21)ಭೂಮಿಯ ಅತ್ಯಂತ ಪುರಾತನ ಶಿಲೆಗಳನ್ನು ನ್ಯೂಝಿಲೆಂಡಿನ ವಿಕ್ ಮ್ಯಾಕ್-ಗ್ರೆಗರ್ ೧೯೬೬ ಮತ್ತು ೧೯೬೭ರಲ್ಲಿ ಪತ್ತೆ ಮಾಡಿದರು. ಗ್ರೀನ್-ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪುರಾತನ ಶಿಲೆಗಳು ಅವರಿಗೆ ಸಿಕ್ಕಿದವು. ಪರಮಾಣು ಕಾಲನಿರ್ಣಯದ ಪ್ರಕಾರ ಈ ಶಿಲೆಗಳು ೩.೭ರಿಂದ ೨.೯ ಬಿಲಿಯನ್ ವರುಷ ಹಳೆಯವು.
22)ಭೂಮಿಯಲ್ಲಿ ಮನುಷ್ಯರ ಜನಸಂಖ್ಯೆ ಸ್ಫೋಟವಾಗುತ್ತಿದೆ: ೩೧-೧೨-೨೦೨೩ರಂದು ಜನಸಂಖ್ಯೆ ೭೯೧.೭೫ ಕೋಟಿ. ಇದರ ಶೇಕಡಾ ೫೦ ಜನರು ವಾಸ ಮಾಡುತ್ತಿರುವುದು ಕೇವಲ ಈ ನಾಲ್ಕು ದೇಶಗಳಲ್ಲಿ: ಚೀನಾ, ಭಾರತ, ರಷ್ಯಾ ಮತ್ತು ಯು.ಎಸ್.ಎ. ಉಳಿದವರು ಸುಮಾರು ೧೬೦ ದೇಶಗಳಲ್ಲಿ ಬದುಕುತ್ತಿದ್ದಾರೆ. (ಫೋಟೋ: ಮುಂಬೈಯಲ್ಲಿ ಜನಸಾಗರ … ಕೃಪೆ: ಗೆಟ್ಟಿ ಇಮೇಜಸ್)
23)ಭೂಮಿಯ ಅತ್ಯಂತ ಉದ್ದದ ಪರ್ವತಶ್ರೇಣಿ ಯಾರಿಗೂ ಕಾಣಿಸುವುದಿಲ್ಲ ಎನ್ನಬಹುದು. ಯಾಕೆಂದರ ಅದು ಸಾಗರದೊಳಗಿದೆ. ಅದುವೇ ಮಿಡ್-ಅಟ್ಲಾಂಟಿಕ್ ರಿಡ್ಜ್. ಐರ್ಲೆಂಡಿನಿಂದ ಅಂಟಾರ್ಕ್ಟಿಕ್ ತನಕ ಅದರ ಉದ್ದ ೧೦,೦೦೦ ಮೈಲುಗಳು. ಆ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರದ ಎತ್ತರ ಐದು ಮೈಲು. ಆ ಪರ್ವತಶ್ರೇಣಿಯಲ್ಲಿ ನೀರಿನಿಂದ ಮೇಲಕ್ಕೆ ಕಾಣಿಸುವ ಅತ್ಯಂತ ಎತ್ತರದ ಶಿಖರದ ಎತ್ತರ ಒಂದು ಮೈಲು; ಅದುವೇ ಪಿಕೊ ದ್ವೀಪ.
24)ಬೆಳೆಗಳಿಗೆ ಹಾನಿ ಮಾಡುವ ಕೀಟ, ಬೂಸ್ಟು ಇತ್ಯಾದಿಗಳನ್ನು ಕೊಲ್ಲಲು ಬಳಸುವ ವಿಷರಾಸಾಯನಿಕಗಳಾದ ಪೀಡೆನಾಶಕಗಳು ಸಾಗರಗಳನ್ನು ಸೇರಿ, ಸಾಗರದಾಳದ ಪ್ರವಾಹದೊಂದಿಗೆ ಸ್ಥಳಾಂತರಗೊಳ್ಳುತ್ತವೆ. ಹೀಗೆ ಸಾಗುವಾಗ, ಅವು “ಸಾಗರದ ಆಹಾರ ಸರಪಳಿ”ಯ ಜೀವಿಗಳ ದೇಹದಲ್ಲಿ ಹೆಚ್ಚೆಚ್ಚು ಪರಿಮಾಣದಲ್ಲಿ ಸಂಗ್ರಹವಾಗುತ್ತವೆ. ಉತ್ತರ ಧ್ರುವದಿಂದ ಶುರುವಾಗುವ ಪಶ್ಚಿಮ ಗ್ರೀನ್-ಲ್ಯಾಂಡ್ ಪ್ರವಾಹದಲ್ಲಿ ಹುಟ್ಟಿ ಬೆಳೆದ ಇಪ್ಪತ್ತು ವೇಲ್ಗಳನ್ನು ಪ್ರಯೋಗಕ್ಕಾಗಿ ಈಟಿಗಾಳದಿಂದ ಹಿಡಿದು ಪರೀಕ್ಷಿಸಿದಾಗ ಪತ್ತೆಯಾದ ಸಂಗತಿ: ಅವುಗಳ ತಿಮಿ ಮೇದಸ್ಸಿನಲ್ಲಿ (ಬ್ಲಬ್ಬರ್), ಡಿಡಿಟಿ ಸಹಿತ ಆರು ವಿವಿಧ ಪೀಡೆನಾಶಕಗಳ ಶೇಷಾಂಶಗಳು ಇದ್ದವು!
25)ಬೆಳಕಿಗೆ "ತೂಕ"ವಿದೆ! ಭೂಮಿಯ ಮೇಲ್ಮೈಯ ಮೇಲೆ ಬೆಳಕಿನ "ಒತ್ತಡ" ಚದರ ಮೈಲಿಗೆ ಎರಡು ಪೌಂಡ್ ಎಂದು ಲೆಕ್ಕ ಹಾಕಲಾಗಿದೆ.
26)ಭೂಮಿಯ ಪರಿಭ್ರಮಣವು ಚಲಿಸುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಬಲಕ್ಕೆ ವಾಲಿದರೆ, ದಕ್ಷಿಣ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಎಡಕ್ಕೆ ವಾಲುತ್ತವೆ. ಇದನ್ನು “ಕೊರಿಯೊಲಿಸ್ ಪರಿಣಾಮ” ಎಂದು ಕರೆಯುತ್ತಾರೆ. ಚಲಿಸುವ ಚೆಂಡು (ಹಗುರ ವಸ್ತು) ಅಥವಾ ಚಲಿಸುವ ಬ್ಯಾಲ್ಲಿಸ್ಟಿಕ್ ಮಿಸೈಲ್ (ಭಾರದ ವಸ್ತು) ಎರಡರ ಮೇಲೆಯೂ ಈ ಪರಿಣಾಮ ಒಂದೇ ರೀತಿಯಾಗಿರುತ್ತದೆ.