ಸಸ್ಯಗಳನ್ನು ರೋಗ ಹಾಗೂ ಕೀಟಗಳಿಂದ ರಕ್ಷಿಸಲಿಕ್ಕಾಗಿ ಬಳಸುವ ಪೀಡೆನಾಶಕಗಳು ಮನುಷ್ಯರಿಗೆ ಮಾರಕವಾಗುತ್ತವೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಉದಾಹರಣೆಗೆ ಎಂಡೋಸಲ್ಫಾನ್. ಆದರೆ, ಈ ಪೀಡೆನಾಶಕಗಳು ಸಸ್ಯಗಳಿಗೂ ಮಾರಕವಾಗುತ್ತವೆ ಎಂದೀಗ ಸ್ಪಷ್ಟವಾಗಿದೆ.
ಈ ಪೀಡೆನಾಶಕಗಳು ಸಸ್ಯಗಳಲ್ಲಿ ಕೆಲವು ರಾಸಾಯನಿಕಗಳು ಉತ್ಪಾದನೆಯಾಗಲು ಕಾರಣವಾಗುತ್ತವೆ. ಈ ರಾಸಾಯನಿಕಗಳು ಸಸ್ಯಗಳ ಪ್ರೊಟೀನುಗಳು, ಲಿಪಿಡುಗಳು, ಶರ್ಕರಪಿಷ್ಟಗಳು ಮತ್ತು ಡಿಎನ್ಎಗಳಿಗೂ ಹಾನಿ ಮಾಡುತ್ತವೆ ಎಂದು ತಿಳಿದು ಬಂದಿದೆ. ಇಮಿಡಾ ಕ್ಲೊಪ್ರಿಡ್ ಎಂಬ ಪೀಡೆನಾಶಕವು ಅಫಿಡುಗಳು ಮತ್ತು ಮಿಡತೆಗಳನ್ನು ಕೊಲ್ಲುತ್ತದೆ. ಆದರೆ ಅದು ಭತ್ತದ ಸಸಿಗಳು ಕಂದುಜಿಗಿಹುಳುವಿನ ದಾಳಿಗೆ ಸುಲಭವಾಗಿ ಬಲಿಯಾಗುವಂತೆ ಮಾಡುತ್ತದೆ.
ಪೀಡೆನಾಶಕಗಳ ಇಂತಹ ವಿಷಕಾರಿ ಪರಿಣಾಮಗಳನ್ನು ಕಡಿಮೆ ಮಾಡಬಲ್ಲ ನೈಸರ್ಗಿಕ ರಾಸಯನಿಕಗಳನ್ನು ವಿಜ್ನಾನಿಗಳು ಹುಡುಕುತ್ತಲೇ ಇದ್ದಾರೆ. ಅಮೃತಸರದ ಗುರು ನಾನಕ ದೇವ ವಿಶ್ವವಿದ್ಯಾಲಯದ ಸಂಶೋಧನಾ ತಂಡಕ್ಕೆ ಈ ಹುಡುಕಾಟದಲ್ಲಿ ಯಶಸ್ಸು ಸಿಕ್ಕಿದೆ. ಅದು ಎಪಿಬ್ರಾಸ್ಸಿನೊಲೈಡ್ (ಇಬಿಎಲ್) ಎಂಬ ಸಸ್ಯಮೂಲದ ಹಾರ್-ಮೋನನ್ನು (ಪ್ರಚೋದಕವನ್ನು) ಗುರುತಿಸಿದೆ. ಭತ್ತದ ಬೀಜಗಳನ್ನು ಕ್ಲೊರ್ ಪೈರಿಫೊಸ್ (ಕ್ಲೊರಿನ್-ಯುಕ್ತ ಪೀಡೆನಾಶಕ) ಇದರ ವಿಷಕಾರಿ ಪರಿಣಾಮಗಳಿಂದ ಇಬಿಎಲ್ ರಕ್ಷಿಸಬಲ್ಲದು.
ಇಬಿಎಲ್ ಅನ್ನು ಸ್ಥಳೀಯ ಸಸ್ಯವೊಂದರಿಂದ (ಈಗ್ಲೆ ಮಾರ್ಮೆಲೊಸ್) ಬೇರ್ಪಡಿಸಲಾಗಿದೆ. ಇದು ಬ್ರಾಸ್ಸಿನೊಸ್ಟಿರೊಯಿಡ್ ವರ್ಗಕ್ಕೆ ಸೇರಿದ ರಾಸಾಯನಿಕ. ಇವು ಚಳಿ, ಬರಗಾಲ ಮತ್ತು ವಿಷ ಇಂತಹ ಪರಿಸರದ ಆತಂಕ ಹಾಗೂ ಅಪಾಯಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ. ಭತ್ತದ ಬೆಳೆಗೆ ಪ್ರಯೋಗಿಸಿದ ಪೀಡೆನಾಶಕಗಳು ಉತ್ಪಾದಿಸಿದ ವಿಷಗಳಿಂದ ಭತ್ತದ ಸಸಿಗಳನ್ನು ಇದು ಹೇಗೆ ರಕ್ಷಿಸುತ್ತದೆ ಎಂಬುದನ್ನು ಈ ವರೆಗೆ ಅಧ್ಯಯನ ಮಾಡಿರಲಿಲ್ಲ. ಸಸ್ಯಗಳು ಮತ್ತು ಮನುಷ್ಯರ ಮೇಲೆ ಕ್ಲೊರ್ ಪೈರಿಫೊಸಿನಂತಹ ಪೀಡೆನಾಶಕಗಳ ಕೆಟ್ಟ ಪರಿಣಾಮಗಳನ್ನು ಎದುರಿಸುವ ಹೊಸ ವಿಧಾನಗಳನ್ನು ಇಂತಹ ಸಸ್ಯಮೂಲದ ರಾಸಾಯನಿಕಗಳು ತೋರಿಸಿಕೊಡಬಲ್ಲವು; ಆ ಮೂಲಕ ಸುಸ್ಥಿರ ಕೃಷಿಗೆ ಸಹಾಯವಾಗಬಲ್ಲವು ಎಂಬುದು ವಿಜ್ನಾನಿಗಳ ನಿರೀಕ್ಷೆ.
ಕ್ಲೊರ್ ಪೈರಿಫೊಸನ್ನು ಹಲವು ಬೆಳೆಗಳ ಕೀಟಹತೋಟಿಗೆ ಬಳಸಲಾಗುತ್ತಿದೆ. ಭತ್ತದ ಕಾಂಡಕೊರಕ, ರಕ್ಕಸನೊಣಗಳು, ಡಾಮ್ಸೆಲ್ ನೊಣಗಳು ಮತ್ತು ಲೇಸ್ವಿಂಗುಗಳ ನಿಯಂತ್ರಣಕ್ಕೆ ಇದನ್ನು ಸಿಂಪಡಿಸುತ್ತಾರೆ. ಆ ಕೀಟಗಳ ನರಮಂಡಲಕ್ಕೆ ಹಾನಿ ಮಾಡುವ ಮೂಲಕ ಇದು ಕೀಟಗಳನ್ನು ಕೊಲ್ಲುತ್ತದೆ. ಆದ್ದರಿಂದ ಇದು ಮನುಷ್ಯರು ಮತ್ತು ಎಳೆ ಮಕ್ಕಳಲ್ಲಿಯೂ ಇಂತಹದೇ ದುಷ್ಪರಿಣಾಮ ಉಂಟು ಮಾಡಬಹುದೆಂಬ ಆತಂಕ.
ಆ ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಹೀಗೆ ಮಾಡಿದರು: ಕ್ಲೊರ್ ಪೈರಿಫೊಸಿನಿಂದ ಒದ್ದೆಯಾದ ಹೊಯಿಗೆ (ಮರಳು)ಯಲ್ಲಿ ಪುಸಾ ಬಸುಮತಿ – ೧ ತಳಿಯ ಭತ್ತದ ಬೀಜಗಳನ್ನು ಬಿತ್ತಿದರು. ಅವುಗಳಲ್ಲಿ ಅರೆಪಾಲು ಬೀಜಗಳನ್ನು ಸಸ್ಯಮೂಲದ ಹಾರ್-ಮೋನ್ ಇಬಿಎಲ್ಲಿನ ದ್ರಾವಣದಲ್ಲಿ ಮುಳುಗಿಸಲಾಗಿತ್ತು. ಅನಂತರ ಹುಟ್ಟಿದ ಭತ್ತದ ಸಸಿಗಳನ್ನು ೧೨ ದಿನಗಳ ಬಳಿಕ ಕಿತ್ತು ತೆಗೆಯಲಾಯಿತು. ಸಸ್ಯಮೂಲದ ಹಾರ್-ಮೋನ್ ಚಿಕಿತ್ಸೆ ನೀಡದಿದ್ದ ಭತ್ತದ ಸಸಿಗಳಲ್ಲಿ ಪೀಡೆನಾಶಕದಿಂದಾಗಿ ಈ ದುಷ್ಪರಿಣಾಮಗಳು ಕಂಡುಬಂದವು: ಹರಿತ್ತಿನ ಪ್ರಮಾಣ ಹಾಗೂ ಬೇರು ಮತ್ತು ಕಾಂಡದ ಉದ್ದ ಕಡಿಮೆಯಾಗಿತ್ತು. ಪೀಡೆನಾಶಕವು ಉತ್ಪಾದಿಸುವ ಹಾನಿಕರ ರಾಸಾಯನಿಕವನ್ನು “ಎದುರಿಸುವ” ಆಂಟಿ ಓಕ್ಸಿಡೆಂಟ್ ಕಿಣ್ವಗಳ ಚಟುವಟಿಕೆಯೂ ಕಡಿಮೆಯಾಗಿತ್ತು. ಆದರೆ, “ಇಬಿಎಲ್ ಚಿಕಿತ್ಸೆ” ನೀಡಲಾಗಿದ್ದ ಸಸಿಗಳಲ್ಲಿ ಈ ದುಷ್ಪರಿಣಾಮಗಳು ಕಂಡು ಬರಲಿಲ್ಲ. ಮಾತ್ರವಲ್ಲ, ಅವುಗಳಲ್ಲಿ ಪ್ರೊಲೈನಿನ ಪ್ರಮಾಣ ಅಧಿಕವಾಗಿತ್ತು. ಇದು ಕೋಶಭಿತ್ತಿಗಳನ್ನು ರಕ್ಷಿಸುವ ಪ್ರಧಾನ ಸಸ್ಯಪ್ರೊಟೀನ್. ಅದಲ್ಲದೆ, ಪೀಡೆನಾಶಕವು ಉತ್ಪಾದಿಸುವ ಹಾನಿಕರ ರಾಸಾಯನಿಕಗಳನ್ನು ಇದು ನಾಶಪಡಿಸುತ್ತದೆ. ಜೊತೆಗೆ, ಭತ್ತದ ಸಸಿಗಳಲ್ಲಿ ಪೀಡೆನಾಶಕದಿಂದಾಗಿ ಹಾನಿಗೊಳಗಾದ ಕೋಶಗಳನ್ನು ಬೇಗನೇ ರಿಪೇರಿ ಮಾಡುತ್ತದೆ.
ಸಂಶೋಧನಾ ತಂಡದ ಮುಖ್ಯಸ್ಥರಾದ ಪ್ರತಾಪ ಕುಮಾರ ಪ್ಯಾಟಿ ಅವರ ಪ್ರಕಾರ, ಈ ಸಂಶೋಧನೆಯು ಬೆಳೆಗಳ ಕೃಷಿಯಲ್ಲಿ ಪೀಡೆನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲಿಕ್ಕಾಗಿ ಕೆಲವು ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಹಕಾರಿ.