12. ಧೈರ್ಯವಂತ ಜೆಲ್ಲಿಮೀನು

ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು ಮೀನನ್ನು ಹಿಡಿಯುವಾಗ ಜೆಲ್ಲಿಮೀನಿನ ನೂಲಿನಂತಹ ಗ್ರಹಣಾಂಗಗಳು ಒಂದಕ್ಕೊಂದು ಸಿಕ್ಕಿ ಹಾಕಿಕೊಂಡವು. ಅದಕ್ಕೆ ಅತ್ತಿತ್ತ ಚಲಿಸಲು ಸಾಧ್ಯವಾಗಲಿಲ್ಲ. ಹತ್ತಿರದಲ್ಲಿ ಈಜುತ್ತಾ ಹೋಗುತ್ತಿದ್ದ ಮೀನುಗಳನ್ನು ಕರೆದು ಸಹಾಯಕ್ಕಾಗಿ ವಿನಂತಿಸಿತು ಜೆಲ್ಲಿಮೀನು. ಆದರೆ ಆ ಮೀನುಗಳು ದೂರ ಸಾಗಿದವು.

ಕೊನೆಗೆ ಒಂದು ವಿಚಿತ್ರ ಮೀನಿಗೆ ಜೆಲ್ಲಿಮೀನಿನ ಮೇಲೆ ಕರುಣೆ ಮೂಡಿತು. ಅದು ಜೆಲ್ಲಿಮೀನಿನ ಗ್ರಹಣಾಂಗಗಳ ಸಿಕ್ಕು ಬಿಡಿಸಲು ಸಹಾಯ ಮಾಡಿತು. ಜೆಲ್ಲಿ ಮೀನು ಕೃತಜ್ನತೆ ಸಲ್ಲಿಸಿತು; ಆದರೆ ಕೈಕುಲುಕಲಿಲ್ಲ. ಯಾಕೆಂದರೆ, ಕೈಕುಲುಕುವಾಗ ವಿಚಿತ್ರ ಮೀನಿಗೆ ಘಾಸಿಯಾಗಬಹುದೆಂದು ಜೆಲ್ಲಿಮೀನಿಗೆ ಆತಂಕ. ಅಷ್ಟರಲ್ಲಿ ಒಂದು ದೊಡ್ಡ ಶಾರ್ಕ್ ಮೀನು ಅಲ್ಲಿಗೆ ನುಗ್ಗಿತು ಮತ್ತು ವಿಚಿತ್ರ ಮೀನನ್ನು ಬೆನ್ನಟ್ಟಿತು. ಇತರ ಎಲ್ಲ ಮೀನುಗಳೂ ಭಯದಿಂದ ಸಿಕ್ಕಸಿಕ್ಕಲ್ಲಿಗೆ ಈಜುತ್ತಾ ಹೋದವು. ತನ್ನನ್ನು ರಕ್ಷಿಸಿದ ವಿಚಿತ್ರ ಮೀನಿಗೆ ಅಪಾಯ ಕಾದಿದೆ ಎಂದು ಜೆಲ್ಲಿಮೀನಿಗೆ ತಿಳಿಯಿತು. ಅದು, ಧಾವಿಸಿ ಹೋಗಿ ಶಾರ್ಕ್ ಮೀನಿಗೆ ಸೂಕ್ಷ್ಮ ಜಾಗಗಳಲ್ಲಿ ಚುಚ್ಚಿತು - ಕಣ್ಣುಗಳಿಗೆ, ಕಿವಿರುಗಳಿಗೆ ಮತ್ತು ಹೊಟ್ಟೆಗೆ. ಶಾರ್ಕ್ ಮೀನಿಗೆ ಆಘಾತವಾಯಿತು. ಅದು ಹೆದರಿ ಅಲ್ಲಿಂದ ದೂರಕ್ಕೆ ಓಡಿ ಹೋಯಿತು. ಇತರ ಮೀನುಗಳು ಜೆಲ್ಲಿಮೀನಿನ ಧೈರ್ಯಕ್ಕೆ ಅದನ್ನು ಅಭಿನಂದಿಸಿದವು. ಅನಂತರ, ಜೆಲ್ಲಿಮೀನು, ವಿಚಿತ್ರ ಮೀನು ಮತ್ತು ಇತರ ಮೀನುಗಳೆಲ್ಲವೂ ಒಳ್ಳೆಯ ಸ್ನೇಹಿತರಾದವು.