ಲೇಖಕರು: ಮೀರ್ ನಜಬತ್ ಆಲಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್. ನವದೆಹಲಿ
9ನೇ ಮುದ್ರಣ: 2015 ಪುಟ: 64 ಬೆಲೆ: ರೂ.40/-
ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ ಅಪಾಯಕಾರಿ ಸೂಕ್ಷ್ಮಜೀವಿಯನ್ನೂ ನಿಯಂತ್ರಿಸಿದ ವೈದ್ಯಕೀಯ ಬೆಳವಣಿಗೆಗಳು ಇತ್ಯಾದಿ.
ಇವುಗಳಲ್ಲಿ ಏನೇನೂ ವಿಶೇಷವಿಲ್ಲ; ಇವೆಲ್ಲ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ ಎಂದು ನಮಗೆ ಅನಿಸುತ್ತದೆ. ಆದರೆ, ಐದಾರು ಶತಮಾನಗಳ ಮುಂಚೆ ಪರಿಸ್ಥಿತಿ ಹೇಗಿದ್ದಿರಬಹುದು? ಸಾವಿರಾರು ವರುಷಗಳ ಮುಂಚೆ ಮಾನವರು ಕಾಡುಮೇಡುಗಳಲ್ಲಿ ವಾಸ ಮಾಡುತ್ತಿದ್ದಾಗ, ಇವು ಯಾವುದೇ ಸವಲತ್ತುಗಳು ಲಭ್ಯವಿಲ್ಲದಿದ್ದಾಗ ಬದುಕು ಹೇಗಿದ್ದಿರಬಹುದು? ಅದನ್ನೆಲ್ಲ ಈಗ ಕಲ್ಪಿಸುವುದೂ ಬಹಳ ಕಷ್ಟ.
ನಾಗರಿಕತೆ ಬೆಳೆದಂತೆ, ಮನುಷ್ಯ ಕೆಲವು ಸಾಧನಗಳನ್ನು ಆವಿಷ್ಕರಿಸಿದ. ಅವುಗಳಿಂದಾಗಿ ನಮ್ಮ ಬದುಕೇ ಬದಲಾಯಿತು. ಅವುಗಳಲ್ಲಿ ಮುಖ್ಯವಾದವು: ಚಕ್ರ, ಉಗಿ ಎಂಜಿನು, ಸೂಕ್ಷ್ಮದರ್ಶಕ ಮತ್ತು ಮುದ್ರಣ ಯಂತ್ರ. ಇವನ್ನು ಮಕ್ಕಳಿಗೆ ಪರಿಚಯಿಸುವ ಪುಸ್ತಕ ಇದು.
ಕಾಲದಿಂದ ಕಾಲಕ್ಕೆ ಈ ಪ್ರತಿಯೊಂದು ಸಾಧನದಲ್ಲಿಯೂ ಹಲವು ಸುಧಾರಣೆಗಳಾದವು. ಅದರಿಂದಾಗಿ ನಮ್ಮ ಜೀವನದ ಹೆಚ್ಚೆಚ್ಚು ಚಟುವಟಿಕೆಗಳಲ್ಲಿ ಅವುಗಳ ಪಾತ್ರೆ ಹೆಚ್ಚಾಗುತ್ತಾ ಬಂತು. ಉದಾಹರಣೆಗೆ ಚಕ್ರ. ಇದು ತೀರಾ ಸರಳ ಸಾಧನ. ಸೈಕಲ್, ಮೋಟಾರು ವಾಹನಗಳು, ರೈಲು, ಟ್ರಾಮ್, ಯಂತ್ರಗಳು ಇವೆಲ್ಲದರ ಚಲನೆಗೆ ಚಕ್ರವೇ ಆಧಾರ. ವಿಮಾನಗಳು ಆಕಾಶಕ್ಕೆ ಏರಲು ಮತ್ತು ಇಳಿಯಲು ಚಕ್ರಗಳು ಅಗತ್ಯ. ಸಾಗಾಣಿಕೆಗೆ ಮಾತ್ರವಲ್ಲ, ಗಡಿಯಾರಗಳು, ವಿದ್ಯುತ್ ಉತ್ಪಾದಿಸುವ ಜನರೇಟರುಗಳು, ಹಲವಾರು ಯಂತ್ರಸಲಕರಣೆಗಳು ಕೆಲಸ ಮಾಡಲು ಚಕ್ರಗಳು ಬೇಕೇ ಬೇಕು.
ಚಕ್ರವಿರುವ ವಾಹನಗಳು ಇಲ್ಲದಿದ್ದಾಗ ಪ್ರಯಾಣ ಮಾಡಲು ಮತ್ತು ಭಾರವಾದ ಸರಕು ಸಾಗಿಸಲು ಮನುಷ್ಯರಿಗೆ ಎಷ್ಟು ಕಷ್ಟ ಆಗಿರಬಹುದು! ಅಂತಹ ಸನ್ನಿವೇಶದಲ್ಲಿ, ಪ್ರತಿಭಾವಂತನೊಬ್ಬ ಚಕ್ರವನ್ನು ಕಂಡು ಹಿಡಿದ - ಕೇವಲ 5,000 ವರುಷಗಳ ಹಿಂದೆ. ಅವನು ಅಪಾರ ಸಂಪತ್ತನ್ನು ಗಳಿಸಲು ಸಾಧ್ಯವಿತ್ತು. ಆದರೆ ವಿಪರ್ಯಾಸ ನೋಡಿ. ಚಕ್ರವನ್ನು ಶೋಧಿಸಿದವನು ಯಾರೆಂಬುದು ಯಾರಿಗೂ ಗೊತ್ತಿಲ್ಲ! ಮಾನವ ಚರಿತ್ರೆಯಲ್ಲಿ ಅತ್ಯಂತ ಮುಖ್ಯವಾದ ಮತ್ತು ಸರ್ವವ್ಯಾಪಿಯಾದ ಸಾಧನವನ್ನು ಶೋಧಿಸಿದ ವ್ಯಕ್ತಿ ಇಂದಿಗೂ ಅಜ್ನಾತ.
ಮುಂದಿನ ಹಂತದಲ್ಲಿ, ಎರಡು ಚಕ್ರಗಳನ್ನು ಜೋಡಿಸಿ ಗಾಡಿಗಳನ್ನು ತಯಾರಿಸಲಾಯಿತು. ಎರಡು ದೊಡ್ಡ ಮರದ ಚಕ್ರಗಳಿರುವ ಎತ್ತಿನ ಗಾಡಿಗಳು 4,000 ವರುಷಗಳ ಮುಂಚೆಯೇ ಬಳಕೆಯಲ್ಲಿ ಇದ್ದವೆಂದು ಮೊಹೆಂಜೊದಾರೋದಲ್ಲಿ ಅಗೆದು ತೆಗೆದ ಅವಶೇಷಗಳಿಂದ ತಿಳಿಯುತ್ತದೆ. ಮೊಟ್ಟಮೊದಲು ತಯಾರಿಸಿದ ಚಕ್ರಗಳು ಮರದ ಮೂರು ಹಲಗೆಗಳನ್ನು ಜೋಡಿಸಿ ಮಾಡಿದವುಗಳು; ಆ ಹಲಗೆಗಳನ್ನು ಮರದ ಪಟ್ಟಿಗಳಿಂದ ಜೋಡಿಸುತ್ತಿದ್ದರು.
ಅನಂತರ ದೊಡ್ಡ ಚಕ್ರಗಳನ್ನೂ, ಹೆಚ್ಚು ಚಕ್ರಗಳಿರುವ ಗಾಡಿಗಳನ್ನೂ ಆವಿಷ್ಕರಿಸಲಾಯಿತು. ಚಕ್ರಗಳಿಗೆ ಕಬ್ಬಿಣ ಸುತ್ತುಪಟ್ಟಿ ಹಾಕಿ, ಚಕ್ರಗಾಡಿಗಳನ್ನು ಎಳೆಯಲು ಎತ್ತು ಅಥವಾ ಕುದುರೆಗಳನ್ನು ಬಳಸಿದಾಗ ಇನ್ನಷ್ಟು ವೇಗವಾಗಿ ಮತ್ತು ಹೆಚ್ಚು ಪರಿಮಾಣದ ಸರಕು ಸಾಗಿಸಬಹುದೆಂದು ಅರಿವಾಯಿತು. ಚಕ್ರವಾಹನಗಳ ಸುಲಭ ಚಲನೆಗಾಗಿ ಮತ್ತು ವೇಗ ಹೆಚ್ಚಳಕ್ಕಾಗಿ ರಸ್ತೆಗಳನ್ನು ರಚಿಸಲಾಯಿತು. ಕ್ರಮೇಣ ಬಿಟ್ಯುಮಿನ್ ಹಾಸಿದ ರಸ್ತೆಗಳು ನಿರ್ಮಾಣವಾದವು.
ಇವೆಲ್ಲ ಸುಧಾರಣೆಗಳೊಂದಿಗೆ ಚಕ್ರಗಳಲ್ಲಿಯೂ ಸುಧಾರಣೆಗಳು ಅನಿವಾರ್ಯವಾದವು. ಹಾಗಾಗಿ, 19ನೇ ಶತಮಾನದ ಕೊನೆಯ ದಶಕದಲ್ಲಿ ಮೋಟಾರು ವಾಹನಗಳ ಚಕ್ರಗಳಿಗೆ ಪೂರ್ತಿ ರಬ್ಬರಿನಿಂದ ಮಾಡಿದ ಟೈರುಗಳನ್ನು ಹಾಕಲಾಯಿತು. 1888ರಲ್ಲಿ ಚಕ್ರಗಳ ವಿನ್ಯಾಸದಲ್ಲಿ ಆದ ಚಾರಿತ್ರಿಕ ಪ್ರಗತಿ: ಬ್ರಿಟಿಷ್ ಪಶುವೈದ್ಯ ಜಾನ್ ಬಾಯ್ಡ್ ಡನ್ಲಪ್ ಗಾಳಿ ತುಂಬಿದ ಟೈರನ್ನು ಆವಿಷ್ಕರಿಸಿದ್ದು. ಇದರಿಂದಾಗಿ ಪ್ರಯಾಣದ ಕುಲುಕಾಟ ಬಹುಪಾಲು ಕಡಿಮೆಯಾಯಿತು. ಚಕ್ರಗಳನ್ನು ಹಗುರ ಮಾಡಲಿಕ್ಕಾಗಿ ಲೋಹದ ದುಂಡಗಿನ ಅಚ್ಚು ಮತ್ತು ಅರೆಗಳನ್ನು ಬಳಸಿದ್ದು; ಚಕ್ರಗಳು ವೇಗದಲ್ಲಿ ತಿರುಗುವಾಗ ಉಂಟಾಗುವ ಸವೆತ ನಿವಾರಿಸಲಿಕ್ಕಾಗಿ ಬಾಲ್-ಬೇರಿಂಗ್ಗಳನ್ನು ಅಳವಡಿಸಿದ್ದು - ಇವು ಇನ್ನೆರಡು ಪ್ರಮುಖ ಸುಧಾರಣೆಗಳು.
ಇವತ್ತು ಚಕ್ರವಿಲ್ಲದೆ ನಮ್ಮ ದೈನಂದಿನ ಬದುಕನ್ನು ಕಲ್ಪಿಸಲಿಕ್ಕೂ ಸಾಧ್ಯವಿಲ್ಲ. ಹೀಗೆ ನಮ್ಮ ಬದುಕಿನಲ್ಲಿ ಸರ್ವವ್ಯಾಪಿಯಾಗಿರುವ ಚಕ್ರದಲ್ಲಾದ ಸುಧಾರಣೆಗಳನ್ನು ಈ ಪುಸ್ತಕ ಸರಳ ಭಾಷೆಯಲ್ಲಿ ಪ್ರಸ್ತುತ ಪಡಿಸಿದೆ. ಹಾಗೆಯೇ ಉಗಿ ಎಂಜಿನು, ಸೂಕ್ಷ್ಮದರ್ಶಕ ಮತ್ತು ಮುದ್ರಣಯಂತ್ರದಲ್ಲಿಯೂ ಕಾಲದಿಂದ ಕಾಲಕ್ಕೆ ಆದ ಸುಧಾರಣೆಗಳನ್ನು ತಿಳಿಯಬೇಕಾದರೆ ಈ ಪುಸ್ತಕ ಓದಬೇಕು. ಎರಡು ಪುಟಕ್ಕೊಂದರಂತೆ ಪುಸ್ತಕದಲ್ಲಿರುವ ಚಿತ್ರಗಳು ಓದಿಗೆ ಸಹಾಯಕವಾಗಿವೆ.