ಪರಿಚಯ90: ನಿಮಗಾಗಿ ಮತ್ತು ನನಗಾಗಿ 101 ಕಥೆಗಳು

ಲೇಖಕರು: ಜೆ. ಪಿ. ವಾಸ್ವಾನಿ
ಕನ್ನಡಕ್ಕೆ: ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
ಪ್ರಕಾಶಕರು: ಸಾಧು ವಾಸ್ವಾನಿ ಬಾಲ ಕೇಂದ್ರ, ಬೆಂಗಳೂರು
ಪ್ರಕಟ: 2002         ಪುಟ: 192          ಬೆಲೆ: ರೂ. 60/-

“ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ.

ಹೌದು, ಈ ಸಂಕಲನದ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಇಂತಹ ಪುಟ್ಟಪುಟ್ಟ ಕಥೆಗಳು ಬಾಲಕಬಾಲಕಿಯರ, ವಯಸ್ಕರ ಹಾಗೂ ವಯೋವೃದ್ಧರ ಮನಸೂರೆಗೊಳ್ಳುತ್ತವೆ ಎಂಬುದಂತೂ ಖಂಡಿತ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಪ್ರಚಲಿತವಾಗಿವೆ. ಸಾವಿರಾರು ವರುಷಗಳು ಸರಿದರೂ ಎಲ್ಲ ತಲೆಮಾರಿನವರನ್ನೂ ಈ ಕಥೆಗಳು ರಂಜಿಸುತ್ತವೆ ಹಾಗೂ ಎಲ್ಲರ ಜ್ನಾನಖಜಾನೆಯ ಭಾಗವಾಗಿ ಉಳಿಯುತ್ತವೆ. ನಮ್ಮ ದೇಶದ ಉಪನಿಷತ್ತಿನ ಮತ್ತು ಪಂಚತಂತ್ರದ ಕಥೆಗಳು ಶ್ರೇಷ್ಠ ಕತೆಗಳ ನಿದರ್ಶನಗಳಾಗಿವೆ.

ಸಂತ ದಾದಾ ಜೆ.ಪಿ. ವಾಸ್ವಾನಿಯವರ ಪುಸ್ತಕಗಳ ಸಂಖ್ಯೆ ಐವತ್ತು ದಾಟಿದೆ. “ನಿಮ್ಮನ್ನು ಉರಿಸುವ ಮೊದಲೆ ಕೋಪವನ್ನು ಉರಿಸಿ ಬಿಡಿ” ಮತ್ತು “ಸಜ್ಜನರಿಗೆ ಕಷ್ಟಗಳು ಏಕೆ ಬರುತ್ತವೆ?” - ಇವು ಕನ್ನಡದಲ್ಲಿ ಪ್ರಕಟವಾಗಿರುವ ಜೆ.ಪಿ. ವಾಸ್ವಾನಿಯವರ ಇನ್ನೆರಡು ಪುಸ್ತಕಗಳು. ಫ್ರಮ್ ಹೆಲ್ ಟು ಹೆವನ್, ಎ ಚೈಲ್ಡ್ ಆಫ್ ಗಾಡ್, ಯೂ ಆರ್ ನಾಟ್ ಎಲೋನ್, ದ ಕಿಂಗ್‌ಡಮ್ ಆಫ್ ಕೃಷ್ಣಾ, ಲೈಫ್ ಆಫ್ಟರ್ ಡೆತ್, ಸ್ಟೋರೀಸ್ ಆಫ್ ಮೆಡಿಟೇಷನ್, ಲಿಟ್ಲ್ ಲ್ಯಾಂಪ್ಸ್, ಬಿಗಿನ್ ದ ಡೇ ವಿದ್ ಗಾಡ್, ಟೀಚ್ ಮಿ ಟು ಪ್ರೇ, ಟೆಂಪಲ್ ಫ್ಲವರ್ಸ್, ಹೌ ಟು ಮೆಡಿಟೇಟ್ - ಇವು ಇಂಗ್ಲಿಷಿನ ಅವರ ಕೆಲವು ಜನಪ್ರಿಯ ಪುಸ್ತಕಗಳು.

ದಾದಾ ಜೆ.ಪಿ. ವಾಸ್ವಾನಿಯವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು. ಆದ್ದರಿಂದ ಈ ಸಂಕಲನದ ಕಥೆಗಳ ಮೌಲ್ಯ ಹೆಚ್ಚಿದೆ. ಸಾವಿರಾರು ಜನರ ಮನ ಪರಿವರ್ತನೆ ಮಾಡಿದವರು, ಸಾವಿರಾರು ಜನರ ಬದುಕಿಗೆ ಬೆಳಕಾದವರು ಅವರು.

ಈ ಕಥೆಗಳನ್ನು ಸಂಗ್ರಹಿಸಿದ ಪ್ರಿಯ ಜಿ. ಉತ್ತಮ್ ಕೃಷ್ಣಕುಮಾರಿ ಮುನ್ನುಡಿಯಲ್ಲಿ ಬರೆದ ಮಾತುಗಳು: “ಇಲ್ಲಿರುವ 101 ಕಥೆಗಳನ್ನು ದಾದಾ ಜೆ.ಪಿ. ವಾಸ್ವಾನಿಯವರ ಅನೇಕ ಬರಹಗಳು, ಉಪನ್ಯಾಸಗಳು ಮತ್ತು ಲೇಖನಗಳಿಂದ ಆಯ್ದು ಸಂಕಲಿಸಲಾಗಿದೆ. ಇಲ್ಲಿ ನೀವು ಶ್ರದ್ಧೆ, ದೃಢಸಂಕಲ್ಪ ಮತ್ತು ಸತತ ಪ್ರಯತ್ನಗಳಿಂದ ಬದುಕಿನ ಸಂಕಷ್ಟಗಳನ್ನು ಗೆದ್ದು ಜಯಶೀಲರಾದವರನ್ನು ಸಂಧಿಸುತ್ತೀರಿ. ಸಂತರು, ವಿಜ್ನಾನಿಗಳು, ಕಲಾವಿದರು ಹಾಗೂ ಸಾಮಾನ್ಯ ವ್ಯಕ್ತಿಗಳ ಬದುಕಿನ ಸಂಗತಿಗಳನ್ನು ಕಾಣುತ್ತೀರಿ. ಅವು ನಿಮಗೆ ಸ್ಫೂರ್ತಿ ನೀಡಿ ನಿಮ್ಮನ್ನು ಉದಾತ್ತಗೊಳಿಸುತ್ತವೆ; ಹೊಸ ಒಳನೋಟಗಳಿಂದ ಅಂತರ್ದರ್ಶನಗಳನ್ನು ನೀಡಿ ನಿಮ್ಮ ದೈನಂದಿನ  ಬದುಕಿನ ಸವಾಲುಗಳನ್ನು ಮತ್ತು ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಶ್ರದ್ಧೆ, ತಾಳ್ಮೆ ಮತ್ತು ಶಕ್ತಿ ಸಾಮರ್ಥ್ಯಗಳನ್ನು ನೀಡುತ್ತವೆ.” ಇದರ ಕೆಲವು ಕಥೆಗಳನ್ನು ಗಮನಿಸೋಣ.

ಕಥೆ 1: ಸಾವಿನೊಂದಿಗೆ ಒಂದು ಒಪ್ಪಂದ
ಪಕ್ಷಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲ ದೊರೆಯೊಬ್ಬನ ಬಗ್ಗೆ ಒಂದು ದಂತಕತೆಯಿದೆ. ಒಂದು ದಿನ ಅವನು ಉದ್ಯಾನದಲ್ಲಿ ನಡೆಯುತ್ತಿದ್ದಾಗ ಒಂದು ಹಕ್ಕಿ ಹೇಳುವುದು ಕೇಳಿಸಿತು. “ಇವತ್ತು ಸಂಜೆ ತನ್ನ ಪ್ರೀತಿಪಾತ್ರನಾದ ಸೇವಕನೊಬ್ಬ ಸಾವಿಗೆ ಬಲಿಯಾಗುವ ಸಂಗತಿ ಈ ದೊರೆಗೆ ಗೊತ್ತೇ ಇಲ್ಲ.”

ಇದನ್ನು ಕೇಳಿದ ದೊರೆಗೆ ಗೊಂದಲವಾಯಿತು. ಅವನು ತನ್ನ ಪ್ರಿಯ ಸೇವಕನನ್ನು ಕಾಪಾಡಲು ಬಯಸಿದ. ಆತನನ್ನು ವೇಗವಾಗಿ ಓಡುವ ಕುದುರೆ ಹತ್ತಿಸಿ, ಸೂರ್ಯ ಮುಳುಗುವ ಮುಂಚೆ ಈ ರಾಜ್ಯವನ್ನು ತೊರೆದು ದೂರದ ಪ್ರದೇಶಕ್ಕೆ ಹೋಗಲು ಆದೇಶಿಸಿದ.

ತನ್ನ ಸೇವಕನು ಸುರಕ್ಷಿತನಾಗಿರುತ್ತಾನೆಂಬ ಭರವಸೆಯಿಂದ ಆ ದೊರೆ ಸಂಜೆ ಪುನಃ ಉದ್ಯಾನಕ್ಕೆ ಹೋದ. ಆಗ ಅವನಿಗೆ ಪುನಃ ಹಕ್ಕಿಯ ಮಾತು ಕೇಳಿಸಿತು. “ತನ್ನ ಪ್ರೀತಿಪಾತ್ರನಾದ ಸೇವಕನ ಸಾವು ಇವತ್ತು ಸಂಜೆ, ದೂರ ಪ್ರದೇಶದಲ್ಲಿ ನಿಗದಿಯಾಗಿರುವುದು ದೊರೆಗೆ ಗೊತ್ತೇ ಇಲ್ಲ; ಭಾರೀ ವೇಗವಾಗಿ ಓಡುವ ಕುದುರೆಯನ್ನು ಒದಗಿಸಿರದಿದ್ದರೆ ಅವನು ಆ ಪ್ರದೇಶವನ್ನು ತಲಪಲು ಸಾಧ್ಯವಾಗುತ್ತಿರಲಿಲ್ಲ.” ಇದನ್ನು ಕೇಳಿದ ದೊರೆ ಜೀವನದ ದೊಡ್ಡ ಪಾಠ ಕಲಿತ: ಯಾರೂ ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕಥೆ 2: ಎಲ್ಲವೂ ಸಾಲದಿಂದ ಬಂದದ್ದು
ಒಂದು ದಿನ ಸಾಧು ವಾಸ್ವಾನಿಯವರು ವಾಯುಸಂಚಾರಕ್ಕೆ ಹೊರಟರು. ಆಗ ರಸ್ತೆಯ ಬದಿಯಲ್ಲಿ ಒಂದು ಮರದ ಕೆಳಗೆ ಭಿಕ್ಷುಕನೊಬ್ಬ ಕುಳಿತಿರುವುದನ್ನು ನೋಡಿದರು. ಭಿಕ್ಷುಕನ ಬಟ್ಟೆಗಳು ಚಿಂದಿಯಾಗಿದ್ದವು. ಅವನ ಕಾಲುಗಳಿಗೆ ಮಣ್ಣು ಮೆತ್ತಿತ್ತು. ತನ್ನ ಕೈಗಳಿಂದಲೇ ಸಾಧು ವಾಸ್ವಾನಿಯವರು ಅವನಿಗೆ ಸ್ನಾನ ಮಾಡಿಸಿದರು. ತಾನು ಧರಿಸಿದ್ದ ಅಂಗಿಯನ್ನೇ ಕಳಚಿ ಅವನಿಗೆ ಕೊಟ್ಟರು. ಆಗ ಭಿಕ್ಷುಕ ಅವರ ತಲೆಯಲ್ಲಿದ್ದ ಟೋಪಿಯತ್ತ ಬೆರಳು ತೋರಿದ. ತಕ್ಷಣ ಯಾವುದೇ ಹಿಂಜರಿಕೆ  ಇಲ್ಲದೆ ಅವರು ಆ ಟೋಪಿಯನ್ನು ಅವನ ಕೈಯಲ್ಲಿಡುತ್ತ ಹೇಳಿದರು, “ಈ ಅಂಗಿ, ಈ ಟೋಪಿ ಮತ್ತು ನನ್ನಲ್ಲಿರುವ ಎಲ್ಲವೂ ನನಗಿಂತ ಹೆಚ್ಚು ಅವುಗಳ ಅಗತ್ಯ ಇರುವವರಿಗೆ ಕೊಡುವುದಕ್ಕಾಗಿ ನನಗೆ ಸಾಲವಾಗಿ ಬಂದಿವೆ." ಎಂತಹ ಸತ್ಯ!