ಪರಿಚಯ89: ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರು

ಲೇಖಕರು: ಎ.ಎಸ್.ಎನ್. ಹೆಬ್ಬಾರ್, ಕುಂದಾಪುರ
ಪ್ರಕಾಶಕರು: ಅವನಿ ಪ್ರಕಾಶನ, ಮಂಗಳೂರು 

ಪ್ರಕಟಣೆ: 2022          ಪುಟ: 100        ಬೆಲೆ: ರೂ.120/-

ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಆಕರ ಪುಸ್ತಕಗಳು: ಕೋಟ ಶಂಕರನಾರಾಯಣ ಕಾರಂತರ "ಕೂಟ ಮಹಾಜಗತ್ತು, ಕೂಟ ಬ್ರಾಹ್ಮಣರ ಮೂಲ ಮತ್ತು ಸಾಲಿಗ್ರಾಮ ಕ್ಷೇತ್ರ ಮಹಾತ್ಮ್ಯೆ” ಪುಸ್ತಕ; ವಿದ್ವಾಂಸ ಮತ್ತು ಸಂಶೋಧಕರಾಗಿದ್ದ ಡಾ. ಪಾ. ನ. ಮಯ್ಯರು ರಚಿಸಿರುವ “ಕೋಟದವರು" ಎಂಬ ಗ್ರಂಥ. ಇದು ಅವುಗಳ ಸಾಲಿಗೆ ಸೇರುವ ಮತ್ತೊಂದು ಗಮನಾರ್ಹ ಪ್ರಕಟಣೆ.

ಇದರ ಲೇಖಕರಾದ ಎ.ಎಸ್.ಎನ್. ಹೆಬ್ಬಾರರು ಅನೇಕ ಆಕರ ಗ್ರಂಥಗಳು, ಪತ್ರಿಕೆಗಳು, ದಾಖಲೆಗಳನ್ನು ಅಧ್ಯಯನ ಮಾಡಿ ಇದನ್ನು ರಚಿಸಿದ್ದಾರೆ. ಇವರು, ಉಡುಪಿಯ ನ್ಯಾಯಾಲಯದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತದ ಬಗ್ಗೆ ನಡೆದ ವ್ಯಾಜ್ಯದಲ್ಲಿ ಪ್ರತಿವಾದಿಯಾಗಿದ್ದ "ಕೂಟ ಮಹಾಜಗತ್ತಿ”ನ ಪರವಾಗಿ ವಕೀಲರಾಗಿ ಸೇವೆ ಸಲ್ಲಿಸಿದವರು. ಕರ್ನಾಟಕ ಹೈಕೋರ್ಟಿನ ತೀರ್ಪಿನ ಅನುಸಾರ ರೂಪಿಸಲ್ಪಟ್ಟ ಸಾಲಿಗ್ರಾಮ ದೇವಸ್ಥಾನದ ಪ್ರಪ್ರಥಮ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿ, ಇತರರೊಂದಿಗೆ ದೇವಸ್ಥಾನದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದವರು. ಮುಂದೆ ಚುನಾವಣೆ ನಡೆದಾಗಲೂ ಎರಡನೇ ಬಾರಿಗೆ ಧರ್ಮದರ್ಶಿಯಾಗಿ ಆಯ್ಕೆಯಾದವರು.

ಈ ಪುಸ್ತಕದಲ್ಲಿ ಕೋಟ ಬ್ರಾಹ್ಮಣರ ಮೂಲ ಮತ್ತು ಹೆಸರಿನ ಬಗ್ಗೆ ಮಾಹಿತಿ ನೀಡಲಾಗಿದೆ. ಅದರ ಸಮರ್ಥನೆಗಾಗಿ ಹಲವು ಪುಸ್ತಕಗಳಿಂದ ಆಯ್ದ ಭಾಗಗಳನ್ನು ಉದ್ಧರಿಸಲಾಗಿದೆ. (1) "ನಾವು ಕೋಟ ಬ್ರಾಹ್ಮಣರು. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಶ್ರೀ ಯೋಗಾನಂದ ನರಸಿಂಹ ಅರ್ಥಾತ್ ಶ್ರೀ ಗುರುನರಸಿಂಹನ ಆರಾಧಕರು, ಭಕ್ತರು. ಆ ದೇವಸ್ಥಾನವನ್ನು ನಮ್ಮ ಕುಲದೇವಸ್ಥಾನವೆಂದು ನಂಬಿದವರು” ಎಂದು ತಿಳಿಸುವ ಲೇಖಕರು, ಕೀರ್ತಿಶೇಷ ಕೋಟ ವಾಸುದೇವ ಕಾರಂತರ, "ನಮ್ಮ ಆಚಾರ ನಮಗೆ” ಎಂಬ ಪುಸ್ತಕದ ಆಧಾರದಿಂದ ಹೀಗೆ ಬರೆದಿದ್ದಾರೆ: "ಈ ಕೋಟ ಬ್ರಾಹ್ಮಣರು ಅತ್ಯಂತ ಶ್ರೇಷ್ಠವಾದ ಶ್ರೌತ ಸ್ಮಾರ್ತ ಕ್ರಮದ ಬ್ರಾಹ್ಮಣರು. ಹತ್ತನೇ ಶತಮಾನದ ಅಂತ್ಯದ ವರೆಗೂ ನಮ್ಮ ದೇಶದಲ್ಲಿ ಎಲ್ಲೆಲ್ಲೂ ಈ ಶ್ರೌತಸ್ಮಾರ್ತ ಕ್ರಮದ ಬ್ರಾಹ್ಮಣ್ಯವೇ ಆಚರಣೆಯಲ್ಲಿತ್ತು. ಇಂತಹ ಬ್ರಾಹ್ಮಣ್ಯದ ಅಭ್ಯಾಸಕ್ಕೆ ತೊಡಕು ತರಲೆತ್ನಿಸಿದ ಚಾರ್ವಾಕರು, ಬುದ್ಧರು, ಜೈನರು ಮುಂತಾದ ಇತರ ಪಂಥಗಳನ್ನು ಕ್ರಮೇಣ ಸಂಪೂರ್ಣ ನಿಶ್ಶಕ್ತರನ್ನಾಗಿ ಮಾಡಿದವರು ಕುಮಾರಿಲ ಭಟ್ಟರು, ಶಂಕರಾಚಾರ್ಯರು.. ಶ್ರೇಷ್ಠವಾದ ಈ ಶ್ರೌತಸ್ಮಾರ್ತ ಧರ್ಮದ ಸಮರ್ಥನೆಗಾಗಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದರು.” (ಪುಟ 4)

“ಇನ್ನು ಕೋಟ ಬ್ರಾಹ್ಮಣರ ಮೂಲದ ಬಗ್ಗೆ (ವಾಸುದೇವ ಕಾರಂತರು) ಹೀಗೆ ಉಲ್ಲೇಖಿಸಿದ್ದಾರೆ: ನಾವು (ಗೋದಾವರಿ ತೀರದ) ಅಹಿಚ್ಛೇತ್ರದಿಂದ ಇಲ್ಲಿಗೆ ಬಂದು ನೆಲೆಸಿದ ಬ್ರಾಹ್ಮಣರು. (ಕದಂಬ ರಾಜ) ಮಯೂರವರ್ಮನ ಕಾಲದಲ್ಲಿ ಪರಶುರಾಮ ಕ್ಷೇತ್ರದಲ್ಲಿ ಉತ್ತಮವರ್ಗದ ಬ್ರಾಹ್ಮಣರು ಇಲ್ಲದಿದ್ದ ಕಾರಣ “ಯತಿಗಳ ಅಗ್ರಹಾರ, ಭೂಲೋಕದ ಆಭರಣ” ಎಂದು ಹೆಸರು ಪಡೆದ ಅಹಿಚ್ಛೇತ್ರಕ್ಕೆ ಹೋದನೆಂದು ಗ್ರಾಮ ಪದ್ಧತಿ ತಿಳಿಸುತ್ತದೆ. ಪ್ರಾಯಶಃ ಇಡೀ ಹಿಂದೂಸ್ಥಾನದಲ್ಲಿನ ಅತೀ ಮೇಲ್ಮಟ್ಟದ ಬ್ರಾಹ್ಮಣರು ಅಲ್ಲಿ ಇರುತ್ತಿದ್ದರು. ಕುಮಾರಿಲ ಭಟ್ಟರು ಈ ವರ್ಗದವರೇ ಎಂದು ಕಾಣುತ್ತದೆ. ನಮ್ಮ ಜಿಲ್ಲೆಗೆ ಬಂದ ಬ್ರಾಹ್ಮಣರಲ್ಲಿ ಶಿವಬೆಳ್ಳಿ ಗ್ರಾಮದಲ್ಲಿ ಅಂದರೆ ಉಡುಪಿಯಲ್ಲಿ ನೆಲೆಸಿದ 120 ಬ್ರಾಹ್ಮಣ ಕುಲಗಳಲ್ಲಿ 10 ಉತ್ತಮ ವರ್ಗದವು, 40 ಮಧ್ಯಮ ವರ್ಗದವು, 70 ಕನಿಷ್ಠ ವರ್ಗದವು. ಈ ಪುರಾತನ ಕುಲಗಳಲ್ಲಿ ಅತಿ ಉತ್ತಮ ವರ್ಗದವರು ತಮ್ಮ ಕುಲಗಳ ಹೆಸರು ಬದಲಾಯಿಸದೆ ಹೊಳ್ಳ, ಮಯ್ಯ, ಕಾರಂತ, ಉಡುಪ ಎಂದೇ ಇಟ್ಟುಕೊಂಡರು … ಅಂದರೆ ಇಡೀ ಹಿಂದೂಸ್ಥಾನದಲ್ಲೇ ನಮ್ಮದು ಒಂದು ಅತೀ ಉತ್ತಮ ತರದ ಶ್ರೌತಸ್ಮಾರ್ತ ಬ್ರಾಹ್ಮಣ್ಯ ಎಂದು ತೋರುತ್ತದೆ.” (ಪುಟ 4)

“ಹೀಗೆ ಶ್ರೌತಸ್ಮಾರ್ತ ಕ್ರಮದ ಬ್ರಾಹ್ಮಣರಾದ ಕೋಟ ಬ್ರಾಹ್ಮಣರು ಶಂಕರಾಚಾರ್ಯರು ಬೋಧಿಸಿದ ಹಾಗೂ ಪ್ರಚಲಿತಕ್ಕೆ ತಂದ ಪಂಚಾಯತನ ಪೂಜೆ ನಡೆಸಿಕೊಂಡು ಬರುವವರಾಗಿದ್ದಾರೆ.” (ಪುಟ 7)
(2) “ಕೀರ್ತಿಶೇಷ ಕೋಟ ಶಂಕರನಾರಾಯಣ ಕಾರಂತರು ಬರೆದು, ಕೂಟ ಮಹಾ ಜಗತ್ತು, ಸಾಲಿಗ್ರಾಮದವರು 1958ರಲ್ಲಿ ಪ್ರಕಟಿಸಿದ "ಕೂಟ ಮಹಾ ಜಗತ್ತು, ಕೂಟ ಬ್ರಾಹ್ಮಣರ ಮೂಲ ಮತ್ತು ಸಾಲಿಗ್ರಾಮ ಕ್ಷೇತ್ರ ಮಹಾತ್ಮ್ಯೆ”ಯಲ್ಲೂ ಕೋಟ ಬ್ರಾಹ್ಮಣರ ಮೂಲ ಮತ್ತು ಅವರು ಆರಾಧಿಸುವ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ವೃತ್ತಾಂತ ಹೇಳಲಾಗಿದೆ:     
ಕದಂಬ ರಾಜನಾದ ಮಯೂರವರ್ಮ ಐದು ಸಾವಿರ ಶುದ್ಧ ಬ್ರಾಹ್ಮಣರನ್ನು ತೆಲಂಗಾಣದ ಅಹಿಚ್ಛತ್ರದಿಂದ ಕರೆತಂದು, ಹೈಗ ದೇಶದಲ್ಲಿ ಸ್ಥಾಪಿಸಿದ್ದಾಗಿ ಐತಿಹ್ಯವಿದೆ. ಈ ಅಹಿಚ್ಛತ್ರವು ಗೋದಾವರಿ ನದಿಯ ದಕ್ಷಿಣ ಭಾಗದಲ್ಲಿದೆ ಎನ್ನುತ್ತಾರೆ. ಈ ಐತಿಹ್ಯಕ್ಕೆ ಆಧಾರ “ಸಹ್ಯಾದ್ರಿ ಖಂಡ” ಎಂದು ಹೇಳಲಾಗುತ್ತಿದೆ." (ಪುಟ 7) ಅದೇ ಗ್ರಂಥದ ಮುನ್ನುಡಿಯಲ್ಲಿ, “ಶ್ರೀ ವೇದವ್ಯಾಸ ಮುನಿಗಳಿಂದ ರಚಿತವಾದ ಸ್ಕಂದ ಪುರಾಣದ ಪ್ರಾಮುಖ್ಯ ವಿಭಾಗವೆಂದರೆ ಸಹ್ಯಾದ್ರಿ ಖಂಡವು” ಎಂಬ ಮಾಹಿತಿ ಇರುವುದನ್ನೂ  ಈ ಪುಸ್ತಕ ತಿಳಿಸುತ್ತದೆ. (ಪುಟ 8)

(3) "ಈ ಕೋಟ ಬ್ರಾಹ್ಮಣರೆಂದು ಕರೆಸಿಕೊಳ್ಳುವವರನ್ನು ನೆಲೆಗೊಳಿಸಿದ್ದೆಲ್ಲಿ? ಕೂಟಗ್ರಾಮಗಳೆಂಬುದು ಯಾವುವು? …  (ಮಯೂರವರ್ಮ) ರಾಜನು ಗಜಪುರಿ ಎಂಬಲ್ಲಿ ಸರ್ವಶಾಸ್ತ್ರ ನಿಪುಣರನ್ನೂ, ಅಗ್ನಿಹೋತ್ರಿಗಳನ್ನೂ ಸ್ಥಾಪಿಸಿದನು. ಈ ಗಜಪುರಿಯ ವರ್ಣನೆಯು ಈ ಪ್ರಕಾರವಿದೆ: …. (ವಡ್ಡರ್ಸೆ ಗ್ರಾಮದಲ್ಲಿರುವ ಚರ್ಪಟ) ಸಿದ್ದೇಶ್ವರನು ಪೂರ್ವಕ್ಕೂ, ಪಶ್ಚಿಮದಲ್ಲಿ ಲವಣ ಸಮುದ್ರವೂ, ಉತ್ತರದಲ್ಲಿ ಕೋಟಿಲಿಂಗೇಶ್ವರನೂ ಮತ್ತು ದಕ್ಷಿಣದಲ್ಲಿ ಸೀತಾ ನದಿಯೂ ಗಡಿಯ ಮೇರೆಯಾಗಿರುವ ಈ ಪ್ರದೇಶವು ಕೂಟಗ್ರಾಮ ಎಂದು ಜಗತ್ತಿನಲ್ಲಿ ವಿಖ್ಯಾತವಾಗಿದೆ.”

"ಕೋಟ ಪ್ರದೇಶದ ವ್ಯಪ್ತಿಯಲ್ಲಿ ಬರುವ 14 ಗ್ರಾಮಗಳು ಬಾಳೆಕುದ್ರು, ಐರೋಡಿ, ಪಾಂಡೇಶ್ವರ, ಎಡಬೆಟ್ಟು, ಗುಂಡ್ಮಿ, ಪಾರಂಪಳ್ಳಿ, ಹಂದಟ್ಟು, ಕಾರ್ಕಡ, ಚಿತ್ರಪಾಡಿ, ಕಾರ್ತಟ್ಟು, ಕೋಟತಟ್ಟು, ಹರ್ತಟ್ಟು, ಮಣೂರು ಮತ್ತು ಗಿಳಿಯಾರುಗಳಾಗಿವೆ. ಡಾ.ಪಾ.ನ. ಮಯ್ಯರ ಪ್ರಕಾರ ಶಾಸನಗಳಲ್ಲೂ ಕೋಟ ಪ್ರದೇಶವು “ಕೋಟಗ್ರಾಮ" ಎಂದು ಉಲ್ಲೇಖಗೊಂಡಿತ್ತು…” (ಪುಟ 15)
“ಹೀಗೆ ಈ ಚತುರ್ಗಡಿಯಲ್ಲಿರುವ ಪ್ರದೇಶಗಳು ಕೂಟಗ್ರಾಮಗಳೆಂದು ಕರೆಯಲ್ಪಟ್ಟು, ಅಲ್ಲಿ ವಾಸಿಸುವ ಬ್ರಾಹ್ಮಣರು ಕೂಟಬ್ರಾಹ್ಮಣರಾದರು. ಕ್ರಮೇಣ ಅವರನ್ನು ಕೋಟ ಬ್ರಾಹ್ಮಣರೆಂದು ಕರೆದರು…" (ಪುಟ 16)

(4) "ಕೂಟ ಮಹಾ ಜಗತ್ತಿನ ಅಧ್ಯಕ್ಷರಾಗಿದ್ದ ದಿ. ಕೋಟ ವಾಸುದೇವ ಕಾರಂತರು ಶ್ರೀ ಗುರುನರಸಿಂಹ ದೇವಾಲಯವು ಕೋಟ ಬ್ರಾಹ್ಮಣರದ್ದೇ ಎನ್ನುವ ಸಲುವಾಗಿ ಆ ಸಂಸ್ಥೆಯಿಂದ ಒಂದು ದಾವೆಯನ್ನು ಮಾಡಿದ ಸಂದರ್ಭದಲ್ಲಿ, ಎಲ್ಲಾ ಕೋಟ ಬ್ರಾಹ್ಮಣರ ಬೆಂಬಲ ಮತ್ತು ಸಹಕಾರ ಕೋರಿ ತಾ. 20-7-1963ರ ಒಂದು ಮುದ್ರಿತ ಪತ್ರವನ್ನು ದೇವಾಲಯದ ಹಿನ್ನೆಲೆ ವಿವರಿಸುವ ಕೈಪಿಡಿ ಸಹಿತ ಪ್ರಚುರ ಪಡಿಸಿದ್ದರು. ಅದರಲ್ಲಿ ಕೂಟಬ್ರಾಹ್ಮಣರು ಎಂಬ ಹೆಸರು ಬಂದ ಬಗ್ಗೆ ಅವರು ವಿಶ್ಲೇಷಿಸಿದ್ದಾರೆ"

ಈ ಪುಸ್ತಕದಲ್ಲಿ ದಿ. ಕೋಟ ವಾಸುದೇವ ಕಾರಂತರ ಆ ಪತ್ರ (ಪುಟ 48 - 51) ಮತ್ತು ಉಲ್ಲೇಖಿತ ವಿಶ್ಲೇಷಣೆ ಇರುವ ಆ ಕೈಪಿಡಿ (ಅನುಬಂಧ 3: ಪುಟ 79 - 90) ಮುದ್ರಿಸಲಾಗಿದೆ. ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮದ ನಿರ್ವಹಣೆಗಾಗಿ ಕೂಟ ಮತಸ್ಥರ ಮಹಾಸಭೆಯವರಿಂದ 1921ರಲ್ಲಿ ನಿರ್ಣಯ ಮಾಡಲ್ಪಟ್ಟ ರೂಲುಗಳು ಅನುಬಂಧ 2ರಲ್ಲಿವೆ (ಪುಟ 64 - 78).

ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತದ ಹಕ್ಕು ಕೋಟ ಬ್ರಾಹ್ಮಣರಿಗೆ ಪ್ರಾಪ್ತವಾದದ್ದು ಓ.ಎಸ್. 57/1964 ಸಂಖ್ಯೆಯ ದಾವೆಯ ತೀರ್ಪಿನಿಂದಾಗಿ. ಉಡುಪಿಯ ಸಿವಿಲ್ ಜಡ್ಜರ ನ್ಯಾಯಾಲಯದಲ್ಲಿ ಹೂಡಲಾದ ಆ ದಾವೆಯ ಅಪೀಲಿನಲ್ಲಿ ಅಂತಿಮ ತೀರ್ಪು ನೀಡಿದ್ದು ಕರ್ನಾಟಕದ ಹೈಕೋರ್ಟ್. ಎರಡು ಬಾರಿ ಸಿವಿಲ್ ಜಡ್ಜರ ನ್ಯಾಯಾಲಯ "ಕೂಟ ಮಹಾ ಜಗತ್ತಿ"ನ ಆಶಯಕ್ಕೆ ವಿರುದ್ಧವಾಗಿ ತೀರ್ಪು ನೀಡಿತ್ತು. ಅಂತಿಮವಾಗಿ ಹೈಕೋರ್ಟಿನ ವಿಭಾಗೀಯ ಪೀಠವು 15-10-1984ರ ತೀರ್ಪಿನಲ್ಲಿ ಹೀಗೆಂದು ವಿಧಿಸಿತು: ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತವನ್ನು ಕೂಟ ಮಹಾ ಜಗತ್ತು ಎಂಬ ಸಂಘಟನೆಗೆ ಎತ್ತಿ ಕೊಡಲಾಗದು; ಕೋಟ ಬ್ರಾಹ್ಮಣರೇ ಆಡಳಿತ ಮಂಡಳಿ ರಚಿಸಿಕೊಂಡು ಮುಂದಿನ ಆಡಳಿತ ನಡೆಸಬೇಕು. ಆ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ವೆಂಕಟಾಚಲಯ್ಯ ಮತ್ತು ವಿಠಲ್ ರಾವ್. ಈ ಚಾರಿತ್ರಿಕ ಕಾನೂನು ಹೋರಾಟದ ವಿವರಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಆ ತೀರ್ಪಿನ ಅನುಸಾರ 27-03-1994ರಂದು ಕೋಟ ಬ್ರಾಹ್ಮಣರ ಸಭೆಯಲ್ಲಿ ಪ್ರಥಮ ಆಡಳಿತ ಮಂಡಳಿ ಆಯ್ಕೆ ಆಯಿತು. ಅನಂತರ ಪ್ರಜಾಪ್ರಭುತ್ವದ ತತ್ವಗಳ ನೆಲೆಗಟ್ಟಿನಲ್ಲಿ ಆಡಳಿತ ಮಂಡಳಿಗಳು ಆಯ್ಕೆ ಆಗುತ್ತಾ ಬಂದಿವೆ. ಅವು ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿವೆ. ಕೋಟ ಬ್ರಾಹ್ಮಣರು ತಿಳಿದಿರಲೇ ಬೇಕಾದ ಇಂತಹ ಹಲವು ಮಾಹಿತಿ ಈ ಪುಸ್ತಕದಲ್ಲಿದೆ.