36. ಪುಟ್ಟ ಬಾಲಕನನ್ನೆತ್ತಿಕೊಂಡು ಕಿರುಸೇತುವೆ ದಾಟಿದ ಮಹಿಳೆ

ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ ಕಾಣಿಸುತ್ತಿರಲಿಲ್ಲ. ಮನೆ ತಲಪಲು ಅವಳೊಂದು ತೊರೆಯನ್ನು ಹಾದು ಹೋಗಬೇಕಾಗಿತ್ತು. ಅವಳು ತೊರೆಯ ಬಳಿ ಬಂದಾಗ, ತೊರೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ತೊರೆ ಅಡ್ಡವಾಗಿದ್ದ ಕಿರುಸೇತುವೆಯ ಅಂಚಿನ ವರೆಗೆ ನೀರು ಏರಿತ್ತು. “ಓ ದೇವರೇ, ನಾನು ಈ ಕಿರುಸೇತುವೆಯನ್ನು ಸುರಕ್ಷಿತವಾಗಿ ದಾಟಲು ಸಾಧ್ಯವೇ?” ಎಂದು ಅವಳು ಭಯದಿಂದ ಒಂದು ಕ್ಷಣ ನಿಂತಳು.

ಅಷ್ಟರಲ್ಲಿ, ಕಿರುಸೇತುವೆಯ ಹತ್ತಿರ ಅಳುತ್ತಾ ನಿಂತಿದ್ದ ಪುಟ್ಟ ಬಾಲಕನನ್ನು ಸುರಭಿ ಕಂಡಳು. ಅವಳು ಅವನ ಬಳಿ ಹೋಗಿ, ಅವನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಳು. ಅವನನ್ನು ಅವಳು ಮಾತನಾಡಿಸಿದಳು. ಅವನು ಹೆದರಿಕೆಯಿಂದ ನಡುಗುತ್ತಾ ಹೀಗೆಂದ: "ನಾನು ಈ ಸೇತುವೆ ದಾಟಿ ಮನೆಗೆ ಹೋಗಬೇಕಾಗಿದೆ. ಆದರೆ ನನಗೆ ತೊರೆಯ ನೀರು ನೋಡಿ ಹೆದರಿಕೆ ಆಗ್ತಿದೆ.” ಸುರಭಿ ಅವನ ಮೈದಡವುತ್ತಾ ಹೇಳಿದಳು, “ಮುದ್ದು ಹುಡುಗಾ, ನೀನೇನೂ ಹೆದರಬೇಡ. ನಾನು ನಿನ್ನನ್ನು ಎತ್ತಿಕೊಂಡು ಸೇತುವೆ ದಾಟಿಸುತ್ತೇನೆ. ಅನಂತರ ನೀನು ಮನೆಗೆ ಓಡಿಕೊಂಡು ಹೋಗು.” ಅವಳು ಜಾಗರೂಕತೆಯಿಂದ ಅವನನ್ನು ಎತ್ತಿಕೊಂಡು ಸೇತುವೆ ದಾಟಿಸಿದಳು. “ಓ, ನೀವೆಷ್ಟು ಒಳ್ಳೆಯವರು. ಅಮ್ಮನಿಗೆ ಹೇಳ್ತೇನೆ” ಎಂದ ಆ ಪುಟ್ಟ ಬಾಲಕ. ಆಗ ಸುರಭಿಗೆ ತನ್ನ ಹೆದರಿಕೆ ಕಾಣೆಯಾದದ್ದು ಅರಿವಾಯಿತು. ಇನ್ನೊಬ್ಬರ ಕಷ್ಟ ಕಂಡಾಗ, ನಮ್ಮ ಕಷ್ಟ ಏನೂ ಅಲ್ಲ ಅನಿಸುತ್ತದೆ.