ಪರಿಚಯ22: ನಮ್ಮ ಊರಿನ ರಸಿಕರು

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು: ಐಬಿಎಚ್ ಪ್ರಕಾಶನ, ಬೆಂಗಳೂರು
ಪ್ರಕಟಣಾ ವರುಷ: 2006 (10ನೇ ಮುದ್ರಣ)      ಪುಟ: 147      ಬೆಲೆ: ರೂ.60/-

ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ.

ಪುಸ್ತಕದ ಮುನ್ನುಡಿ ಬರೆದವರು “ಮಂಕುತಿಮ್ಮನ ಕಗ್ಗ" ಖ್ಯಾತಿಯ ಮಾನ್ಯ ಡಿ. ವಿ. ಗುಂಡಪ್ಪನವರು. ಹಾಸ್ಯ ಪ್ರಜ್ನೆ ಮತ್ತು ಹಾಸ್ಯದ ಸ್ವರೂಪದ ಬಗ್ಗೆ ಮುನ್ನುಡಿಯಲ್ಲಿ ಬರೆಯುತ್ತಾ, ಪಾಶ್ಚಾತ್ಯ ಜನರ ಬದುಕಿನ ಹಾಸ್ಯಪ್ರಸಂಗಗಳು ವಾರ ವಾರವೂ ದಿನ ದಿನವೂ ಹೇಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಈ ಬಗೆಯ ಉಪಕಾರವು ನಮಗೆ ಶ್ರೀಮಾನ್ ರಾಮಸ್ವಾಮಯ್ಯಂಗಾರ್ಯರಂಥ ಲೇಖಕರಿಂದ ಆಗಬೇಕಾಗಿದೆ. ರಾಮಸ್ವಾಮ-ಯ್ಯಂಗಾರ್ಯರವರು ನಮ್ಮ ಸಮಾಜದ ಮುಖಕ್ಕೆ ಕನ್ನಡಿಯೆತ್ತಿ ಹಿಡಿದಿದ್ದಾರೆ. ಅದು ಪ್ರೀತಿ ಸಹಾನುಭೂತಿಗಳ ರಸದಿಂದ ಆಗಿರುವ ಕನ್ನಡಿ. ಆದಕಾರಣ ಅದರಲ್ಲಿಯ ಪ್ರತಿಬಿಂಬವು - ಅದರ ಮಚ್ಚೆಗಳೂ ಸೊಟ್ಟುಗಳೂ ಏನಿದ್ದರೂ ಅವೂ ಸೇರಿ - ಯಥಾರ್ಥವನ್ನು ಮೀರದೆ ಮನೋಹರವಾಗಿವೆ. ಅವರ ಬರವಣಿಗೆಯಲ್ಲಿ ಮೂರು ಗುಣಗಳನ್ನು ಕಾಣಬಹುದು: (೧) ಸಾಮಾನ್ಯ ಜನರ ಜೀವನದಲ್ಲಿ ಸಹಾನುಭೂತಿ (೨) ವರ್ಣನೆಯ ರೀತಿಯಲ್ಲಿ ಸ್ವಚ್ಛವೂ, ಲಲಿತವೂ ಆದ ಸ್ವಾಭಾವಿಕತೆ (೩) ಹಾಸ್ಯ ವಿನೋದಾವಕಾಶಗಳಲ್ಲಿ ಮರ್ಯಾದೆ ಮರೆಯದ ಕುತೂಹಲ. ಈ ಗುಣಗಳಿಂದ ಅವರ ಪುಸ್ತಕಗಳು ನಮ್ಮ ಹೊಸ ಸಾಹಿತ್ಯದಲ್ಲಿ ಮೇಲ್ತರಗತಿಗೆ ಸೇರತಕ್ಕುವಾಗಿವೆ.”

ಮೊದಲ ಅಧ್ಯಾಯದಲ್ಲಿ ಗೊರೂರರು ನೀಡುವ ಹಳ್ಳಿಯ ಹಿರಿಯಳೊಬ್ಬಳ ಚಿತ್ರಣ ಹೀಗಿದೆ: “ತಿರುಮಲಮ್ಮ ಬೆಳಿಗ್ಗೆ ಆರು ಗಂಟೆ ಆಗುವುದರೊಳಗೆ ಊರು ಒಂದು ಸುತ್ತು ಸುತ್ತುತ್ತಾಳೆ. ಅವಳಿಗೆ ಊರಿನ ವರ್ತಮಾನ ತಿಳಿಯದ್ದೇ ಇಲ್ಲ. ಹುಡುಗರು ಅವಳನ್ನು ನಮ್ಮೂರಿನ “ರೂಟರ್ ಏಜೆನ್ಸಿ” ಎಂದು ಕರೆಯುತ್ತಾರೆ. ತಿರುಮಲಮ್ಮ ಎಲ್ಲರಿಗೂ ಬೇಕಾದವಳು. ಎಲ್ಲರ ಕಷ್ಟದಲ್ಲಿಯೂ “ಅಯ್ಯೋ ಪಾಪ” ಎನ್ನುವವಳು. ತಿರುಮಲಮ್ಮ ರಾತ್ರಿ ಕೂಡ ಊರು ಒಂದು ಸುತ್ತು ಸುತ್ತುತ್ತಾಳೆ. ರಾತ್ರಿ ಬೆಳದಿಂಗಳಿರಲಿ, ಕತ್ತಲೆಯಿರಲಿ, ಒಂದು ಸೀಮೆ-ಎಣ್ಣೆಯ ಬುಡ್ಡಿಯನ್ನು ಹತ್ತಿಸಿಕೊಂಡು ಸೆರಗಿನಿಂದ ಅದನ್ನು ಮುಚ್ಚಿಕೊಂಡು ಊರ ಸುತ್ತಾ ತಿರುಗಿ ಬಿಡುತ್ತಾಳೆ. ಅವಳ ಕೈಯಲ್ಲಿ ಬುಡ್ಡಿ ಇದ್ದರೆ ಎಂತಹ ಗಾಳಿ ಬಂದರೂ ಅದು ಆರಿ ಹೋಗುವುದಿಲ್ಲ!"

ಇನ್ನೊಂದು ಉದಾಹರಣೆ: "ನಮ್ಮೂರಿಗೆಲ್ಲಾ ನರಸೇಗೌಡನೇ ಹಿರಿಯನೆಂದು ಕಾಣುತ್ತದೆ. ಅವನಿಗಿಂತ ೨-೩-೪ ವರ್ಷ ಚಿಕ್ಕವರಾದವರೂ ನಮ್ಮ ಊರಿನಲ್ಲಿ ಅನೇಕರಿದ್ದಾರೆ. ನರಸೇಗೌಡ ಬಹಳ ದುಃಖವನ್ನು ಕಂಡವನಾದರೂ ಮನುಷ್ಯ ಸ್ವಭಾವ ಸುಗುಣದಲ್ಲಿ ಅವನಿಗೆ ಇನ್ನೂ ನಂಬಿಕೆ ಕಡಿಮೆ ಆಗಿಲ್ಲ. ಯಾವಾಗಲೋ ಯಾರೋ ಅವನಿಗೆ ಮಾಡಿದ್ದಿರಬಹುದಾದ ಸಹಾಯ, ಪ್ರೇಮದ ಹೆಂಡತಿಯ ನೆನಪು, ಸತ್ತ ಸ್ನೇಹಿತರೊಂದಿಗೆ ಮಳೆಗಾಲದಲ್ಲಿ ಬೆಂಕಿಯ ಸುತ್ತ ಕಳೆದ ದಿನಗಳು - ಇವುಗಳೆಲ್ಲ ಅವನಿಗೆ ಜೀವನದ ಸುಖಕರಗಳಾದ ಭಾಗಗಳನ್ನು ಆಗಾಗ್ಗೆ ಜ್ನಾಪಕಕ್ಕೆ ತರುತ್ತವೆ. ಈಗ ಅವನಿಗೆ ಹಿಂದಲಂತೆ ಬಂದೂಕವನ್ನು ಹೆಗಲಿನ ಮೇಲೆ ಹೊತ್ತುಕೊಂಡು ಬೇಟೆಯಾಡುವುದಕ್ಕಾಗಲೀ ಅಥವಾ ನೇಗಿಲಿನಲ್ಲಿ ಉಳುವುದಕ್ಕಾಗಲಿ ಆಗುವುದಿಲ್ಲ. ಆದರೆ ಉರಿನ ಸಮೀಪದ ಕಾಡಿನ ಗುಡ್ಡದ ಮಗ್ಗುಲಲ್ಲಿ, ದನ ಕಾಯುತ್ತಿರುವ ಒಕ್ಕಲಿಗರ ಹುಡುಗ ಹುಡುಗಿಯರು ಅವನ ಸುತ್ತ ಕುಳಿತಾಗ, ಅವನೂ ಓಬೀರಾಯನ ಕಾಲದ ಕತೆಗಳನ್ನೆಲ್ಲಾ ಅವರಿಗೆ ಹೇಳಿ ಅವರ ಬೇಸರಿಕೆಯನ್ನು ಹೋಗಲಾಡಿಸುತ್ತಾನೆ."

ಎರಡನೆಯ ಅಧ್ಯಾಯದ ಆರಂಭದಲ್ಲಿಯೇ ಲೇಖಕರು ಹೀಗೆ ಬರೆದಿದ್ದಾರೆ: "ನಮ್ಮ ಊರಿನವರೆಲ್ಲಾ ಬಹಳ ರಸಿಕರು. ಅಲ್ಲಿ ವಿನೋದಪ್ರಿಯರಲ್ಲದವರು ಯಾರೂ ಸಿಕ್ಕುವುದಿಲ್ಲ. ಕೋಪಿಷ್ಠರಾಗಲೀ ಮುಖವನ್ನು ಗಂಟು ಹಾಕಿಕೊಳ್ಳುವವರಾಗಲಿ ಅಲ್ಲಿಗೆ ಬಂದರೆ ಕೂಡಲೇ ಮಾಯವಾಗಿ ಬಿಡುತ್ತಾರೆ ಅಥವಾ ಮುಂಗೋಪ ಬಿಟ್ಟು ಎಲ್ಲರಂತೆ ತಾವೂ ನಗಲು ಪ್ರಾರಂಭಿಸುತ್ತಾರೆ.” ಪುಸ್ತಕದ ಉದ್ದಕ್ಕೂ ಲೇಖಕರು ದಾಖಲಿಸಿರುವ ಹಲವಾರು ವ್ಯಕ್ತಿಚಿತ್ರಗಳು, ಘಟನೆಗಳು ಮತ್ತು ಪ್ರಸಂಗಗಳು ಈ ಮಾತನ್ನು ಮತ್ತೆಮತ್ತೆ ಓದುಗರಿಗೆ ಮನದಟ್ಟು ಮಾಡುತ್ತವೆ. ಓದುತ್ತಾ ಹೋದಂತೆ, ಈಗ ಯಾವ ಹಳ್ಳಿಯಲ್ಲಿಯೂ ಇಂತಹ ಬದುಕು ಉಳಿದಿಲ್ಲವಲ್ಲ ಎಂಬ ವಿಷಾದವೂ ನಮ್ಮಲ್ಲಿ ಮೂಡುತ್ತದೆ.