ಲೇಖಕಿ (ಇಂಗ್ಲಿಷ್ ಮೂಲ): ಪರ್ಲ್ ಎಸ್. ಬಕ್
ಕನ್ನಡಕ್ಕೆ: ಪಾರ್ವತಿ ಜಿ. ಐತಾಳ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಮೊದಲ ಮುದ್ರಣ: 2011, ಪುಟಗಳು: 310, ಬೆಲೆ: ರೂ.195/-
“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ.
ರೈತ ವಾಂಗ್ ಲುಂಗನ ಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ ಮೀರಿ ದುಡಿಯುತ್ತಾನೆ. ತಮ್ಮ ಜಮೀನಿನ ಮಣ್ಣಿಗೆ ವಾಂಗ್ ಲುಂಗ್ ಮತ್ತು ಓಲನ್ ಸುರಿಸುವ ಬೆವರೇ ಬಂಗಾರವಾಗುತ್ತದೆ. ಕ್ರಮೇಣ ಬೆವರಿಳಿಸಿ ಗಳಿಸಿದ ಹಣದಿಂದ ಇನ್ನಷ್ಟು ಜಮೀನು ಖರೀದಿಸಿ ದೊಡ್ಡ ಜಮೀನ್ದಾರ ಎನಿಸಿಕೊಳ್ಳುತ್ತಾನೆ.
ಇದಕ್ಕೆ ತದ್ವಿರುದ್ಧವಾಗಿ ವಾಂಗ್ ಲುಂಗ ಬಡವನಾಗಿದ್ದಾಗ ಊರಿನ ಜಮೀನ್ದಾರರಾಗಿದ್ದ ಹುವಾಂಗರ ಮನೆತನವು ತನ್ನ ಸಿರಿವಂತಿಕೆಯ ಕೊಬ್ಬಿನಿಂದ ದುಂದುವೆಚ್ಚ ಮಾಡುತ್ತಾ ಪತನದತ್ತ ಸಾಗುತ್ತದೆ. ಆ ಮನೆತನದವರು ತಮ್ಮ ವಿಸ್ತಾರವಾದ ಜಮೀನನ್ನು ತುಂಡುತುಂಡಾಗಿ ಮಾರುತ್ತಾ ಕಳೆದುಕೊಳ್ಳುತ್ತಾರೆ. ಅದೇ ಜಮೀನನ್ನು ವಾಂಗ್ ಲುಂಗ್ ತನ್ನ ದುಡಿಮೆಯ ಹಣದಿಂದ ಖರೀದಿಸುತ್ತಾ ಭೂಮಾಲೀಕನಾಗುವ ಚಿತ್ರಣ ಕಾದಂಬರಿಯಲ್ಲಿ ಹದವಾಗಿ ಮೂಡಿಬಂದಿದೆ. ವಾಂಗ್ ಲುಂಗ್‌ನಲ್ಲಿ ಶ್ರೀಮಂತಿಕೆ ತುಂಬಿತುಳುಕಿದರೂ ಆತ ಕೊನೆಯ ವರೆಗೂ ಮಣ್ಣೇ ತನ್ನ ಸರ್ವಸ್ವ ಎಂದು ನಂಬಿ ಬಾಳುವ ಚಿತ್ರಣ ಮನಮುಟ್ಟುತ್ತದೆ.
ಇದನ್ನು ಅನುವಾದಿಸಿರುವ ಪಾರ್ವತಿ ಜಿ. ಐತಾಳ್, ಕಾದಂಬರಿಯ ಎರಡು ಪ್ರಧಾನ ಪಾತ್ರಗಳ ಬಗ್ಗೆ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: “ವಾಂಗ್ ಲುಂಗ್ ಮಾನವ ಸಹಜವಾದ ದೌರ್ಬಲ್ಯಗಳನ್ನು ಮೀರಿದವನೆಂದು ಕಾದಂಬರಿಯು ಅವನ ಪಾತ್ರವನ್ನು ವೈಭವೀಕರಿಸದೆ ಇರುವುದು ಆ ಪಾತ್ರವನ್ನು ವಾಸ್ತವಕ್ಕೆ ಹತ್ತಿರವಾಗಿಸಿದ ಅಂಶ. ಆತ ಮೃದುಹೃದಯಿ, ಸತ್ಯಸಂಧ, ಮುಗ್ಧ, ಪ್ರಾಮಾಣಿಕ, ನ್ಯಾಯನಿಷ್ಠ, ಶ್ರಮಜೀವಿ, ಎಲ್ಲವೂ ಹೌದು. ಬಡತನದ ದಿನಗಳಲ್ಲಿ ಮದುವೆಯಾಗಲು ಒಂದು ಹೆಣ್ಣು ಸಿಕ್ಕದೆ, ಹುವಾಂಗರ ದೊಡ್ಡ ಮನೆಯಲ್ಲಿ ಗುಲಾಮಳಾಗಿದ್ದ ತೀರಾ ಕುರೂಪಿಯಾದ ಓಲನಳನ್ನು ಮದುವೆಯಾಗುತ್ತಾನೆ ವಾಂಗ್‌ಲುಂಗ. ಆದರೆ ಅವಳು ನೀಡಿದ ಲೈಂಗಿಕ ಸಾಂಗತ್ಯವು ಅವನಿಗೆ ತುಂಬು ತೃಪ್ತಿಯನ್ನು ಕೊಡುತ್ತದೆ. ಮಾತ್ರವಲ್ಲದೆ, ಓಲನ್ ತನ್ನ ಸಾಮರ್ಥ್ಯ, ಚಾತುರ್ಯ, ಚಾಕಚಕ್ಯತೆ, ಪರಿಶ್ರಮಗಳಿಂದ ಅವನಿಗೆ ಒಂದು ಉತ್ತಮ ಕೌಟುಂಬಿಕ ಜೀವನವನ್ನು ಒದಗಿಸುತ್ತಾಳೆ. ಆದರೆ ವಾಂಗ್ ಲುಂಗ್ ಶ್ರೀಮಂತನಾದ ನಂತರ, ದುಡಿತವು ಕಡಿಮೆಯಾಗಿ ಬಿಡುವಿನ ವೇಳೆ ಹೆಚ್ಚಾದಾಗ ಓಲನಳ ಕುರೂಪವು ಅವನನ್ನು ಕುಟುಕಲಾರಂಭಿಸುತ್ತದೆ. ಆಗ ಅವನ ಜೀವನದಲ್ಲಿ ಆಕಸ್ಮಿಕವಾಗಿ ಪ್ರವೇಶಿಸುವ ಬೆಲೆವೆಣ್ಣು ಲೋಟಸ್ ತನ್ನ ಸೌಂದರ್ಯದಿಂದ ಅವನಿಗೆ ಮೋಡಿ ಮಾಡಿದಾಗ ಅವನು ಅವಳ ಬಗೆಗಿನ ಆಕರ್ಷಣೆಯ ಸುಳಿಯಲ್ಲಿ ಸಿಲುಕುತ್ತಾನೆ ಮತ್ತು ಓಲನಳನ್ನು ಕಡೆಗಣಿಸುತ್ತಾನೆ. ಆದರೆ ಮಣ್ಣಿನೊಂದಿಗಿನ ಆತನ ಬಾಂಧವ್ಯವು ಅವನನ್ನು ಲೋಟಸಳ ಸೆಳೆತದಿಂದ ಅತ್ಯಲ್ಪ ಕಾಲದಲ್ಲಿ ಬಿಡುಗಡೆಗೊಳಿಸಿದ ನಂತರ ಆತ ತಾನು ಓಲನಳನ್ನು ಕಡೆಗಣಿಸಿದ್ದಕ್ಕಾಗಿ ನೊಂದು ಪರಿತಪಿಸುತ್ತಾನೆ. ಓಲನಳ ಕುರೂಪದ ಬಗ್ಗೆ ಅವನಲ್ಲಿ ಅನೈಚ್ಛಿಕವಾಗಿ ಅಸಹ್ಯ ಭಾವನೆ ಬಂದರೂ ಅವಳು ಸಾಯುವ ತನಕ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ವಾಂಗ್ ಲುಂಗನ ತಾಳ್ಮೆಯ ಬಗ್ಗೆ ಅಚ್ಚರಿಯೆನಿಸುತ್ತದೆ….
ಓಲನಳದ್ದಂತೂ ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಅವಳ ಬಾಹ್ಯ ಪರಿಸ್ಥಿತಿಗಳು ಅವಳನ್ನು ತಾಳ್ಮೆಯ ಪ್ರತಿಮೂರ್ತಿಯನ್ನಾಗಿಸಿದರೂ ಅವಳ ಒಳಗೆ ಉರಿಯುವ ಬೆಂಕಿಯಿದೆ. ಛಲವಿದೆ. ಶಕ್ತಿಯೂ ಇದೆ. ಅವಳು ಎಲ್ಲ ಸ್ತ್ರೀಯರಂತಲ್ಲ. ಎಳೆಯ ವಯಸ್ಸಿನಿಂದಲೇ ತಂದೆತಾಯಿಗಳಿಂದ ಶ್ರೀಮಂತರಿಗೆ ಮಾರಲ್ಪಟ್ಟು ಗುಲಾಮಗಿರಿಯ ಬವಣೆಗಳನ್ನು ಮಿತಿಮೀರಿ ಸಹಿಸಿಕೊಂಡ ಅವಳಿಗೆ ದುಡಿಮೆಯೆಂದರೆ ನೀರು ಕುಡಿದಂತೆ ಸರಾಗ. ಬಸುರಿಯಾಗಿ ಹೆರುವ ಕ್ಷಣದ ತನಕವೂ ಹೊಲದಲ್ಲಿ ದುಡಿದು ಸೀದಾ ಮನೆಯೊಳಗೆ ಹೋಗಿ ಒಬ್ಬಳೇ ಕುಳಿತು ಹೆರಿಗೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿಕೊಂಡು ಮಗುವನ್ನು ಮಲಗಿಸಿ ಸಂಜೆ ಆಗುವುದರೊಳಗೆ ಮತ್ತೆ ಹೊಲಕ್ಕೆ ಬಂದವಳು ಅವಳು. ಕಷ್ಟಕಾಲದಲ್ಲಿ ವಾಂಗ್ ಲುಂಗನ ಹೆಗಲಿಗೆ ಹೆಗಲು ಕೊಟ್ಟವಳು. ಬರಗಾಲವು ಅವರನ್ನು ನಡುಗಿಸಿದಾಗ ವಾಂಗ್ ಲುಂಗ್ ಎದೆಗುಂದಿದರೂ ಓಲನ್ ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತಾಳೆ. ಹೃದಯದಲ್ಲಿ ಮೃದುತ್ವವಿದ್ದರೂ, ಅನಿವಾರ್ಯ ಸಂದರ್ಭಗಳಲ್ಲಿ ಭಾವುಕತೆಯನ್ನು ಮೆಟ್ಟಿನಿಂತು ವ್ಯಾವಹಾರಿಕತೆಗೆ ಪ್ರಾಧಾನ್ಯ ನೀಡುವ ಜಾಣ್ಮೆಯೂ ಅವಳಲ್ಲಿದೆ. ಅವಳು ಶಕ್ತಿಯ ಪ್ರತೀಕ. ಸೌಂದರ್ಯದ ಗಂಧಗಾಳಿಯಿಲ್ಲದೆಯೇ ಬದುಕಿನಲ್ಲಿ ಅದ್ಭುತ ಯಶಸ್ಸು ಸಾಧಿಸುವ ವಿಶಿಷ್ಟ ಗುಣಗಳ ಓಲನ್ ಓದುಗರ ಮನಸ್ಸನ್ನು ಗೆಲ್ಲುತ್ತಾಳೆ ಮತ್ತು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾಳೆ."
“ಗುಡ್ ಅರ್ತ್” ಕಾದಂಬರಿಯ ಲೇಖಕಿ ಪರ್ಲ್ ಎಸ್. ಬಕ್ ಹುಟ್ಟಿದ್ದು ಅಮೇರಿಕದಲ್ಲಿ 26 ಜೂನ್ 1892ರಂದು. ಪೂರ್ವ ಚೈನಾದ ಚೆನ್ ಚಿಯಾಂಗಿನಲ್ಲಿ ಬೆಳೆದ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಚೀನಾದ ಷಾಂಗೈನಲ್ಲಾಯಿತು. ಅಮೇರಿಕಾದ ಕಾಲೇಜಿನಿಂದ ಪದವಿ ಗಳಿಸಿ, 1917ರಲ್ಲಿ ಜಾನ್ ಎಲ್. ಬಕ್ ಅವರನ್ನು ವಿವಾಹವಾದರು. ಅನಂತರ ಚೀನಾಕ್ಕೆ ಮರಳಿ, ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದರು. ಇದೇ ಅವಧಿಯಲ್ಲಿ ಅಮೇರಿಕಾದ ಕಾರ್ನೆಟ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು. 1930ರಲ್ಲಿ ಪ್ರಕಟವಾದ “ಈಸ್ಟ್ ವಿಂಡ್ ವೆಸ್ಟ್ ವಿಂಡ್” ಇವರ ಮೊದಲ ಕಾದಂಬರಿ. ಅನಂತರ ಕಿನ್ ಫೋಕ್, ಡ್ರಾಗನ್ ಸೀಡ್, ಸಟೊನ್, ದ ಮದರ್, ದ ಎಕ್ಸೈಲ್ ಇತ್ಯಾದಿ ಮೂವತ್ತಕ್ಕೂ ಅಧಿಕ ಕಾದಂಬರಿಗಳನ್ನು ಬರೆದರು ಪರ್ಲ್ ಎಸ್. ಬಕ್. 1931ರಲ್ಲಿ ಇವರು ಬರೆದ “ಗುಡ್ ಅರ್ತ್” ಕಾದಂಬರಿಗೆ ಪುಲಿಟ್ ಝರ್ ಪ್ರಶಸ್ತಿ ಲಭಿಸಿತು. 1938ರಲ್ಲಿ ಇದು ಸಾಹಿತ್ಯಲೋಕದ ಅತ್ಯುನ್ನತ ಪ್ರಶಸ್ತಿಯಾದ ನೋಬೆಲ್ ಪಾರಿತೋಷಕ ಗಳಿಸಿತು. ಪರ್ಲ್ ಎಸ್. ಬಕ್ 6 ಮಾರ್ಚ್ 1973ರಂದು ವಿಧಿವಶರಾದರು.
ತಮ್ಮ ಬದುಕಿನ ಮಹತ್ವದ ವರುಷಗಳಲ್ಲಿ ಪರ್ಲ್ ಎಸ್. ಬಕ್ ಚೀನಾದ ಅಂದಿನ ರಾಜಧಾನಿ ನ್ಯಾನ್‌ಕಿಂಗಿನಲ್ಲಿ ಬಾಳಿದವರು. ಅದಲ್ಲದೆ, ಚೀನಾದ ಕೃಷಿ ಪ್ರಧಾನ ಪ್ರದೇಶವಾಗಿದ್ದ ಉತ್ತರ ಚೀನಾದ ಕೃಷಿಕ ಸಮುದಾಯದೊಂದಿಗೆ ಐದು ವರುಷ ಒಡನಾಡಿದ್ದರು. ಆದ್ದರಿಂದಲೇ ಅವರಿಗೆ ಅಲ್ಲಿನ ತಮ್ಮ ಖಾಸಾ ಅನುಭವಗಳ ಆಧಾರದಿಂದ ಈ ಕಾದಂಬರಿ ಹೆಣೆಯಲು ಸಾಧ್ಯವಾಯಿತು. ಚೀನಾದ ರೈತ ಸಮುದಾಯದ ಬದುಕಿನ ಬಗ್ಗೆ ಅವರ ಕುತೂಹಲ, ಮೆಚ್ಚುಗೆ ಹಾಗೂ ಒಳನೋಟಗಳು ಈ ಕಾದಂಬರಿಯಲ್ಲಿ ಜೀವಂತಿಕೆ ತುಂಬಿಕೊಳ್ಳಲು ಕಾರಣವಾಗಿವೆ. ಈ ಕಾದಂಬರಿಯ 1953ರಲ್ಲಿ ಪ್ರಕಟವಾದ 26ನೇ ಮುದ್ರಣದಲ್ಲಿ ಪರ್ಲ್ ಎಸ್. ಬಕ್ ಬರೆದ ಮುನ್ನುಡಿಯು ಇದರ ರಚನೆಗೆ ಪ್ರೇರಣೆ ಏನೆಂಬುದನ್ನು ದಾಖಲಿಸಿದೆ.
“ಗುಡ್ ಅರ್ತ್”ನ ಕನ್ನಡಾನುವಾದದ ಬಗ್ಗೆ ಒಂದು ಮಾತು ಹೇಳಲೇ ಬೇಕು. ಇಂಗ್ಲಿಷ್ ಭಾಷೆಯಿಂದ ಪಾರ್ವತಿ ಜಿ. ಐತಾಳ್ ಅವರು ಕನ್ನಡಕ್ಕೆ ಭಾಷಾಂತರಿಸಿದ್ದರೂ ಓದುವಾಗ ಇದೊಂದು ಅನುವಾದಿತ ಕಾದಂಬರಿ ಎನ್ನಿಸುವುದೇ ಇಲ್ಲ. ಸುಲಲಿತ ಅನುವಾದವು ಕನ್ನಡದ್ದೇ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ.
ಬದುಕಿನ ಬಗ್ಗೆ ಪರಿಪಕ್ವ ಚಿತ್ರಣ ನೀಡುವ ಕಾದಂಬರಿ “ಗುಡ್ ಅರ್ತ್”. ಮಣ್ಣಿನ ಮಕ್ಕಳ ಜೀವನ ಪ್ರೀತಿಯನ್ನು ಮನಮುಟ್ಟುವಂತೆ ಚಿತ್ರಿಸಿರುವ ಕೃತಿ. ಇದರ ಪಾತ್ರಗಳು, ಘಟನೆಗಳು ಹಾಗೂ ಜೀವನಕ್ರಮಗಳು ಅಪ್ಪಟ ಚೀನೀಯ. ಆದರೂ ಅವುಗಳ ಅಂತಃಸತ್ವ ದೇಶ-ಕಾಲಾತೀತ ಆಗಿರುವುದರಿಂದ ಈ ಕಾದಂಬರಿಯು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ. ಇಂದಿಗೂ ನಿಗೂಢವಾಗಿರುವ ಗ್ರಾಮೀಣ ಚೀನಾದ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಈ ಕಾದಂಬರಿ ಬದುಕನ್ನು ಪ್ರೀತಿಸುವ ಎಲ್ಲರಿಗೂ ಆಪ್ತವಾಗುತ್ತದೆ.