ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ ವಿದ್ಯಾರ್ಥಿಗಳಿಗೂ ಶಾಲೆಕಾಲೇಜುಗಳ ಪ್ರವೇಶದ ಆತಂಕ. ಜೊತೆಗೆ ಅತ್ಯಧಿಕ ಅಂಕ ಗಳಿಸುವ ಆತಂಕ. ಯಾಕೆಂದರೆ, ಈ ವರುಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ಶೇಕಡಾ 100 (ಅಂದರೆ 625) ಅಂಕ ಗಳಿಸಿದ್ದಾರೆ.
ಈ ಆತಂಕವೇ ಆನ್-ಲೈನ್ ಶಿಕ್ಷಣ ಕಂಪೆನಿಗಳ ಆಮಿಷ ಜಾಲಕ್ಕೆ ಆಧಾರ. ಭಾರತದ ಈ ಕಂಪೆನಿಗಳ ವ್ಯವಹಾರ ಜಗತ್ತಿನಲ್ಲಿ ಅತ್ಯಧಿಕ ವೇಗವಾಗಿ ಬೆಳೆಯುತ್ತಿರುವ ವ್ಯವಹಾರ ಎಂದರೆ ನಂಬುತ್ತೀರಾ? ಆನ್-ಲೈನ್ ವಿಡಿಯೋ ಪಾಠಗಳು ಮತ್ತು ಇಂಟರ್ ಆಕ್ಟಿವ್ ಪಾಠಗಳ ಅಬ್ಬರದಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಮುಳುಗಿ ಹೋಗುತ್ತಿದ್ದಾರೆ. ಬೈಜುಸ್, ಅನ್-ಅಕಾಡೆಮಿ, ವೇದಾಂತು ಮುಂಚೂಣಿಯಲ್ಲಿರುವ ಈ ವಾಣಿಜ್ಯರಂಗದ ಮೌಲ್ಯ 750 ಮಿಲಿಯನ್ ಡಾಲರುಗಳು ಎಂದು 2020ರಲ್ಲಿ ಅಂದಾಜಿಸಲಾಗಿತ್ತು. ಇನ್ನು ಮೂರು ವರುಷಗಳಲ್ಲಿ, 2025ರ ಹೊತ್ತಿಗೆ ಇದರ ಮೌಲ್ಯ ನಾಲ್ಕು ಬಿಲಿಯನ್ ಡಾಲರುಗಳಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಬೈಜುಸ್ ಒಂದರಲ್ಲೇ 115 ಮಿಲಿಯನ್ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆಂದು ವರದಿ.
ಭಾರತದಲ್ಲಿ ಇಂಟರ್-ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಈ ಆನ್-ಲೈನ್ ಶಿಕ್ಷಣ ಕಂಪೆನಿಗಳ ಜನಪ್ರಿಯತೆಗೆ ಒಂದು ಮುಖ್ಯ ಕಾರಣ. 2016ರಲ್ಲಿ ಇಂಟರ್-ನೆಟ್ ಬಳಕೆದಾರರ ಸಂಖ್ಯೆ 386 ಮಿಲಿಯನ್; ಅದು 2020ರಲ್ಲಿ 622 ಮಿಲಿಯಕ್ಕೆ ಜಿಗಿದಿದೆ. ಇನ್ನು ಐದು ವರುಷಗಳಲ್ಲಿ ಇದು 900 ಮಿಲಿಯ ದಾಟಲಿದೆ ಎಂದು ಅಂದಾಜು.
ಅದೇನಿದ್ದರೂ, ಈ ಕಂಪೆನಿಗಳು ಕೋಟಿಗಟ್ಟಲೆ ರೂಪಾಯಿ ಲಾಭ ಗಳಿಸುತ್ತಿರುವಂತೆಯೇ ಕುಖ್ಯಾತಿಯನ್ನೂ ಗಳಿಸಿವೆ. ಸುಳ್ಳು ಭರವಸೆಗಳನ್ನು ನೀಡುವುದು, ಅರೆ-ಮನಸ್ಸಿನಲ್ಲಿರುವ ಹೆತ್ತವರ ಮೇಲೆ ಒತ್ತಡ ಹೇರಿ, ಅವರು ಇಂತಹ ಆನ್-ಲೈನ್ ಕೋರ್ಸುಗಳಿಗೆ ಚಂದಾದಾರರಾಗುವಂತೆ ಮಾಡುವುದು - ಇವು ಅವುಗಳ ವಿರುದ್ಧ ಕೇಳಿ ಬರುತ್ತಿರುವ ಅಪ್ರಾಮಾಣಿಕ ಮಾರಾಟ ವಿಧಾನಗಳು.
ಒಂದು ಪ್ರಕರಣದಲ್ಲಿ, ಆನ್-ಲೈನ್ ಶಿಕ್ಷಣ ಕಂಪೆನಿಯ ಮಾರಾಟಗಾರ ಮನೆಗೆ ಬಂದು ತಮ್ಮ ಪಾಠಗಳ ಪ್ರದರ್ಶನ ನೀಡಿದ. ಅನಂತರ, “ಮೊದಲ ಹದಿನೈದು ದಿನಗಳು ನಮ್ಮ ಪಾಠಗಳು ನಿಮ್ಮ ಮಗನಿಗೆ ಪುಕ್ಕಟೆ” ಎಂದು ಪುಸಲಾಯಿಸಿ, “ನೀವು ಯಾವಾಗ ಬೇಕಾದರೂ ನಿಮ್ಮ ಚಂದಾದಾರಿಕೆಯನ್ನು ರದ್ದು ಪಡಿಸಬಹುದು” ಎಂದು ಭರವಸೆ ನೀಡಿದ. ಹಾಗಾಗಿ ಅವರು ಒಂದು ವರುಷದ ಚಂದಾದಾರಿಕೆ ಖರೀದಿಸಿದರು. ಅದು ಸುಳ್ಳು ಭರವಸೆ ಎಂದು ಹೆತ್ತವರಿಗೆ ಒಂದೇ ತಿಂಗಳಿನಲ್ಲಿ ತಿಳಿಯಿತು.
ಅವರ ಮಗನ ಶಾಲಾ ಅವಧಿ ಬದಲಾಯಿತು. ಅದರಿಂದಾಗಿ ಅವರ ಮಗನಿಗೆ ಆನ್-ಲೈನ್ ಪಾಠಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದನ್ನು ಕಂಪೆನಿಗೆ ತಿಳಿಸಿ, ತಮ್ಮ ಮಗನ ಚಂದಾದಾರಿಕೆ ರದ್ದು ಪಡಿಸಬೇಕೆಂದು ವಿನಂತಿಸಿದಾಗ ಅವರ ಉತ್ತರ “ಒಮ್ಮೆ ಖರೀದಿಸಿದ ಚಂದಾದಾರಿಕೆ ರದ್ದು ಪಡಿಸಲು ಸಾಧ್ಯವಿಲ್ಲ.” ಆ ಕಂಪೆನಿ ಈ ಹೆತ್ತವರನ್ನು ಹೇಗೆ ಯಮಾರಿಸಿತ್ತು? ಹೆತ್ತವರಿಂದ ಪ್ರತಿ ತಿಂಗಳ ಶುಲ್ಕ ರೂ.4,500 ಪಾವತಿಗಾಗಿ ಅವರ ಬ್ಯಾಂಕ್ ಖಾತೆಯಿಂದ “ಅಟೋ ಡೆಬಿಟ್” ಆದೇಶ ಪಡೆದುಕೊಂಡಿತ್ತು. ಈಗ ಇಕ್ಕಟ್ಟಿನಲ್ಲಿ ಸಿಲುಕಿರುವ ಹೆತ್ತವರು, ತಮ್ಮ ಮಗನನ್ನು ಶಾಲೆಯಿಂದ ಬಿಡಿಸಬೇಕೆಂದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಶಾಲೆಯಲ್ಲಿ ವಿದ್ಯಾರ್ಥಿ ಐ.ಸಿ.ಎಸ್.ಇ. ಬೋರ್ಡಿನ ಪಠ್ಯಕ್ರಮದಲ್ಲಿ ಕಲಿಯುತ್ತಿದ್ದಾನೆ. ಆನ್-ಲೈನ್ ಶಿಕ್ಷಣ ಕಂಪೆನಿ ಅವನಿಗೆ ಕಲಿಸುತ್ತಿರುವುದು ಸಿ.ಬಿ.ಎಸ್.ಇ. ಪಠ್ಯಕ್ರಮದ ಪಾಠಗಳನ್ನು. ಇದು ಸರಿಯಲ್ಲವೆಂದು ಹೆತ್ತವರು ಆಕ್ಷೇಪಿಸಿದಾಗ ಕಂಪೆನಿಯ ಪ್ರತಿನಿಧಿಯ ಉತ್ತರ, "ನಾವೇನೂ ಮಾಡುವಂತಿಲ್ಲ.”
ಹೆತ್ತವರು ಇಂತಹ ಅವಾಂತರಗಳಲ್ಲಿ ಯಾಕೆ ಸಿಲುಕಿಕೊಳ್ಳುತ್ತಾರೆ? ಇದಕ್ಕೆ ಎರಡು ಕಾರಣಗಳು: ಮೊದಲನೆಯದು, ಹೆತ್ತವರ ಮೇಲೆ ಮಕ್ಕಳ ಒತ್ತಾಯ - "ನನ್ನ ಗೆಳೆಯರೆಲ್ಲ ಇಂತಹ ಆನ್-ಲೈನ್ ಶಿಕ್ಷಣ ಕಂಪೆನಿಯ ಕೋರ್ಸುಗಳಿಗೆ ಸೇರಿದ್ದಾರೆ; ನನ್ನನ್ನೂ ಸೇರಿಸು” ಎಂಬುದಾಗಿ. ಎರಡನೆಯದಾಗಿ, ಮಕ್ಕಳು ಒತ್ತಾಯಿಸದಿದ್ದರೂ ಹೆತ್ತವರ ಆತಂಕ - ನಮ್ಮ ನೆರೆಹೊರೆಯ, ಪರಿಚಯದ ಹಲವಾರು ಮಕ್ಕಳು ಇಂತಹ ಆನ್-ಲೈನ್ ಶಿಕ್ಷಣ ಕಂಪೆನಿಯ ಕೋರ್ಸಿಗೆ ಸೇರಿದ್ದಾರೆ; ನನ್ನ ಮಗ/ ಮಗಳನ್ನೂ ಅದಕ್ಕೆ ಸೇರಿಸಬೇಕು. ಇಲ್ಲವಾದರೆ ನನ್ನ ಮಕ್ಕಳ ಭವಿಷ್ಯಕ್ಕೆ ನಾನೇ ಕಲ್ಲು ಹಾಕಿದಂತಾಗುತ್ತದೆ.
ಆನ್-ಲೈನ್ ಕಂಪೆನಿಗಳು ಅಡ್ಡದಾರಿಗಳಿಂದ ಹೆತ್ತವರ ಫೋನ್ ನಂಬರ್, ವಿಳಾಸ ಇತ್ಯಾದಿ ವಿವರ ಸಂಗ್ರಹಿಸಿ, ಅವರನ್ನು ಸಂಪರ್ಕಿಸುತ್ತಾರೆ. ಕೆಲವು ಶಾಲೆ ಹಾಗೂ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಫೋನ್ ನಂಬರ್, ವಿಳಾಸ ಇತ್ಯಾದಿ ವಿವರಗಳನ್ನು ಆನ್-ಲೈನ್ ಕಂಪೆನಿಗಳಿಗೆ ಮಾರಾಟ ಮಾಡುತ್ತಿವೆ ಎಂಬುದಂತೂ ಆಘಾತಕಾರಿ ಸಂಗತಿ. ಕೆಲವು ಶಾಲೆ/ ಕಾಲೇಜುಗಳಂತೂ ಆನ್-ಲೈನ್ ಶಿಕ್ಷಣ ಕಂಪೆನಿಗಳ ಸಹಯೋಗದಲ್ಲಿ ತಮ್ಮ ಕೋರ್ಸುಗಳನ್ನು ನಡೆಸುತ್ತಿವೆ! ಇದಂತೂ ಆ ಶಾಲೆ/ ಕಾಲೇಜುಗಳು ತಮ್ಮ ಜವಾಬ್ದಾರಿಗೆ ತಿಲಾಂಜಲಿ ಕೊಟ್ಟಿವೆ ಎಂಬುದರ ಪುರಾವೆ.
ಇಂತಹ ಅನೈತಿಕ ವ್ಯವಹಾರಗಳಿಗೆ ಯಾವುದೇ ಕಾಯಿದೆಯ ನಿಷೇಧ ಇಲ್ಲದಿರುವುದು ಆನ್-ಲೈನ್ ಕಂಪೆನಿಗಳಿಗೆ ವರವಾಗಿ ಪರಿಣಮಿಸಿದೆ. ಡಿಸೆಂಬರ್ 2021ರಲ್ಲಿ ಕೇಂದ್ರ ಸರಕಾರವು ಈ ಬಗ್ಗೆ ಒಂದು ಸಲಹೆ ನೀಡಿದೆ. ಅದೇನೆಂದರೆ, “ಆನ್-ಲೈನ್ ಶಿಕ್ಷಣ ಕಂಪೆನಿಗಳು ಪ್ರಚಾರ ಮಾಡುವ ಯಶೋಗಾಥೆಗಳನ್ನು ನಂಬಬಾರದು” ಎಂಬುದಾಗಿ. ಆದರೆ, ಅಧಿಕ ಪ್ರಸಾರವಿರುವ ಎಲ್ಲ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ. ಚಾನೆಲುಗಳಲ್ಲಿ ಇಂತಹ ಆನ್-ಲೈನ್ ಶಿಕ್ಷಣ ಕಂಪೆನಿಗಳ (ಇಡೀ ಪುಟ ಅಥವಾ ಅರ್ಧಪುಟದ) ಜಾಹೀರಾತುಗಳು ಕಣ್ಣಿಗೆ ರಾಚುತ್ತವೆ.
ಹೆತ್ತವರು ಏನು ಮಾಡಬಹುದು?
-ಯಾವುದೇ ಆನ್-ಲೈನ್ ಶಿಕ್ಷಣ ಕಂಪೆನಿಯ ಕೋರ್ಸುಗಳ ಚಂದಾದಾರಿಕೆ ಖರೀದಿಸುವ ಮುನ್ನ ಆ ಕಂಪೆನಿಯ ಬಗ್ಗೆ ಸಮಗ್ರ ವಿವರ ಸಂಗ್ರಹಿಸಬೇಕು ಮತ್ತು ಆ ಕಂಪೆನಿಯ ಕೋರ್ಸು ಪೂರೈಸಿದ ಕನಿಷ್ಠ ಹತ್ತು ವಿದ್ಯಾರ್ಥಿಗಳ ಹೆತ್ತವರನ್ನು ಸಂಪರ್ಕಿಸಿ, ಆ ಕಂಪೆನಿಯ ಭರವಸೆಗಳು ನಂಬಲರ್ಹವೇ ಎಂದು ತನಿಖೆ ನಡೆಸಬೇಕು.
-ಮುಂಗಡವಾಗಿ ಇಡೀ ವರುಷದ ಶುಲ್ಕ ಪಾವತಿಸುವುದಕ್ಕೆ ಒಪ್ಪಬಾರದು. ಈ ಷರತ್ತು ಕಂಪೆನಿಯ ಸಾಚಾತನದ ಬಗ್ಗೆ ಅನುಮಾನ ಹುಟ್ಟಿಸುತ್ತದೆ.
-ಎಲ್ಲ ಮುಂಜಾಗ್ರತೆ ವಹಿಸಿದ ನಂತರವೂ ಆನ್-ಲೈನ್ ಶಿಕ್ಷಣ ಕಂಪೆನಿಯಿಂದ ಮೋಸವಾದರೆ, “ಬಳಕೆದಾರರ ಕಮಿಷನಿಗೆ” (ಕೋರ್ಟ್) ದೂರು ನೀಡಿ, ನ್ಯಾಯಕ್ಕಾಗಿ ಆಗ್ರಹಿಸಬೇಕು.
ಫೋಟೋ: ಆನ್-ಲೈನ್ ಪಾಠ ಕಲಿಯುವ ಬಾಲಕ ... ಕೃಪೆ: ಕಿಡಾಡ್.ಕೋಮ್