ಪರಿಚಯ99: ಕಾಲುದಾರಿಯ ದಾಖಲೆ

ಲೇಖಕರು: ಶಿವಾನಂದ ಕಳವೆ
ಪ್ರಕಾಶಕರು: ಕಾವ್ಯಕಲಾ ಪ್ರಕಾಶನ, ವಿಜಯನಗರ, ಬೆಂಗಳೂರು
ಪ್ರಕಟ: 2003          ಪುಟ: 174      ವರ್ಣ ಪುಟ: 23         ಬೆಲೆ: ರೂ. 160/-

ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ.  ಗದ್ದೆತೋಟಗಳ ನಡುವೆ ನಡೆಯುತ್ತಾ, ಬೈಕ್ ಓಡಿಸುತ್ತಾ ಉತ್ತರಕನ್ನಡದ ಮೂಲೆಮೂಲೆಯ ಹಳ್ಳಿ ತಲಪುವ ಅವರು ಗುಡಿಸಲುಗಳ ಒಳಗಿರೋ ಮಾತುಗಳಿಗೆ ಧ್ವನಿಯಾಗುತ್ತಾರೆ. ಎಲ್ಲ ದನಿಗಳಿಗೂ ಅಕ್ಷರದ ರೂಪ ನೀಡಿ, ನಮ್ಮೆದುರು ಅದ್ಭುತ ಚಿತ್ತಾರ ಹರಡುತ್ತಾರೆ.

“ಸುದ್ದಿ ಕಟ್ಟೆಗೆ ಹೆಜ್ಜೆ” ಎಂಬ ಮುನ್ನುಡಿಯಲ್ಲಿ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಳ್ಳಿಗಾಡಿನ ತನ್ನ ಆಯ್ದ ನುಡಿಚಿತ್ರಗಳ  ಹಿನ್ನೆಲೆಯನ್ನು ಶಿವಾನಂದ ಕಳವೆ ಬಿಡಿಸಿಟ್ಟ ಪರಿ ಹೀಗೆ: "ಕಾಡುಗುಡ್ಡ ಕಾಲುದಾರಿಯಲ್ಲಿ ನಡೆದು ಹೆದ್ದಾರಿಯ ಸುದ್ದಿ ಕಟ್ಟೆ ಸೇರಬೇಕಿತ್ತು. ಓಡುವ ಅವಸರ ಅಸಾಧ್ಯವೆಂದು ದಾರಿಯೇ ಸಾರುತ್ತಿತ್ತು. ಬಿದಿರಿನ ದಣಪೆ ದಾಟಿದರೆ ಆಚೆ ಹುಲ್ಲು ಗುಡಿಸಲು, ಅಣಲೆಕಾಯಿ ಮಸಿ ಬಳಿದ ಕಪ್ಪು ನೆಲ, ಅಲ್ಲಿ ಈಚಲು ಹುಲ್ಲಿನ ಚಾಪೆಯಲ್ಲಿ ಕೂತು ನೀರುಬೆಲ್ಲ ಕುಡಿಯುವಾಗ ಕಾಡಲ್ಲಿ ಅಮೃತ ಸಿಕ್ಕಿದಂತೆ. ಹಳ್ಳದ ನೀರು ಕುಡಿದು ನಾಲ್ಕಾರು ತಾಸು ಹಳ್ಳಿ ಹುಡುಕಿ ನಡೆದದ್ದೇ ನಡೆದದ್ದು. ಆ ದಿನಗಳಲ್ಲಿ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರಗಳು ನೆಗೆಟಿವ್‌ನಲ್ಲಿ ಈಗೀಗ ಮಾಸುತ್ತಿವೆ. ನೆನಪುಗಳು ಮಾತ್ರ ಎಂದೂ ಮರೆಯದವು.

ಒಂದೊಂದು ದಿನ ಎಷ್ಟು ಕಿಲೋ ಮೀಟರ್ ಪಯಣ? ಹದಿನೈದು ನಿಮಿಷಕ್ಕೆ ಒಂದು ಕಿಲೋ ಮೀಟರ್ ನಡೀಬೌದು… ಕಾಲು ದಾರಿಯ ಕತೆ ಹಾಗೇ! ಅಲ್ಲಿ ನಡೆದದ್ದಕ್ಕೆ ಲೆಕ್ಕ ಸಿಗೋದಿಲ್ಲ, ಮೈಲುಗಲ್ಲು ಇರೋದಿಲ್ಲ. ನಾಲ್ಕು ಜನರ ಮಧ್ಯೆ ಸುದ್ದಿ ಕಟ್ಟೆಯಲ್ಲಿ ನಿಂತು ಅನುಭವದ ಮಾತು ತೆರೆದಾಗ ನಡೆದ ದಾರಿ ಅಂದಾಜು ಮಾಡಬಹುದು. ..”

ಹಳ್ಳಿಮೂಲೆಯ, ಬೆಟ್ಟಗುಡ್ಡಗಳ, ಕಾಡುನಡುವಿನ ಕಳೆದೇ ಹೋಗಬಹುದಾಗಿದ್ದ ಹಲವು ಸಂಗತಿಗಳನ್ನು “ಕಾಲುದಾರಿಯ ದಾಖಲೆ”ಯಲ್ಲಿ ದಾಖಲಿಸಿ ಸಾರ್ಥಕ ಕೆಲಸ ಮಾಡಿದ್ದಾರೆ ಶಿವಾನಂದ ಕಳವೆ. “ಬರೆಯಲು ವಿಷಯ ಸಿಗೋದಿಲ್ಲ” ಎಂಬವರಿಗೆ ಅವರು ಮತ್ತೆಮತ್ತೆ ಹೇಳುವ ಒಂದು ಮಾತು: "ನನ್ನ ಹಳ್ಳಿ ಮನೆಯ ಕೇವಲ ಒಂದು ಕಿಲೋ ಮೀಟರ್ ಫಾಸಲೆಯಲ್ಲಿ 28 ನುಡಿಚಿತ್ರಗಳಿಗೆ ನನಗೆ ವಿಷಯ ಸಿಕ್ಕಿತ್ತು.” ಹೌದು, ಅದಕ್ಕೆ "ನೋಡುವ ಕಣ್ಣಿರಬೇಕು".

“ಅಘನಾಶಿನಿಯ ಮರ್ಸೆಗೆ ನಗುವ ಮನಸ್ಸಿಲ್ಲ!" ಎಂಬ ಮೊದಲ ನುಡಿಚಿತ್ರದಲ್ಲಿ ಮರ್ಸೆ ಹಳ್ಳಿಯನ್ನು ಆರಂಭದಲ್ಲಿ ಹೀಗೆ ಪರಿಚಯಿಸುತ್ತಾರೆ: "ಉತ್ತರ ಕನ್ನಡದ ಕುಮಟಾ ತಾಲೂಕಿನ ಮರ್ಸೆ ಹಾಗು ಬಂಗಣೆ ಹಳ್ಳಿಗಳ ದಾರಿಗೆ ಅಡ್ಡವಾಗಿ ಹರಿಯುವ ಅಘನಾಶಿನಿ ಮಳೆಗಾಲವಿಡಿ ತುಂಬಿರುತ್ತದೆ. ದಡ ಸೇರುವುದಕ್ಕೆ ಇರುವುದು ಒಂದು ದೋಣಿ. ಆದರೆ ಅದನ್ನು ನಡೆಸಲು ಅಂಬಿಗನಿಲ್ಲ. ಊರಿನ ಮಂದಿಯೆಲ್ಲ ದೋಣಿ ಬಿಡುವ ನಿಪುಣರಾಗಿರುವ ಇಲ್ಲಿ ಮತ್ತೆ ಅಂಬಿಗನ ಅಗತ್ಯವೇನಿಲ್ಲ.” ಆದರೆ, ದಾಟಿದವರ ಸಂಗಡ ಹೋದ ದೋಣಿ ಕೊನೆಗೆ ಯಾವುದಾದರೂ ದಡದಲ್ಲಿ ಜೋಲಿ ಹೊಡೆಯುತ್ತಿರುತ್ತದೆ! ಹಾಗಾಗಿ, ಎರಡು - ಮೂರು ಕಿಮೀ ದೂರದಲ್ಲಿರುವ ಹಳ್ಳಿಗರಿಗೆ ದೋಣಿ ತರಬೇಕೆಂದು ವಿರುದ್ಧ ದಡದವರು ಸಂದೇಶ ನೀಡಲು ಗರ್ನಾಲು ಬೇಕು! (ಆ ಗರ್ನಾಲು -ಸಿಡಿಮದ್ದು- ಸಿಡಿಯುವ ಸದ್ದಿನ ವಿವರಣೆಯೊಂದಿಗೆ ನುಡಿಚಿತ್ರ ಶುರು)

ಇದರ ಮುಕ್ತಾಯದಲ್ಲಿ ಆ ಹಳ್ಳಿಗರ ಬವಣೆಯನ್ನು ಲೇಖಕರು ಬಣ್ಣಿಸಿದ್ದು ಹೀಗೆ: “ಇಷ್ಟು ಕಾಲವೂ ನೀರೇ ಹಳ್ಳಿಗರ ನೆಮ್ಮದಿಗೆ ಅಡ್ಡಿಯಾಗಿದೆ. ಏನೆಲ್ಲ ಕಷ್ಟವೊಡ್ಡಿದೆ. ರೋಗಿಯಿಂದ ಆಸ್ಪತ್ರೆಯನ್ನು ದೂರವಾಗಿಸಿದೆ. ಉಡಿಯಲ್ಲಿ ಹಲಸಿನ ತೋಳೆಯಂತಹ ಶಿಶುವಿರುವ ಬಾಣಂತಿಯರನ್ನು ಸ್ಮಶಾನಕ್ಕೆ ಎಳೆದಿದೆ. ಪುಟ್ಟ ಮಕ್ಕಳನ್ನು ಶಾಲೆ ಬಿಡಿಸಿದೆ. ಉಪ್ಪಳೆಯ ಬಡವರಿಗೆ ಕೂಲಿಯಿಲ್ಲದೆ ಉಪವಾಸ ಕೆಡವಲು ಕಾರಣವಾಗಿದೆ. ಇದೇ ಅಘನಾಶಿನಿಗೆ ಇವತ್ತು ಮರ್ಸೆ ಸನಿಹದ ಮರ್ಯಾಕಲ ಎಂಬಲ್ಲಿ ಕುಡಿವ ನೀರಿನ ಯೋಜನೆ ಲಾಗೂ ಆಗಿದೆ. 25-30 ಕಿಮೀ ದೂರ ಪೈಪ್‌ಗಳ ಮುಖೇನ ಹರಿದು ಕುಮಟಾ - ಹೊನ್ನಾವರ ನಗರಗಳ ಲಕ್ಷಾಂತರ ಪಟ್ಟಣಿಗರ ಬಾಯಾರಿಸಲಿಕ್ಕಾಗಿ… ಆದರೆ ನಮಗೆ ಏನಾಗಿದೆ? ದೂರದ ನಗರ ಅಭಿವೃದ್ಧಿಯನ್ನೆಲ್ಲ ನೋಡುತ್ತ ನಮಗೊಂದು ಸೇತುವೆಯಿಲ್ಲವಲ್ಲ ಎಂದು ನಾಡದೋಣಿಗೆ ಹುಟ್ಟು ಹಾಕುತ್ತ ಮರ್ಸೆ ಹಳ್ಳಿಗರು ಕುದಿಯುತ್ತಾರೆ. ಸೇತುವೆ ಕಟ್ಟಲು ಸರ್ಕಾರದ ಮೊರೆ ಹೋದರೆ ಪ್ರಯೋಜನವಿಲ್ಲವೆಂದು ಈಗ ಹಳ್ಳಿಗರೇ ಮುಂದಾಗಿ  ಸೇತುವೆ ನಿರ್ಮಿಸಲು ಕಂಕಣತೊಟ್ಟಿದ್ದಾರೆ. “  
ಪಾತರಗಿತ್ತಿಗಳ ಮಹಾಜಾತ್ರೆ; ಕೀಟ ನೇಯ್ದ ಮಾಟದ ಬಲೆ; ಎಲೆಲೆ ಏಡಿ, ಏನಿದರ ಮೋಡಿ - ಇಂತಹ ನುಡಿಚಿತ್ರಗಳು ಪ್ರಕೃತಿಯ ಮಡಿಲಲ್ಲಿ ವಿಸ್ಮಯಗಳನ್ನು ಕಾಣುವ ಕಣ್ಣಿರುವವರಿಗೆ ಮಾತ್ರ ಕಾಣಿಸಬಲ್ಲ ಸಂಗತಿಗಳು. ಕಾಳಿಯ ಒಡಲಲ್ಲಿ ಮೃದ್ವಂಗಿಗಳ ತಳಮಳ (ಕಾಳಿ ನದಿಯ ಆಳದ ಮರಳು ದಂಧೆಯಿಂದಾಗಿ ತಲೆತಲಾಂತರದಿಂದ ಅಲ್ಲಿನ ಜನರ ಆಹಾರವಾದ ಚಿಪ್ಪಿಕಲ್ಲು ಅಥವಾ ಒಳಚು ಎಂಬ ಜಲಚರ ಮೃದ್ವಂಗಿಗಳ ಲಭ್ಯತೆಗೆ ಕುತ್ತು), ಮೂಢ ನಂಬಿಕೆಗೆ ಮರಗಳ ಬಲಿ; ಸುಗಂಧ ದೂಪಕ್ಕೆ ಕೊನೆಯ ಮಂಗಳಾರತಿ; ಆಫ್ರಿಕಾದಿಂದ ಅಮೃತಾಪುರಕ್ಕೆ ಬಸವನಹುಳಗಳ ಮಹಾಯಾನ - ಇಂತಹ ನುಡಿಚಿತ್ರಗಳಿಂದ ಪರಿಸರ ನಾಶದ ವಿರಾಟ್ ಸ್ವರೂಪದ ದರ್ಶನ.

ಬಾಣಂತಿ ಸನ್ನಿಗೆ ನೇಣು ಚಿಕಿತ್ಸೆ; ಬಸವನಕೊಪ್ಪ ಎಂಬ ಕಿವುಡರ ಹಳ್ಳಿ; ರಕ್ಷಿ ಘಟ್ಟದ ಶಿವಪುರಕ್ಕೆ ಕಾಲಾಪಾನಿ ಶಿಕ್ಷೆ; ದಿಕ್ಕಿಲ್ಲದ ಊರು ದೇವಕಾರು; ಮಹಿಳೆಯರ ಕೃಷಿ ಶ್ರದ್ಧೆಗೆ ನ್ಯಾಯವೇ ದುಬಾರಿ; ಕುಣಬಿ ಬಾಣಂತಿಗೆ ಬಹಿಷ್ಕಾರದ “ಆರೈಕೆ” - ಇವು ಶಿವಾನಂದರ ಚಿಕಿತ್ಸಕ ಕಣ್ಣಿಗೆ ಕಾಣಿಸಿದ ಮಾನವತೆಗೆ ಸವಾಲೊಡ್ಡುವ ಸಂಗತಿಗಳ ಕುರಿತಾದ ನುಡಿಚಿತ್ರಗಳು.

ಈ ಪುಸ್ತಕದಲ್ಲಿರುವ ಶಿವಾನಂದ ಕಳವೆಯವರು ತೆಗೆದ ವರ್ಣಚಿತ್ರಗಳಂತೂ ನುಡಿಚಿತ್ರಗಳಿಗೆ ರಂಗೇರಿಸಿವೆ. ಪ್ರತಿಯೊಂದು ವರ್ಣಚಿತ್ರವೂ ಒಂದು ನುಡಿಚಿತ್ರದಂತಿದೆ. ಅಂತೂ ಇವೆಲ್ಲ ಬರಹಗಳು ಕಾಲಗರ್ಭದಲ್ಲಿ ಕಾಣೆಯಾಗಬಹುದಾಗಿದ್ದ ಸಂಗತಿಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವ ದೊಡ್ದ ಕೆಲಸ ಮಾಡಿವೆ.