ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ, ಧಾರವಾಡ
ಪುಟಗಳು: 71 ಬೆಲೆ: ರೂ.30/- ಪ್ರಕಟಣೆಯ ವರುಷ:2009
ದಕ್ಷಿಣ ಕನ್ನಡದ ಪುತ್ತೂರಿನಿಂದ ಪ್ರಕಟವಾಗುವ “ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ 51 ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು ರೈತರ ಅನುಶೋಧನೆಗಳು. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರೇ ಕಂಡುಕೊಂಡ ಈ ಅನುಭವ ಆಧಾರಿತ ವಿಧಾನಗಳನ್ನು ಇತರ ರೈತರು ಅಳುಕಿಲ್ಲದೆ ಬಳಸಬಹುದು.
“ಒಕ್ಕಲುತನದಲ್ಲಿ ಎದುರಾಗುವ ಬೇರೆಬೇರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೈತರ ಅನುಶೋಧನೆ ಹಾಗೂ ಅನುಭವವನ್ನು ಒಂದೆಡೆ ದಾಖಲಿಸುವುದು ಇವತ್ತಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ” ಎಂಬ ಯೋಚನೆಯೇ ಈ ಪುಸ್ತಕ ಪ್ರಕಟಣೆಗೆ ಪ್ರೇರಣೆ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ, ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ.
“ಇದು ನಿಜಕ್ಕೂ ಒಂದು ರೈತೋಪಯೋಗಿ ಕೆಲಸ. “ಒಬ್ಬ ಅಜ್ಜ ಅಥವಾ ಅಜ್ಜಿ ತೀರಿಹೋಗುವುದೆಂದರೆ ಒಂದು ಹಳೆ ವಾಚನಾಲಯ ಸುಟ್ಟು ಹೋದಂತೆ” ಎಂಬ ಮಾರ್ಮಿಕ ಮಾತಿದೆ. ಹಾಗಾಗಲು ಬಿಡದೆ ಹಿರಿಯ ವ್ಯಕ್ತಿಗಳ ಜನೋಪಯೋಗಿ ಅನುಭವಸಾರವನ್ನು ಸಂಗ್ರಹಿಸಿ ಬೆಳಕಿಗೊಡ್ಡೋಣ. ಈ ಕೆಲಸ ಎಲ್ಲೆಡೆಯಲ್ಲಿ, ಸಾಧ್ಯವಿರುವ ಎಲ್ಲರಿಂದಲೂ ನಡೆಯುವಂತಾಗಲಿ” ಎಂಬ ಆಶಯವನ್ನು ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ ಶ್ರೀಪಡ್ರೆ, ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ, ಪುತ್ತೂರು.
ಈ ಪುಸ್ತಕದಿಂದ ಆಯ್ದ ಕೆಲವು ಮಾಹಿತಿ ಶೀರ್ಷಿಕೆಗಳು ಇಲ್ಲಿವೆ:
1) ಮಂಗಕಾಟಕ್ಕೆ “ಸೀರೆ ಚೀಲ”ದ ಸ್ಟೇ – ಮಹಾಲಕ್ಷೀ ಹೆಗಡೆ ಅವರಿಂದ ಮಾಹಿತಿ
2) ಹಂದಿಕಾಟಕ್ಕೆ ತಲೆಗೂದಲಿನ ಸ್ಟೇ – ಹೆಚ್.ವಿ, ದಿವ್ಯಾ ಅವರಿಂದ ಮಾಹಿತಿ
3) ಗೋಣಿಗೆ ಬೆನ್ನೆಲುಬು ಈ ಸ್ಟಾಂಡ್ – ನಾ. ಕಾರಂತ ಪೆರಾಜೆ ಅವರಿಂದ ಮಾಹಿತಿ
ಈ ಸ್ಟಾಂಡನ್ನು ಆವಿಷ್ಕರಿಸಿದ ಮಹಾಬಲೇಶ್ವರ ಭಟ್ ಅವರ ವಿಳಾಸ: ನಿಟಿಲೆ, ಅಂಚೆ: ಕೋಡಪದವು, ಬಂಟ್ವಾಳ ತಾ. 574269