ಸೆಗಣಿಯುಂಡೆ ತಳ್ಳುವ ಚಿಪ್ಪುಹುಳದ (ಡಂಗ್ ಬೀಟಲ್) ಚಟುವಟಿಕೆ ಗಮನಿಸಿದ್ದೀರಾ? ಆನೆಲದ್ದಿ ಹಾಗೂ ಜಾನುವಾರುಗಳ ಸೆಗಣಿಯನ್ನು ಉಂಡೆಗಟ್ಟಿ, ಹತ್ತಾರು ಮೀಟರ್ ದೂರ ಉರುಳಿಸಿಕೊಂಡು ಹೋಗುವ ಈ ಕೀಟದ ಕಾರ್ಯಕ್ಷಮತೆ ಅದ್ಭುತ.
ಕ್ಷರಬೈಡೇ ಎಂಬ ಕೀಟಕುಟುಂಬಕ್ಕೆ ಸೇರಿದ ಇದರ ಸುಮಾರು 5,000 ಪ್ರಭೇದ (ಸ್ಪಿಷೀಸ್)ಗಳನ್ನು ಗುರುತಿಸಲಾಗಿದೆ. ಇದರ ಉದ್ದ ಕೇವಲ 0.004 ಇಂಚಿನಿಂದ 2.4 ಇಂಚು. ಆದರೂ ತನ್ನ ಮೈತೂಕಕ್ಕಿಂತ 50 ಪಟ್ಟು ಜಾಸ್ತಿ ತೂಕದ ಸೆಗಣಿಯುಂಡೆ ಉರುಳಿಸುತ್ತಾ ಒಯ್ಯಬಲ್ಲದು! ಒಂದು ರಾತ್ರಿಯಲ್ಲಿ ತನ್ನ ಮೈತೂಕದ 250 ಪಟ್ಟು ಜಾಸ್ತಿ ತೂಕದಷ್ಟು ಸೆಗಣಿಯನ್ನು ಒಯ್ದು ಮಣ್ಣಿನೊಳಗೆ ಹೂತು ಹಾಕಬಲ್ಲದು! ಒಂದು ಆನೆ ಒಮ್ಮೆ ಹಾಕುವ ಲದ್ದಿಯ ತೂಕ 3.3 ಪೌಂಡ್. ಅಷ್ಟನ್ನೂ ಅಲ್ಲಿಗೆ ನುಗ್ಗಿ ಬರುವ 16,000 ಸೆಗಣಿಯುಂಡೆ ತಳ್ಳುವ ಚಿಪ್ಪುಹುಳಗಳು ಕೇವಲ 2 ತಾಸಿನಲ್ಲಿ ದೂರಕ್ಕೆ ಸಾಗಿಸಿ ಮಾಯವಾಗಿಸ ಬಲ್ಲವು!
ಇವುಗಳಲ್ಲಿ ಮೂರು ವಿಧ. (1) ರೋಲರುಗಳು: ಸೆಗಣಿಯನ್ನು ಚೆಂಡಿನಂತೆ ಉಂಡೆಗಟ್ಟಿ ದೂರಕ್ಕೆ ಒಯ್ಯುವ ಕೀಟಗಳು. (2) ಸುರಂಗಕೊರಕಗಳು: ಸಿಕ್ಕಿದ ಸೆಗಣಿಯನ್ನು ತಾನು ತೋಡಿದ ಸುರಂಗ ಅಥವಾ ಹೊಂಡದಲ್ಲಿ ಇರಿಸುವ ಕೀಟಗಳು (3) ಸೆಗಣಿಯಲ್ಲೇ ವಾಸ ಮಾಡುವ ಕೀಟಗಳು.
ಈ ಚಿಪ್ಪುಕೀಟದ ಕೆಲವು ಪ್ರಭೇದಗಳು ಸೆಗಣಿಯ ಉಂಡೆಯಲ್ಲೇ ಮೊಟ್ಟೆ ಇಡುತ್ತವೆ. ಇದರಿಂದಾಗಿ, ಮೊಟ್ಟೆಯಿಂದ ಹೊರಬಂದ ಕ್ಷಣದಿಂದಲೇ ಇದರ ಹುಳಗಳಿಗೆ ತಿನ್ನಲು ಸಮೃದ್ಧ ಆಹಾರ.
ಸೆಗಣಿಯುಂಡೆ ತಳ್ಳುವ ಈ ಚಿಪ್ಪುಹುಳದ ಬೆರಗುಗೊಳಿಸುವ ಸಾಮರ್ಥ್ಯ: ಕಡುಗತ್ತಲಿನ ರಾತ್ರಿಯಲ್ಲಿಯೂ ತನ್ನ ಸೆಗಣಿಯುಂಡೆಯನ್ನು ಸರಳರೇಖೆಯ ಹಾದಿಯಲ್ಲೇ ಕರಾರುವಾಕ್ಕಾಗಿ ಗಮ್ಯ ಸ್ಥಾನಕ್ಕೆ ಒಯ್ಯುವುದು. ಎಲ್ಲೋ ಕಾಡಿನ ಮೂಲೆಯಲ್ಲಿ, ಹೊಲದ ಮಣ್ಣಿನಲ್ಲಿ ಮೂರರಿಂದ ಐದು ವರುಷ ಬದುಕಿ ಉಳಿಯುವ ಈ ಚಿಪ್ಪುಕೀಟ, ಕಾಳಗತ್ತಲಿನಲ್ಲಿ ದೊಡ್ಡ ಸೆಗಣಿಯುಂಡೆಯನ್ನು ದಿಕ್ಕು ತಪ್ಪದೆ ಹೇಗೆ ಒಯ್ಯುತ್ತದೆ? ನಮ್ಮ ನಕ್ಷತ್ರಪುಂಜ (ಗ್ಯಾಲಕ್ಷಿ) ಕ್ಷೀರಪಥ (ಮಿಲ್ಕಿವೇ)ದ ಬೆಳಕಿನ ಸಹಾಯದಿಂದ ಎಂದರೆ ನಂಬುತ್ತೀರಾ?
ಆಫ್ರಿಕಾದಲ್ಲಿರುವ ಈ ಚಿಪ್ಪುಕೀಟದ ಒಂದು ಪ್ರಭೇದ ಸ್ಕರಬೆಯಸ್ ಸಾಟಿರಸ್. ಇದು ತನ್ನ ಚಲನೆಗೆ ಕ್ಷೀರಪಥದ ಬೆಳಕನ್ನು ದಿಕ್ಸೂಚಿಯಾಗಿ ಬಳಸುತ್ತದೆಂದು ಸ್ವೀಡನ್ ಮತ್ತು ದಕ್ಷಿಣ ಆಫ್ರಿಕಾದ ಸಂಶೋಧಕರ ತಂಡ ವರದಿ ಮಾಡಿದೆ. ಸ್ವೀಡನಿನ ಲುಂಡ್ ವಿಶ್ವವಿದ್ಯಾಲಯದ ಮಾರಿ ಡೇಕ್ ಮುಖ್ಯಸ್ಥರಾಗಿರುವ ಈ ತಂಡವು ರಕ್ಷಿತ ಅರಣ್ಯ ಮತ್ತು ಪ್ಲಾನೆಟೋರಿಯಂನಲ್ಲಿ ಹಲವು ಪ್ರಯೋಗಗಳನ್ನು ನಡೆಸಿದೆ.
ಅವರು ತಿಳಿಸಿದ ಈ ಪ್ರಯೋಗಗಳ ಫಲಿತಾಂಶ ಹೀಗಿದೆ: ನಕ್ಷತ್ರಗಳನ್ನು ಮೋಡಗಳು ಮರೆಮಾಚಿದಾಗ ಅಥವಾ ಈ ಚಿಪ್ಪುಕೀಟಗಳಿಗೆ ಆಕಾಶ ಕಾಣದಂತೆ ಸಣ್ಣಸಣ್ಣ ಟೋಪಿ ಬಿಗಿದಾಗ, ಅವು ದಿಕ್ಕು ತಪ್ಪಿ ಓಡಾಡಿದವು. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದಾಗ ಅಥವಾ ಕ್ಷೀರಪಥದ ದೀರ್ಘ ವರ್ತುಲವನ್ನು ಹೋಲುವ ಮಂದ ಬೆಳಕಿನ ಪಟ್ಟಿ ಮಿನುಗಿಸಿದಾಗ ಅವು ಸರಿಯಾದ ದಿಕ್ಕಿನಲ್ಲಿ ಸೆಗಣಿಯುಂಡೆ ಉರುಳಿಸಿದವು.
ನಮ್ಮ ವಿಶ್ವ ಅನಂತದೆಡೆಗೆ ವಿಸ್ತರಿಸುತ್ತಲೇ ಇದೆ. ಅದರ ವ್ಯಾಪ್ತಿ ನಮ್ಮ ಸೀಮಿತ ಅರಿವಿಗೆ ನಿಲುಕದು. ಇಂತಹ ವಿಶ್ವದ ನೀಲಾಕಾಶದಲ್ಲಿ ಮರಳಿನ ಕಣಗಳಂತೆ ಹರಡಿವೆ ಅಸಂಖ್ಯಾತ ನಕ್ಷತ್ರಪುಂಜಗಳು.
ನಮ್ಮ ಕ್ಷೀರಪಥ ವಿಶ್ವದ ಮನಮೋಹಕ ನಕ್ಷತ್ರಪುಂಜಗಳಲ್ಲೊಂದು. ಇದರ ಅನಿಲ ಮತ್ತು ಧೂಳಿನ ಪಟ್ಟಿಗಳಲ್ಲಿ ವ್ಯಾಪಿಸಿರುವ ನಕ್ಷತ್ರಗಳು ಕೋಟಿಗಟ್ಟಲೆ. ಕ್ಷೀರಪಥದ ಅಗಾಧತೆ ಕಲ್ಪಿಸುವುದೂ ಕಷ್ಟದ ಕೆಲಸ. ಇದರ ಅಗಲವನ್ನು ದಾಟಲು ಬೆಳಕಿನ ಕಿರಣವೊಂದಕ್ಕೆ ತಗಲಬಹುದಾದ ಸಮಯ ಒಂದು ಲಕ್ಷ ವರುಷಗಳು.
ಅಂತಹ ಅಗಾಧ ನಕ್ಷತ್ರಪುಂಜಕ್ಕೂ ಸೆಗಣಿಯುಂಡೆ ತಳ್ಳುವ ಈ ಪುಟ್ಟ ಚಿಪ್ಪುಕೀಟಕ್ಕೂ ಎಲ್ಲಿಗೆಲ್ಲಿಯ ಸಂಬಂಧ!