ಹೀಗೂ ಉಂಟೇ! ಸರಿದಾಡುವ ಜೀವಿಗಳು (ಭಾಗ 2)

 11)ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ ಸಾಕುತ್ತವೆ. ತಮ್ಮ ಸೈನ್ಯಗಳಿಂದ ಯುದ್ಧ ಮಾಡುತ್ತವೆ. ವೈರಿಗಳನ್ನು ಬೆದರಿಸಲಿಕ್ಕಾಗಿ ಮತ್ತು ಗೊಂದಲ ಪಡಿಸಲಿಕ್ಕಾಗಿ ರಾಸಾಯನಿಕ ಸಿಂಪಡಿಸುತ್ತವೆ. ಗುಲಾಮರನ್ನು ಸೆರೆಹಿಡಿಯುತ್ತವೆ. ನೇಕಾರ-ಇರುವೆಗಳು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತವೆ. ದಾರವನ್ನು ಎಳೆದು, ಅದರಿಂದ ಎಲೆಗಳನ್ನು ಜೋಡಿಸಿ, ತಮ್ಮ ಬೂಸ್ಟ್ ಉದ್ಯಾನಗಳನ್ನು ನಿರ್ಮಿಸುತ್ತವೆ. ಟೆಲಿವಿಷನ್ ನೋಡುವುದರ ಹೊರತಾಗಿ ಹತ್ತುಹಲವು ಮನುಷ್ಯ ಸಹಜ ಕೆಲಸಗಳನ್ನು ಅವು ಮಾಡುತ್ತವೆ."

     12)ಬಸವನಹುಳಗಳು ಬಣ್ಣವಿಲ್ಲದ, ಅಂಟುಅಂಟಾದ ದ್ರವವನ್ನು ಸ್ರವಿಸುತ್ತವೆ. ಇದು ಬಸವನಹುಳಗಳು ಮುಂದಕ್ಕೆ ಚಲಿಸುವಾಗ ಅವುಗಳ ದೇಹದಡಿಯಲ್ಲಿ ಜಮಖಾನೆಯಂತೆ ಹಾಸುತ್ತದೆ. ಅವುಗಳ ಮೃದು ಶರೀರದ ರಕ್ಷಣೆಗೆ ಇದು ಬಹಳ ಸಹಕಾರಿ. ಬಸವನಹುಳಗಳು ರೇಜರ್ ಬ್ಲೇಡಿನ ಅಂಚಿನಲ್ಲಿ ಸರಿದರೂ ಈ ಸ್ರಾವದಿಂದಾಗಿ ಅವುಗಳ ಶರೀರಕ್ಕೆ ಕಿಂಚಿತ್ತೂ ಧಕ್ಕೆಯಾಗೋದಿಲ್ಲ.

     13)ಹಸುರು ಬೆಳೆದಿರುವ ಒಂದು ಎಕರೆ ಜಾಗದಲ್ಲಿ ಸರಾಸರಿ ೫೦,೦೦೦ ಜೇಡಗಳಿರುತ್ತವೆ. ಇವು ಪ್ರಕೃತಿಯ ಸಮತೋಲನಕ್ಕೆ ಅತ್ಯಂತ ಅವಶ್ಯ. ಒಂದು ವರುಷದಲ್ಲಿ ಜೇಡಗಳು ತಮ್ಮ ಸಂಖ್ಯೆಯ ಒಂದು ನೂರು ಪಟ್ಟು ಜಾಸ್ತಿ ಸಂಖ್ಯೆಯ ಇತರ ಕೀಟಗಳನ್ನು ನಾಶಪಡಿಸುತ್ತವೆ.

     14)ಟ್ರೈನರ್-ವೈಟರ್-ಮೆಸ್ ಎಂಬ ಗೆದ್ದಲಿನ ಒಂದು ಸ್ಪಿಷೀಸ್ ಅಫ್ರಿಕಾದ ಸವಾನ್ನಾ ಬಯಲುಗಳಲ್ಲಿ ಸುಮಾರು ಒಂದಡಿ ಎತ್ತರದ ಹುತ್ತಗಳನ್ನು ಕಟ್ಟುತ್ತದೆ. ಇವು ನೀರಿಗಾಗಿ ನೆಲದಾಳದಲ್ಲಿ ಸುರಂಗಗಳನ್ನು ಕೊರೆಯುತ್ತವೆ. ಇವುಗಳ ಹುತ್ತಗಳ ಅಡಿಯಲ್ಲಿ ನೆಲದಾಳಕ್ಕೆ 130 ಅಡಿಗಿಂತಲೂ ಜಾಸ್ತಿ ಆಳಕ್ಕೆ ಕೊರೆದ ಸುರಂಗಗಳು ಪತ್ತೆಯಾಗಿವೆ!

     15)ಜಿರಲೆಗಳ ಜೀವ ಉಳಿಸಿಕೊಳ್ಳುವ ಸಾಮರ್ಥ್ಯ ಅಗಾಧ. ಒಂದು ಜಿರಲೆಯ ತಲೆಯನ್ನು ಜಾಗರೂಕತೆಯಿಂದ ಬೇರ್ಪಡಿಸಿದರೆ (ಅಂದರೆ ಅದು ರಕ್ತಸ್ರಾವದಿಂದ ಸತ್ತು ಹೋಗದ ರೀತಿಯಲ್ಲಿ) ಅದರ ದೇಹ ಹಲವಾರು ವಾರ ಜೀವಂತವಾಗಿರುತ್ತದೆ! ಕೊನೆಗೆ ಅದು ಉಪವಾಸವಿದ್ದೇ ಸತ್ತುಹೋಗುತ್ತದೆ.

     16)ಸಿಸಿಡೊಮಿಯಾನ್ ಗಾಲ್ ಮಿಡ್ಜ್ ಎಂಬ ಒಂದು ಜಾತಿಯ ನೊಣಗಳು ಮೊಟ್ಟೆಗಳನ್ನಿಟ್ಟು ಅಥವಾ ಪಿತೃರಹಿತ ಜನನದ ಮೂಲಕ ಸಂತಾನೋತ್ಪತ್ತಿ ಮಾಡಬಲ್ಲವು. ಎರಡನೆಯ ವಿಧಾನದಲ್ಲಿ ಹೆಣ್ಣು ನೊಣ ಪ್ರಬುದ್ಧವಾಗುವುದೇ ಇಲ್ಲ. ಅದು ಹುಳವಾಗಿದ್ದಾಗಲೇ ಅದರ ಮರಿಗಳು “ತಾಯಿ"ಯ ದೇಹದೊಳಗೆ ಬೆಳೆಯುತ್ತವೆ (ತಾಯಿಯ ಗರ್ಭಕೋಶದಲ್ಲಿ ಬೆಳೆಯೋದಿಲ್ಲ, ಬದಲಾಗಿ ಅದರ ದೇಹದ ಕೋಶಗಳ ಒಳಗೆ ಬೆಳೆಯುತ್ತವೆ.) ಈ ಮರಿಗಳು ತಮ್ಮ ಬೆಳವಣಿಗೆಗಾಗಿ ತಾಯಿಯ ದೇಹದ ಕೋಶಗಳನ್ನೇ ತಿನ್ನುತ್ತವೆ. ಕೊನೆಗೆ ಮರಿಗಳೆಲ್ಲ ಹೊರಗೆ ಬಂದಾಗ, ತಾಯಿಯ ದೇಹ ಒಂದು ಟೊಳ್ಳಾದ ಕೋಶವಾಗಿರುತ್ತದೆ. ಅನಂತರ, ಎರಡೇ ದಿನಗಳಲ್ಲಿ, ಈ ಮರಿಗಳ ದೇಹದೊಳಗೆ ಮುಂದಿನ ತಲೆಮಾರಿನ ಮರಿಗಳು ಬೆಳೆಯುತ್ತಾ ತಮ್ಮ ತಾಯಿಯ ದೇಹವನ್ನೇ ಕಬಳಿಸುತ್ತವೆ!

     17)ಅಮೆಜಾನ್ ಮತ್ತು ಅದರ ಉಪನದಿಗಳ ದಡದಲ್ಲಿರುವ ಇರುವೆಗಳು ನೆಲದಲ್ಲಿ ಜೀವಿಸಿದರೆ, ಪ್ರತಿ ವರುಷವೂ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನಾಶವಾಗುತ್ತಿದ್ದವು. ಯಾಕೆಂದರೆ, ಆ ನದಿಗಳ ನೀರಿನ ಮಟ್ಟವು ಆಗಾಗ ಹಲವು ಅಡಿಗಳಷ್ಟು ಏರುತ್ತದೆ. ಆದರೆ, ಆ ಇರುವೆಗಳು ಅಲ್ಲಿನ ಮಳೆಕಾಡುಗಳ "ಮೇಲಿನ ಅಂತಸ್ತು"ಗಳಲ್ಲಿ, ಅಂದರೆ ಮರಗಳಲ್ಲಿ ಕಟ್ಟಿದ ಗೂಡುಗಳಲ್ಲಿ ವಾಸಿಸುವ ಕಾರಣ ನೀರಿನಿಂದ ರಕ್ಷಣೆ ಪಡೆಯುತ್ತವೆ.

     18)ಅದೊಂದು ಮಹಾಯುದ್ಧ. ಹಲವಾರು ದಿನ ಘೋರ ಕಾಳಗ ನಡೆಯುತ್ತದೆ ಮತ್ತು ನೂರಾರು ಸಾವು ಘಟಿಸುತ್ತದೆ. ಆದರೆ ಇದು ಮನುಷ್ಯರ ಸೈನ್ಯಗಳ ನಡುವಿನ ಯುದ್ಧವಲ್ಲ; ಇದು ಅಫ್ರಿಕಾದ ಕಾಡುಗಳಲ್ಲಿ ಜರಗುವ ನೇಕಾರ-ಇರುವೆಗಳ ಸೈನ್ಯಗಳ ನಡುವಿನ ಮಹಾ ಕದನ. ಈ ಘನಘೋರ ಯುದ್ಧ ಮುಗಿದು, ಕಾದಾಡಿದ ಇರುವೆ ಕಾಲೊನಿಗಳ ಜಾಗದ ಗಡಿಗಳು ನಿರ್ಧರಿತವಾದ ನಂತರ, ಅಲ್ಲಿ “”ಇರುವೆರಹಿತ ಜಾಗ”ವೂ ಗುರುತಿಸಲ್ಪಡುತ್ತದೆ. ಅನಂತರ ಈ ನಿಷೇಧಿತ ಜಾಗಕ್ಕೆ ಪ್ರವೇಶಿಸುವ ಸಾಹಸವನ್ನು ಯಾವುದೇ ಇರುವೆ ಮಾಡುವುದಿಲ್ಲ!      ಫೋಟೋ: ಬಸವನಹುಳ