ನಿರೂಪಣೆ: ನಿಕ್ ಗ್ರೀವ್ಸ್
ಕನ್ನಡ ಅನುವಾದ: ಕೃಷ್ಣಮೂರ್ತಿ ಚಂದರ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪ್ರಕಟ: 2006 ಪುಟ: 140 ಬೆಲೆ: ರೂ.120/-
ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಹೋದರು. ತಮ್ಮ ಉದ್ಯೋಗದ ಸಲುವಾಗಿ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್-ವಾನಾ ಹಾಗೂ ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು.
ಈ ಅವಧಿಯಲ್ಲಿ ಅವರು ವನ್ಯಜೀವಿಗಳ ವೈವಿಧ್ಯತೆ ಮತ್ತು ಜೀವನಕ್ರಮಗಳ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡರು. ಅವುಗಳ ಬಗ್ಗೆ ವಿಪುಲ ಮಾಹಿತಿಯನ್ನೂ ಅವುಗಳಿಗೆ ಸಂಬಂಧಿಸಿದ ಜಾನಪದ ಹಾಗೂ ದಂತಕತೆಗಳನ್ನೂ ಸಂಗ್ರಹಿಸಿದರು. ಪುಸ್ತಕದ ಕೊನೆಯ ಪುಟದಲ್ಲಿರುವ ಗ್ರಂಥಸೂಚಿಯಲ್ಲಿ ಅವರು ಪಟ್ಟಿ ಮಾಡಿರುವ ಪುಸ್ತಕಗಳು ಅವರ ಅಧ್ಯಯನದ ಸೂಚಿ: ಆಫ್ರಿಕನ್ ಮಿಥ್ಸ್ ಆಂಡ್ ಲೆಜೆಂಡ್ಸ್; ಬಂಟು ಫೋಕ್ಲೋರ್; ಬರ್ಡ್ಸ್ ಆಫ್ ಆಫ್ರಿಕಾ (3 ಸಂಪುಟಗಳು); ಫೋಕ್ ಟೇಲ್ಸ್ ಫ್ರಮ್ ಆಲ್ ನೇಷನ್ಸ್; ಲೆಜೆಂಡರಿ ಆಫ್ರಿಕಾ; ಸೌತ್ ಆಫ್ರಿಕನ್ ಫೋಕ್ ಟೇಲ್ಸ್; ಸ್ವಾಜಿ ಫೈರ್-ಸೈಡ್ ಟೇಲ್ಸ್ ಇತ್ಯಾದಿ.
ಈ ಪುಸ್ತಕದ 30 ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಕೃಷ್ಣಮೂರ್ತಿ ಚಂದರ್. ತಾನು ನಿರೂಪಿಸಿದ “ನೀರ್ಗುದುರೆಗೆ ರೋಮವಿದ್ದಾಗ” ಎಂಬ ಇಂತಹದೇ ಇನ್ನೊಂದು ಪುಸ್ತಕಕ್ಕೆ ಈ ಪುಸ್ತಕ ಪೂರಕ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಪುಸ್ತಕದ ಆರಂಭದಲ್ಲಿ ಆಫ್ರಿಕಾ ಖಂಡದ ಬಗ್ಗೆ ಸಾಮಾನ್ಯ ಮಾಹಿತಿಯನ್ನೂ, ಆಫ್ರಿಕಾದ ಸಸ್ಯವಲಯಗಳನ್ನು ಸೂಚಿಸುವ ಭೂಪಟವನ್ನೂ ಮುದ್ರಿಸಲಾಗಿದೆ. ಸೆರ್-ವೆಲ್, ಸಿಂಹ, ಕ್ಯಾರಕಲ್ ಬೆಕ್ಕು, ಜಿಂಕೆ, ನರಿ, ಮುಂಗುಸಿ, ಹಾವು, ಬಾವಲಿ, ಆರ್ಡ್ವಾರ್ಡ್ ಹಂದಿ, ಪ್ಯಾಂಗೊಲಿನ್, ಮುಳ್ಳುಹಂದಿ, ವೆರ್-ವೆಟ್ ಕೋತಿ, ಅಳಿಲು, ಕುಡು ಜಿಂಕೆ, ಗುಳ್ಳೆನರಿ, ಬುಶ್ಬಕ್ ಜಿಂಕೆ, ಡ್ಯುಕರ್ ಜಿಂಕೆ, ಆಮೆ, ರಣಹದ್ದು, ಗಿನಿಕೋಳಿ, ಜೇನುಹಕ್ಕಿ, ಮೊಲ, ಮೊಸಳೆ, ಹೆಬ್ಬಾವು, ಓತಿಕ್ಯಾತ, ಸಗಣಿ-ಜೀರುಂಡೆ - ಈ ಪ್ರಾಣಿಗಳ ಕುರಿತಾದ ಕತೆಗಳು ಇಲ್ಲಿವೆ. ರಾಡ್ ಕ್ಲೆಮೆಂಟ್ ರಚಿಸಿದ ಈ ಪ್ರಾಣಿಗಳ ಮನಮೋಹಕ ಚಿತ್ರಗಳೂ ಇಲ್ಲಿವೆ.
ಕತೆಗಳ ಜೊತೆಗೆ ಆಯಾ ಕತೆಯಲ್ಲಿ ಪ್ರಸ್ತಾಪಿಸಲಾದ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ (ಕತೆಯ ನಂತರ) ಮಾಹಿತಿ ನೀಡಿರುವುದು ಈ ಪುಸ್ತಕದ ವಿಶೇಷತೆ. ಉದಾಹರಣೆ: ಸೆರ್-ವೆಲ್ (ಹುಲಿಬೆಕ್ಕು) ಮತ್ತು ಆಮೆ ಹಾಗೂ ಸೆರ್-ವೆಲ್ಗೆ ಚುಕ್ಕೆಗಳು ಬಂದುದು ಹೇಗೆ - ಎಂಬ ಮೊದಲ ಎರಡು ಕತೆಗಳ ನಂತರ ಹುಲಿಬೆಕ್ಕಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಪುಟ ಇವನ್ನು ಒಳಗೊಂಡಿದೆ: ಪ್ರಾಣಿಯ ಬಗ್ಗೆ ಸಾಮಾನ್ಯ ಮಾಹಿತಿ (ಗಂಡು ಮತ್ತು ಹೆಣ್ಣಿನ ಎತ್ತರ ಹಾಗೂ ತೂಕ), ಜನನ ಕಾಲದಲ್ಲಿ ತೂಕ, ಸ್ತನ್ಯಪಾನ ಬಿಡುವ ವಯಸ್ಸು, ಪ್ರವರ್ಧಮಾನಕ್ಕೆ ಬರುವ ವಯಸ್ಸು, ಗರ್ಭಾವಸ್ಥೆ ಅವಧಿ, ಹೆಣ್ಣು ಹೆರುವ ಮರಿಗಳ ಸಂಖ್ಯೆ, ಜೀವಿತಾವಧಿ; ಗುರುತಿಸುವಿಕೆ; ಅಭ್ಯಾಸ; ಆಹಾರ; ಸಂತಾನ. ಅದೇ ಮಾಹಿತಿ ಪುಟದಲ್ಲಿ ಮುದ್ರಿಸಿರುವ ಆಫಿಕಾದ ಭೂಪಟದಲ್ಲಿ ಪ್ರಸ್ತಾಪಿಸಿದ ಪ್ರಾಣಿ ವಾಸಿಸುವ ಪ್ರದೇಶಗಳನ್ನು ಗುರುತಿಸಲಾಗಿದೆ.
ಸೆರ್-ವೆಲ್(ಹುಲಿಬೆಕ್ಕು)ಗೆ ಮೈಚರ್ಮದಲ್ಲಿ ಚುಕ್ಕಿಗಳು ಬಂದುದು ಹೇಗೆ? ಎಂಬ ಎರಡನೇ ಕತೆಯ ಸಾರಾಂಶ ಹೀಗಿದೆ: ಚಿರತೆಯಂತೆ ಅಥವಾ ಜೀಬ್ರಾದಂತೆ ಚಂದದ ಮೈಚರ್ಮ ಬೇಕೆಂಬುದು ಹುಲಿಬೆಕ್ಕಿನ ಆಶೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಷಸರ್ಪವೊಂದು ತನಗೆ ಸಹಾಯ ಮಾಡಬೇಕೆಂದು ಹುಲಿಬೆಕ್ಕನ್ನು ಬೇಡಿಕೊಂಡಿತು. “ಕಚ್ಚಬಾರದು" ಎಂಬ ಷರತ್ತು ವಿಧಿಸಿ, ವಿಷಸರ್ಪವನ್ನು ಮನೆಗೆ ಕರೆದೊಯ್ದು ಹುಲಿಬೆಕ್ಕು ಶುಶ್ರೂಷೆ ಮಾಡಿತು. ಚೇತರಿಸಿಕೊಂಡ ವಿಷಸರ್ಪ “ನಿನ್ನ ಔದಾರ್ಯಕ್ಕೆ ಪ್ರತಿಯಾಗಿ ಏನು ಬೇಕು?” ಎಂದು ಕೇಳಿತು. ಹುಲಿಬೆಕ್ಕು ತನ್ನ ಚಂದದ ಮೈಚರ್ಮ ಬೇಕೆಂಬ ಆಶೆಯನ್ನು ತಿಳಿಸಿತು. ಹುಲಿಬೆಕ್ಕನ್ನು ವಿಷಸರ್ಪ ಜಾಗರೂಕವಾಗಿ ಕಚ್ಚಿತು. ಹುಲಿಬೆಕ್ಕಿನ ಮೈಯಲ್ಲೆಲ್ಲ ತುರಿಕೆ ಉಂಟಾಯಿತು. ಅನಂತರ ಅದರ ಕಂದುಬಣ್ಣದ ಚರ್ಮ ಕಪ್ಪುಚುಕ್ಕೆಗಳುಳ್ಳ ಬಂಗಾರದ ಬಣ್ಣದ ಚರ್ಮವಾಗಿ ಬದಲಾಯಿತು. ಹುಲಿಬೆಕ್ಕಿಗೆ ಖುಷಿಯೋ ಖುಷಿ.
ಆಫ್ರಿಕಾದ ಪ್ರಾಣಿಗಳ ಸ್ವಭಾವ ಮತ್ತು ವರ್ತನೆಗಳ ಬಗ್ಗೆ ಮೂಲನಿವಾಸಿಗಳ ಅರಿವಿನ ವ್ಯಾಪ್ತಿಯನ್ನು ಸೂಚಿಸುತ್ತವೆ ಇಂತಹ ಕತೆಗಳು. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳ ಅಸೂಯೆ, ಸೇಡು, ವಂಚನೆಯ ವರ್ತನೆ ಇದರ ಹಲವು ಕತೆಗಳ ಹೂರಣ.