ಜಾತಕ ಕತೆ 3: ಸಂತ ಔಷಧಕುಮಾರನ ಜಾಣ್ಮೆ

ಸಂತ ಔಷಧಕುಮಾರ ಯೌವನದಲ್ಲೇ ತನ್ನ ವಿವೇಕ ಮತ್ತು ಜಾಣ್ಮೆಯಿಂದ ಪ್ರಸಿದ್ಧನಾಗಿದ್ದ. ಒಮ್ಮೆ ಇಬ್ಬರು ಮಹಿಳೆಯರು ಒಂದು ಮಗುವಿನ ಬಗ್ಗೆ ಕಿತ್ತಾಡತೊಡಗಿದರು - ತಾನೇ ಆ ಮಗುವಿನ ತಾಯಿ ಎಂಬುದಾಗಿ. ತಮ್ಮ ವಿವಾದದ ಇತ್ಯರ್ಥಕ್ಕಾಗಿ ಅವರು ಮಗುವಿನೊಂದಿಗೆ ಸಂತ ಔಷಧಕುಮಾರನ ಬಳಿಗೆ ಬಂದರು.

ಔಷಧಕುಮಾರ ಅವರ ವಿವಾದವನ್ನು ತಾಳ್ಮೆಯಿಂದ ಕೇಳಿದ. ಅನಂತರ ಅವನು ಕಡ್ಡಿಯಿಂದ ನೆಲದಲ್ಲಿ ಗೆರೆಯೊಂದನ್ನು ಎಳೆದ. ಆ ಗೆರೆಯ ಮೇಲೆ ಮಗುವನ್ನು ಮಲಗಿಸಿದ. ಅನಂತರ ಇಬ್ಬರು ಮಹಿಳೆಯರನ್ನು ಆ ಗೆರೆಯ ಇಬ್ಬದಿಗಳಲ್ಲಿ ನಿಲ್ಲಿಸಿದ. ಬಳಿಕ ಆ ಮಹಿಳೆಯರಿಗೆ ಹೇಳಿದ: "ಈಗ ಮಗುವನ್ನು ನೆಲದಿಂದೆತ್ತಿ ನೀವಿಬ್ಬರೂ ಅದನ್ನು ನಿಮ್ಮನಿಮ್ಮ ಕಡೆಗೆ ಎಳೆಯಿರಿ. ಯಾರು ಮಗುವನ್ನು ತನ್ನ ಕಡೆಗೆ ಎಳೆದುಕೊಳ್ಳುತ್ತಾಳೋ ಅವಳೇ ಈ ಮಗುವಿನ ತಾಯಿ.”

ಇಬ್ಬರು ಮಹಿಳೆಯರು ಮಗುವನ್ನು ಎತ್ತಿಕೊಂಡರು. ಒಬ್ಬಾಕೆ ಮಗುವಿನ ಕೈಗಳನ್ನೂ ಇನ್ನೊಬ್ಬಾಕೆ ಕಾಲುಗಳನ್ನೂ ಹಿಡಿದುಕೊಂಡು, ತಮ್ಮ ಕಡೆಗೆ ಎಳೆಯತೊಡಗಿದರು. ಈ ಎಳೆದಾಟದ ನೋವನ್ನು ಸಹಿಸಲಾಗದೆ ಮಗು ಕಿಟಾರನೆ ಕಿರುಚಿ ಅಳತೊಡಗಿತು. ಆಗ ಮಗುವಿನ ಕಾಲುಗಳನ್ನು ಹಿಡಿದು ಎಳೆಯುತ್ತಿದ್ದ ಮಹಿಳೆ ತನ್ನ ಹಿಡಿತ ಸಡಿಲಿಸಿ ಮಗುವನ್ನು ಬಿಟ್ಟುಬಿಟ್ಟು ಅಳತೊಡಗಿದಳು.

ಆಗ ಮಗುವಿನ ಕೈಗಳನ್ನು ಹಿಡಿದಿದ್ದ ಮಹಿಳೆ ವಿಜಯದ ನಗೆ ಬೀರುತ್ತಾ "ನೋಡಿದಿರಾ, ಈ ಮಗು ನನ್ನದೇ" ಎಂದಳು. ತಕ್ಷಣವೇ ಸಂತ ಔಷಧಕುಮಾರ ಹೇಳಿದ, “ಅಲ್ಲ, ಈ ಮಗು ನಿನ್ನದಲ್ಲ. ಅದನ್ನು ಅವಳಿಗೆ ಕೊಡು.” ಆಗ ಮಗುವನ್ನು ಹಿಡಿದಿದ್ದ ಮಹಿಳೆ ಪ್ರತಿಭಟಿಸಿದಳು, “ಅದು ಹೇಗಾಗುತ್ತದೆ? ನಾನೇ ಮಗುವನ್ನು ನನ್ನತ್ತ ಎಳೆದು ಗೆದ್ದಿದ್ದೇನೆ. ಈ ಮಗು ನನ್ನದೇ”.

ಆಗ ಔಷಧಕುಮಾರ ತನ್ನ ತೀರ್ಪನ್ನಿತ್ತ: “ಅಲ್ಲ. ಈ ಮಗು ಇನ್ನೊಬ್ಬಳದೇ. ಅವಳು ಮಗುವಿನ ಕಾಲುಗಳ ಹಿಡಿತ ಬಿಟ್ಟುಬಿಟ್ಟಳು ಯಾಕೆಂದರೆ ಅವಳಿಗೆ ಮಗುವಿನ ನೋವನ್ನು ನೋಡಲಾಗಲಿಲ್ಲ. ಆದರೆ ನಿನಗೆ ಸ್ವಲ್ಪವೂ ಕರುಣೆಯಿಲ್ಲ. ನೀನು ಈ ಮಗುವಿನ ತಾಯಿಯಾಗಿರಲು ಹೇಗೆ ಸಾಧ್ಯ?” ಔಷಧಕುಮಾರನ ತರ್ಕ ಮತ್ತು ಜಾಣ್ಮೆಯನ್ನು ಅಲ್ಲಿ ನೆರೆದಿದ್ದವರೆಲ್ಲರೂ ಮೆಚ್ಚಿಕೊಂಡರು.

ಪ್ರೇರಣೆ: “ಸ್ಟೋರೀಸ್ ಆಫ್ ವಿಸ್‌ಡಮ್” - ವಿವೇಕದ ಜಾತಕ ಕತೆಗಳು