹಾಕಿದ್ರೆ ಸಾಕಿತ್ತು. ಆಗ ಮಗೂಗೆ ಸೀನು ಬರ್ತಿತ್ತು. ಮಗು ಸೀನುವಾಗ ಮೂಗಿನೊಳಗಿಂದ ಬಟನ್ ಹೊರಕ್ಕೆ ಬರ್ತಿತ್ತು” ಎಂದು ಅಜ್ಜಿ ಹೇಳುತ್ತಿದ್ದಂತೆ ಮಗ ಪೆಚ್ಚಾಗಿದ್ದ.
ಆ ಅಜ್ಜಿಯದು ಪಾರಂಪರಿಕ ಜ್ನಾನಖಜಾನೆ. ಅಜ್ಜಿಯಿಂದ ಮೊಮ್ಮಕ್ಕಳಿಗೆ, ಅಮ್ಮನಿಂದ ಮಗಳಿಗೆ ದಾಟಿ ಬರುತ್ತಿದ್ದ ಇಂತಹ ಅನುಭವ ಭಂಡಾರ ಇಂದು ನಶಿಸಿ ಹೋಗುತ್ತಿದೆ.
ಮಕ್ಕಳ ಆರೋಗ್ಯ ಸ್ವಲ್ಪ ಹೆಚ್ಚುಕಡಿಮೆಯಾದರೂ, ಈಗ ತಂದೆತಾಯಿ ಧಾವಿಸುವುದು ಆಲೋಪತಿ ವೈದ್ಯರ ದವಾಖಾನೆಗೆ. ಆ ಡಾಕ್ಟರು ಕೊಡುವುದು ರಾಸಾಯನಿಕ ಔಷಧಿಗಳನ್ನು. ಅವುಗಳ ಬಳಕೆಯಿಂದ ಹಲವಾರು ಅಡ್ಡಪರಿಣಾಮಗಳು. ಇವುಗಳ ಶಮನಕ್ಕೆ ಇನ್ನಷ್ಟು ರಾಸಾಯನಿಕ ಔಷಧಿಗಳ ಬಳಕೆ. ಅಂತೂ ಈ ವಿಷವರ್ತುಲದ ಸುಳಿಯಲ್ಲಿ ಹೆಚ್ಚೆಚ್ಚು ಜನರು ಸಿಲುಕುತ್ತಿದ್ದಾರೆ.
ಶತಮಾನಗಳ ಮುಂಚೆ ನಮ್ಮ ದೇಶದಲ್ಲಿ ರಾಸಾಯನಿಕ ಔಷಧಿಗಳು ಇರಲಿಲ್ಲ. ಆಗ ಮನೆಮನೆಯಲ್ಲಿ ಅನಾರೋಗ್ಯ ನಿವಾರಣೆಗೆ “ಮನೆಮದ್ದು” ಬಳಕೆ. ಉಪ್ಪು, ತುಪ್ಪ, ಜೇನುತುಪ್ಪ, ಬೆಲ್ಲ, ಬೆಳ್ಳುಳ್ಳಿ, ನೀರುಳ್ಳಿ, ಏಲಕ್ಕಿ, ಲವಂಗ, ಅರಿಶಿನ, ಇಂಗು, ಮೆಣಸು, ಕರಿಮೆಣಸು, ಶುಂಠಿ, ಕೊತ್ತಂಬರಿ ಇತ್ಯಾದಿ ಸಾಂಬಾರ ಪದಾರ್ಥಗಳು ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ತುಳಸಿ, ಪುದಿನ, ದೊಡ್ಡಪತ್ರೆ (ಸಾಂಬಾರ ಬಳ್ಳಿ), ಆಡುಸೋಗೆ, ನೆಲ್ಲಿ, ಲೋಳೆಸರ, ಪುದೀನ, ಬೇವು ಇತ್ಯಾದಿ ಸೊಪ್ಪು, ನಾರುಬೇರುಗಳು – ಇವು ಮನೆಮಂದಿಯ ಆರೋಗ್ಯ ರಕ್ಷಣೆಗೆ ಔಷಧಿಯಾಗಿ ಉಪಯೋಗ. ಇವುಗಳ ಸೂಕ್ತ ಬಳಕೆಯಿಂದ ಕೆಮ್ಮು, ಜ್ವರ, ವಾಂತಿ, ಭೇದಿ, ಅಜೀರ್ಣ, ತಲೆನೋವು, ಹೊಟ್ಟೆನೋವು, ಮೈಕೈನೋವು ಇಂತಹ ಅನಾರೋಗ್ಯ ಲಕ್ಷಣಗಳನ್ನು ಅಜ್ಜ-ಅಜ್ಜಿಯರು ತಮ್ಮ ಅನುಭವ ಆಧಾರಿತ ಮನೆಮದ್ದು ನೀಡಿ ಗುಣಪಡಿಸುತ್ತಿದ್ದರು.
ಅಳಿದು ಹೋಗುತ್ತಿರುವ ಈ ಪಾರಂಪರಿಕ ಜ್ನಾನವನ್ನು ನಮ್ಮ ಮುಂದಿನ ತಲೆಮಾರುಗಳಿಗಾಗಿ ಉಳಿಸಬೇಕಾಗಿದೆ. ಅದಕ್ಕಾಗಿಯೇ, ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ವು ಮೂರು ದಿನಗಳ “ಮನೆಮದ್ದು ಶಿಬಿರ” ಏರ್ಪಡಿಸಿತ್ತು.(19ರಿಂದ 21-1-2015, ಪಾಂಡೇಶ್ವರದ ವೇದಂ ಆಯು ಆಯುರ್ವೇದ ಆಸ್ಪತ್ರೆ ಆವರಣದಲ್ಲಿ)
ಈ ಶಿಬಿರದಲ್ಲಿ ಮೈಸೂರಿನ ಡಾ. ತೆ.ನಾ. ಮಂಜುನಾಥ ಪ್ರಧಾನ ಸಂಪನ್ಮೂಲ ವೈದ್ಯರು. ಜೊತೆಗೆ, ಮೊದಲನೇ ದಿನ ಅಡೂರು ಈಶ್ವರ ಅವರಿಂದ “ಸರ್ಪಸುತ್ತಿಗೆ ಪಾರಂಪರಿಕ ಜೌಷಧಿ” ಬಗ್ಗೆ, ಎರಡನೇ ದಿನ ಆರೂರು ಮಂಜುನಾಥ ರಾವ್ ಅವರಿಂದ “ತಂಬುಳಿಗಳ” ಬಗ್ಗೆ ವಿಶೇಷ ಉಪನ್ಯಾಸಗಳು.
ಈ ಶಿಬಿರದ ಆರಂಭ ವಿಶಿಷ್ಠ ರೀತಿಯಲ್ಲಿ: ಉದ್ಘಾಟಕರೂ ಅತಿಥಿಗಳೂ ಐದು ಮನೆಮದ್ದುಗಳನ್ನು ವೇದಿಕೆಯಲ್ಲೇ ತಯಾರಿಸುವ ಮೂಲಕ. ಅವು: ಚರ್ಮಕ್ಕೆ ಬೆಂಕಿ ತಗಲಿದಾಗ ಶಮನಕ್ಕಾಗಿ ಹಚ್ಚಬೇಕಾದ ಸುಣ್ಣದ ತಿಳಿನೀರು ಮತ್ತು ಎಳ್ಳೆಣ್ಣೆಯ ಮಿಶ್ರಣ. ಥೈರಾಯಿಡ್ ಗ್ರಂಥಿಯ ಸಮಸ್ಯೆ ನಿವಾರಣೆಗಾಗಿ ಬೇಂಗೆಮರದ ತೊಗಟೆ ಮತ್ತು ಹರಳು-ಉಪ್ಪಿನ ಮಿಶ್ರಣ. ಕೆಲ್ಲು (ಉಗುರುಸುತ್ತು) ಗುಣಪಡಿಸಲಿಕ್ಕಾಗಿ ಕೆಲ್ಲುಬಳ್ಳಿ. ಅಂಗಾಲಿನ ಆಣಿ ಹೊರ ಬರಿಸಲಿಕ್ಕಾಗಿ ಲೋಳೆಸರ. ಅಜೀರ್ಣದಿಂದಾಗುವ ಹೊಟ್ಟೆನೋವು ಚಿಕಿತ್ಸೆಗಾಗಿ ಮಜ್ಜಿಗೆ- ಇಂಗು ಮಿಶ್ರಣ.
ಮನೆಮದ್ದು ಶಿಬಿರದ ಮುಕ್ತಾಯದ ದಿನ ಪ್ರಾಯೋಗಿಕ ಮಾಹಿತಿ ಒದಗಿಸಿದ್ದು ವಿಶೇಷ. ಪೂರ್ವಾಹ್ನ ೧೫೦ ಶಿಬಿರಾರ್ಥಿಗಳಿಗೆ ಮನೆಮದ್ದು ತಯಾರಿಯ ತರಬೇತಿ. ಅವರನ್ನು ತಂಡಗಳಾಗಿ ವಿಭಾಗಿಸಿ, ಪ್ರತಿಯೊಂದು ತಂಡದಿಂದ ಮನೆಮದ್ದು ತಯಾರಿ. ಸಿತೊಫಲಾದಿ ಚೂರ್ಣ, ಹಿಂಗ್ವಾಷ್ಟಕ ಚೂರ್ಣ, ಹರಿದ್ರಾಖಂಡ, ವೇದನಾಹರ ತೈಲ, ಚರ್ಮರೋಗ ಚಿಕಿತ್ಸಾ ತೈಲ - ಇವನ್ನು ತಯಾರಿಸಿದ ಶಿಬಿರಾರ್ಥಿಗಳು ಇವುಗಳ ಚಿಕಿತ್ಸಾ ವಿಧಾನಗಳನ್ನೂ ತಿಳಿದುಕೊಂಡರು. ಅಂದು ಅಪರಾಹ್ನ ಶಿಬಿರಾರ್ಥಿಗಳಿಂದ ಪಿಲಿಕುಳ ಸಸ್ಯಕಾಶಿ ಔಷಧಿ ವನಕ್ಕೆ ಭೇಟಿ. ಅಲ್ಲಿ ಆಯುರ್ವೇದ ಔಷಧಿಗಳಿಗೆ ಉಪಯೋಗವಾಗುವ ಗಿಡಮೂಲಿಕೆಗಳನ್ನು ಪರಿಚಯಿಸಿದವರು ಆ ವನದ ಮೇಲ್ವಿಚಾರಕರಾದ ಉದಯಕುಮಾರ್ ಶೆಟ್ಟಿ.  
ಮನೆಮದ್ದು ಶಿಬಿರ ಸಂಘಟಿಸಿದ ಉದ್ದೇಶ ಆಲೋಪಥಿ ಔಷಧಿ ಪದ್ಧತಿ ವಿರೋಧಿಸಲಿಕ್ಕಾಗಿ ಅಲ್ಲ. ಆದರೆ, ಆಸ್ಪತ್ರೆಗೆ ಹೋದ ತಕ್ಷಣ “ನಿಮಗೆ ಮೆಡಿಕಲ್ ಇನ್ಷೂರೆನ್ಸ್ ಇದೆಯೇ?" ಎಂದು ಕೇಳಿ; ಇನ್ಷೂರೆನ್ಸ್ ಇದ್ದವರಿಗೆ ಇಲ್ಲಸಲ್ಲದ ಪರೀಕ್ಷೆಗಳನ್ನು ನಡೆಸಿ, ದುಬಾರಿ ಬಿಲ್ ಮಾಡಿ ಹಣ ಕೀಳುವುದು; ಆಪರೇಷನ್ ಅಗತ್ಯವಿಲ್ಲದಿದ್ದರೂ ಆಪರೇಷನ್ ಮಾಡುವುದು; ದುಷ್ಪರಿಣಾಮ ಬೀರುವ ರಾಸಾಯನಿಕ ಔಷಧಿಗಳನ್ನು ಮತ್ತೆಮತ್ತೆ ನೀಡುವುದು; ಸಣ್ಣಪುಟ್ಟ ಕಾರಣಗಳಿಗಾಗಿ ರೋಗಿಗಳನ್ನು ಐಸಿಯುನಲ್ಲಿಟ್ಟು ಹಲವು ಪಟ್ಟು ಜಾಸ್ತಿ ಬಿಲ್ ಮಾಡಿ ಹಣ ಸುಲಿಯುವುದು – ಇಂತಹ ಅಪ್ರಾಮಾಣಿಕ ಕ್ರಮಗಳಿಂದ ಪಾರಾಗಲಿಕ್ಕಾಗಿ ನಮ್ಮ ಪಾರಂಪರಿಕ ಜ್ನಾನಾಧಾರಿತ ದಾರಿಯೊಂದನ್ನು ತೋರಿಸುವುದು. “ಆಸ್ಪತ್ರೆಗಳಿಂದ, ಆಲೋಪಥಿ ಡಾಕ್ಟರುಗಳಿಂದ ಮಾತ್ರ ನಾವು ಆರೋಗ್ಯ ಪಡೆಯುತ್ತೇವೆ” ಎಂಬ ತಪ್ಪುಕಲ್ಪನೆಯಿಂದ ಹೊರಬರಲಿಕ್ಕಂತೂ ಮನೆಮದ್ದು ಶಿಬಿರದ ೧೫೦ ಶಿಬಿರಾರ್ಥಿಗಳಿಗೆ ಸಾಧ್ಯವಾಯಿತು. ಇದಕ್ಕೆ ಪುರಾವೆ: ದಿನನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಇನ್ನು ಮುಂದೆ ತಾವು ಮನೆಮದ್ದನ್ನೇ ಬಳಸುತ್ತೇವೆ ಎಂಬ ಅವರ ನಿರ್ಧಾರ.

(ಮಾಹಿತಿ: ಅನಂತರ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರಿನ ನಂತೂರಿನ ಭಾರತೀ ಕಾಲೇಜಿನಲ್ಲಿ ಮತ್ತು ಕುಳಾಯಿ ಮಹಿಳಾಮಂಡಲಿ ಸಭಾಭವನದಲ್ಲಿ 2 ಮನೆಮದ್ದು ಶಿಬಿರ ಆಯೋಜಿಸಿತು).