ಸ್ವತಂತ್ರ ಭಾರತವನ್ನು ರೂಪಿಸಿದ ಐದು ಬ್ರಾಂಡ್‌ಗಳು (ಭಾಗ 1)

ಸ್ವತಂತ್ರ ಭಾರತದಲ್ಲಿವೆ ಹಲವಾರು ಜಗದ್ವಿಖ್ಯಾತ ಬ್ರಾಂಡ್‌ಗಳು. ಅವುಗಳಲ್ಲಿ ಹಲವು ಬ್ರಾಂಡ್‌ಗಳು ಮನೆಮಾತಾಗಿವೆ. ಕೆಲವು ಬ್ರಾಂಡ್‌ಗಳ ಉತ್ಪನ್ನಗಳು ಜಾಹೀರಾತಿನ ವಿನ್ಯಾಸದಿಂದಾಗಿ ಅಥವಾ ಜಿಂಗಲ್‌ನಿಂದಾಗಿ ಅಥವಾ ಅಪೂರ್ವ ಘೋಷಣೆಯಿಂದಾಗಿ ಅಥವಾ ರುಚಿಯಿಂದಾಗಿ ಜನಮನ ಗೆದ್ದಿವೆ. ದಶಕಗಳು ದಾಟಿದರೂ ಜನರು ಆ ಬ್ರಾಂಡ್‌ಗಳನ್ನು ಮರೆಯೋದಿಲ್ಲ. ಮತ್ತೆಮತ್ತೆ ಅದೇ ಬ್ರಾಂಡಿನ ಉತ್ಪನ್ನಗಳನ್ನು ಖರೀದಿಸುತ್ತಾರೆ.

ಅಂತಹ ಐದು ಬ್ರಾಂಡ್‌ಗಳು: ಅಮುಲ್ ಹಾಲಿನ ಉದ್ಯಮ, ಪಾರ್ಲೆ-ಜಿ ಬಿಸ್ಕಿಟ್, ಮಾರುತಿ ಕಾರು, ನಿರ್ಮಾ ಡಿಟರ್ಜಂಟ್ ಮತ್ತು ಜಿಯೋ ಟೆಲಿಕಾಮ್. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಮಾರುಕಟ್ಟೆಯಲ್ಲಿ ಈಗಲೂ ವಿಜೃಂಭಿಸುತ್ತಿರುವ ಈ ಬ್ರಾಂಡ್‌ಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಅಮುಲ್
ಅಮುಲ್ ಹಾಲಿನ ಉತ್ಪನ್ನಗಳು ಭಾರತದ ಎಲ್ಲೆಡೆಗಳಲ್ಲಿ ಲಭ್ಯ. ಡೈರಿ ರಂಗದ ಮುಂಚೂಣಿಯಲ್ಲಿರುವ ಅಮುಲ್, ಭಾರತದ ಪ್ರಮುಖ 10 ಎಫ್‌.ಎಮ್.ಸಿ.ಜಿ. (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕಂಪೆನಿಗಳಲ್ಲೊಂದು. ಅಂದ ಹಾಗೆ ಅಮುಲ್ ವಿಸ್ತೃತ ರೂಪ: ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್.

ಭಾರತದ ಪಶ್ಚಿಮದ ರಾಜ್ಯವಾದ ಗುಜರಾತಿನಲ್ಲಿ ಸಹಕಾರಿ ಆಂದೋಲನದ ರೂಪದಲ್ಲಿ ಜನ್ಮ ತಾಳಿದ ಅಮುಲ್, ಸಾವಿರಾರು ರೈತರನ್ನೂ ರೈತ ಮಹಿಳೆಯರನ್ನೂ ಸಂಘಟಿಸಿ, ಯಶಸ್ವಿ ಡೈರಿ ಉದ್ಯಮವನ್ನು ಮುನ್ನಡೆಸುತ್ತಿರುವುದೊಂದು ಅಚ್ಚರಿ.

ಡಾ. ವರ್ಗಿಸ್ ಕುರಿಯನ್ ಎಂಬ ಮಹಾನ್ ಕನಸುಗಾರ ಅಮುಲ್ ಮೂಲಕ "ಭಾರತದ ಹಾಲಿನ ಕ್ರಾಂತಿ”ಗೆ ಅಡಿಪಾಯ ಹಾಕಿದರು. ಗ್ರಾಮಮಟ್ಟದ ಸಹಕಾರಿ ವಾಣಿಜ್ಯ ಮಾದರಿಯೊಂದನ್ನು ಪರಿಪೂರ್ಣವಾಗಿ ರೂಪಿಸಿ, ಲಕ್ಷಗಟ್ಟಲೆ ಜನರಿಗೆ ಜೀವನೋಪಾಯ ಒದಗಿಸಿದ್ದು ಅವರ ಸಾಟಿಯಿಲ್ಲದ ಸಾಧನೆ. "ನಾನೊಂದು ಕನಸು ಕಂಡೆ" ಎಂಬ ಆತ್ಮಕತೆಯಲ್ಲಿ ಡಾ. ಕುರಿಯನ್ “ಅಮುಲ್" ಸಾಗಿ ಬಂದ ಹಾದಿಯನ್ನು ಮನಮುಟ್ಟುವಂತೆ ದಾಖಲಿಸಿದ್ದಾರೆ.

ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆ ಎದುರಿಸುತ್ತಲೇ ಭಾರತದ ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ತನ್ನ ಸ್ಥಾನವನ್ನು ಭದ್ರವಾಗಿ ರಕ್ಷಿಸಿಕೊಂಡಿರುವುದು ಮಾರುಕಟ್ಟೆಯ ಬದಲಾವಣೆಗಳಿಗೆ ತಕ್ಷಣವೇ ಸ್ಪಂದಿಸುವ ಅಮುಲ್ ಕಂಪೆನಿಯ ತಾಕತ್ತಿನ ಪುರಾವೆ.

ಈಗ ಹಲವು ಕಂಪೆನಿಗಳು ತಮ್ಮ ಜಾಹೀರಾತುಗಳ ಮೂಲಕ “ಸಮಾಜಕ್ಕೆ ಕನ್ನಡಿ ಹಿಡಿಯುವ” ಕೆಲಸ ಮಾಡುತ್ತಿವೆ. ಆದರೆ ಅಮುಲ್ ಕಂಪೆನಿ ಆರಂಭದಿಂದಲೇ ಈ ಕೆಲಸ ಮಾಡುತ್ತಾ ಬಂದಿದೆ. ನಮ್ಮ ದೇಶದ ಎಲ್ಲ ಪ್ರಮುಖ ಘಟನೆಗಳಿಗೂ, ತನ್ನ ಜಾಹೀರಾತುಗಳ “ಅಮುಲ್ ಬಾಲಕಿ” ಮೂಲಕ ಚೇತೋಹಾರಿಯಾಗಿ ಅಮುಲ್ ಸ್ಪಂದಿಸಿದೆ - ರಾಜಕೀಯ ಏರುಪೇರು, ಚಿತ್ರನಟನ ನಿಧನ, ಕ್ರೀಡಾಳುವಿನ ವಿಜಯ, ಕೊರೋನಾ (ಕೋವಿಡ್ 19) ವೈರಸ್ ಧಾಳಿ ಇತ್ಯಾದಿ. (ಫೋಟೋ ನೋಡಿ.)  

ದೇಶದ ಬಹುಜನರ ಒಳಿತನ್ನೇ ತನ್ನ ವಹಿವಾಟಿನ ಯಶಸ್ಸಿನ ಧ್ಯೇಯವಾಗಿಟ್ಟುಕೊಂಡ ಅಪ್ಪಟ ದೇಸಿ ಸಾಮಾಜಿಕ ಉದ್ಯಮವೇ ಅಮುಲ್ ಎಂಬುದೇ ಅದರ ಹೆಗ್ಗಳಿಕೆ.

ಪಾರ್ಲೆ-ಜಿ ಬಿಸ್ಕಿಟ್
ಪಾರ್ಲೆ ಗ್ರೂಪಿನ ಪಾರ್ಲೆ-ಜಿ ಗ್ಲುಕೋಸ್ ಬಿಸ್ಕಿಟ್ ಜಗತ್ತಿನಲ್ಲೇ ಅತ್ಯಧಿಕ ಮಾರಾಟವಾಗುವ ಬಿಸ್ಕಿಟ್‌ಗಳಲ್ಲೊಂದು ಮತ್ತು ಭಾರತದ ಎಲ್ಲೆಡೆಗಳಲ್ಲಿ ಲಭ್ಯವಿರುವ ಬಿಸ್ಕಿಟ್. ಎಲ್ಲ ವರ್ಗದ ಜನರೂ ಅದನ್ನು ಇಷ್ಟ ಪಡುತ್ತಾರೆ ಎಂಬುದೇ ಅದರ ವಿಶೇಷತೆ.

20ನೇ ಶತಮಾನದ ಆರಂಭದಲ್ಲಿ, ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮೂಡಿ ಬಂದ ಸ್ವದೇಶಿ ಆಂದೋಲನವೇ ಪಾರ್ಲೆ ಗ್ರೂಪಿನ ಬಿಸ್ಕಿಟ್‌ಗಳ ತಯಾರಿಗೆ ಪ್ರೇರಣೆ; ಆಗ ಮಾರುಕಟ್ಟೆಯಲ್ಲಿ ಲಭ್ಯವಿದ್ದ ವಿದೇಶೀ ಕಂಪೆನಿಗಳ ದುಬಾರಿ ಬಿಸ್ಕಿಟ್‌ಗಳಿಗೆ ಪರ್ಯಾಯವಾಗಿ ಪಾರ್ಲೆ- ಗ್ಲುಕೋಸ್ ಬಿಸ್ಕಿಟ್ ಮಾರುಕಟ್ಟೆಗೆ ಲಗ್ಗೆಯಿಟ್ಟು ಗೆದ್ದಿತು.

ಬಹುಬೇಗನೇ ಒಂದು ಕಪ್ ಚಹಾದೊಂದಿಗೆ ಮೆಲ್ಲಲು ಪಾರ್ಲೆ-ಜಿ ಬಿಸ್ಕಿಟ್ ಇರಲೇ ಬೇಕೆಂಬುದು ವಾಡಿಕೆಯಾಯಿತು. ಜೊತೆಗೆ, ಜಾತಿ, ಅಂತಸ್ತುಗಳ ಭೇದವಿಲ್ಲದೆ, ಪಾರ್ಲೆ-ಜಿ ಎಲ್ಲ ವರ್ಗದವರ ಟೀ-ಪಾರ್ಟಿಯ ಅವಿಭಾಜ್ಯ ಭಾಗವಾಯಿತು.

ಮಾರುತಿ ಕಾರು
ಅದೊಂದು ಕಾಲವಿತ್ತು: ಭಾರತದಲ್ಲಿ ಶ್ರೀಮಂತರು ಮಾತ್ರ ಕಾರು ಖರೀದಿಸಬಲ್ಲರು ಮತ್ತು ಮಧ್ಯಮ ವರ್ಗದವರಿಗೆ ಕಾರು ಎಂಬುದೊಂದು ಕನಸು ಎಂಬ ಕಾಲ. ಯಾಕೆಂದರೆ, ಆಗ ಭಾರತದಲ್ಲಿ ಮುಖ್ಯವಾಗಿ ಉತ್ಪಾದನೆ ಆಗುತ್ತಿದ್ದದ್ದು ಅಂಬಾಸಿಡರ್ ಮತ್ತು ಫಿಯೆಟ್ ಎಂಬೆರಡು ಬ್ರಾಂಡ್‌ಗಳ ಕಾರುಗಳು. ಅವನ್ನು ಖರೀದಿಸಲಿಕ್ಕೂ ಮುಂಗಡ ಕಾದಿರಿಸಿ, ಕೆಲವು ವರುಷ ಕಾಯಬೇಕಾಗಿತ್ತು!

(ಜಾಗತೀಕರಣದ ಮುಂಚೆ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸುತ್ತಿದ್ದ ಐದು ಕಂಪೆನಿಗಳು: ಮಾರುತಿ ಉದ್ಯೋಗ ಲಿ., ಹಿಂದುಸ್ಥಾನ್ ಮೋಟರ್ಸ್ ಲಿ., ಪ್ರೀಮಿಯರ್ ಆಟೋಮೊಬೈಲ್ಸ್ ಲಿ., ಸ್ಟಾಂಡರ್ಡ್ ಮೋಟರ್ ಪ್ರೊಡಕ್ಷನ್ ಆಫ್ ಇಂಡಿಯಾ ಲಿ., ಮತ್ತು ಸಿಫಾನಿ ಆಟೋಮೊಬೈಲ್ಸ್)

ಅಂತಹ ಕಾಲಘಟ್ಟದಲ್ಲಿ, ಸ್ವರ್ಗದಿಂದ ಇಳಿದು ಬಂದಂತೆ, ಮಾರುಕಟ್ಟೆಗೆ ಒಲಿದು ಬಂತು - ಮಾರುತಿ ಕಾರು; ಅದೂ ಕೇವಲ ರೂ.50,000 (625 ಡಾಲರ್) ಮ್ಯಾಜಿಕ್ ಬೆಲೆಯಲ್ಲಿ!

ಭಾರೀ ಗಾತ್ರದ ಅಂಬಾಸಿಡರ್ ಕಾರುಗಳಿಗೆ ಹೋಲಿಸಿದಾಗ, 800 ಸಿಸಿ ಮಾರುತಿ ಕಾರುಗಳು ಪುಟ್ಟದಾಗಿದ್ದವು ಮಾತ್ರವಲ್ಲ ಕಾರ್ಯಕ್ಷಮತೆಯಲ್ಲಿ ಅಂಬಾಸಿಡರ್ ಕಾರುಗಳಿಗಿಂತ ಹೆಚ್ಚು ನಂಬಲರ್ಹವಾಗಿದ್ದವು. ಅಂತೂ ಮೂರು ದಶಕಗಳ ಕಾಲ (1960ರಿಂದ 1990 ವರೆಗೆ) ಭಾರತದ ರಸ್ತೆಗಳಲ್ಲಿ ದೊರೆಯಂತೆ ಮೆರೆದಿದ್ದ ಅಂಬಾಸಿಡರ್ ಕಾರುಗಳಿಗೆ ಪ್ರಬಲ ಸ್ಪರ್ಧಿಯೊಂದು ರಸ್ತೆಗಿಳಿದದ್ದು ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು.

ಅದಾಗಲೇ ಆರ್ಥಿಕವಾಗಿ ಭದ್ರವಾಗುತ್ತಿದ್ದ ಭಾರತದ ಮಧ್ಯಮ ವರ್ಗದ ಕುಟುಂಬಗಳ ಕನಸುಗಳಿಗೆ ಮಾರುತಿ ಕಾರು ರೆಕ್ಕೆಪುಕ್ಕಗಳನ್ನು ನೀಡಿತು ಎಂಬುದಂತೂ ಸತ್ಯ. ಕಾರು ಖರೀದಿಸಿದ ನಂತರ, ತಮ್ಮ ವ್ಯಾಪ್ತಿ - ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿ - ವಿಸ್ತಾರವಾಯಿತೆಂಬುದು ಹಲವಾರು ಕುಟುಂಬಗಳ ಅನುಭವ. ಆ ವರೆಗೆ ಸೊತ್ತುಗಳ ಖರೀದಿಗೆ ಸಾಲ ಮಾಡಲು ಹಿಂಜರಿಯುತ್ತಿದ್ದ ಭಾರತೀಯ ಮಧ್ಯಮ ವರ್ಗದ ಕುಟುಂಬಗಳು, ಕಾರು ಖರೀದಿಗಾಗಿ ರಾಜಾರೋಷವಾಗಿ ಸಾಲ ಮಾಡತೊಡಗಿದವು! ಜೊತೆಗೆ, ಕಾರಿನಲ್ಲಿ ದೂರ ಪ್ರಯಾಣದ ಮಜಾ ಎಂಬ ಜನಸಾಮಾನ್ಯರ ಕನಸು ನನಸಾಯಿತು.