ಅನೂಪನಿಗೆ ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಹಠ - ಫುಟ್ಬಾಲ್, ಇಸ್ಪೀಟ್, ವಿಡಿಯೋ ಆಟಗಳು ಎಲ್ಲದರಲ್ಲಿಯೂ. ಆಟಗಳಲ್ಲಿ ಸೋಲುವುದನ್ನು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಆತ ಎಲ್ಲ ಆಟಗಳಲ್ಲಿಯೂ ಏನೇನೋ ತಂತ್ರ ಮಾಡಿ ಗೆಲ್ಲುತ್ತಿದ್ದ. ತನ್ನ ಮೋಸದಾಟಗಳು ಇತರರಿಗೆ ತಿಳಿಯೋದಿಲ್ಲ ಎಂಬುದವನ ಯೋಚನೆ.
ಆದರೆ, ಒಂದು ಪಂದ್ಯಾಟದಲ್ಲಿ ಅವನ ಯಾವ ತಂತ್ರವೂ ನಡೆಯಲಿಲ್ಲ. ಯಾಕೆಂದರೆ, ಆ ಪಂದ್ಯಾಟದ ತೀರ್ಪುಗಾರರು ಇವನಂತಹ ಮೋಸಗಾರರಿಗೆ ಮೋಸ ಮಾಡಲು ಅವಕಾಶವೇ ನೀಡಬಾರದೆಂದು ನಿರ್ಧರಿಸಿದ್ದರು. ಅದಕ್ಕಾಗಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಪ್ರತಿಯೊಬ್ಬ ಆಟಗಾರನ ಪ್ರತಿಯೊಂದು ನಡೆಯನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದ್ದರು.
ಅನೂಪನಿಗೆ ಆ ಪಂದ್ಯಾಟದಲ್ಲಿ ಉಸಿರು ಕಟ್ಟಿದಂತಾಯಿತು. ಅವನು ಉತ್ತಮ ಆಟಗಾರನೇನೋ ಹೌದು. ಆದರೆ ಅವನಿಗೆ ಯಾವುದರಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಎಲ್ಲ ಸ್ಪರ್ಧೆಗಳಲ್ಲಿಯೂ ಮೊದಲ ಅಥವಾ ಎರಡನೆಯ ಸುತ್ತಿನಲ್ಲಿಯೇ ಅವನು ಸೋತು ಹೋದ. ಆ ದಿನ, ಪಂದ್ಯಾಟ ಮುಗಿದ ನಂತರ ಅವನು ಆಟದ ಬಯಲಿನಲ್ಲಿಯೇ ಒಂದು ಗಂಟೆ ಸುಮ್ಮನೆ ಕುಳಿತು ಚಿಂತಿಸಿದ. ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಅವನ ಹಠ ಮೊದಲ ಬಾರಿ ಮಣ್ಣು ಮುಕ್ಕಿತ್ತು. ಅವನು ಅವತ್ತೇ ನಿರ್ಧರಿಸಿದ: ಎಲ್ಲದರಲ್ಲಿಯೂ ತಾನೇ ಗೆಲ್ಲಬೇಕೆಂಬ ದುರಾಶೆ ಬೇಡವೆಂದು. ಕೆಲವೊಮ್ಮೆ ಸೋಲುವುದು ಒಳ್ಳೆಯದೇ ಎಂದು ಅವನಿಗೆ ಅರ್ಥವಾಯಿತು. ಯಾಕೆಂದರೆ ಆಗ ಅವನು ಇನ್ನೂ ಚೆನ್ನಾಗಿ ಆಟವಾಡಲು ಕಲಿಯಲೇ ಬೇಕಾಗುತ್ತದೆ.