ವಾರಣಾಸಿಯನ್ನು ರಾಜ ಬ್ರಹ್ಮದತ್ತ ಆಳುತ್ತಿದ್ದಾಗ ಅನಂತಪಿಂಡಿಕ ಎಂಬ ಶ್ರೀಮಂತ ವ್ಯಾಪಾರಿ ಅಲ್ಲಿ ವಾಸ ಮಾಡುತ್ತಿದ್ದ. ಅದೊಂದು ದಿನ ಅವನನ್ನು ಭೇಟಿಯಾಗಲು ಅವನ ಬಾಲ್ಯಕಾಲದ ಗೆಳೆಯ ಕಲಾಕನ್ನಿ ಎಂಬಾತ ಬಂದ.
ಕಲಾಕನ್ನಿ ತೀರಾ ಕೃಶನಾಗಿದ್ದ; ಹರಿದ ಉಡುಪು ಧರಿಸಿದ್ದ. ಅವನು ಹಿಂಜರಿಯುತ್ತಲೇ ತನ್ನ ಗೆಳೆಯನ ಬಳಿಗೆ ಬಂದ. ಅವನನ್ನು ಕಂಡೊಡನೆ ಅನಂತಪಿಂಡಿಕ ಉತ್ಸಾಹದಿಂದ ಸ್ವಾಗತಿಸುತ್ತಾ, "ಬಾ, ಬಾ, ಇಷ್ಟು ವರುಷಗಳ ನಂತರ ನಿನ್ನನ್ನು ಕಂಡು ಬಹಳ ಸಂತೋಷವಾಯಿತು” ಎಂದ. ಅವನ ಹೆಗಲಿಗೆ ಕೈಹಾಕಿ, ಅವನನ್ನು ತನ್ನ ಪಕ್ಕದಲ್ಲೇ ಕೂರಿಸಿಕೊಂಡ ಅನಂತಪಿಂಡಿಕ. ಕಾಳಜಿಯಿಂದ ಕೇಳಿದ, “ಕಲಾಕನ್ನಿ, ಯಾಕೆ ಸಪ್ಪಗಿದ್ದಿ?”
ಕಲಾಕನ್ನಿ ವಿಷಾದದಿಂದ ಉತ್ತರಿಸಿದ, “ಎಲ್ಲ ನನ್ನ ದುರಾದೃಷ್ಟ. ನನಗೆ ಸರಿಯಾದ ಹೆಸರನ್ನೇ ಇಟ್ಟಿದ್ದಾರೆ. ನಾನು ತೀರಾ ದುರಾದೃಷ್ಟದವನು.” ಇದನ್ನು ಕೇಳಿದ ಅನಂತಪಿಂಡಿಕ ಹೇಳಿದ, "ಛೇ, ಎಂದಿಗೂ ಹಾಗೆನ್ನಬೇಡ. ಅದೆಲ್ಲ ಬದಲಾಯಿತೆಂದು ತಿಳಿದುಕೋ. ಇನ್ನು ಮೇಲೆ ನೀನು ನನ್ನೊಂದಿಗೆ ವಾಸ ಮಾಡುತ್ತಿ ಮತ್ತು ನನ್ನ ಜೊತೆಗಾರನಾಗಿ ಇರುತ್ತಿ.”
ಕಲಾಕನ್ನಿ “ಆದರೆ …" ಎನ್ನುವಷ್ಟರಲ್ಲಿ ಅನಂತಪಿಂಡಿಕ ಆತ್ಮೀಯವಾಗಿ ನುಡಿದ, “ಆದರೆಗೀದರೆ ಏನೂ ಇಲ್ಲ. ನೀನು ಇಲ್ಲಿಂದ ಹೋಗಲು ನಾನು ಬಿಡೋದಿಲ್ಲ. ನಿನ್ನಂತಹ ಗೆಳೆಯನನ್ನು ನಾನು ಹೇಗೆ ಮರೆಯಲು ಸಾಧ್ಯ?” ಆಗ ಕಲಾಕನ್ನಿಯೂ ಗುರುಕುಲದಲ್ಲಿ ತಮ್ಮ ಬಾಲ್ಯದ ಸಂತೋಷದ ದಿನಗಳನ್ನು ನೆನಪು ಮಾಡಿಕೊಂಡ. "ನನಗಿಲ್ಲಿ ದೊಡ್ಡ ವ್ಯಾಪಾರ ವಹಿವಾಟು ಇದೆ. ಅದನ್ನು ನಿಭಾಯಿಸಲು ಸಹಾಯ ಮಾಡಲಿಕ್ಕಾಗಿ ನನಗೆ ನಿನ್ನಂತಹ ವಿಶ್ವಸಾರ್ಹ ಗೆಳೆಯನೊಬ್ಬ ಬೇಕಾಗಿದ್ದಾನೆ" ಎಂದು ವಿನಂತಿಸಿದ ಅನಂತಪಿಂಡಿಕ. ಕಲಾಕನ್ನಿ ತನ್ನ ಸ್ನೇಹಿತನ ವಿನಂತಿಗೆ ಸಮ್ಮತಿಸಿ, ಅವನ ವಹಿವಾಟಿನಲ್ಲಿ ಅವನಿಗೆ ಸಹಾಯ ಮಾಡತೊಡಗಿದ.
ಕಲಾಕನ್ನಿಯನ್ನು ಅನಂತಪಿಂಡಿಕ ತನ್ನ ಕುಟುಂಬದ ಒಬ್ಬ ಸದಸ್ಯನಂತೆಯೇ ಕಾಣುತ್ತಿದ್ದ. ಅವನ ಜೊತೆಯೇ ಕುಳಿತು ಊಟ ಮಾಡುತ್ತಿದ್ದ. ಹಣಕಾಸನ್ನು ಜೋಪಾನವಾಗಿ ತೆಗೆದಿರಿಸಲು ಕಲಾಕನ್ನಿಯ ಕೈಗೊಪ್ಪಿಸುತ್ತಿದ್ದ.
ಇದನ್ನೆಲ್ಲ ಕಂಡು ಅನಂತಪಿಂಡಿಕನ ವಹಿವಾಟಿನ ಜೊತೆಗಾರರಿಗೆ ಅಸೂಯೆ ಉಂಟಾಯಿತು. “ಒಬ್ಬ ಅಪರಿಚಿತನನ್ನು ನೀನು ಅಷ್ಟರ ಮಟ್ಟಿಗೆ ನಂಬಲು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದಾಗ ಅನಂತಪಿಂಡಿಕ "ಅವನೇನೂ ಅಪರಿಚಿತನಲ್ಲ. ಅವನು ನನ್ನ ಬಾಲ್ಯದ ಸ್ನೇಹಿತ” ಎಂದು ಉತ್ತರಿಸಿದ. “ಇರಬಹುದು, ಆದರೆ ನೀನು ಅವನನ್ನು ಹಲವು ವರುಷಗಳಿಂದ ಕಂಡಿಲ್ಲ" ಎಂದು ಎಚ್ಚರಿಸಿದರು ಜೊತೆಗಾರರು. ಅದಲ್ಲದೆ, “ಅವನ ಹೆಸರೇ ದುರದೃಷ್ಟದ್ದು. ಅದನ್ನು ಪುನಃ ಪುನಃ ಉಚ್ಚರಿಸಿದರೆ ನಿನಗೆ ದುರದೃಷ್ಟ ಬಂದೀತು" ಎಂಬುದು ಅವರ ಅಂಬೋಣ. "ನಾನು ಅದನ್ನೆಲ್ಲ ನಂಬೋದಿಲ್ಲ. ನಾನು ಗುರುಕುಲದಲ್ಲಿ ಹಲವು ವರುಷ ಅವನ ಜೊತೆಗಿದ್ದೆ. ಅವನ ಹೆಸರು ಏನೇ ಆಗಿರಲಿ, ಅವನೊಬ್ಬ ನಿಜವಾದ ಸಜ್ಜನ" ಎಂದು ಅನಂತಪಿಂಡಿಕ ಆ ಮಾತುಗಳನ್ನೆಲ್ಲ ನಿರಾಕರಿಸಿದ. ಕಲಾಕನ್ನಿ ತನ್ನೊಂದಿಗೇ ಇರುತ್ತಾನೆಂದು ಆತ ಸ್ಪಷ್ಟ ಪಡಿಸಿದ.
ಕೆಲವು ತಿಂಗಳ ನಂತರ, ತಾನು ಒಂದೆರಡು ದಿನ ಇರೋದಿಲ್ಲವೆಂದೂ ತನ್ನ ಊರಿಗೆ ಹೋಗುತ್ತೇನೆಂದೂ ಕಲಾಕನ್ನಿಗೆ ಅನಂತಪಿಂಡಿಕ ತಿಳಿಸಿದ. ತನ್ನ ತಿಜೋರಿಯ ಬೀಗದಕೈಗಳನ್ನು ಕಲಾಕನ್ನಿಕನ ಕೈಗಿತ್ತು ಅನಂತಪೀಡಿಕ ಊರಿಗೆ ಹೊರಟ. ಅನಂತಪಿಂಡಿಕನ ಮನೆಯನ್ನು ಹಗಲೂ ರಾತ್ರಿ ರಕ್ಷಿಸುತ್ತೇನೆಂದು ಕಲಾಕನ್ನಿ ಭರವಸೆಯಿತ್ತ.
ಆ ಊರಿನ ಕೆಲವು ಕಳ್ಳರು ಅನಂತಪಿಂಡಿಕ ಪ್ರಯಾಣ ಹೊರಟದ್ದನ್ನು ಕಂಡರು. ಅವತ್ತು ರಾತ್ರಿ ಅವನ ಮನೆಗೆ ಕನ್ನ ಹಾಕಬೇಕೆಂದು ಅವರು ತಮ್ಮೊಳಗೆ ಮಾತಾಡಿಕೊಂಡರು. ಅಲ್ಲೇ ಹಾದು ಹೋಗುತ್ತಿದ್ದ ಕಲಾಕನ್ನಿ ಅವರ ಮಾತುಗಳನ್ನು ಕೇಳಿಸಿಕೊಂಡ. ಆ ದುರುಳರಿಂದ ಅನಂತಪಿಂಡಿಕನ ಮನೆಯನ್ನೂ ಸಂಪತ್ತನ್ನೂ ರಕ್ಷಿಸಬೇಕೆಂದು ನಿರ್ಧರಿಸಿದ.
ಆದರೆ ಅನಂತಪಿಂಡಿಕನ ಮನೆಯ ಸೇವಕರು ವೃದ್ಧರೂ ದುರ್ಬಲರೂ ಆಗಿದ್ದರು. ಹಾಗಾಗಿ ಕಲಾಕನ್ನಿ ಒಂದು ಉಪಾಯ ಮಾಡಿದ. ಆ ದಿನ ಕತ್ತಲಾಗುತ್ತಲೇ ಅವನು ಒಬ್ಬೊಬ್ಬ ಸೇವಕನಿಗೆ ಒಂದೊಂದು ಕೆಲಸ ಕೊಟ್ಟ: ಡೋಲು ಬಡಿಯುವುದು, ಜಾಗಟೆ ಬಡಿಯುವುದು, ತುತ್ತೂರಿ ಊದುವುದು, ಜೋರಾಗಿ ಹಾಡುವುದು ಇತ್ಯಾದಿ. ಇನ್ನೂ ಕೆಲವರಿಗೆ ತಾಳಬದ್ಧವಾಗಿ ಚಪ್ಪಾಳೆ ತಟ್ಟಲು ಹೇಳಿದ. ಅಂತೂ ಎಲ್ಲರೂ ಸೇರಿ ಅನಂತಪಿಂಡಿಕನ ಮನೆಯಲ್ಲಿ ಜೋರಾಗಿ ಗದ್ದಲ ಮಾಡತೊಡಗಿದರು.
ಆ ದಿನ ನಡುರಾತ್ರಿಯ ಹೊತ್ತಿಗೆ ಆ ಕಳ್ಳರು ಅನಂತಪಿಂಡಿಕನ ಮನೆಯ ಹತ್ತಿರ ಬಂದರು. ಅಲ್ಲಿಂದ ಕೇಳಿಬರುತ್ತಿದ್ದ ಸದ್ದುಗದ್ದಲ ಕೇಳಿ ಅವರಿಗೆ ಅಚ್ಚರಿ. ಅಲ್ಲಿ ಯಾವುದೋ ಸಮಾರಂಭ ನಡೆಯುತ್ತಿರಬೇಕೆಂದು ಅವರು ಭಾವಿಸಿದರು. ಮನೆಯೊಳಗೆ ಬಹಳ ಜನರು ಜಮಾಯಿಸಿರಬೇಕೆಂದು ಯೋಚಿಸಿದ ಅವರು ಭಯಪಟ್ಟು, ಅಲ್ಲಿಂದ ಓಡಿ ಹೋದರು.
ಮರುದಿನ ಮುಂಜಾನೆ ಅನಂತಪಿಂಡಿಕನ ಮನೆಯ ಹತ್ತಿರ ಬಂದ ಆತನ ವಹಿವಾಟಿನ ಜೊತೆಗಾರರು ಕಳ್ಳರು ಬಿಟ್ಟುಹೋದ ಸನಿಕೆ, ಚೂರಿ, ಗುದ್ದಲಿ ಇತ್ಯಾದಿ ಸಲಕರಣೆಗಳನ್ನು ಕಂಡರು. ಮನೆಯ ಹಿಂಭಾಗದಲ್ಲಿ ಕೆಲವು ಹೆಜ್ಜೆ ಗುರುತುಗಳನ್ನೂ ಕಂಡರು. ಅಷ್ಟರಲ್ಲಿ ಅಲ್ಲಿಗೆ ಬಂದ ಕಲಾಕನ್ನಿಗೆ ಅವರು ಈ ಸಂಗತಿ ತಿಳಿಸಿದರು. ಕಳ್ಳರು ಕನ್ನ ಹಾಕುವ ಸಂಭವ ಇದ್ದದ್ದರಿಂದ ರಾತ್ರಿ ತಾವು ಸದ್ದುಗದ್ದಲ ಮಾಡಿದ್ದಾಗಿ ಕಲಾಕನ್ನಿ ಅವರಿಗೆ ಹೇಳಿದ.
ಆ ದಿನ ಸಂಜೆ ಊರಿಗೆ ಹಿಂತಿರುಗಿದ ಅನಂತಪಿಂಡಿಕನಿಗೆ ಆತನ ಜೊತೆಗಾರರು ಎಲ್ಲ ಸಂಗತಿ ತಿಳಿಸಿದರು. “ನಿಮ್ಮ ಮಿತ್ರ ಕಲಾಕನ್ನಿ ನಿಜಕ್ಕೂ ಬುದ್ಧಿವಂತ” ಎಂದವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. “ಕಲಾಕನ್ನಿ ನಂಬಿಕಸ್ಥನೂ ಹೌದು. ಅವನನ್ನು ನಾನ್ಯಾಕೆ ಗೌರವಿಸುತ್ತೇನೆ ಎಂಬುದು ನಿಮಗೆ ಈಗ ಅರ್ಥವಾಗಿರಬೇಕು” ಎಂದ ಅನಂತಪಿಂಡಿಕ.
ಪ್ರೇರಣೆ: “ಟ್ರೂ ಫ್ರೆಂಡ್ಸ್” - ಉತ್ತಮ ಗುಣನಡತೆಯ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ