ಪರಿಚಯ52: ಭಾರತೀಯ ಜ್ನಾನ ಪರಂಪರೆ

ಲೇಖಕರು: ಡಾ. ಸೋಂದಾ ಭಾಸ್ಕರ ಭಟ್, ಕಟೀಲು
ಪ್ರಕಾಶಕರು: ಮೇಧಾ ಪ್ರಕಾಶನ, ಕಟೀಲು
ಪ್ರಕಟಣೆ: 2016           ಪುಟ: 100           ಬೆಲೆ: ರೂ. 125/-

ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.

ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ ಕೃತಿಯೊಂದನ್ನು ಪ್ರಸಾದದ ಜೊತೆಗೆ ಕೊಡುವ ಪರಿಪಾಠವನ್ನು 2010ರಿಂದ ಆರಂಭಿಸಲಾಯಿತು.

ಸನಾತನ ಪರಂಪರೆಯ ವಾರಸುದಾರರಾದ ನಮಗೆ ಪೂರ್ವಜರ ಸಾಧನೆಯ ಬಗ್ಗೆ ಅರಿವು ಮೂಡಬೇಕು ಮತ್ತು ನಮ್ಮ ಸಾಧನೆಯನ್ನು ಅರಿತು ಅಭಿಮಾನ ಪಡಬೇಕು ಎಂಬ ಉದ್ದೇಶದಿಂದ ಈ ಕೃತಿಯನ್ನು ಪ್ರಸಾದರೂಪದಲ್ಲಿ ನೀಡಲು ತೀರ್ಮಾನಿಸಲಾಯಿತು ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿ ಹೇಳಿಕೊಂಡಿದೆ.

ಲೇಖಕರಾದ ಡಾ. ಸೋಂದಾ ಭಾಸ್ಕರ ಭಟ್ ಕಟೀಲು ಅವರು ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರು. ಮುನ್ನುಡಿಯಲ್ಲಿ ಅವರು ದಾಖಲಿಸಿರುವ ಮಾತುಗಳು: “ಭಾರತೀಯ ಜ್ನಾನ ಪರಂಪರೆ ಸರಿಸಾಟಿಯಿಲ್ಲದ್ದು. ಸಾರಸ್ವತ ಲೋಕಕ್ಕೆ ನಮ್ಮ ಪೂರ್ವಜರು ನೀಡಿದ ಈ ಕೊಡುಗೆಯೂ ಅದ್ಭುತವಾದದ್ದು. ಜ್ನಾನದಿಂದ ವಿಜ್ನಾನದ ವರೆಗೆ, ಲೌಕಿಕದಿಂದ ಅಲೌಕಿದದ ವರೆಗೆ, ವೇದಾಂತದಿಂದ ವ್ಯವಹಾರದ ವರೆಗೆ, ಶಸ್ತ್ರದಿಂದ ಶಾಸ್ತ್ರದ ವರೆಗೆ ಅವರ ಸಂಶೋಧನೆ ಸಾಗಿತ್ತು. ಗಣಿತ, ದರ್ಶನ, ವಾಸ್ತು, ಕಾವ್ಯ …. ಒಂದೇ, ಎರಡೇ …. ಇವೆಲ್ಲವೂ ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಬಳುವಳಿ. ಇವುಗಳ ಅರಿವು ನಮಗಿರಬೇಕಾದುದು ಅತ್ಯಾವಶ್ಯಕ. ಇಂತಹ ವಿಚಾರಗಳನು ಒಂದೆಡೆ ಸಂಗ್ರಹಿಸುವ ಪ್ರಯತ್ನದ ಫಲವಾಗಿ ಈ ಕೃತಿ ಮೂಡಿ ಬಂದಿದೆ."

ಪಾವಂಜೆಯ ಶ್ರೀ ಜ್ನಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಯವರಾದ ಡಾ. ಯಾಜಿ ನಿರಂಜನ ಭಟ್ಟ ಅವರು ಕೃತಿಯ ಬಗ್ಗೆ ಬರೆಯುತ್ತಾ, ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದ ಮಹಾನ್ ವಿದ್ವಾಂಸರ ಬಗ್ಗೆ ಹೀಗೆನ್ನುತ್ತಾರೆ: “ಸನಾತನ ಧರ್ಮವು ವೇದಗಳನ್ನೇ ಆಧಾರವಾಗಿರಿಸಿ, ಇಂದು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ವೇದಗಳು ಅತಿ ಪ್ರಾಚೀನವೆನಿಸಿದ ಬ್ರಾಹ್ಮೀ ಭಾಷೆಯಲ್ಲಿದ್ದು, ನೇರವಾಗಿ ಅರ್ಥೈಸಿಕೊಳ್ಳುವುದು ಸುಲಭವಲ್ಲ. ಅದಕ್ಕಾಗಿ ಸಂಸ್ಕೃತದಲ್ಲಿರುವ ವೇದಾಂಗಗಳು, ಇತಿಹಾಸ - ಪುರಾಣಾದಿಗಳ ಮೂಲಕ ವೇದಗಳ ಭಾವವನ್ನು ತಿಳಿದುಕೊಂಡು ಜೀವನ ಸಾರ್ಥಕ್ಯ ಪಡೆದುಕೊಳ್ಳಬೇಕು ಎಂಬುದಾಗಿ ಅನುಭವಿಗಳಾದ ಹಿರಿಯರು ತಿಳಿಸಿದ್ದಾರೆ. ಇಂದೂ ಬ್ರಾಹ್ಮೀ ಭಾಷೆಯನ್ನು ಅರಿತವರಾಗಿದ್ದು ಪರಿವ್ರಾಜಕರಾಗಿ, ಪ್ರಚಾರ ಬಯಸದೆ ಲೋಕೋದ್ಧಾರ ಕರ್ಮಗಳಲ್ಲಿ ತೊಡಗಿರುವ ಮಹಾತ್ಮರಿದ್ದಾರೆ.” ಡಿಸೆಂಬರ್ 2002ರಲ್ಲಿ ಪಾವಂಜೆಯಲ್ಲಿ ನಡೆದ ಪುಂಡಲೀಕ ಮಹಾಯಾಗವನ್ನು ನಿರ್ದೇಶಿಸಿದ್ದ, ಪೂರ್ವೊತ್ತರ ಮೀಮಾಂಸಕರಾದ ಶ್ರೀ ನಿತ್ಯಾನಂದರು ಅಂಥವರಲ್ಲೊಬ್ಬರೆಂದು ಅವರು ಉದಾಹರಿಸಿದ್ದಾರೆ.

ವೇದಗಳ ಬಗ್ಗೆ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಬರೆದವರನ್ನು ಪ್ರಸ್ತಾಪಿಸುತ್ತಾ, “ಆಂಗ್ಲಭಾಷೆಯನ್ನೇ ಅವಲಂಬಿಸಿ ಶಿಕ್ಷಣ ಪಡೆಯುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿಗೆ ನಮ್ಮ ಪ್ರಾಚೀನ ಗ್ರಂಥಗಳನ್ನು ಪರಿಚಯಿಸಲು ಅಂಥವರ ಲೇಖನಗಳು ಸಹಕಾರಿಯಾದವು” ಎಂದಿದ್ದಾರೆ. ಆದರೆ, ಅಗಾಧ ಜ್ನಾನನಿಧಿಯಾದ ವೇದಗಳನ್ನು ಅರ್ಥ ಮಾಡಿಕೊಳ್ಳಲು ಕೇವಲ ಓದುವಿಕೆ ಸಾಲದು; ಮಂತ್ರಗಳನ್ನು ಮನನ ಮಾಡಬೇಕು. ಇದಕ್ಕಿರುವ ದಾರಿ ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಅನುಷ್ಠಾನ ಎಂದು ತಿಳಿಸಿದ್ದಾರೆ. ಸನಾತನ ಧರ್ಮದ ಬಗೆಗಿನ ಹಲವಾರು ಪ್ರಶ್ನೆಗಳಿಗೆ ವಿವರಣೆ ಸಹಿತ ಉತ್ತರಗಳನ್ನು ನೀಡುವ ಈ ಹೊತ್ತಗೆಯನ್ನು ಓದಿ, ಹೆಚ್ಚೆಚ್ಚು ಜನರಲ್ಲಿ ನಮ್ಮ ಸನಾತನಧರ್ಮದ ಬಗ್ಗೆ ಆಸಕ್ತಿ ಮೂಡುವುದೆಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಈ ಕೃತಿಯಲ್ಲಿ ನಮ್ಮ ಸನಾತನ ಧರ್ಮದ ಬಗ್ಗೆ 31 ಲೇಖನಗಳಿವೆ: ಬೌದ್ಧಿಕ ಪಾರಮ್ಯದ ವೇದ ಸಂಸ್ಕೃತಿ; ವೇದ ಎಂದರೇನು?
ಅದಕ್ಕಿರುವ ಅನ್ಯಾನ್ಯ ಹೆಸರುಗಳು; ಋಗ್ವೇದ - ಪ್ರಪಂಚದ ಪ್ರಥಮ ಸಾಹಿತ್ಯ; ಯಜುರ್ವೇದದಲ್ಲಿ ನೂರೊಂದು ಶಾಖೆ; ವೇದಾನಾಂ ಸಾಮವೇದೋಸ್ಮಿ; ಅಥರ್ವವೇದ - ಐಹಿಕಾಮುಷ್ಮಿಕ ಫಲ; ಮಂತ್ರಗಳು ಮಾರ್ಗದರ್ಶಕ; ಮಂತ್ರಗಳು ಸಮಾಜಮುಖೀ; ವೇದಗಳಿಗೆ ಆರು ಅಂಗಗಳು; ವ್ಯಾಕರಣ ಕಾವ್ಯ ಪುರುಷನ ಮುಖ; ನಿರುಕ್ತ - ವೇದ ಪುರುಷನ ಶ್ರೋತ್ರ; ಅನಂತಾ ವೈ ಉಪನಿಷದಃ; ಉಪನಿಷತ್ತುಗಳ ಸಂದೇಶ; ಶಾಂತಿ ಮಂತ್ರಗಳು; ಪುರಾಣಗಳೆಷ್ಟು? ಪುರಾಣಗಳು ಪ್ರಾಚೀನ ಸಾಹಿತ್ಯ; ಪುರಾಣಗಳ ಕಿರುಪರಿಚಯ; ಸತ್ಕೃತಿಗಳಿಂದ ಮನುಕುಲೋನ್ನತಿ; ದಶಾವತಾರಗಳ ಹಿನ್ನೆಲೆ - ಮುನ್ನೆಲೆ; ಮನ್ವಂತರ - ಮನು - ಕಲ್ಪ ಇತ್ಯಾದಿ. ಜೊತೆಗೆ, ದಶಾವತಾರಗಳಲ್ಲಿ ಪ್ರತಿಯೊಂದು ಅವತಾರದ ಬಗ್ಗೆ ಕೊನೆಯ ಹತ್ತು ಲೇಖನಗಳು.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮ ಸನಾತನ ಧರ್ಮದ ಬಗ್ಗೆ ಪ್ರಾಥಮಿಕ ಜ್ನಾನ ಪಡೆಯಬೇಕೆಂದಿರುವ ಎಲ್ಲರಿಗೂ ಪ್ರವೇಶಿಕೆಯಂತಿದೆ ಈ ಪುಸ್ತಕ.