ಜಾತಕ ಕತೆ 2: ಹಣ್ಣಿನ ಮರದ ರಹಸ್ಯ

ಅದೊಂದು ಹಳ್ಳಿ. ಅಲ್ಲಿನ ಐದು ಜನರಿಗೆ ಹಳ್ಳಿಯ ಪಕ್ಕದ ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಮರವೊಂದನ್ನು ಕಾಯುವುದೇ ಕೆಲಸ. ಅದರ ಹಣ್ಣುಗಳು ಮಾವಿನ ಹಣ್ಣುಗಳಂತೆಯೇ ಕಾಣಿಸುತ್ತಿದ್ದವು. ಆದರ ಅವು ವಿಷದ ಹಣ್ಣುಗಳು.

ಆ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರು ಮರದಿಂದ ನೇತಾಡುವ ಹಣ್ಣುಗಳನ್ನು ಕಂಡು, ಅವು ಮಾವಿನ ಹಣ್ಣೆಂದು ಭಾವಿಸಿ, ಅವನ್ನು ಕೊಯ್ದು ತಿನ್ನುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಕುಸಿದು ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದರು. ಆಗ ಐವರು ದುರುಳರು ಧಾವಿಸಿ ಹೋಗಿ, ಆ ಪ್ರಯಾಣಿಕರ ಸೊತ್ತುಗಳನ್ನೂ ಅವರು ಧರಿಸಿದ್ದ ಆಭರಣಗಳನ್ನೂ ಕದ್ದು, ಅವನ್ನು ಮಾರಿ ಹಣ ಗಳಿಸುತ್ತಿದ್ದರು.

ಅದೊಂದು ದಿನ ನಾಲ್ವರು ಪ್ರಯಾಣಿಕರು ಆ ಹಣ್ಣಿನ ಮರದ ಕಡೆಗೆ ನಡೆದು ಬರುತ್ತಿದ್ದುದನ್ನು ಕಂಡು ಹಳ್ಳಿಯ ದುರುಳರಿಗೆ ಖುಷಿಯೋ ಖುಷಿ. ಆ ನಾಲ್ವರು ಪ್ರಯಾಣಿಕರ ಹಿಂದೆ ಅವರ ವಾಣಿಜ್ಯಸರಕುಸಾಲು ಸಾಗಿ ಬರುತ್ತಿತ್ತು. ಇವರಲ್ಲೊಬ್ಬ ಹಣ್ಣು ತುಂಬಿದ ಮರ ಕಂಡು “ಓ, ಮಾವಿನ ಹಣ್ಣುಗಳು" ಎನ್ನುತ್ತಾ ಮರವೇರಿದ. ಹಲವಾರು ಹಣ್ಣುಗಳನ್ನು ಕಿತ್ತು, ಉಳಿದ ಮೂವರತ್ತ ಎಸೆದ. ಅವರು ಹಣ್ಣುಗಳನ್ನು ತಿನ್ನಬೇಕು ಅನ್ನುವಷ್ಟರಲ್ಲಿ, ಅವರ ಸರಕುಸಾಲು ಹತ್ತಿರ ಬಂತು. ಇವರು ಹಣ್ಣು ಕೊಯ್ಯೋದನ್ನು ಕಂಡಿದ್ದ ಸರಕುಸಾಲಿನ ಮುಂದಾಳು ಅಲ್ಲಿಂದಲೇ ಕಿರುಚಿದ, “ನಿಲ್ಲಿ, ನಿಲ್ಲಿ. ಆ ಹಣ್ಣುಗಳನ್ನು ತಿನ್ನಬೇಡಿ”.

ಮುಂದಾಳು ಬಂಡಿಯಿಂದ ಇಳಿದು, ನಾಲ್ವರತ್ತ ಓಡೋಡಿ ಬಂದ. “ಅವೆಲ್ಲ ವಿಷದ ಹಣ್ಣುಗಳು, ತಿನ್ನಬೇಡಿ” ಎಂದು ಪುನಃ ಎಚ್ಚರಿಸಿದ. ಅವರಲ್ಲೊಬ್ಬ ಕಂಗಾಲಾಗಿ ಹೇಳಿದ, “ಅಯ್ಯೋ, ನಾನು ಆಗಲೇ ಹಣ್ಣು ತಿಂದೆನಲ್ಲ." ಆಗ ಮುಂದಾಳು “ಪರವಾಗಿಲ್ಲ, ಈಗಲೇ ಪ್ರತಿವಿಷ ದ್ರಾವಣ ಕುಡಿ” ಎನ್ನುತ್ತಾ ಸೀಸೆಯೊಂದನ್ನು ಅವನಿಗಿತ್ತ. ಅವನು ಒಂದು ಗುಟುಕು ಪ್ರತಿವಿಷ ದ್ರಾವಣ ಕುಡಿದ. ಕೂಡಲೇ ತಿಂದಿದ್ದ ಹಣ್ಣನ್ನು ವಾಂತಿ ಮಾಡಿದ.

ಇದನ್ನೆಲ್ಲ ದೂರದಲ್ಲಿ ಬಂಡೆಗಲ್ಲಿನ ಮರೆಯಲ್ಲಿ ನಿಂತು ಗಮನಿಸುತ್ತಿದ್ದ ಐವರು ದುರುಳರಿಗೆ ಗಾಬರಿಯಾಯಿತು - ಇನ್ನು ಮುಂದೆ ತಮ್ಮ ಆದಾಯಕ್ಕೆ ಕುತ್ತು ಬಂದೀತೆಂದು. ಅವರು ಕುಳಿತಲ್ಲಿಂದ ಎದ್ದು ಬಂದರು. ಆ ಪ್ರಯಾಣಿಕರ ಮುಂದಾಳುವಿನ ಹತ್ತಿರ ಹೋದರು. ದುರುಳರಲ್ಲೊಬ್ಬ ಮುಂದಾಳುವಿನ ಬಳಿ ಕೇಳಿದ, “ನೀವ್ಯಾರೂ ಈ ಮರದ ಹಣ್ಣು ತಿನ್ನಲಿಲ್ಲ ತಾನೇ?" ಆಗ ಮುಂದಾಳು ಉತ್ತರಿಸಿದ, “ಇಲ್ಲ, ಇಲ್ಲ. ನಾನು ಸರಿಯಾದ ಸಮಯದಲ್ಲಿ ಬಂದು ನನ್ನ ಬಳಗದವರನ್ನು ರಕ್ಷಿಸಿದೆ."

ಅದೇ ದುರುಳ ಮತ್ತೆ ಕೇಳಿದ, “ಈ ರಸ್ತೆಯಲ್ಲಿ ಹಾದು ಹೋಗುವ ಹಲವು ಪ್ರಯಾಣಿಕರು ಅವು ಮಾವಿನ ಹಣ್ಣುಗಳೆಂದು ತಪ್ಪು ತಿಳಿಯುತ್ತಾರೆ. ಅವು ಮಾವಿನ ಹಣ್ಣುಗಳಲ್ಲ, ವಿಷದ ಹಣ್ಣುಗಳೆಂದು ನಿಮಗೆ ಹೇಗೆ ಗೊತ್ತಾಯಿತು?” ಆಗ ಮುಂದಾಳು ಉತ್ತರಿಸಿದ: "ಹಳ್ಳಿಯ ಹತ್ತಿರದ ಮರದಲ್ಲಿ ಹಣ್ಣುಗಳಿದ್ದರೆ ಅವು ಮರದಲ್ಲಿ ಉಳಿಯೋದಿಲ್ಲ. ಹಳ್ಳಿಯವರು, ಮಕ್ಕಳು ಬಂದು ಅವನ್ನೆಲ್ಲ ಕೀಳುತ್ತಾರೆ. ಆದರೆ, ಈ ಮರಕ್ಕೆ ಸುಲಭವಾಗಿ ಹತ್ತಬಹುದಾಗಿದ್ದರೂ ಇದರ ಹಣ್ಣುಗಳನ್ನು ನಿಮ್ಮ ಹಳ್ಳಿಯ ಯಾರೂ ಕೊಯ್ದಿರಲಿಲ್ಲ. ಆದ್ದರಿಂದ ಇದರ ಹಣ್ಣುಗಳು ವಿಷದ ಹಣ್ಣುಗಳೆಂದು ನಾನು ತರ್ಕಿಸಿದೆ.”

ಹಾಗೆನ್ನುತ್ತಾ ವಾಣಿಜ್ಯ ಸರಕುಸಾಲಿನ ಮುಂದಾಳು ತನ್ನ ಸಂಗಡಿಗರಿಗೆ ಆ ವಿಷದ ಹಣ್ಣಿನ ಮರವನ್ನು ಕಡಿಯಲು ಹೇಳಿದ. ಸ್ವಲ್ಪ ಹೊತ್ತಿನಲ್ಲೇ ಅವರು ಆ ಮರವನ್ನು ಬುಡದಿಂದ ಕತ್ತರಿಸಿ ನೆಲಕ್ಕೆ ಉರುಳಿಸಿದರು - ಮುಂದೆ ಆ ರಸ್ತೆಯಲ್ಲಿ ಬರುವ ಯಾವ ಪ್ರಯಾಣಿಕರೂ ಅದರ ವಿಷದ ಹಣ್ಣು ತಿಂದು ಪ್ರಾಣ ಕಳೆದುಕೊಳ್ಳಬಾರದೆಂದು. ಇದನ್ನು ನೋಡುತ್ತಾ ಆ ಹಳ್ಳಿಯ ದುರುಳರು ಕೈಕೈ ಹಿಸುಕಿಕೊಂಡರು.
ಪ್ರೇರಣೆ: "ಸ್ಟೋರೀಸ್ ಆಫ್ ವಿಸ್‌ಡಮ್" - ವಿವೇಕದ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ