ಪರಿಚಯ70: ಬಂದ ಬಂದ ಸಂತಂಮಣ್ಣ (ಹೊಯಿಸಳರ ಆಯ್ದ ಬರಹಗಳು)

ಲೇಖಕರು: ಹೊಯಿಸಳ (ಅರಗ ಲಕ್ಷ್ಮಣರಾಯರು)
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು
ಪ್ರಕಟಣೆ: 1999          ಪುಟ: 137         ಬೆಲೆ: ರೂ. 50/-

ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನಂತರ, ಮದನಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಕಲಿತು ಬಿ.ಎ. ಪದವೀಧರರಾದರು.  ತದನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ 1922ರಲ್ಲಿ ಅಧ್ಯಾಪಕರಾಗಿ ನೇಮಕವಾದ ಹೊಯಿಸಳರು ನಿವೃತ್ತಿಯ ವರೆಗೂ ಅದೇ ವೃತ್ತಿಯಲ್ಲಿ ದುಡಿದರು. ಅವರು ಮಕ್ಕಳ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಮಕ್ಕಳಿಗಾಗಿ ಬೋಧನೆಯ ಜೊತೆಗೆ ಸಾಹಿತ್ಯ ಸೃಷ್ಟಿ ಮಾಡಬೇಕೆಂಬ ತುಡಿತದಿಂದ “ಹೊಯಿಸಳ" ಕಾವ್ಯನಾಮದಲ್ಲಿ ಕತೆಕವನಗಳನ್ನು ಬರೆಯಲು ಶುರುವಿಟ್ಟರು.

ಮಕ್ಕಳಿಗಾಗಿ ಅವರು ಬರೆದಿರುವ ಶಿಶುಗೀತಗಳು, ಕತೆ, ಕವನ ಹಾಗೂ ನಾಟಕ ಸಂಕಲನಗಳ ಹೆಸರುಗಳು: ಹೂವಿನ ಹಾಸಿಗೆ, ಪುಟ್ಟರಸು, ಪಠಾಕ್ಷಿ, ಅನ್ಬುವಾಟಿ, ಅದಕ್ಕೇ ಆ ಹೆಸರು, ಆನೆ-ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ನಿಶ್ಚಲದಾಸ, ಅಭ್ಯಂಕು, ಬೋರ ನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ, ಮಗು, ಪ್ರಸಾದ, ಮಗುವಿನ ಕೂಗು, ಕಳ್ಳಮಳ್ಳಸುಳ್ಳ, ವಾತಾಪಿ, ಚಂದ್ರಹಾಸ, ಅಗಲಿದ ಮಗಳು, ಚಂದುಮಾಮ, ಕೋಗಿಲೆ, ಕೋಲುಕುದುರೆ. ಇವಲ್ಲದೆ ದೊಡ್ಡವರಿಗಾಗಿಯೂ ಸಾಹಿತ್ಯ ರಚನೆ ಮಾಡಿದ ಹಿರಿಮೆ ಅವರದು. ಅವುಗಳಲ್ಲಿ ಪ್ರಮುಖವಾದವು: ಕಂಚಿನ ಕನ್ನಡಿ, ದಿನಾರಿ, ಕಂಕಣ, ಹಾಡಿನ ಚಿಲುಮೆ, ಗೆಲುವು - ಗುರಾಣಿ. ರವೀಂದ್ರನಾಥ ಠಾಗೋರರ “ವಸಂತ"ವನ್ನು ಕನ್ನಡಕ್ಕೆ ಅನುವಾದಿಸಿದ್ದು ಅವರ ಹೆಗ್ಗಳಿಕೆ.

ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯ ಮಕ್ಕಳ ಕಾರ್ಯಕ್ರಮಗಳ ನಿರ್ವಾಹಕರಾಗಿದ್ದರು. ಮಕ್ಕಳಿಗಾಗಿ “ಕನಕ" ಎಂಬ ಪತ್ರಿಕೆಯನ್ನು ಪ್ರಕಟಿಸ ತೊಡಗಿದರೂ ಅದರಲ್ಲಿ ನಷ್ಟವಾದದ್ದರಿಂದ ಅದರ ಪ್ರಕಟಣೆ ನಿಲ್ಲಿಸಿದರು. ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಸಾಹಿತ್ಯ ರಚನೆಗೆ ಬದುಕನ್ನೇ ಮೀಸಲಾಗಿಟ್ಟ ಹೊಯಿಸಳರು 28-10-1959ರಂದು ವಿಧಿವಶರಾದರು.

ಹೊಯಿಸಳರ ಆಯ್ದ ಬರಹಗಳ ಈ ಸಂಕಲನದಲ್ಲಿವೆ ಅವರ 13 ಕವಿತೆಗಳು ಮತ್ತು 32 ಕತೆಗಳು. ಮುನ್ನುಡಿಯಲ್ಲಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಕೆಲವು ಕವಿತೆಗಳನ್ನು ಹೀಗೆ ಪರಿಚಯಿಸಿದ್ದಾರೆ: ಮೊದಲ ಕವಿತೆ "ಏಳುವ ಹೊತ್ತು” ಇನ್ನೂ ಮಲಗಿರುವ ಮಗುವನ್ನು ಕಿಟಕಿಯಲ್ಲಿ ಬಂದು ಕುಳಿತು ಎಚ್ಚರಿಸುವ ಹಕ್ಕಿಯ ಹಾಡು:

ಪುಟಾಣಿ ಹಕ್ಕಿ ಹಳದಿ ಕೊಕ್ಕು, ಹಾರೇ ಬಂತು ಕಿಟಕಿ ಹೊಕ್ಕು
ಹೇಳಿತು ಹೊಳಪಿನ ಕಣ್ಣೀ ನೆಟ್ಟು, “ಮಲಗಿದೆ ಇನ್ನೂ ನಾಚಿಕೆ ಕೆಟ್ಟು!”
“ಕಿಟ್ಟೂ! ಕಿಟ್ಟೂ! ಏಳೆಲೆ ಕಿಟ್ಟೂ!”

“ಬಂದ ಬಂದ ಸಂತಂಮಣ್ಣ” ನಮ್ಮೆದುರು ಸುಳಿದಾಡುವ ಬಾಲಕನೊಬ್ಬನ ಸಂಭ್ರಮದ ಚಿತ್ರಣ. ಕವಿತೆಯುದ್ದಕ್ಕೂ ವ್ಯಾಪಿಸಿಕೊಳ್ಳುವ ವಾತ್ಸಲ್ಯಾನುಭವದ ಚೆಲುವು ಈ ಕವಿತೆಯನ್ನು ಕನ್ನಡದ ಶ್ರೇಷ್ಠ ಶಿಶುಗೀತೆಗಳಲ್ಲಿ ಒಂದಾಗಿಸಿದೆ. “ತಟ್ಟು ಚಪ್ಪಳೆ ಪುಟ್ಟ ಮಗು" ಕವಿತೆಯಲ್ಲಿ ಮಹಾತ್ಮ ಗಾಂಧಿಯವರ ಆತ್ಮೀಯವಾದ ಚಿತ್ರವೊಂದು ಬೆಳೆಯುತ್ತ ಹೋಗುತ್ತದೆ. ಮಕ್ಕಳು ನಡೆಯುವುದನ್ನು ಹಿರಿಯರ ನೆರವಿನಿಂದ ಕಲಿತುಕೊಳ್ಳುವ ಅನುಭವವನ್ನು ಚಿತ್ರಿಸುವ ಕವನ “ಹೆಜ್ಜೆ ಹೆಜ್ಜೆ ಹದಿನೆಂಟೆಜ್ಜೆ.”

“ಕೋಲು ಕುದುರೆ” ಮಕ್ಕಳ ಲೋಕದಲ್ಲಿ ಮಾತ್ರವೇ ಸಾಧ್ಯವಾಗುವಂಥ ಮಕ್ಕಳ ಕಲ್ಪನೆಗಳನ್ನು ಸೂಚಿಸುತ್ತದೆ. ಚಂದಮಾಮ, ಕಿನ್ನರ ಕೂಟ, ಬಳಪದ ಬಸವ - ಇವು ಮೂರು ಕವನಗಳು ಲೋಕದ ಯಾವುದೇ ವಸ್ತುವಿನೊಡನೆ ಮಾತನಾಡಬಲ್ಲ ಮಗುವಿನ ಲೋಕದ ಮಾಂತ್ರಿಕತೆಯನ್ನು ಒಳಗೊಂಡಿವೆ. … “ನಂಗೊತ್ತಿಲ್ಲಪ್ಪ" ತುಂಟತನ ಮಾಡುತ್ತಾ ಸಿಕ್ಕಿಬಿದ್ದ ಮಗುವೊಂದು ತನಗೂ ಆ ತುಂಟತನಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹಿರಿಯರೆದುರು ನಟಿಸುವ ಮಾಟಗಾರಿಕೆಯ ಬಗೆಗಿನ ಕವಿತೆ. “ಮಗುವಿನ ಬೇಡಿಕೆ” ಕವನದಲ್ಲಿ ಮಗುವಿನ ಮುಗ್ಧ ಆಶಯಗಳು ಪ್ರಿಯವಾಗಿ ಹರಡಿಕೊಂಡಿವೆ. ಇಲ್ಲಿನ ಹದಿಮೂರು ಕವಿತೆಗಳು ತೆರೆದಿಡುವ ಮಕ್ಕಳ ಲೋಕ ಅದ್ಭುತವಾದದ್ದು.”

ಈ ಕೆಳಗಿನ "ತಂಗಿ" ಕವನವು, ಅಣ್ಣನ ಬದುಕಿನಲ್ಲಿ ಏನೆಲ್ಲದರಂತೆ ತಂಗಿ ತುಂಬಿಕೊಳ್ಳುತ್ತಾಳೆ ಎಂಬುದನ್ನು ರಮ್ಯವಾಗಿ ಚಿತ್ರಿಸುವ ಶಿಶುಗೀತೆ:
ಕೊಂಚ ಇದ್ದು ಮನೆಯಲ್ಲಿ ಕೂಸ ನೋಡಿಕೋ ರಂಗಣ್ಣ
ಹೂವು ಕಣೋ ನಮ್ಮನೆಗೆ ಮಹಡಿ ಹತ್ತಿ ಬಿದ್ದಾಳು
ಗಿಣಿ ಕಣೋ ನಮ್ಮನೆಗೆ ಮಾತು ಆಡಿ ಸೋತಾಳು
ದೀಪ ಕಣೋ ನಮ್ಮನೆಗೆ ಹೊಸಲು ದಾಟಿ ಹೋದಾಳು
ನಾಳೆ ಆಗಿ ಮನೆಯಲ್ಲಿ ತಂಗಿ ನಿನಗೆ ತುಂಟಮ್ಮ
ನಂಗ ಬಾಲೊ ಮನೆಗೆ ಎಂದು ಕೂಗೇ ಬಿಡುತ್ತಾಳೋ

ಈ ಸಂಕಲನದ ಮೂವತ್ತೆರಡು ಕತೆಗಳಲ್ಲಿ ಮಕ್ಕಳಿಗೆ ಜೀವನಮೌಲ್ಯಗಳನ್ನು ತಿಳಿಸುವ ಕತೆಗಳಿವೆ. ಉದಾಹರಣೆಗೆ: ಶಂಕರ ಸ್ಕೌಟು, ಖೈದಿಗಳ ಕಷ್ಟ, ಶಿವಸುಂದರ, ಕುಂಟ ನಾಯಿ, ಅಪ್ಪನ ಐಶ್ವರ್ಯ, ಚಿನ್ನಾರಿ, ಪೂವಮ್ಮ, ನೋವು, ಶುಭಾಂಗ, ಮುಪ್ಪಿನ ಮುದುಕಿ, ಹೊಟ್ಟೆ ತುಂಬಿದರೆ ಸಾಕು, ಅನ್ನದ ಅಗುಳು.

ಬದುಕುವ ಮಂತ್ರ, ರಾಜನ ಬುದ್ಧಿವಂತಿಕೆ, ಲವ್‌ಲಿ, ಅರಸನ ಕಿವಿ - ಇವು ಮಕ್ಕಳಿಗೆ ಮನೋರಂಜನೆ ಜೊತೆಗೆ ನೀತಿಬೋಧಿಯನ್ನೂ ಮಾಡುವ ಕತೆಗಳು.

ದೇವರು ದೋಣಿ ನಡೆಸಿದ, ನಿಶ್ಚಲದಾಸ, ಸಂಕಟ ಬಂದಾಗ, ಅವಳಿ ಚಿಲುಮೆ - ಇವು ಸರಳ ಭಾಷೆಯಲ್ಲಿ ಅಧ್ಯಾತ್ಮಿಕ ಸಂದೇಶ ನೀಡುವ ಕತೆಗಳು.