1)ಭೂಮಿಯ ಆಯಸ್ಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ. ೧೬೭೦ರಿಂದೀಚೆಗೆ ಅದು ತನ್ನ ಶಕ್ತಿಯ ಶೇಕಡಾ ೧೫ರಷ್ಟನ್ನು ಕಳೆದುಕೊಂಡಿದೆ. ಇದೇ ರೀತಿ ದುರ್ಬಲವಾಗುತ್ತಿದ್ದರೆ, ಇನ್ನು ೨,೦೦೦ ವರುಷಗಳಲ್ಲಿ ಅದು ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇಸವಿ ೩೫೦೦ರಿಂದ ೪೫೦೦ ಅವಧಿಯಲ್ಲಿ ಭೂಮಿಯ ಆಯಸ್ಕಾಂತ ಕ್ಷೇತ್ರವು ಬಾಹ್ಯ ವಿಶ್ವದಿಂದ ನುಗ್ಗಿ ಬರುವ ವಿಕಿರಣವನ್ನು ತಡೆದುಕೊಳ್ಳುವಷ್ಟು ಸಮರ್ಥವಾಗಿರುವುದಿಲ್ಲ.
2)ಭೂಮಿಯ ಅತಿ ದೊಡ್ಡ ಮರುಭೂಮಿ “ಸಹಾರಾ"ದ ವಿಸ್ತೀರ್ಣ ಯು.ಎಸ್.ಎ. ದೇಶದ ವಿಸ್ತೀರ್ಣಕ್ಕೆ ಸಮಾನ. (ಅರಾಬಿಕ್ ಭಾಷೆಯ ಪದ ಸಹಾರಾದ ಅರ್ಥ ಮರುಭೂಮಿ) ಒಂದಾನೊಂದು ಕಾಲದಲ್ಲಿ ಇದು ಮರುಭೂಮಿ ಆಗಿರಲಿಲ್ಲ ಎಂದರೆ ನಂಬುತ್ತೀರಾ? ೨೦,೦೦೦ ವರುಷಗಳ ಮುಂಚೆ, ಯುರೋಪಿನ ಬಹುಭಾಗವನ್ನು ಹಿಮ ಆವರಿಸಿತ್ತು. ಆ ಕಾಲದಲ್ಲಿ, ಅಲ್ಲಿಂದ ಬೀಸಿ ಬರುತ್ತಿದ್ದ ತಂಪಾದ ಗಾಳಿ ಉತ್ತರ ಆಫ್ರಿಕಾಕ್ಕೆ ತೇವಾಂಶವನ್ನು ಹೊತ್ತು ತರುತ್ತಿತ್ತು. ಈಗ ಮರುಭೂಮಿಯಾಗಿರುವ ಭೂಭಾಗ ಆಗ ನದಿಗಳು ಮತ್ತು ಸರೋವರಗಳು , ಕಾಡು ಮತ್ತು ಹುಲ್ಲುಗಾವಲುಗಳಿದ್ದ ಚೇತೋಹಾರಿ ನೆಲವಾಗಿತ್ತು.
3)ಭೂಮಿಯ ಅತ್ಯಂತ ಒಣ ಪ್ರದೇಶ ಚಿಲಿ ದೇಶದ ಅಟಕಾಮಾ ಮರುಭೂಮಿಯ ಕಲಾಮಾ. ಅಲ್ಲಿ ಈ ತನಕ ಒಂದು ಹನಿ ಮಳೆಯೂ ಬಿದ್ದಿಲ್ಲ.
4)ಭೂಮಿ ತನ್ನ ಅಕ್ಷದಲ್ಲಿ ಸುತ್ತುತ್ತದೆ ಎಂಬುದನ್ನು ೧೮೫೧ರ ವರೆಗೆ ಸ್ಪಷ್ಟವಾಗಿ ಸಾಬೀತು ಮಾಡಿರಲಿಲ್ಲ. ಆ ವರುಷ ಜೀನ್ ಬೆರ್ನಾಡ್ ಲಿಯೋನ್ ಫೌಕಾಲ್ಟ್ ಒಂದು ಪ್ರಯೋಗದಲ್ಲಿ ಇದನ್ನು ಸಾಬೀತು ಮಾಡಿದ. ಆ ಪ್ರಯೋಗದಲ್ಲಿ ಒಂದು ಲೋಲಕ (ಪೆಂಡುಲಮ್) ತನ್ನ ಓಲಾಟದ ಸಮತಲವನ್ನು ಬದಲಾಯಿಸಿದಂತೆ ಕಂಡಿತು. ನಿಜವಾಗಿ ಆದದ್ದೇನೆಂದರೆ, ಲೋಲಕವು ತನ್ನ ಸಮತಲದಲ್ಲೇ ಓಲಾಡುತ್ತಿತ್ತು; ಆದರೆ ಅದನ್ನು ನೋಡುತ್ತಿದ್ದವನು ನಿಂತಿದ್ದ ಭೂಮಿಯು ನಿಧಾನವಾಗಿ ತಿರುಗುತ್ತಿತ್ತು.
5)ಈ ಭೂಮಿಯಲ್ಲಿ ಒಬ್ಬ ವ್ಯಕ್ತಿ ಇಳಿಯಬಹುದಾದ ಅತ್ಯಂತ ತಗ್ಗಿನ ಸ್ಥಳ ಯಾವುದು? (ಜಲಾಂತರ್ಗಾಮಿ ಅಥವಾ ಗಣಿಯೊಳಗಿನ ಷಾಪ್ಟಿನಲ್ಲಿ ಇಳಿಯುವುದರ ಹೊರತಾಗಿ) ಅದು ಜೋರ್ಡಾನ್ ನದಿ ಮೃತ ಸಮುದ್ರವನ್ನು ಸೇರುವ ಸ್ಥಳ. ಅದು ಸಮುದ್ರಮಟ್ಟದಿಂದ ೧,೨೯೦ ಅಡಿ ಕೆಳಗಿದೆ!
6)ಭೂಮಿಯ ಹೊರಕವಚದಲ್ಲಿ (ಕ್ರಸ್ಟ್) ಶೇಕಡಾ ೯೪ರಷ್ಟು ಆಮ್ಲಜನಕ ತುಂಬಿದೆ. ಆಮ್ಲಜನಕದ ಆನಯಾನ್ ( ನೆಗೆಟಿವ್ ಚಾರ್ಜಿನ ಅಯಾನ್) ಮತ್ತು ಇತರ ಏಳು ಮೂಲವಸ್ತುಗಳ ಕ್ಯಾಟಯಾನ್ ( ಪಾಸಿಟಿವ್ ಚಾರ್ಜಿನ ಅಯಾನ್)ಗಳು ಒತ್ತೊತ್ತಾಗಿರುವ “ಘನ” ವಸ್ತುವೇ ಭೂಮಿ. ಜಿಬ್ರಾಲ್ಟರಿನ ಬೃಹತ್ ಶಿಲೆಯೂ ಆಮ್ಲಜನಕ ಮತ್ತು ಇತರ ಕೆಲವು ವಸ್ತುಗಳ ಒಂದು ಮುದ್ದೆ.