ಲೇಖಕರು: ಹಲವರು
ಪ್ರಕಾಶಕರು: ಕರ್ನಾಟಕ ಅರಣ್ಯ ಇಲಾಖೆ, ತುಮಕೂರು; ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ತಿಪಟೂರು
ಪ್ರಕಟಣೆ: 2002 ಪುಟಗಳು: 281 + 12 ವರ್ಣ ಬೆಲೆ: ನಮೂದಿಸಿಲ್ಲ
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. 69 ಪಾರಂಪರಿಕ ವೈದ್ಯರು ಮತ್ತು 37 ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು 19 ಸದಸ್ಯರಿದ್ದರು.
ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು ಬಳಸಿ ಜನರ ಆರೋಗ್ಯ ರಕ್ಷಿಸುತ್ತಿದ್ದ ಈ ಪದ್ಧತಿ ವ್ಯಾಪಕವಾಗಿ ಜನಬಳಕೆಯಲ್ಲಿತ್ತು. ಈ ಔಷಧಿ ಪದ್ಧತಿ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿತ್ತು. ಮಾತ್ರವಲ್ಲ, ಕಡಿಮೆ ಖರ್ಚಿನ, ಆಯುರಾರೋಗ್ಯವೃದ್ಧಿಯ ಮನೆಮದ್ದಿನ ಜೀವನಕ್ರಮವೂ ಆಗಿತ್ತು.
ಭಾರತಕ್ಕೆ ಬ್ರಿಟಿಷರ ಆಗಮನದ ನಂತರ, ಬಹುಪಾಲು ಜನರು ಪಾಶ್ಚಿಮಾತ್ಯ ಔಷಧಿ ಪದ್ಧತಿಯ ಅನುಸರಣೆಗೆ ತೊಡಗಿದ ಕಾರಣ, ನಮ್ಮ ಪಾರಂಪರಿಕ ಚಿಕಿತ್ಸಾ ಪದ್ಧತಿ ಕ್ಷೀಣಿಸಿ, ಕಣ್ಮರೆಯಾಗುವ ಹಂತ ತಲಪಿತು. ಆದರೆ, ನಮ್ಮ ಮಾತೆಯರು ಮತ್ತು ಪಾರಂಪರಿಕ ವೈದ್ಯರು ನಿರಂತರವಾಗಿ ಈ ಚಿಕಿತ್ಸಾ ಪದ್ಧತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಪದ್ಧತಿಯಲ್ಲಿ ಸಸ್ಯಗಳೇ ಆಧಾರಸ್ತಂಭವಾಗಿದ್ದು, ಕೆಲವು ಸಸ್ಯಗಳು ನಶಿಸಿದ್ದು, ಇನ್ನು ಕೆಲವು ವಿನಾಶದ ಅಂಚಿನಲ್ಲಿವೆ. ಆದ್ದರಿಂದ ಆರೋಗ್ಯ ರಕ್ಷಣೆಗಾಗಿ ಹಸಿರು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಹಾಗಾಗಿ, ಹಸಿರು ಸಂರಕ್ಷಣೆಯಿಂದ ಆರೋಗ್ಯವನ್ನು ಹಸಿರಾಗಿಡುವ ಉದ್ದೇಶದಿಂದ ಈ ಕೈಪಿಡಿಯನ್ನು ರಚಿಸಲು ನಿರ್ಧರಿಸಲಾಯಿತು.
ಈ ಕೈಪಿಡಿಯಲ್ಲಿರುವ ಮಾಹಿತಿ: ಅರಣ್ಯ ಮತ್ತು ಔಷಧಿ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ಉಪಯೋಗದ ಬಗ್ಗೆ ಸಂಕ್ಷಿಪ್ತ ವಿವರಣೆ; ಔಷಧಿರಹಿತ ಆರೋಗ್ಯ ರಕ್ಷಣಾಕ್ರಮಗಳಾದ ದಿನಚರ್ಯೆ, ಋತುಚರ್ಯೆ, ಸ್ವಸ್ಥವೃತ್ತ, ಆಚಾರ, ಆಹಾರ, ವಿಹಾರಗಳ ಬಗ್ಗೆ ಮಾಹಿತಿ; ಗರ್ಭಿಣಿ, ಬಾಣಂತಿ ಮತ್ತು ಮಕ್ಕಳು ಹಾಗೂ ವೃದ್ಧರ ಆರೈಕೆ.
ವಿವಿಧ ಜಾಡ್ಯಗಳನ್ನು 18 ವಿಭಾಗಗಳಾಗಿ ವಿಭಾಗಿಸಿ (ಜ್ವರದಿಂದ ಶುರು ಮಾಡಿ ಸೌಂದರ್ಯ ಸಂಬಂಧಿತ) ಪ್ರತಿಯೊಂದಕ್ಕೂ ಮೂಲಿಕಾ ಚಿಕಿತ್ಸೆಗಳನ್ನು ವಿವರಿಸಲಾಗಿದೆ. ರೋಗಗಳ ಕಾರಣ, ಲಕ್ಷಣ ಹಾಗೂ ಚಿಕಿತ್ಸೆಗಳ ಸಮಯದಲ್ಲಿ ಅನುಸರಿಸಬೇಕಾದ ಪಥ್ಯ ಮತ್ತು ಅಪಥ್ಯಗಳನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಈ ಕೈಪಿಡಿಯ ಮೌಲ್ಯ ಹೆಚ್ಚಿದೆ.
ಔಷಧಿ ಸಸ್ಯಗಳನ್ನು ನಾಶ ಮಾಡದೆ, ಮೂಲಿಕೆ ಸಂಗ್ರಹಿಸುವ ವಿಧಾನ ಮತ್ತು ಸರಳವಾಗಿ ಮನೆಯಲ್ಲಿ ಔಷಧಿಗಳನ್ನು ತಯಾರಿಸುವ ವಿಧಿ-ವಿಧಾನಗಳು ಕೈಪಿಡಿಯಲ್ಲಿವೆ. ಇದರ ವರ್ಣಚಿತ್ರಗಳು, ರೇಖಾಚಿತ್ರಗಳು, ಸಸ್ಯಗಳ ಸಸ್ಯಶಾಸ್ತ್ರೀಯ, ಸಂಸ್ಕೃತ ಮತ್ತು ಸ್ಥಳೀಯ ಹೆಸರುಗಳು ಸಸ್ಯಗಳನ್ನು ಗುರುತಿಸಲು ಸಹಾಯಕ. ಕೈಪಿಡಿಯ ಕೊನೆಯಲ್ಲಿರುವ ಸಸ್ಯಗಳ ಅಕಾರಾದಿ ಸೂಚಿ (ಪ್ರತಿಯೊಂದು ಸಸ್ಯ ಯಾವ ಕಾಯಿಲೆಯ ಚಿಕಿತ್ಸೆಗೆ ಸೂಕ್ತ ಎಂಬುದರ ಸಹಿತ) ಅತ್ಯಂತ ಉಪಯುಕ್ತ.
ಈ ಕೈಪಿಡಿಯ ರಚನೆಗಾಗಿ, ಪರಿಣಾಮಕಾರಿ ಚಿಕಿತ್ಸೆಗಳ ಸಂಗ್ರಹಣೆಗಾಗಿ ಪಾರಂಪರಿಕ ವೈದ್ಯರು ಮತ್ತು ನುರಿತ ತಜ್ನರ ಕಾರ್ಯಾಗಾರ ಸಂಘಟಿಸಲಾಗಿತ್ತು. ಅದರಲ್ಲಿ ಹಲವು ವೈವಿಧ್ಯಮಯ ಚಿಕಿತ್ಸೆಗಳ ಸಂಗ್ರಹ. ಅವುಗಳಲ್ಲಿ, ಕಾರ್ಯಾಗಾರದ ಭಾಗಿಗಳ ಒಮ್ಮತದ ಅಭಿಪ್ರಾಯದ ಅನುಸಾರ ಪರಿಣಾಮಕಾರಿ ಚಿಕಿತ್ಸೆಗಳನ್ನು ಆಯ್ದು, ಕೈಪಿಡಿಯಲ್ಲಿ ನೀಡಲಾಗಿದೆ.
ಗಮನಿಸಿ: ಇದರ ರಚನೆಗೆ ಕೊಡುಗೆ ನೀಡಿದವರು ಕರ್ನಾಟಕದ ಬಯಲು ಸೀಮೆಯ ಹತ್ತು ಜಿಲ್ಲೆಗಳ ಹಲವರು: ಅನುಭವಿ ಪಾರಂಪರಿಕ ವೈದ್ಯರು, ನುರಿತ ಸುಶಿಕ್ಷಿತ (ಕ್ವಾಲಿಫೈಡ್) ವೈದ್ಯರು ಮತ್ತು ತಜ್ನರು, ಸಂಘ ಸಂಸ್ಥೆಗಳ ಪರಿಣತರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ - ಇವರೆಲ್ಲರೂ ಒಟ್ಟಿಗೆ ಕುಳಿತು, ಹಲವು ದಿನಗಳ ಕಾಲ ಕೂಲಂಕಷವಾಗಿ ಚರ್ಚಿಸಿ, ವೈದ್ಯರ ಅನುಭವಗಳನ್ನು ದಾಖಲಿಸಿ, ಪರಿಷ್ಕರಿಸಿ, ಕ್ರೋಢೀಕರಿಸಿ, ತಜ್ನ ಆಯುರ್ವೇದ ವೈದ್ಯರ ನೆರವಿನಿಂದ, ಗ್ರಂಥಗಳ ಆಧಾರಗಳನ್ನು ಬಳಸಿ, ಈ ಚಿಕಿತ್ಸೆಗಳನ್ನು ದೃಢೀಕರಿಸಲಾಗಿದೆ. ಆದ್ದರಿಂದಲೇ ಇದೊಂದು ಅಮೂಲ್ಯ ಕೈಪಿಡಿ.