ಲೇಖಕರು: ವಿನಾಯಕ ಕೋಡ್ಸರ ಮತ್ತು ಸುಷ್ಮಾ ಚಕ್ರೆ
ಪ್ರಕಾಶಕರು: ಮಿಥಿಲ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು
ಪ್ರಕಟ: 2018 ಪುಟ: 80 ಬೆಲೆ: ರೂ. 100/-
ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ: ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ.
“ಪ್ರತಿ ಅವಮಾನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಲಿ” ಎಂಬ ಮೊದಲ ಬರಹವನ್ನು ಲೇಖಕರು ಶುರು ಮಾಡೋದು ಹೀಗೆ: "ನಾವು ಯಾವಾಗ್ಲು ಹಾಗೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವೇ ಮರೆತು ಬಿಡುತ್ತೇವೆ. "ಛೇ, ಅವನ್ನ ನೋಡು ಹಾಗಿದಾನೆ. ನನ್ನ ನೋಡು ಹೀಗಿದೀನಿ. ಎಲ್ಲದಕ್ಕೂ ಪಡೆದುಕೊಂಡು ಬಂದಿರಬೇಕು. ನನ್ನ ಅದೃಷ್ಟವೇ ಸರಿಯಿಲ್ಲ. ನನ್ನ ಟೈಂ ಖರಾಬಾಗಿದೆ” ಅಂತೆಲ್ಲ ನಮ್ಮ ಸ್ಥಿತಿ ಕುರಿತು ನಾವೇ ನೊಂದುಕೊಳ್ಳುತ್ತೇವೆ. ನಿಜ, ಪ್ರತಿ ಮನುಷ್ಯನಿಗೂ ಅವನದ್ದೇ ಆದ ನೂರಾರು ಕನಸುಗಳು ಇರುತ್ತವೆ. … ನಾವು ಜಿದ್ದಿಗೆ ಬಿದ್ದು ಕೆಲವಷ್ಟು ನನಸು ಮಾಡಿಕೊಳ್ಳಬಹುದು. ಹಾಗೆ ಜಿದ್ದಿಗೆ ಬಿದ್ದು ಕನಸು ನನಸು ಮಾಡಿಕೊಂಡ ಅಸಾಮಾನ್ಯರ ಸಾಮಾನ್ಯ ಕಥೆಗಳು ಈ ಪುಸ್ತಕದಲ್ಲಿವೆ.”
ಮುಂದುವರಿದು ಲೇಖಕರು ಬರೆಯುತ್ತಾರೆ: “ಇಲ್ಲಿನ ಕಥೆಗಳು ಸದಾ ನೆಗೆಟಿವ್ ಆಗಿ ಆಲೋಚಿಸುವ ನಮ್ಮನ್ನೆಲ್ಲ ದಿಗ್ಭ್ರಾಂತಿಗೊಳಿಸುತ್ತವೆ. ದೈಹಿಕ ನ್ಯೂನತೆ ಹೊಂದಿದ್ದರೂ, ನಮ್ಮ ನಿಮ್ಮಂತ ಎಲ್ಲ ನೆಟ್ಟಗಿರುವವರು ಸಾಧಿಸಲಾಗದ್ದನ್ನು ಸಾಧಿಸಿದವರ ಕಥೆಗಳು ಇಲ್ಲಿವೆ. … ಬದುಕು ಅನ್ನೋದು ಅದೆಷ್ಟು ಸುಂದರವಾದ ಅವಕಾಶ ಅಲ್ವಾ? ಮನುಷ್ಯರಾದ ನಮಗೆ ಅಟ್ಲೀಸ್ಟ್ ಜೀವ ಇರೋವರೆಗೆ ನಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶವಿದೆ. ಅಂಥ ಅವಕಾಶವನ್ನೇ ಕತ್ತು ಹಿಸುಕಿ ಕೊಂದುಕೊಳ್ಳುವವರು ಮೂರ್ಖರಲ್ಲದೇ ಮತ್ತೇನು?..ಇನ್ನೊಬ್ಬ ಅವಕಾಶ ಕೊಡಲಿಲ್ಲ ಅಂತ ನಾವು ಆತನಿಗೆ ಬೈದುಕೊಳ್ತೀವಿ … ಆದರೆ ನಿಮಗೆ ನೀವೇ ಆ ಅವಕಾಶ ಸೃಷ್ಟಿಸಿಕೊಳ್ಳುವ ಅವಕಾಶವಿದೆಯಲ್ವಾ? ಇಡೀ ಪುಸ್ತಕ ಅದನ್ನೇ ಹೇಳುತ್ತೆ.”
ಮೊದಲ ಬರಹ “ಈತನ ಬದುಕಿಗೆ ಮಿತಿಯೇ ಇಲ್ಲ!” ಇದು ನಿಕ್ ವ್ಯೂಜಿಚಿಚ್ ಎಂಬ ಪ್ರಚಂಡ ಮನುಷ್ಯನ ಕತೆ. ನಾವು “ನನಗೆ ಅದಿಲ್ಲ, ಇದಿಲ್ಲ” ಎಂದು ಕೊರಗುತ್ತಲೇ ಇರುತ್ತೇವೆ. ಆದರ ಈತನಿಗೆ ಹುಟ್ಟುವಾಗಲೇ ಎರಡೂ ಕೈಗಳಿಲ್ಲ! ಕೆಲವೇ ಇಂಚಿನ ಕಾಲು ಇದ್ದೂ ಇಲ್ಲದಂತೆ! ಆ ಕಾಲನ್ನೇ ಕೈಯಾಗಿ ಬಳಸಿಕೊಂಡು ಇವನು ಮಾಡಿದ ಸಾಧನೆಗಳಿಗೆ ಲೆಕ್ಕವಿಲ್ಲ. ಪದವಿಗಳನ್ನು ಗಳಿಸಿದ, ಪುಸ್ತಕ ಬರೆದ, ಸಮುದ್ರದಲ್ಲಿ ಸರ್ಫಿಂಗ್ ಮಾಡಲು ಕಲಿತ, 24 ದೇಶಗಳನ್ನು ಸುತ್ತಿದ, 30 ಲಕ್ಷ ಜನರಿಗೆ ಪ್ರೇರಣಾತ್ಮಕ ಉಪನ್ಯಾಸಗಳನ್ನಿತ್ತು ಅವರ ಬದುಕು ಬದಲಾಯಿಸಿದ. “ನನಗೆ ಎರಡೂ ಕೈಗಳಿಲ್ಲ, ಎರಡೂ ಕಾಲುಗಳಿಲ್ಲ. ನಾನೇ ಇಷ್ಟೆಲ್ಲ ಸಾಧಿಸಿರುವಾಗ, ಅವೆಲ್ಲ ಇರುವ ನೀವು ಬದುಕಿನಲ್ಲಿ ಎಷ್ಟೆಲ್ಲ ಸಾಧಿಸಬಹುದಲ್ಲವೇ?” ಎಂದಾತ ಪ್ರಶ್ನಿಸುವಾಗ ಉತ್ತರ ಕೊಡಲು ನಾವು ತಡಬಡಾಯಿಸುತ್ತೇವೆ. “ನೋ ಆರ್ಮ್ಸ್, ನೋ ಲೆಗ್ಸ್, ನೋ ವರೀಸ್” ಎಂಬ ಧ್ಯೇಯದೊಂದಿಗೆ ಯುವಜನರಿಗಾಗಿ ಕೆಲಸ ಮಾಡ್ತಾ ಇದ್ದಾನೆ. 2010ರಲ್ಲಿ ಪ್ರಕಟವಾದ (200 ಪುಟಗಳ) ಇವನ 30 ವರುಷಗಳ ಅದ್ಭುತ ಬದುಕು ದಾಖಲಾಗಿರುವ ಜನಪ್ರಿಯ ಪುಸ್ತಕ "ಲೈಫ್ ವಿತೌಟ್ ಲಿಮಿಟ್ಸ್” ನಮ್ಮ ಕಣ್ಣು ತೆರೆಸಬೇಕು.
ಎರಡನೆಯದು ನಮ್ಮ ದೇಶದವಳೇ ಆದ ಅರುಣಿಮಾ ಸಿನ್ಹಾಳ ಕತೆ. ಅವಳನ್ನು ದುಷ್ಟರು ಓಡುವ ರೈಲಿನಿಂದ ಹೊರಕ್ಕೆ ದೂಡಿದ್ದರಿಂದಾಗಿ ಅವಳು ಕೆಳಕ್ಕೆ ಬೀಳುತ್ತಾಳೆ; ಅವಳ ಕಾಲಿನ ಮೇಲೆ ಬೇರೊಂದು ರೈಲು ಹರಿದು ಹೋದ ಕಾರಣ ಅವಳ ಕಾಲನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಬದುಕು ಮುಗಿದೇ ಹೋಯಿತು ಎನ್ನುವ ದಾರುಣ ಪರಿಸ್ಥಿತಿಯಿಂದ ಆಕೆ ಪುಟಿದೇಳುತ್ತಾಳೆ. ಪರ್ವತಾರೋಹಣದ ತರಬೇತಿ ಪಡೆದು, ಕೃತಕ ಕಾಲಿನಲ್ಲಿ ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್ ಹತ್ತಿದ ಪ್ರಪ್ರಥಮ ಮಹಿಳೆ ಎಂಬ ಸಾಧನೆ ತನ್ನದಾಗಿಸಿಕೊಳ್ಳುತ್ತಾಳೆ!
ಮುಖಪುಟದ ಫೋಟೋ ನೋಡಿದಿರಾ? “ಈಕೆ ಬಾಸ್ಕೆಟ್ಬಾಲ್ ಹುಡುಗಿ” ಎಂಬ ಬರಹದಲ್ಲಿ ಅವಳ ಬಗ್ಗೆ ಮಾಹಿತಿ ಇದೆ. ಈಕೆಯ ಹೆಸರು ಹೋಂಗ್ಯಾನ್ ಕಿಯಾನ್. ಚೀನಾದ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವಳು. ಅಪಘಾತದಲ್ಲಿ ಈಕೆ ಎರಡೂ ಕಾಲು ಕಳೆದುಕೊಳ್ಳುತ್ತಾಳೆ. ತಮ್ಮ ಪುಟ್ಟ ಮಗಳಿಗೆ ಬದುಕೇ ಕತ್ತಲಾಯಿತೆಂದು ತಂದೆತಾಯಿ ಕೊರಗುವಾಗ, ಇವಳು ಅಂಗವಿಕಲರ ಶಾಲೆಯಲ್ಲಿ ಶಿಕ್ಷಣ ಪಡೆಯಲು ಶುರು ಮಾಡುತ್ತಾಳೆ. ತನ್ನ ಅರ್ಧ ಶರೀರಕ್ಕೆ ಕತ್ತರಿಸಿದ ಬಾಸ್ಕೆಟ್ಬಾಲ್ ಸೇರಿಸಿಕೊಂಡು, ಅಂಗೈಗಳಲ್ಲಿ ಬ್ರಷ್ಗಳಂತಿರುವ ಹಿಡಿಕೆಗಳನ್ನು ಹಿಡಿದುಕೊಂಡು, ಅವುಗಳ ಆಧಾರದಿಂದ ತಾನೇ ಶಾಲೆಗೆ ಹೋಗುತ್ತಾಳೆ! ಇದರಿಂದಾಗಿ ಚೀನಾದ ಮಾಧ್ಯಮದವರ ಗಮನ ಸೆಳೆದ ಈಕೆ ಚೀನಾದಲ್ಲಿ ದೊಡ್ಡ ಸುದ್ದಿಯಾಗುತ್ತಾಳೆ. ಇದರ ಪರಿಣಾಮವಾಗಿ, ಪುನರ್ವಸತಿ ಕೇಂದ್ರದ ವೈದ್ಯರು ಇವಳ ಸಹಾಯಕ್ಕೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂತೂ ವೈದ್ಯರ ತಂಡ ಈಕೆಗಾಗಿ ವಿಶೇಷ ವಿನ್ಯಾಸದ ಲೋಹದ ಕಾಲುಗಳನ್ನು ತಯಾರಿಸುತ್ತದೆ. ಕೊನೆಗೆ 18ನೇ ವಯಸ್ಸಿನಲ್ಲಿ ಕೃತಕ ಕಾಲುಗಳ ಮೂಲಕ ನಡೆಯಲು ಕಿಯಾನ್ಗೆ ಸಾಧ್ಯವಾಗುತ್ತದೆ. ಇಷ್ಟೆಲ್ಲ ನೋವುಗಳಿದ್ದರೂ ಅವಳ ಮುಖದ ನಗು ಮಾತ್ರ ಯಾವತ್ತೂ ಮಾಸಲಿಲ್ಲ. ಅನಂತರ ಈಜು ಕಲಿಯುತ್ತಾಳೆ. ಪ್ಯಾರಾ ಒಲಿಂಪಿಕ್ ಗೇಮ್ನಲ್ಲಿ ಸ್ಪರ್ಧಿಸಬೇಕೆಂದು ಕನಸು ಕಂಡ ಕಿಯಾನ್, 2012ರಲ್ಲಿ ಲಂಡನ್ನಲ್ಲಿ ಜರಗಿದ ಆ ಜಾಗತಿಕ ಕೂಟದಲ್ಲಿ ಸ್ಪರ್ಧಿಸಿ, ತನ್ನ ಕನಸು ನನಸು ಮಾಡಿಕೊಳ್ಳುತ್ತಾಳೆ.
-ವಿದ್ಯುತ್ ಹೊಡೆತದಿಂದಾಗಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಕೋಲಾರದ ವಿಶ್ವಾಸ್;
-ವಿದ್ಯೆ ಕಲಿಯದೆ ಮದುವೆಯಾದ ನಂತರ ಗಂಡನ ಹಿಂಸೆ ತಾಳಲಾಗದೆ ಮನೆ ತೊರೆದು ನಂತರ ಬಾಲಿವುಡ್ನ ಸ್ಟಂಟ್ ವುಮನ್ ಎಂದು ಪ್ರಸಿದ್ಧಳಾದ ಗೀತಾ ಟಂಡನ್;
-ಕೂಲಿ ಕೆಲಸ ಮಾಡಿ, ತರಕಾರಿ ಮಾರಿ ಉಳಿಸಿದ ಹಣದಿಂದ ಕೊಲ್ಕತಾದಲ್ಲಿ ಅತ್ಯಾಧುನಿಕ ಆಸ್ಪತ್ರೆ ಕಟ್ಟಿದ ಸುಭಾಷಿಣಿ;
-ಅಕ್ಷರಜ್ನಾನವೇ ಇಲ್ಲದಿದ್ದರೂ 1,000ಕ್ಕಿಂತ ಅಧಿಕ ಕವನಗಳನ್ನು ರಚಿಸಿ, 24 ಕವನ ಸಂಕಲನ ಪ್ರಕಟಿಸಿರುವ ವಿಜಯಪುರ ಜಿಲ್ಲೆಯ ಬೀಳಗಿಯ ಸಿದ್ಧಪ್ಪ ಸಾಬಣ್ಣ ಬಿದ್ರಿ;
-ಅಪಘಾತದಿಂದಾಗಿ ಕಾಲಿಗೆ ಏಟಾಗಿ ಪ್ರಿಯತಮ ಮದುವೆಯಾಗಲು ನಿರಾಕರಿಸಿದರೂ ಹೊಸ ಬದುಕು ಕಟ್ಟಿಕೊಂಡು ಈಗ ಅಂಗವಿಕಲರಿಗಾಗಿ ಬೆಂಗಳೂರಿನಲ್ಲಿ ಮೂರು ಶಾಲೆ ನಡೆಸುತ್ತಿರುವ ಮುಕ್ತಾ ಗುಬ್ಬಿ;
-12ನೇ ವಯಸ್ಸಿಗೆ ವಿಧವೆಯಾದರೂ ಪಿ.ಯು.ಸಿ. ಶಿಕ್ಷಣ ಪಡೆದು ನಂತರ ಉತ್ತರಖಂಡದ ಕೌಸಿ ನದಿ ಉಳಿಸುವ ಆಂದೋಲನದ ಮುಂದಾಳುವಾದ ಬಸಂತಿ;
-ಏಕಾಂಗಿಯಾಗಿ 30 ವರುಷಗಳ ನಿರಂತರ ಶ್ರಮದಿಂದ ಬ್ರಹ್ಮಪುತ್ರಾ ನದಿ ಪಕ್ಕದ ಬರಡು ಭೂಮಿಯಲ್ಲಿ 1360 ಎಕರೆ ದಟ್ಟ ಕಾಡು ಬೆಳೆಸಿರುವ ಬುಡಕಟ್ಟು ಜನಾಂಗದ ಜಾಧವ್ ಮೊಳಾಯ್ ಪಯೆಂಗ್;
-ಕಣ್ಣಿಲ್ಲದಿದ್ದರೂ "ಜ್ಯೋತಿರ್ಗಮಯ" ಎಂಬ ಎನ್.ಜಿ.ಓ. ಸ್ಥಾಪಿಸಿ, ಅಂಧರಿಗೂ ಉದ್ಯೋಗವಕಾಶ ಕಲ್ಪಿಸಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿರುವ ಚೆನ್ನೈಯ ಟಿಫ್ಯಾನಿ ಮರಿಯಾ ಬ್ರಾರ್;
-ತನ್ನ ಗಡಸು ಧ್ವನಿಯಿಂದಾಗಿ ಹಲವೆಡೆ ಅವಮಾನಕ್ಕೊಳಗಾದರೂ ಛಲದಿಂದ ಸಂಗೀತದಲ್ಲಿ ಸಾಧನೆ ಮಾಡಿ ಇಂದು ಜಗತ್ತಿನಲ್ಲೆ ಹೆಸರುವಾಸಿಯಾಗಿರುವ ಉಷಾ ಉತುಪ್;
-ಪೋಲಿಯೋದಿಂದಾಗಿ ಕೇವಲ ಒಂದು ವರುಷ ವಯಸ್ಸಿನಲ್ಲೇ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡರೂ, ಮುಂದೆ ಎರಡು ವರುಷಗಳ ಕರೆಂಟ್ ಚಿಕಿತ್ಸೆ ಹಾಗೂ 32 ಶಸ್ತ್ರಚಿಕಿತ್ಸೆಗಳ ನಂತರ ಜಿದ್ದಿನಿಂದ ಸಾಧನೆ ಮಾಡಿ ಪ್ಯಾರಾ ಒಲಿಂಪಿಕ್ಸ್-ಗಳಲ್ಲಿ 450ಕ್ಕೂ ಹೆಚ್ಚು ಪದಕಗಳನ್ನು ಗಳಿಸಿ, “ಅರ್ಜುನ ಪ್ರಶಸ್ತಿ” ಮತ್ತು ಪದ್ಮಶ್ರೀ ಪುರಸ್ಕಾರ ಪಡೆದಿರುವ ಕರ್ನಾಟಕದ ಹೆಮ್ಮೆಯ ಮಾಲತಿ ಹೊಳ್ಳ
-ಇವರೆಲ್ಲರ ಸತ್ಯಕತೆಗಳು ಈ ಪುಸ್ತಕದಲ್ಲಿವೆ - ಏನೇ ಸಂಕಷ್ಟಗಳು, ಎಡರುತೊಡರುಗಳು ಎದುರಾದರೂ ಅವನ್ನು ಎದುರಿಸುತ್ತಾ ನಮ್ಮ ಕನಸಿನ ಬೆಂಬತ್ತಿದರೆ ಅದು ನನಸಾಗಿಯೇ ಆಗುತ್ತದೆ ಎಂಬುದನ್ನು ಮತ್ತೆಮತ್ತೆ ಘೋಷಿಸಲು.