ಲೇಖಕರು: ರಾಧೇಶ ತೋಳ್ಪಾಡಿ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2010, ಪುಟಗಳು: 72, ಬೆಲೆ: ರೂ. 50/-
ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ.
ಇಂತಹ ಹಳೆಯ ಹಾಗೂ ಹೊಸ ಮಕ್ಕಳ ಕವನಗಳು ಸಿ.ಡಿ.ಗಳಲ್ಲಿ ಸಿಗುವಂತಾದಾಗ ಅವನ್ನು ಕೇಳಬೇಕು, ಮಕ್ಕಳಿಗೆ ಕಲಿಸಬೇಕು ಎಂಬವರಿಗೆಲ್ಲ ಹಣ್ಣು ಸಿಕ್ಕಂತಾಯಿತು. ಇನ್ನಷ್ಟು ಹೊಸ ಮಕ್ಕಳ ಕವನಗಳು ಬೇಕೆಂಬವರಿಗೆ "ಹಲೋ ಹಲೋ ಚಂದಮಾಮ” ಎಂಬ ನಲುವತ್ತು ಕವನಗಳ ಪಟ್ಟ ಸಂಕಲನವನ್ನು ನೀಡಿದ್ದಾರೆ ಕವಿ ಹಾಗೂ ಉಪನ್ಯಾಸಕ ರಾಧೇಶ ತೋಳ್ಪಾಡಿ. “ಪ್ರಜಾವಾಣಿ" ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ, ಈ ಪುಸ್ತಕದಲ್ಲಿರುವ ಇವರ “ರಂಗನತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ್” ಕವನ ಪ್ರಥಮ ಬಹುಮಾನ ಪಡೆದಿವೆ.
ಪುಸ್ತಕದ ಮುನ್ನುಡಿಯಲ್ಲಿ ಮಕ್ಕಳ ಕವನಗಳ ಬಗ್ಗೆ ವಿಮರ್ಶಕ ಮತ್ತು ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ ಹೀಗೆ ಬರೆದಿದ್ದಾರೆ, "ಹೊಸ ಕಾಲದ ಲಯ, ನಿರೀಕ್ಷೆಗಳು ಬೇರೆಯೇ ಇವೆ. ಇಂಗ್ಲಿಷ್, ಹಿಂದಿಯ ಹಾಡುಗಳ ಮೋಡಿಗೆ ನಮ್ಮ ಮಕ್ಕಳು ಒಳಗಾಗುವರಾದರೆ ಕನ್ನಡ ಹಾಡುಗಳು ಅವರನ್ನು ಸೆಳೆಯಬೇಕಲ್ಲವೇ? ಮಕ್ಕಳಿಗೆ ಕವಿತೆ ಓದುತ್ತಿದ್ದಂತೆ ಅದು “ಕಾಣಬೇಕು", "ಕೇಳಬೇಕು", "ಕುಣಿಯ ಬೇಕೆನ್ನಿಸಬೇಕು” -ಅರಿವೇ ಆಗದಂತೆ!”
ಅಂಥ ಹಲವು ಮಕ್ಕಳ ಕವನಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ ಕವಿ ರಾಧೇಶ ತೋಳ್ಪಾಡಿ. ಮಕ್ಕಳನ್ನು ಉದ್ದೇಶಿಸಿ ಪುಸ್ತಕದ ಆರಂಭದಲ್ಲಿ ಅವರು ಬರೆದಿರುವ ಮಾತುಗಳು: “....ಇಕೋ, ಈ ಬುಟ್ಟಿಯಲ್ಲಿ 32 ಕವಿತೆಗಳೂ, 10 ಶಿಶು ಪ್ರಾಶಗಳೂ ಇವೆ. ನಿನಗೆ ಇಷ್ಟವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಇವು - ಮಿಂಚುಹುಳ, ಕಾಗೆ, ಕೋಳಿ, ಪುಟಾಣಿ ಪಾಪೂ, ಮಳೆ, ಬಾನು, ಬೆಟ್ಟಗಳನ್ನು ನೋಡ್ತಾ ನೋಡ್ತಾ ಅರಳಿಕೊಂಡವು. ನಮ್ಮ ನಿತ್ಯ ವ್ಯವಹಾರದ ಗಡಿಬಿಡಿಗಳ ನಡುವೆ ಬಿಡುವು ಮಾಡಿಕೊಂಡು, ಇವನ್ನೆಲ್ಲ ನೋಡ್ತಾ ಇದ್ರೆ - ಏನೆಲ್ಲ ಇವೆ ಇಲ್ಲಿ! ಏನೇನೆಲ್ಲ ನಮ್ಮ ಸುತ್ತಾನೇ ನಡೆಯುತ್ತಾ ಇರುತ್ತವೆ ಅಂತ ಅಚ್ಚರಿಯಾಗುತ್ತೆ, ಅಲ್ವಾ?”
ಈ ಸಂಕಲನದ "ಪಾಪೂ ಮೇಲೆ ಪಾಪೂ ಪದ್ಯ”ದ ಈ ಸಾಲುಗಳ ಲಯ ಹಾಗೂ ಗೇಯಗುಣ ಗಮನಿಸಿ:
ಪಿಳಿಪಿಳಿ ದ್ರಾಕ್ಷೀ ಕಣ್ಣಿಗೆ ಕಾಡಿಗೆ,
ಗಲ್ಲಕೆ ದೃಷ್ಟಿಯ ಬೊಟ್ಟು
ಉಂಗುರ ಉಂಗುರ ಗುಂಗುರು ಕೂದಲು
ಕಟ್ಟಲು ಪುಟಾಣಿ ಜುಟ್ಟು!
ಕೆಂಪ್ ಕೆಂಪಾಗಿರೋ ಟೊಮೇಟೋ ಹಣ್ಣಿನ್
ಥರಾನೇ ಪಾಪೂ ಕೆನ್ನೆ
“ತಿಂದ್ ಬಿಡಬೇಡ” ಅನ್ನೋ ಹಾಗಿದೆ
ಗೋಲೀ ಕಣ್ಣಿನ ಸನ್ನೆ!
“ಚಿಟ್ಟೆ ಪುಟಾಣಿಗೊಂದು ಪರಿಸರ ಪಾಠ” ಕವನದ ಸಾಲುಗಳು ಹಿರಿಯರನ್ನೂ ಚಿಂತನೆಗೆ ಹಚ್ಚುತ್ತವೆ. ಉದಾಹರಣೆಗೆ:
ಚಿಟ್ಟೆ ಪುಟಾಣಿ, ಚಿಟ್ಟೆ ಪುಟಾಣಿ
ಕಣಜದ ಹುಳುವನು ಕೆಣಕದಿರು
ಸೇಡಿನ ಜಾಡು
ಹಡೆವುದು ಕೇಡು
ಮನಸಿಗೆ ವಿಷವನು ಉಣಿಸದಿರು
"zನ ಗೋಳು” ಎಂಬ ಪದ್ಯ, ಮಕ್ಕಳ ಕವನಗಳ ಹೊಸ ಸಾಧ್ಯತೆಗಳನ್ನು ತೋರಿಸುತ್ತದೆ. ಈ ಸಾಲುಗಳ ಗಮ್ಮತ್ತು ಗಮನಿಸಿ:
ನನ್ನನ್ಯಾರೋ ಝೀಬ್ರಾ ಮಾಡಿ
ಝೂನಲ್ಲಿಡ್ತಾರೆ!
ಮಾತಾಡಿದ್ರೆ ತುಟಿಗಳ ಹೊಲ್ದು
ಝಿಪ್ ಎಳೀತಾರೆ!
"ಹಲೋ ಹಲೋ ಚಂದಮಾಮ” ಸಂಕಲನದ "ಬರ್ತಾನೆ ಚಂದ್ರ" ಕವನ ಇಲ್ಲಿದೆ:
ಮಕ್ಕಳಿಗೂಟವ ಮಾಡಿಸಲಿಕ್ಕೆ
ಮೈಯನು ತಟ್ಟಿ ಮಲಗಿಸಲಿಕ್ಕೆ
ಚೆಂದದ ಜೋಗುಳ ಹಾಡಿಸಲಿಕ್ಕೆ
ಬರ್ತಾನೆ ಚಂದ್ರ
ಅಜ್ಜೀ ಕತೆಗಳ ಕೇಳಿಸಲಿಕ್ಕೆ
ಕಾಣದ ಲೋಕಕೆ ತೇಲಿಸಲಿಕ್ಕೆ
ಊಹೆಯ ಕಣ್ಣನು ಅರಳಿಸಲಿಕ್ಕೆ
ಬರ್ತಾನೆ ಚಂದ್ರ
ಹುಲ್ಲನು ಹುಲ್ಲನು ಮೊಳೆಯಿಸಲಿಕ್ಕೆ
ಕಾಯಿ ಪಲ್ಲೆಗಳ ಬೆಳೆಯಿಸಲಿಕ್ಕೆ
ಬಳ್ಳಿಗೆ ಮರಗಳ ಕಾಣಿಸಲಿಕ್ಕೆ
ಬರ್ತಾನೆ ಚಂದ್ರ
ಹೂವಿಗೆ ಬಣ್ಣವ ಬಳಿಯುವುದಕ್ಕೆ
ಹಣ್ಣಿಗೆ ಸವಿಯನು ತುಂಬುವುದಕ್ಕೆ
ಹಸು ಹಾಲಮೃತವಾಗಿಸಲಿಕ್ಕೆ
ಬರ್ತಾನೆ ಚಂದ್ರ
ಕತ್ತಲ ಬೇಸರ ಕಳೆಯುವುದಕ್ಕೆ
ನೋವಿಗೆ ಔಷಧ ಲೇಪಿಸಲಿಕ್ಕೆ
ಹಿಗ್ಗಿನ ಕಡಲನು ಉಕ್ಕಿಸಲಿಕ್ಕೆ
ಬರ್ತಾನೆ ಚಂದ್ರ
ಮನಸನು ಮೌನಕೆ ಒಪ್ಪಿಸಲಿಕ್ಕೆ
ಕನಸಿಗೆ ಸೇತುವೆ ಬೆಸೆಯುವುದಕ್ಕೆ
ಯಾರಿಗೋ ಹಾದಿಯ ತೋರಿಸಲಿಕ್ಕೆ
ಬರ್ತಾನೆ ಚಂದ್ರ
ಅಮ್ಮನ ಮಡಿಲನು ಬೆಳಗಿಸಲಿಕ್ಕೆ
ಅಪ್ಪನನಪ್ಪ ಆಗಿಸಲಿಕ್ಕೆ
ಮುಪ್ಪಿಗೆ ಬಾಲ್ಯವ ಮರಳಿಸಲಿಕ್ಕೆ
ಬರ್ತಾನೆ ಚಂದ್ರ
ಅವರನ್ನವರಿಗೇ ಬಿಟ್ಟು ಬಿಡೋಕೆ
ಮಾತೇ ಆಡದೆ ಹೇಳುವುದಕ್ಕೆ
ಬೆರಗನ್ನಷ್ಟೇ ಉಳಿಸುವುದಕ್ಕೆ
ಬರ್ತಾನೆ ಚಂದ್ರ