ರಸಗುಲ್ಲಾ ಚಪ್ಪರಿಸಿದವರಿಗೇ ಗೊತ್ತು ಅದರ ಮಜಾ: ಬಾಯೊಳಗೆ ಹಾಕಿದೊಡನೆ ನಾಲಗೆಯ ಕಣಕಣವೂ ಜುಮ್ಮೆನಿಸುವ ಅನುಭವ.
ಇಂತಹ ರಸಗುಲ್ಲಾದ ಭೌಗೋಳಿಕ ಸೂಚಕದ ಹಕ್ಕುಸಾಧನೆ ಬಗ್ಗೆ ಈಗ ಎದ್ದಿದೆ ಗುಲ್ಲು. ಯಾಕೆಂದರೆ, ಇದರ ಭೌಗೋಳಿಕ ಸೂಚಕ (ಜಿಯಾಗ್ರಾಫಿಕಲ್ ಇಂಡಿಕೇಷನ್: ಜಿಐ) ನೀಡಬೇಕೆಂಬ ಅರ್ಜಿ ಬಂದಿರುವುದು ಒಡಿಶಾ (ಒರಿಸ್ಸಾ) ರಾಜ್ಯದಿಂದ. ದೇಶದ ಉದ್ದಗಲದಲ್ಲಿರುವ ಬಂಗಾಳಿ ಸಿಹಿತಿಂಡಿಗಳ ಅಂಗಡಿಗಳಿಂದ ರಸಗುಲ್ಲಾ ಖರೀದಿಸಿದವರೆಲ್ಲ “ಇದು ಬಂಗಾಳಿ ಸಿಹಿತಿಂಡಿ” ಎಂದು ನಂಬಿದ್ದರು.
ಆದರೆ ಆ ಗ್ರಹಿಕೆ ಸರಿಯಲ್ಲ. ರಸಗುಲ್ಲಾದ ತವರು ಬಂಗಾಳದ ಪಕ್ಕದ ಒಡಿಶಾ ರಾಜ್ಯದ ಭುವನೇಶ್ವರ ಮತ್ತು ಕಟಕ್ ನಗರಗಳ ನಡುವಿನ ಹೆದ್ದಾರಿಯ ಪಕ್ಕದ ಪುಟ್ಟ ಹಳ್ಳಿ ಪಹಲಾ. ಅಲ್ಲಿ ಅದರ ಹೆಸರು ಖೀರ್ ಮೋಹನಾ; ಅದನ್ನು ಪುರಿಯ ಜಗನ್ನಾಥ ದೇವರಿಗೆ ನೈವೇದ್ಯವಾಗಿ ೧೮ನೆಯ ಶತಮಾನದಿಂದಲೇ ಅರ್ಪಿಸಲಾಗುತ್ತಿದೆ. ಅಂದರೆ, ಕೊಲ್ಕತಾದ ನೊಬಿನ್ ಚಂದ್ರದಾಸ್ ರಸಗುಲ್ಲಾವನ್ನು ತಯಾರಿಸಿ ಮಾರಾಟ ಮಾಡತೊಡಗುವ ಒಂದು ಶತಮಾನ ಮುಂಚೆಯೇ ಒಡಿಶಾದಲ್ಲಿ ರಸಗುಲ್ಲಾ ಜನಪ್ರಿಯವಾಗಿತ್ತು.
ಒಡಿಶಾ ರಾಜ್ಯದ ಅತಿಸಣ್ಣ ಮತ್ತು ಮಧ್ಯಮ (ಗಾತ್ರದ) ಉದ್ದಿಮೆಗಳ ಇಲಾಖೆಯು ರಸಗುಲ್ಲಾದ ಹಕ್ಕುಸಾಧನೆ ಮಾಡಲು ಮುಂದಡಿ ಇಟ್ಟಾಗ ಇದೆಲ್ಲ ಗುಲ್ಲು ಶುರು. ಅನಂತರ ಮಾಧ್ಯಮ, ಪತ್ರಿಕೆ, ವೆಬ್ಸೈಟುಗಳಲ್ಲಿ ಹಾಗೂ ಟ್ವಿಟರಿನಲ್ಲಿ ಇಲಾಖೆಯ ಪರ ಹಾಗೂ ವಿರೋಧ ಅಭಿಪ್ರಾಯಗಳ ಸಾಲುಸಾಲು.
ಭೌಗೋಳಿಕ ಸೂಚಕವು ಒಂದು ಬೌದ್ಧಿಕ ಸೊತ್ತಿನ ಹಕ್ಕು (ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್). ಭಾರತದಲ್ಲಿ ಇದನ್ನು ನೀಡುವ ಪ್ರಾಧಿಕಾರ ಚೆನ್ನೈಯ ಭೌಗೋಳಿಕ ಸೂಚಕ ರಿಜಿಸ್ಟ್ರಿ. ಅದು ಈ ವರೆಗೆ ಇಂತಹ ೨೩೬ ವಸ್ತುಗಳಿಗೆ ಇದನ್ನು ನೀಡಿದೆ.
ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಜಗತ್ತಿಗೆ ಎತ್ತಿ ತೋರಿಸುವುದೇ ಭೌಗೋಳಿಕ ಸೂಚಕದ ಉದ್ದೇಶ. ಹಾಗಾಗಿ, ಭೌಗೋಳಿಕ ಸೂಚಕ ಪಡೆದ ವಸ್ತುವಿನ ಹೆಸರಿಗೆ ಅದರ ಮೂಲ ಸ್ಥಳದ ಹೆಸರು ತಗಲಿಸುವ ಹಕ್ಕು ಅರ್ಜಿದಾರನಿಗೆ ಲಭ್ಯ. ಎಲ್ಲ ಉತ್ಪನ್ನಗಳು, ಮುಖ್ಯವಾಗಿ ಕೃಷಿ ಉತ್ಪನ್ನಗಳು, ತಮ್ಮ ಮೂಲ ಸ್ಥಳದಿಂದ ಪಡೆದ ಅಥವಾ ಮೂಲ ಸ್ಥಳದ ಹವಾಮಾನ, ಮಣ್ಣು ಅಥವಾ ನೀರಿನಿಂದ ಪ್ರಭಾವಿತವಾದ ಗುಣಲಕ್ಷಣಗಳನ್ನು ಹೊಂದಿವೆ. ಉದಾಹರಣೆಗೆ ಡಾರ್ಜಿಲಿಂಗ್ ಚಹಾ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಇತ್ಯಾದಿ.
ಶ್ರೀಲಂಕಾದ ಚಹಾ ತೋಟದವರು, ತಮ್ಮ ತೋಟದಲ್ಲಿ ಬೆಳೆದ ಚಹಾವನ್ನು ಡಾರ್ಜಿಲಿಂಗ್ ಚಹಾ ಎಂಬ ಹೆಸರಿನಲ್ಲಿ ಮಾರಾಟ ಮಾಡಿದರೆ, ಡಾರ್ಜಿಲಿಂಗಿನ ಚಹಾ ತೋಟದವರು ಅದನ್ನು ವಿರೋಧಿಸಬೇಕಾದದ್ದು ಅಗತ್ಯ. ಆದರೆ, ಎಲ್ಲ ವಸ್ತುಗಳಿಗೂ ಭೌಗೋಳಿಕ ಸೂಚಕ ಪಡೆಯುವುದರಿಂದ ಪ್ರಯೋಜನ ಇದೆಯೇ? ಉದಾಹರಣೆಗೆ ವೆಟ್ ಗ್ರೈಂಡರನ್ನು ಹಲವಾರು ನಗರಗಳಲ್ಲಿ ಉತ್ಪಾದಿಸಲಾಗುತ್ತಿದೆ. ಹಾಗೆಯೇ ಮಲ್ಲಿಗೆಯನ್ನು ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಇವಕ್ಕೆಲ್ಲ ಆಯಾ ನಗರದ ಅಥವಾ ಜಿಲ್ಲೆಯ ಹೆಸರನ್ನು ಭೌಗೋಳಿಕ ಸೂಚಕ ಎಂದು ತಗಲಿಸಿದರೆ ಏನು ಲಾಭ?
ಸಾವಿರಾರು ಹಳ್ಳಿ ಅಥವಾ ನಗರಗಳಲ್ಲಿ ಲಾಡು, ಪೇಡ, ಹಲೀಮ್ ಇಂತಹ ತಿಂಡಿಗಳ ತಯಾರಿ ಮತ್ತು ಮಾರಾಟ ಸಾಮಾನ್ಯ. ಆದ್ದರಿಂದ ಸಮೃದ್ಧ ವಿವಿಧತೆ: ಬಣ್ಣ, ಆಕಾರ, ಗಾತ್ರ, ತೂಕ, ತಯಾರಿಗೆ ಬಳಸಿದ ವಸ್ತುಗಳಲ್ಲಿ. ಎಲ್ಲ ಸ್ಥಳಗಳಲ್ಲಿಯೂ ಇವನ್ನು ತಯಾರಿಸುವ ಕಾರಣ, ಯಾವುದೋ ಒಂದು ಗುಣಲಕ್ಷಣದ ಆಧಾರದಿಂದ ಇವಕ್ಕೆಲ್ಲ ಭೌಗೋಳಿಕ ಸೂಚಕ ಪಡೆದರೆ ಯಾವುದೇ ಲಾಭವಿಲ್ಲ. ಅದರಿಂದಾಗಿ, ಅವುಗಳ ಮಾರಾಟದಲ್ಲಿ ಹೆಚ್ಚಳವಾದದ್ದಕ್ಕೆ ಯಾವುದೇ ಪುರಾವೆ ಇಲ್ಲ.
ಆದ್ದರಿಂದ, ಸಿಕ್ಕಿಸಿಕ್ಕಿದ ವಸ್ತುಗಳಿಗೆಲ್ಲ ಭೌಗೋಳಿಕ ಸೂಚಕ ಪಡೆಯಬೇಕಾಗಿಲ್ಲ. ಒಂದು ಸ್ಥಳದಲ್ಲಿ ಬೆಳೆಯಲಾಗುವ / ತಯಾರಿಸಲಾಗುವ ಮತ್ತು ಆ ಸ್ಥಳದಿಂದ ಪಡೆದ ವಿಶೇಷತೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ವಸ್ತುವಿಗೆ ಭೌಗೋಳಿಕ ಸೂಚಕ ಪಡೆದರೆ ಮಾತ್ರ ಪ್ರಯೋಜನ. ಉದಾಹರಣೆಗೆ ಕೊಲ್ಹಾಪುರ ಚಪ್ಪಲಿ. ಅಂತಹದೇ ಚಪ್ಪಲಿ ಬೇರೆ ಕಡೆ ತಯಾರಿಸಿ, ಮಾರಾಟ ಶುರು ಮಾಡಿದರೆ ಕೊಲ್ಹಾಪುರದ ಚಪ್ಪಲಿ ಉದ್ಯಮಕ್ಕೆ ದೊಡ್ಡ ನಷ್ಟವಾದೀತು. ಅದನ್ನು ತಡೆಯಲು ಅಲ್ಲಿನ ಚಪ್ಪಲಿಗೆ ಭೌಗೋಳಿಕ ಸೂಚಕ ಪಡೆಯುವುದು ಅಗತ್ಯ.
ಒಂದು ವಿಷಯ ಗಮನಿಸಿ: ಮೈಸೂರು ರೇಷ್ಮೆಯಂತಹ ಒಂದು ವಸ್ತುವಿಗೆ ಭೌಗೋಳಿಕ ಸೂಚಕ ಪಡೆದು ಸುಮ್ಮನಿದ್ದರೆ, ಅದೊಂದು ದಾಖಲೆಯಾಗಿ ಉಳಿಯುತ್ತದೆ, ಅಷ್ಟೇ. ಬದಲಾಗಿ, ಭೌಗೋಳಿಕ ಸೂಚಕದ ಆಧಾರದಿಂದ ಪರಿಣಾಮಕಾರಿ ಮಾರಾಟ ತಂತ್ರಗಳನ್ನು ರೂಪಿಸಿ, ಮಾರಾಟದಲ್ಲಿ ಹೆಚ್ಚಳ ಸಾಧಿಸಿದರೆ ಭೌಗೋಳಿಕ ಸೂಚಕ ಪಡೆದದ್ದು ಸಾರ್ಥಕ.