ಬೇಸಗೆ ಮುಗಿಯುತ್ತಿದೆ, ಮಾವಿನ ಹಣ್ಣಿನ ಹಂಗಾಮೂ ಮುಗಿಯುತ್ತಿದೆ. ಈ ವರುಷ (2022) ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕಡಿಮೆ. ಯಾಕೆಂದರೆ ಫಸಲು ಕಡಿಮೆ. ಹಾಗಾಗಿ ಬೆಲೆಯೂ ದುಬಾರಿ. ಅಲ್ಪಾನ್ಸೋ ಮಾವಿನ ಇವತ್ತಿನ (11-5-2022) ಒಂದು ಕಿಲೋದ ಬೆಲೆ (ಆನ್-ಲೈನ್ ಮಾರುಕಟ್ಟೆಯಲ್ಲಿ) ಹೀಗಿದೆ (ರೂ.):
ದ ಸ್ಟೇಟ್ಪ್ಲೇಟ್ - 1,800
ಆಮ್ವಾಲಾ - 1,200
ಅಮೆಜಾನ್ - 800
ಟ್ರೇಡಿ ಫುಡ್ - 700
ಬ್ಲಿಂಕ್ ಇಟ್ - 280
ಇಂಡಿಯಾ ಮಾರ್ಟ್ - 250
ಒಂದು ಕಿಲೋ ತೂಕದಲ್ಲಿ ಐದು ಅಲ್ಪಾನ್ಸೋ ಹಣ್ಣು ಇರಬಹುದು. ಅದು ಎಷ್ಟು ದುಬಾರಿ ಎಂಬುದನ್ನು ಗಮನಿಸಿ. ಜೊತೆಗೆ, ಒಂದು ಕಿಲೋದ ಮಾರಾಟ ಬೆಲೆಯ ವ್ಯಾಪ್ತಿ ರೂ.250ರಿಂದ ರೂ.1,800 ಎಂಬುದನ್ನೂ ಗಮನಿಸಿ. ಕೃಷಿ ಉತ್ಪನ್ನಗಳ ಮಾರಾಟದದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳು, ರಖಂ ಮತ್ತು ಚಿಲ್ಲರೆ ಮಾರಾಟಗಾರರು ಎಷ್ಟರ ಮಟ್ಟಿಗೆ “ಸುಲಿಗೆ" ಮಾಡುತ್ತಾರೆ ಅನ್ನೋದು ಈ ಮೇಲಿನ ಬೆಲೆ ಪಟ್ಟಿಯಿಂದ ಕಣ್ಣಿಗೆ ರಾಚುತ್ತದೆ ಅಲ್ಲವೇ? ಬೆಳೆಗಾರನಿಗೆ ಅಂತಿಮ ಬೆಲೆಯಲ್ಲಿ ಪ್ರತಿ ನೂರು ರೂಪಾಯಿಗೆ 25 ರೂಪಾಯಿಯೂ ದಕ್ಕುವುದಿಲ್ಲ ಎಂಬುದು ಶೋಷಣೆಯ ಇನ್ನೊಂದು ಮುಖ.
ಬೇಸಗೆಯಲ್ಲಿ ಮಾರುಕಟ್ಟೆಗೆ ಬರುವ ಮಾವಿನ ಇತರ ಜನಪ್ರಿಯ ತಳಿಗಳು ಬಾದಾಮಿ, ಮುಂಡಪ್ಪ, ಬಂಗನ್ಪಲ್ಲಿ ಇತ್ಯಾದಿ. ಇವುಗಳ ಬೆಲೆಯ ವ್ಯಾಪ್ತಿಯೂ ಅಲ್ಪಾನ್ಸೋ ಮಾವಿನದರಂತೆಯೇ ಇದೆ. ಬೇಸಗೆಯ ಇಂತಹ ಮಾವಿನ ತಳಿಗಳ ಪೂರೈಕೆ ಇಳಿಮುಖವಾಗುತ್ತಿದ್ದಂತೆ, ಇತರ ರಾಜ್ಯಗಳ ಮಾವಿನ ತಳಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ: ಆಂಧ್ರಪ್ರದೇಶದಿಂದ ಮಲ್ಲಿಕಾ, ನೀಲಂ ಮತ್ತು ಉತ್ತರಪ್ರದೇಶದಿಂದ ಚಾಸಿ, ದಸರಿ, ಲಂಗ್ಡಾ ಇತ್ಯಾದಿ ತಳಿಗಳು. ಕೇರಳದಿಂದಲೂ ಕೆಲವು ತಳಿಗಳು ಕರಾವಳಿ ಜಿಲ್ಲೆಗಳಿಗೆ ಮಾರಾಟಕ್ಕೆ ಬರುತ್ತವೆ.
ಮಂಗಳೂರಿನಲ್ಲಿ ಹಣ್ಣಿನ ರಸ ಮತ್ತು ಐಸ್ಕ್ರೀಮ್ ಮಾರಾಟಗಾರರನ್ನು ವಿಚಾರಿಸಿದಾಗ ತಿಳಿದು ಬರುವ ಸಂಗತಿ: ಮಾವಿನ ಜ್ಯೂಸ್ ತಯಾರಿಗೆ ಬಳಕೆಯಾಗುವ ತಳಿಗಳು - ಮುಂಡಪ್ಪ, ಬಾದಾಮಿ ಮತ್ತು ಅಲ್ಪಾನ್ಸೋ. ಫ್ರುಟ್ಸಲಾಡಿಗೆ ತೋತಾಪುರಿ ತಳಿಯ ಬಳಕೆ ಜಾಸ್ತಿ. ಇತರ ತಳಿಗಳು ಚಪ್ಪರಿಸಿ ತಿನ್ನಲು ಬಳಕೆ.
ಈ ತಳಿಗಳು ದುಬಾರಿ ಅನಿಸಿದರೆ, ಕಿಲೋಗೆ ರೂ.120 ಬೆಲೆಗೆ ಕಾಡು ಮಾವಿನ ಹಣ್ಣು ಲಭ್ಯ. ಕಾಡು ಮಾವಿನ ಕೆಲವು ತಳಿಗಳ ಹಣ್ಣು ಹುಳಿ ಅಥವಾ ಹುಳಿ ಸಿಹಿ. ಇವುಗಳಿಂದ ತಯಾರಿಸಿದ ಮಾವಿನ ಗೊಜ್ಜು ಬಹಳ ರುಚಿ. ತರಕಾರಿಗಳ ಸಾಂಬಾರಿಗೆ ಐದಾರು ಕಾಡು ಮಾವಿನ ಹಣ್ಣು ಹಾಕಿದರೆ ಅದು ಬಲು ರುಚಿ. ಕರಾವಳಿಯ ಜನಪ್ರಿಯ ಕಾಡು ಮಾವಿನ ತಳಿ ನೆಕ್ಕರೆ; ಇದರ ಹಣ್ಣು ನಾರುನಾರು. ಕಾಡು ಮಾವಿನ ರಸ ತೆಗೆದು ಬಿಸಿಲಿನಲ್ಲಿ ಒಣಗಿಸಿ ಮಾಡುವ ಮಾಂಬಳದ ತಾಳಿಕೆ ಒಂದು ವರುಷ.
ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ವಿಟಮಿನ್ “ಸಿ" ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ. ಹಾಗೆಯೇ ಇದರ ವಿಟಮಿನ್ “ಎ" ಕಣ್ಣಿನ ಆರೋಗ್ಯಕ್ಕೆ ಪೂರಕ. ಮಾವಿನಲ್ಲಿ ನೀರಿನಂಶ ಹೆಚ್ಚಿರುವ ಕಾರಣ ಬೇಸಗೆಯಲ್ಲಿ ದೇಹದ ನಿರ್ಜಲೀಕರಣದ ಅಪಾಯ ತಡೆಯಲು ಸಹಾಯಕ. ರಾತ್ರಿ ಮಲಗುವ ಮುನ್ನ ಒಂದಂಗುಲ ಚೌಕದ ಐದಾರು ಮಾವಿನ ಹಣ್ಣಿನ ತುಂಡು ಸೇವಿಸುವುದು ಮಲಬದ್ಧತೆಯ ಸಮಸ್ಯೆ ನಿವಾರಣೆಗೆ ಉಪಯುಕ್ತ.
ಮಾವು ಸಿಹಿಯ ಖಜಾನೆ. ಆದ್ದರಿಂದ ಸಕ್ಕರೆ ಕಾಯಿಲೆಯವರು ಇದನ್ನು ತಿನ್ನಬಾರದು. ಮಾವು ತಿನ್ನಲು ಆಸೆಯಾದರೆ ಏನು ಮಾಡೋದು? ಒಂದು ನಿಮಿಷ ಕಣ್ಣು ಮುಚ್ಚಿ, ಬಾಲ್ಯದಲ್ಲಿ ಮಾವು ತಿಂದದ್ದನ್ನು ನೆನಪು ಮಾಡಿಕೊಳ್ಳಿ. ಆ ಸವಿ ನೆನಪೇ ಸಾಕು. ಯಾಕೆಂದರೆ, ಬದುಕಿನಲ್ಲಿ ಮೊದಲ ಅನುಭವದ ರೆಕಾರ್ಡೇ ಮೆದುಳಿನಲ್ಲಿ ಮತ್ತೆಮತ್ತೆ ಸುತ್ತುತ್ತದೆ, ಅಲ್ಲವೇ?