ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ
ಮೇಲೇನು? ಬೀಳೇನು? – ಮಂಕುತಿಮ್ಮ
ನಮ್ಮ ಬದುಕನ್ನೊಮ್ಮೆ ಅವಲೋಕಿಸಿದರೆ ಏನು ಕಾಣಿಸುತ್ತದೆ? ಬಾಳಿನೊಳಗಿನ ಬೆಂಕಿ ದಿಕ್ಕುದಿಕ್ಕುಗಳಿಗೆ ತನ್ನ ಜ್ವಾಲೆ ಹಬ್ಬಿಸುವ ನೋಟ. ಬೆಳೆಸಿದ ಬೆಳೆ ಅತಿ ಮಳೆಯಿಂದ ಅಥವಾ ಕಡಿಮೆ ಮಳೆಯಿಂದ ಹಾಳಾದ ನೋವು. ವ್ಯವಹಾರದಲ್ಲಾದ ನಷ್ಟ. ನಂಬಿದವರಿಂದಾದ ಮೋಸ. ಅಕ್ಕಪಕ್ಕದ ಮನೆಯವರ ಕಿರುಕುಳ. ಬಂಧುಗಳಿಂದ ಅವಹೇಳನ. ಸಹೋದ್ಯೋಗಿಗಳಿಂದ ಅವಮಾನ. ಕಚೇರಿಯಲ್ಲಿ ವಿಪರೀತ ಕೆಲಸದ ಒತ್ತಡ. ಹೊಟ್ಟೆಬಟ್ಟೆಗೂ ಸಾಲದ ಆದಾಯ. ಕೆಲಸದಿಂದ ವಜಾ. ಗುಣವಾಗದ ರೋಗ. ಹೀಗೆ ಬದುಕೆಂಬುದು ಬೆಂಕಿಯ ಮೇಲಣ ನಡಿಗೆ. ಮತ್ತೆಮತ್ತೆ ಮೇಲೇಳುವ ಅದರ ಉರಿಯಲ್ಲಿ ಸುಟ್ಟುಕೊಳ್ಳುವುದೇ ನಮ್ಮ ಪಾಡು.
“ಒಳ್ಳೆಯ ದಿನಗಳು ಬಂದಾವು” ಎಂಬೊಂದು ಆಶೆ ಹೊತ್ತುಕೊಂಡು ದಿನದೂಡುತ್ತೇವೆ. ಆದರೆ ದಿನಗಳೆದಂತೆ ಏನಾಗುತ್ತದೆ? ಪ್ರಾಯಕ್ಕೆ ಬಂದ ಮಕ್ಕಳು ಚೆನ್ನಾಗಿ ಕಲಿಯುವುದಿಲ್ಲ. ಅವರು ದುಶ್ಚಟಗಳಿಗೆ ಬಲಿಯಾಗಿ ಹಣವೂ ಹಾಳು, ಆರೋಗ್ಯವೂ ನಾಶ. ಮಗಳು ಯಾರೊಂದಿಗೋ ಓಡಿ ಹೋದ ಚಿಂತೆ.; ಅನಂತರ ಎಲ್ಲವನ್ನೂ ಕಳಕೊಂಡು ಅವಳು ವಾಪಾಸು ಬಂದ ದುಃಖ. ಮಗ ಹೇಳದೆಕೇಳದೆ ಮನೆಬಿಟ್ಟು ಹೋದ ಸಂಕಟ. ವಯಸ್ಸಾದರೂ ಸ್ವಂತ ಮನೆ ಕಟ್ಟಲಾಗದ ಹತಾಶೆ. ಏರುತ್ತಿರುವ ಸಾಲದ ಭಾರ. ಮುದಿ ತಂದೆತಾಯಿಯರ ಅನಾರೋಗ್ಯದ ಸಮಸ್ಯೆ. ಅವರು ಏಳಲಾಗದೆ ಮಲಗಿದರಂತೂ ದಿಕ್ಕು ತೋಚದ ಸ್ಥಿತಿ. ಅಪಘಾತದಲ್ಲಿ ಸಿಲುಕಿದರಂತೂ ಹೇಳಲಾಗದ ತೊಂದರೆ. ಹೀಗೆ ಬದುಕಿನಲ್ಲಿ ಒಳ್ಳೆಯ ದಿನಗಳನ್ನು ಕಾಣುವ ನಮ್ಮ ಆಶೆ ಕಾಲನೆಂಬ ಹುಚ್ಚ ಎರಚುವ ಮಣ್ಣಿನಲ್ಲಿ ಮುಚ್ಚಿ ಹೋಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಮುಂದೆ ಹೋಗಬೇಕು ಎಂಬ ಹಂಬಲ. ಆದರೆ ಹಾದಿಯಲ್ಲಿ ಧೂಳು ಹಾಗೂ ಹೊಗೆ ತುಂಬಿದ್ದರೆ ಮುಂದೆ ಸಾಗುವುದೆಂತು? ಮುಂದೇನೂ ಕಾಣಿಸದಿದ್ದಾಗ ಮುನ್ನಡಿ ಇಡುವುದೆಂತು? ಇಂತಹ ಸ್ಥಿತಿಯಲ್ಲಿ ಮೇಲೇನು? ಬೀಳೇನು? ಕತ್ತಲಿನ ಬಾಳಿನಲ್ಲಿ ಗೆಲುವೇನು? ಸೋಲೇನು?
ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ
ಸಹಿಸು ಬೇಡದೆ ಬಂದ ಪಾಡನೆಲ್ಲ
ಸಹನೆ ನಿನ್ನಾತ್ಮವನು ಗಟ್ಟಿ ಪಡಿಪಭ್ಯಾಸ
ವಿಹಿತವದು ಮನುಜಂಗೆ – ಮರುಳ ಮುನಿಯ
ಮತ್ತೆಮತ್ತೆ ಸುಡುವ ಬೆಂಕಿಯಂತಿರುವ ಬಾಳಿನಲ್ಲಿ ಜಯಿಸಬೇಕಾದರೆ ಏನು ಮಾಡಬೇಕು? “ಸಹನೆಯಿಂದಿರಬೇಕು. ಯಾಕೆಂದರೆ ನಮ್ಮ ಜೀವಕ್ಕೆ ವಿಜಯ ತಂದು ಕೊಡುವುದೇ ಸಹನೆ” ಎಂದು ಸರಳ ಉತ್ತರ ನೀಡಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ,ಯವರು.
ನಮ್ಮ ಬದುಕಿನಲ್ಲಿ ಬರುವ ಕಷ್ಟಕೋಟಲೆಗಳು, ದುಃಖದುಮ್ಮಾನಗಳು ನಾವು ಬೇಡಿ ಪಡೆದವುಗಳಲ್ಲ. ಅವೆಲ್ಲವೂ ನಾವು ಬೇಡದೆ ಬಂದ ಬದುಕಿನ ಪಾಡು. ಅದೆಲ್ಲವನ್ನೂ ಹಲ್ಲು ಕಚ್ಚಿ ಸಹಿಸಬೇಕು. ಇದನ್ನೇ ಇನ್ನೊಂದು ಮುಕ್ತಕದಲ್ಲಿ “ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸುನಾಮಿಯಲ್ಲಿ ಸುಮಾರು ೨,೭೫,೦೦೦ ಜನರು ವಿಧಿವಶರಾದರು. ಕಳೆದ ಐದು ವರುಷಗಳಲ್ಲಿ ಭೂಕಂಪಗಳಲ್ಲಿ ಸತ್ತವರು ಲಕ್ಷಗಟ್ಟಲೆ ಜನರು. ಕೇದಾರನಾಥಕ್ಕೆ ೨೦೧೩ರಲ್ಲಿ ತೀರ್ಥಯಾತ್ರೆಗೆ ಹೋಗಿದ್ದವರಲ್ಲಿ, ನುಗ್ಗಿ ಬಂದ ನೆರೆಯಲ್ಲಿ ಮುಳುಗಿ ಮೃತರಾದವರ ಸಂಖ್ಯೆ ೫,೦೦೦ಕ್ಕಿಂತ ಅಧಿಕ. ಜೂನ್ ೨೦೧೪ರಲ್ಲಿ, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಹೋಗಿದ್ದ ವಿಎನ್ಆರ್ ವಿಜ್ನಾನ ಜ್ಯೋತಿ ಕಾಲೇಜಿನ ೨೪ ವಿದ್ಯಾರ್ಥಿಗಳು ವಿದ್ಯುತ್ವೇಗದಲ್ಲಿ ಏರಿ ಬಂದ ಬಿಯಾಸ್ ನದಿಯ ಪ್ರವಾಹದಲ್ಲಿ ನೀರುಪಾಲಾದರು.
ಇಂತಹ ದುರಂತಗಳಿಗೆ ಬಲಿಯಾದವರ ಹೆತ್ತವರ, ಕುಟುಂಬದವರ, ಹತ್ತಿರದವರ ಬದುಕಿನಲ್ಲಿ ಕವಿಯುತ್ತದೆ ಕತ್ತಲು. ಆಗ ಅವಡುಗಚ್ಚಿ ಸಹಿಸಿಕೊಳ್ಳುವುದಲ್ಲದೆ ಬೇರೆ ದಾರಿಯಿಲ್ಲ. ಎದೆ ನಡುಗಿಸುವ ಇಂತಹ ಘಟನೆಗಳನ್ನು ಸಹಿಸಿ ಬಾಳುವುದು ನಮ್ಮ ಆತ್ಮವನ್ನೇ ಗಟ್ಟಿಗೊಳಿಸುವ ಸಾಧನ. ಆದ್ದರಿಂದಲೇ, ಸಹನೆ ನಮ್ಮ ಜೀವನದ ವಜ್ರದ ಕವಚ.
ಹೀಗೆ ಒಂದಾದಮೇಲೊಂದು ಬೆಂಬತ್ತಿ ಬರುವ ಸಂಕಟ ಹಾಗೂ ಸೋಲುಗಳನ್ನು ಎದುರಿಸುತ್ತ ಜೀವನದ ನದಿಯಲ್ಲಿ ಈಸಬೇಕು; ಈಸಿ ಜಯಿಸಬೇಕು. ಇದುವೇ ಬದುಕುವ ಸೂಕ್ತ ಮಾರ್ಗ. ಬದಲಾಗಿ ಬದುಕಿನ ಕಷ್ಟ ಮತ್ತು ಸೋಲುಗಳನ್ನು ಎದುರಿಸದೆ ಪಲಾಯನ ಮಾಡುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ಗೆಲ್ಲುವುದು ಹೇಗೆಂದು ಕಲಿಸುವುದರಲ್ಲೇ ಮುಳುಗಿದ್ದೇವೆ. ದುಃಖ, ನಿರಾಶೆ, ಹತಾಶೆ, ಸೋಲುಗಳನ್ನು ಸಹಿಸಲಿಕ್ಕೂ ಕಲಿಸಬೇಕು.