ಲೇಖಕರು: ಕೆನ್ನೆತ್ ಆಂಡರ್ ಸನ್
ಕನ್ನಡ ಸಂಗ್ರಹಾನುವಾದ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ಮೊದಲ ಮುದ್ರಣ: 1998 ಪುಟ: 103 ಬೆಲೆ: ರೂ. 63/-
ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವಾಗಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು.
ಇದರ ಮೊದಲ ಶಿಕಾರಿ ಕತೆಯೇ ಪುಸ್ತಕದ ಶೀರ್ಷಿಕೆ ಕತೆ: ಮುನಿಶಾಮಿ ಮತ್ತು ಮಾಗಡಿ ಚಿರತೆ. ಮುನಿಶಾಮಿ ಎಂಬಾತ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಶಿಕಾರಿಯ ಹುಚ್ಚು ಇದ್ದವರಿಗೆ ತಾನು “ಜಂಟಲ್ಮನ್ ಶಿಕಾರಿದಾರರ ಗೈಡ್” ಎಂದು ಪರಿಚಯಿಸಿಕೊಳ್ಳುತ್ತಿದ್ದ. ಅವರಿಗೆ ಹುಲಿ ಅಥವಾ ಚಿರತೆ ಬೇಟೆಯ ಆಶೆ ಹುಟ್ಟಿಸಿ, ಮುಂಗಡ ಹಣ ಗಿಟ್ಟಿಸುತ್ತಿದ್ದ. ಕೆನೆತ್ ಆಂಡರ್ ಸನ್ನರಿಗೂ ನಾಲ್ಕು ಸಲ ಟೋಪಿ ಹಾಕಿದ್ದ ಅವನು ಕೊನೆಗೊಮ್ಮೆ ರೆಡ್-ಹ್ಯಾಂಡಾಗಿ ಅವರ ಕೈಯಲ್ಲಿ ಸಿಕ್ಕಿ ಬಿದ್ದ. ಆಗ ತನ್ನ ಮೋಸದ ವಿಧಾನವನ್ನೆಲ್ಲ ಬಹಿರಂಗ ಪಡಿಸಿದ.
ಅಂತಹ ಮುನಿಶಾಮಿ ಮಾಗಡಿ ಹತ್ತಿರ ಚಿರತೆಯೊಂದಕ್ಕೆ ಗುಂಡು ಹೊಡೆದು ಗಾಯಗೊಳಿಸಿದ. ಅದು ಸಾಯಲಿಲ್ಲ. ಅನಂತರ ನರಭಕ್ಷಕನಾಗಿ ಬದಲಾದ ಆ ಚಿರತೆ ಕೆಲವರ ಬಲಿ ತೆಗೆದುಕೊಂಡಿತು. ಕೊನೆಗೆ, ಪೊಲೀಸರು ಆ ಚಿರತೆಯನ್ನು ಕೊಲ್ಲಲು ಮುನಿಶಾಮಿಗೆ ಕೇವಲ ನಾಲ್ಕು ದಿನಗಳ ಗಡುವು ನೀಡಿದರು. ಆಗ, ಕೆನೆತ್ ಆಂಡರ್ ಸನ್ ಅವರ ಮನೆಗೆ ಬಂದು, ಆ ಚಿರತೆಯನ್ನು ಕೊಲ್ಲಬೇಕೆಂದು ಬೇಡಿಕೊಂಡ. ಅಂತೂ ಕೆನೆತ್ ಆಂಡರ್ ಸನ್ ಮಾಗಡಿ ತಲಪಿದರು. ಮೊದಲ ದಿನ ಚಿರತೆಯ ಆವಾಸ ಸ್ಥಾನ ಪತ್ತೆ ಮಾಡಲಾಗಲಿಲ್ಲ. ಮರುದಿನ ಲಂಟಾನಾ ಪೊದೆಗಳ ಕೆಳಗೆ ನುಸುಳಿ, ಮೈಯೆಲ್ಲ ಮುಳ್ಳುಗಳಿಂದ ಗಾಯ ಮಾಡಿಕೊಂಡು ಬೆಟ್ಟ ಹತ್ತಿದರು. ಅದೃಷ್ಟವಶಾತ್ ಅವತ್ತೇ ಚಿರತೆಯ ಜಾಡು ಹಿಡಿದು, ಅದನ್ನು ಗುಂಡೇಟಿನಿಂದ ಕೊಂದರು.
“ಅಲ್ಲಾಭಕ್ಷಿಯ ಪುಂಡುಕರಡಿ” ಎರಡನೆಯ ಶಿಕಾರಿ ಕತೆ. ಶಿವಮೊಗ್ಗದಿಂದ ಅರಸೀಕೆರೆಗೆ ಹೋಗುವ ದಾರಿಯಲ್ಲಿರುವ ಮುಸ್ಲಿಂ ಸಂತನ ಗೋರಿಯ ಪಾಲಕ ಅಲ್ಲಾಭಕ್ಷಿ ಕೆನೆತ್ ಅವರ ಸ್ನೇಹಿತ. ಆ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ದೈತ್ಯ ಕರಡಿ ಒಂದು ವರುಷದ ಅವಧಿಯಲ್ಲಿ ಹಲವರ ಮೇಲೆ ದಾಳಿ ಮಾಡಿತ್ತು. ಅವರ ಮುಖವನ್ನು ಭಯಂಕರ ಉಗುರುಗಳಿಂದ ಹರಿದು, ಮೈಕೈಗೆಲ್ಲ ಕಚ್ಚಿ ಘಾಸಿ ಮಾಡಿತ್ತು. ಅದರ ಹಲ್ಲೆಗೊಳಗಾಗಿ ಬದುಕಿದ ಕೆಲವರ ಎರಡೂ ಕಣ್ಣುಗಳು ಕುರುಡಾಗಿದ್ದವು. ಒಂದು ದಿನ ರಾತ್ರಿ ಅದು ಅಲ್ಲಾಭಕ್ಷಿಯ ಮಗನ ಮೇಲೆ ಭೀಕರ ಹಲ್ಲೆ ಮಾಡಿತು. ಮರುದಿನ ಮುಂಜಾನೆ ಅವನು ಕೊನೆಯುಸಿರೆಳೆದ. ಆಗ ಅಲ್ಲಾಭಕ್ಷಿ ಕೆನೆತರಿಗೊಂದು ಪೋಸ್ಟ್ ಕಾರ್ಡ್ ಬರೆದು ತನ್ನ ಆತಂಕ ತಿಳಿಸಿದ. ಹಾಗಾಗಿ ತನ್ನ ಕಾರಿನಲ್ಲಿ ಅಲ್ಲಿಗೆ ಹೋದರು ಕೆನೆತ್. ಮೊದಲ ರಾತ್ರಿ ನಿದ್ದೆಗೆಟ್ಟು ನಾಲ್ಕು ಸಲ ಆ ಪರಿಸರದಲ್ಲಿ ಸುತ್ತಾಡಿದರೂ ಕರಡಿ ಪತ್ತೆಯಾಗಲಿಲ್ಲ. ಅದು ವಾಸವಾಗಿದ್ದ ಗವಿಯನ್ನು ತೊರೆದು ಹೋಗಿತ್ತು!
ಅದಾಗಿ ಒಂದು ತಿಂಗಳ ನಂತರ, ಚಿಕ್ಕಮಗಳೂರು ಕಡೂರು ಮಧ್ಯದ ಸಖರಾಯಪಟ್ಟನದ ಹತ್ತಿರದ ಅಯ್ಯನಕೆರೆಯ ಪರಿಸರದಲ್ಲಿ ಕೆಲವರ ಮೇಲೆ ದಾಳಿ ಮಾಡಿತು. ಅರಣ್ಯಾಧಿಕಾರಿಯವರ ಲಿಖಿತ ವಿನಂತಿಯಂತೆ, ಕೆನೆತ್ ಆಂಡರ್ ಸನ್ ಅಲ್ಲಿಗೆ ಹೋದ ದಿನವೇ ಆ ಕರಡಿ ಒಬ್ಬನಿಗೆ ಮರಣಾಂತಿಕ ಹಲ್ಲೆ ಮಾಡಿತು. ಅವನ ಜಾಡು ಹಿಡಿದು, ಅಪಾಯಕಾರಿ ಬೆಟ್ಟವೇರಿದ ಕೆನೆತರು ಸಾಯುವ ಸ್ಥಿತಿಯಲ್ಲಿದ್ದ ಅವನನ್ನು ಪತ್ತೆ ಮಾಡಿದರು. ಆದರೆ ಅವರ ಕಾಲು ಉಳುಕಿ ಅವರಿಗೆ ನಡೆಯಲಾಗದಂತಾಯಿತು. ಕೆಲವು ದಿನ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡರು ಕೆನೆತ್. ಅಷ್ಟರಲ್ಲಿ, ಆ ಕರಡಿ ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ ಸುದ್ದಿ ಬಂತು. ಹಾಗಾಗಿ, ಆ ದಿನ ಪುನಃ ಅಲ್ಲಿಗೆ ಹೋಗಿ, ನಡುರಾತ್ರಿ ತನಕ ಕಾದು ಕುಳಿತು, ಆ ದೈತ್ಯ ಕರಡಿಯನ್ನು ಗುಂಡೇಟಿನಿಂದ ನೆಲಕ್ಕುರುಳಿಸಿದರು.
ಮೂರನೆಯ ಶಿಕಾರಿ ಕತೆ “ಬಾಳೆತೋಟದ ಸ್ವಾಮಿ”. ಇದು ನರಭಕ್ಷಕ ಹುಲಿಯನ್ನು ಹಟದಿಂದ ಕೊಂದು ಹಾಕಿದ ಕತೆ. ಅದಕ್ಕಿಂತ ಹೆಚ್ಚಾಗಿ, ಆ ನರಭಕ್ಷಕ ಹುಲಿಯ ಮರಣಾಂತಿಕ ದಾಳಿಗಳ ಸುದ್ದಿಯ ದುರ್ಲಾಭ ಪಡೆದು, ಇರುಲ ಬುಡಕಟ್ಟಿನ ಹಲವಾರು ಕುಟುಂಬಗಳ ಶೋಷಣೆ ಮಾಡಿದ ದುರುಳ ಸ್ವಾಮಿಯೊಬ್ಬನ ಕತೆ! ಈ ಪ್ರಕರಣ ನಡೆದದ್ದು ನೀಲಗಿರಿ ಬೆಟ್ಟಗಳ ತಪ್ಪಲಿನ ಉದಕಮಂಡಲ ಊರಿನಿಂದ ಹನ್ನೆರಡು ಮೈಲು ದೂರದ ಬಾಳೆತೋಟ ಎಂಬ ಹಳ್ಳಿಯಲ್ಲಿ. ಆ ಹಳ್ಳಿಗೆ ಆ ಸ್ವಾಮಿ ಬಂದಾಗಲೇ ಅಲ್ಲಿಗೆ ನರಭಕ್ಷಕ ಹುಲಿ ಕಾಲಿಟ್ಟಿತು. ಅಲ್ಲಿ ನೂರಾರು ದನಗಳನ್ನು ಹಗಲು ಕಾಡಿನಲ್ಲಿ ಮೇಯಿಸುತ್ತಾ, ರಾತ್ರಿ ಬೇಲಿಯೊಳಗೆ ಕೂಡಿ ಹಾಕಿ ಸಾಕುತ್ತಿದ್ದರು. ಅವುಗಳ ಕಾವಲು ಕಾಯುತ್ತಿದ್ದವರು ಇರುಲರು. ಆ ಹುಲಿ, ರಾತ್ರಿ ಬೇಲಿ ಹಾರಿ ಬಂದು ದನಗಳನ್ನು ಹೊತ್ತೊಯ್ಯುತ್ತಿತ್ತು. ಅನಂತರ ಮನುಷ್ಯರ ಮೇಲೆ ದಾಳಿ ಮಾಡಲು ಶುರು ಮಾಡಿತು.
ರಾತ್ರಿ ಹುಲಿಯಾಗಿ ಬದಲಾಗುತ್ತಿರುವವನು ತಾನೇ ಎಂದು ಅಂಧಶ್ರದ್ಧೆಯ ಇರುಲ ಜನರಲ್ಲಿ ವದಂತಿ ಹರಡಿಸುವಲ್ಲಿ ಯಶಸ್ವಿಯಾಗಿದ್ದ ಆ ಸ್ವಾಮಿ! ಕೆನೆತ್ ಆಂಡರ್ ಸನ್ ಅಲ್ಲಿಗೆ ಹೋದ ರಾತ್ರಿ ಇದನ್ನೆಲ್ಲ ಅವರಿಗೆ ತಿಳಿಸಿದವನು ಅವರ ಇರುಲ ಮಿತ್ರ ಬೋರ. ಕೆನೆತರಿಗೆ ಒಂದು ಸಂಗತಿ ಸ್ಪಷ್ಟವಾಯಿತು: ಹಲವಾರು ಕಾಕತಾಳೀಯ ಘಟನೆಗಳಿಂದಾಗಿ ಇರುಲರು ಸ್ವಾಮಿ ಹುಟ್ಟು ಹಾಕಿದ ವದಂತಿಯನ್ನು ನಂಬಿ, ಇದೀಗ ಅವನ ತಾಕೀತಿನಂತೆ ಅವನಿಗೆ ತಿಂಗಳಿಗೆ ನೂರು ರೂಪಾಯಿ ಕೊಡಬೇಕಾದ ಷರತ್ತಿಗೆ ಒಪ್ಪಿದ್ದಾರೆಂದು. "ಬಿಳಿಯ ಬೇಟೆಗಾರ” ಬಂದ ಸುದ್ದಿ ತಿಳಿದ ಆ ಸ್ವಾಮಿ ತನ್ನ ಮೋಸದಾಟಕ್ಕೆ ಇವರು ಅಡ್ದಿಯಾಗುತ್ತಾರೆಂದು ಇವರನ್ನೂ ಬೆದರಿಸಿದ. ಆದರೆ ಅವನ ಬೆದರಿಕೆಗೆ ಕೆನೆತ್ ಸೊಪ್ಪು ಹಾಕಲಿಲ್ಲ. ಎರಡನೇ ದಿನದ ರಾತ್ರಿ, ಆ ನರಭಕ್ಷಕ ಹುಲಿಯನ್ನು ಸ್ವಾಮಿಯ ಗುಡಿಸಲಿನ ಪಕ್ಕದಲ್ಲಿಯೇ ಗುಂಡಿಕ್ಕಿ ಕೊಂದರು ಕೆನೆತ್. ಸತ್ತು ಬಿದ್ದ ಹುಲಿಯ ಅಡಿಯಲ್ಲಿದ್ದ ನೀಚ ಸ್ವಾಮಿ! ನಿಶ್ಶಬ್ದವಾಗಿ ಬಂದಿದ್ದ ಆ ಹುಲಿ ಅವನ ಮೇಲೆರಗಿದ ಹೊಡೆತಕ್ಕೆ ಅವನು ಪ್ರಾಣ ಬಿಟ್ಟಿದ್ದ!
ಕೊನೆಯ ಶಿಕಾರಿ ಕತೆ “ರಾಂಪುರದ ಒಕ್ಕಣ್ಣ.” ಇದು ಒಕ್ಕಣ್ಣ ನರಭಕ್ಷಕ ಹುಲಿಯ ಕತೆ. ಕೊಳ್ಳೇಗಾಲದಿಂದ 25 ಮೈಲು ದೂರದ ರಾಂಪುರ ಪರಿಸರದಲ್ಲಿ ಅದು ಮನುಷ್ಯರನ್ನು ಕೊಂದು ತಿನ್ನುತ್ತಿತ್ತು. ಯಾಕೆಂದರೆ, ಅದು ಪೊನ್ನಾಚಿಮಲೈ ಬೆಟ್ಟಗಳಲ್ಲಿ ವಾಸವಿದ್ದಾಗ, ಅಡಕತ್ತರಿಗೆ ಸಿಲುಕಿ ಒಂದು ಕಣ್ಣು ಮತ್ತು ಕಿವಿ ಕಳೆದು ಕೊಂಡ ನಂತರ, ಪ್ರಾಣಿಗಳಿಗಿಂತ ಸುಲಭವಾಗಿ ಸಿಗುವ ಮನುಷ್ಯರನ್ನೇ ಬಲಿ ತೆಗೆದುಕೊಳ್ಳಲು ಶುರುವಿಟ್ಟಿತ್ತು. ಕೊನೆಗೆ ಕೆನೆತರಿಗೆ ಆ ಹುಲಿ ಕೊಲ್ಲಬೇಕೆಂಬ ಕರೆ ಅಲ್ಲಿನ ಅರಣ್ಯಾಧಿಕಾರಿಗಳಿಂದ ಬಂತು. ಅಲ್ಲಿಗೆ ತಲಪಿದ ಕೆನೆತ್, ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಮೂರು ಕಡೆ ಬಲಿಪ್ರಾಣಿಗಳಾಗಿ ಹೋರಿ ಕಟ್ಟಿದರು. ಮೂರನೇ ದಿನ ಕತ್ತಲು ಕವಿಯುವ ಹೊತ್ತಿನಲ್ಲಿ ಒಂದು ಬಲಿಹೋರಿಯ ಹತ್ತಿರ ಹೋದಾಗ ಅಲ್ಲೇ ಅಡಗಿದ್ದ ಹುಲಿ ಕೆನೆತ್ರ ಮೇಲೇ ಹಾರಿತು. ಅದೃಷ್ಟವಶಾತ್, ನಡುವೆ ಹೋರಿ ಇದ್ದ ಕಾರಣ ಅದರ ಮೇಲೆ ಬಿತ್ತು ಒಕ್ಕಣ್ಣ ಹುಲಿ. ಆ ಕ್ಷಣದಲ್ಲಿ ಕೆನೆತ್ರ ಕೋವಿಯಿಂದ ಸಿಡಿದ ಗುಂಡಿಗೆ ಬಲಿಯಾಯಿತು.
ಇದು ಓದಲೇ ಬೇಕಾದ ಪುಸ್ತಕಗಳಲ್ಲೊಂದು. ಈ ಬರಹದ ಉದ್ದೇಶ ಇದರ ರೋಚಕ ಕತೆಗಳ ಒಂದು ಝಳಕ್ ತೋರಿಸುವುದು. ಇದರಿಂದಾಗಿ ನೀವು ಆ ಪುಸ್ತಕ ಕೈಗೆತ್ತಿಕೊಳ್ಳಬೇಕೆಂಬ ಆಶಯ. ನೀವು ಒಮ್ಮೆ ಓದಲು ಶುರುವಿಟ್ಟರೆ ಮುಗಿಸುವ ವರೆಗೆ ಕೆಳಗಿಡಲಾಗದ ಪುಸ್ತಕವಿದು.