ಲೇಖಕರು: ಡಾ. ಸಿ. ಆರ್. ಚಂದ್ರಶೇಖರ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1992 12ನೇ ಮುದ್ರಣ: 2014 ಪುಟ: 216 ಬೆಲೆ: ರೂ. 100/-
ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು.
ಈ ಪುಸ್ತಕದ ಮುನ್ನುಡಿಯಲ್ಲಿ ಆರೋಗ್ಯವಂತ ವ್ಯಕ್ತಿಯ ಲಕ್ಷಣಗಳನ್ನು ಅವರು ಹೀಗೆಂದು ತಿಳಿಸಿದ್ದಾರೆ: “ಒಬ್ಬ ವ್ಯಕ್ತಿ ಆರೋಗ್ಯವಂತನಾದ, ಉಪಯುಕ್ತ ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ, ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು. ಮನಸ್ಸೂ ಕೂಡ ಸದೃಢವಾಗಿ ಆರೋಗ್ಯಕರವಾಗಿರಬೇಕು. ಆರೋಗ್ಯಕರ ಮನಸ್ಸಿನ ಲಕ್ಷಣಗಳಿವು: ಸರಾಗವಾಗಿ, ಸುಸಂಸಬದ್ಧವಾಗಿ ಆಲೋಚಿಸುವುದು, ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರವನ್ನು ಕಂಡು ಹಿಡಿಯಲು ಯತ್ನಿಸುವುದು, ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಯಥಾಸ್ಥಿತಿಯಲ್ಲಿ ಅರ್ಥ ಮಾಡಿಕೊಂಡು, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವುದು; ಸಮಯಸಂದರ್ಭಗಳಿಗೆ ತಕ್ಕಂತಹ ಭಾವನೆಗಳನ್ನು ಪ್ರಕಟಿಸುವುದು, ಏಕಾಗ್ರತೆಯಿಂದ ಯಾವುದೇ ವಿಷಯವನ್ನು ಗ್ರಹಿಸುವುದು, ಗ್ರಹಿಸಿದ್ದನ್ನು ಹಿಂದೆ ಅನುಭವಿಸಿದ್ದನ್ನು ನೆನಪಿನಲ್ಲಿಟ್ಟುಕೊಂಡು, ಆ ಹಿನ್ನೆಲೆಯಲ್ಲಿ ತನ್ನ ಕ್ರಿಯೆ ಪ್ರಕ್ರಿಯೆಗಳನ್ನು ನಿರ್ಧರಿಸುವುದು, ಸಾಮಾಜಿಕ, ನೈತಿಕ, ಧಾರ್ಮಿಕ ನೀತಿನಿಯಮಾವಳಿಗಳನ್ನು ಕಲಿತುಕೊಂಡು ಬಾಳುವುದು, ತನ್ನ ಆಸೆ ಆಕಾಂಕ್ಷೆಗಳನ್ನು ಒಂದು ಮಿತಿಯಲ್ಲಿಟ್ಟುಕೊಂಡು ಅವನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದು, ಮಾನವೀಯ ಗುಣಗಳನ್ನು ಪ್ರದರ್ಶಿಸುವುದು, ಕಷ್ಟ ದುರಂತಗಳು ಎದುರಾದಾಗ ಸಮತೋಲನವನ್ನು ಕಳೆದುಕೊಳ್ಳದೆ ಮುನ್ನಡೆಯುವುದು ಇತ್ಯಾದಿ.”
ಈ ಲಕ್ಷಣಗಳನ್ನು ಬೆಳೆಸಿಕೊಂಡು ನಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು? ಎಂಬ ಮಾಹಿತಿ ಈ ಪುಸ್ತಕದಲ್ಲಿದೆ. ಇದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಈ ಪುಸ್ತಕದಲ್ಲಿ ಲಭ್ಯ:
-ದೃಢವಾದ ಮನಸ್ಸು ಎಂದರೇನು? ಅದನ್ನು ಪಡೆಯುವುದು ಹೇಗೆ?
-ಆಲೋಚನಾ ಶಕ್ತಿ, ಕಲಿಯುವ ಸಾಮರ್ಥ್ಯ, ಜ್ನಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ?
-ಮನಸ್ಸನ್ನು ಮುತ್ತಿ ಕಾಡುವ ಅಂಜಿಕೆ, ಖಿನ್ನತೆ, ಕೀಳರಿಮೆಗಳನ್ನು ನಿವಾರಿಸಿಕೊಳ್ಳುವುದು ಸಾಧ್ಯವೆ?
-ಮುಪ್ಪಿನಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆ?
-ಎಲ್ಲರನ್ನೂ ಕಂಗೆಡಿಸುವ ಸಾವನ್ನು ಎದುರಿಸುವುದು ಹೇಗೆ?
-ಉತ್ತಮ ಪರಿಸರ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಯೋಗ, ಪ್ರಾಣಾಯಾಮ, ಸೃಜನಶೀಲ ಚಟುವಟಿಕೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಲ್ಲವೆ?
ಈ ಪುಸ್ತಕದ 23 ಅಧ್ಯಾಯಗಳಲ್ಲಿ ಮಾನಸಿಕ ಆರೋಗ್ಯದ ವಿವಿಧ ಆಯಾಮಗಳ ಬಗ್ಗೆ ವಿವರಿಸಲಾಗಿದೆ. “ನಿಮ್ಮ ಜ್ನಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?” (12ನೇ) ಅಧ್ಯಾಯದಲ್ಲಿ, ನೆನಪಿನ ಪ್ರಕ್ರಿಯೆಯನ್ನು ವಿವರಿಸಿ, ಯಾವುದೇ ವಿಷಯವನ್ನು ಚೆನ್ನಾಗಿ ನೆನಪಿಟ್ಟು ಕೊಳ್ಳಲು ಏನು ಮಾಡಬೇಕೆಂದು ತಿಳಿಸಿದ್ದಾರೆ. ಜ್ನಾಪಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆ, ಟಾನಿಕ್, ಇನ್‌ಜೆಕ್ಷನ್‌ಗಳಿಲ್ಲ ಎಂಬುದವರ ಎಚ್ಚರಿಕೆ. ಸತತ ಪ್ರಯತ್ನ, ಅಭ್ಯಾಸದಿಂದ, ಮನಸ್ಸನ್ನು ನೆಮ್ಮದಿಯಾಗಿಟ್ಟುಕೊಳ್ಳುವುದರ ಮೂಲಕ ಮಾತ್ರ ಜ್ನಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದ್ದಾರೆ.
“ಸೃಜನಶೀಲತೆಯಿಂದ ಮಾನಸಿಕ ಆರೋಗ್ಯ" (18ನೇ) ಅಧ್ಯಾಯದಲ್ಲಿ ಐಕ್ಯೂ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಕ್ತಾಯದಲ್ಲಿ ಹೀಗೆಂದು ತಿಳಿಸಿದ್ದಾರೆ: “ಪ್ರತಿಯೊಬ್ಬ ವ್ಯಕ್ತಿ, ತಾನು ಇಷ್ಟ ಪಡುವ, ಸಂತೋಷ ಪಡುವ ಸೃಜನಕ್ರಿಯೆಯೊಂದನ್ನು ಆಯ್ಕೆ ಮಾಡಿ, ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ, ದೈನಂದಿನ ಮಾನಸಿಕ ಒತ್ತಡಗಳು, ದೈಹಿಕ-ಮಾನಸಿಕ ಶ್ರಮಗಳು ಇಲ್ಲವಾಗಿ ಮೈಮನಗಳು ವಿರಮಿಸುತ್ತವೆ, ನೆಮ್ಮದಿ ಮೂಡುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ,”