ಹತ್ತು ವರುಷಗಳ ಮುಂಚೆ, ವಾಣಿಜ್ಯ ಅಡುಗೆ-ಅನಿಲ ಸಂಪರ್ಕ ಪಡೆದಿದ್ದೆ - ಮಂಗಳೂರಿನ “ಭಾರತ್ ಗ್ಯಾಸ್” ವಿತರಕರಲ್ಲಿ ಒಬ್ಬರಾದ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅವರಿಂದ. ಆಗ, ಅವರ ಕಚೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿತ್ತು. ಈಗ ಅವರ ಕಚೇರಿ ಬಿಜೈಯ ವಿವೇಕಾನಂದ ಉದ್ಯಾನದ ಎದುರಿದೆ.
ಆಗ ನಾನು ಪಾವತಿಸಿದ್ದ ಹಣ: ಭದ್ರತಾ ಠೇವಣಿ ರೂ.1,700; ರಿಫಿಲ್ ಸಿಲಿಂಡರ್ ರೂ.1,500; ಡೊಕುಮೆಂಟೇಷನ್ ರೂ.75 ಮತ್ತು ಸಾಬೂನುಗಳು ರೂ.300. ಒಟ್ಟು ರೂ.3,575. (ರಶೀದಿ ನಂಬ್ರ 408 ದಿನಾಂಕ 8-6-2012) “ನನಗೆ ಸಾಬೂನುಗಳು ಬೇಡ" ಎಂದಾಗ, “ಗ್ಯಾಸ್ ಸಂಪರ್ಕ ಬೇಕಾದರೆ ಸಾಬೂನು ಖರೀದಿ ಕಡ್ಡಾಯ” ಎ೦ದಿದ್ದರು.
ಅದಾಗಿ ಒಂದು ವರುಷದ ನಂತರ, ಅವರ ಕಚೇರಿಯಿಂದ ನನಗೊಂದು ಫೋನ್ ಕರೆ: “ನಿಮ್ಮ ಗ್ಯಾಸ್ ಕನೆಕ್ಷನ್ ರದ್ದು ಮಾಡುತ್ತೇವೆ.” ಯಾಕೆಂದು ಕೇಳಿದರೆ ಉತ್ತರವಿಲ್ಲ. ಗ್ಯಾಸ್ ಸಂಪರ್ಕ ಪಡೆಯುವಾಗಲೇ ನಾನು ಅವರಿಗೆ ಸ್ಪಷ್ಟ ಪಡಿಸಿದ್ದೆ, "ನಾನು ಸ್ನಾನಕ್ಕೆ ಬಿಸಿನೀರಿಗಾಗಿ ಈ ಗ್ಯಾಸ್ ಸಂಪರ್ಕ ಖರೀದಿಸುತ್ತಿದ್ದೇನೆ. ಹಾಗಾಗಿ ಗ್ಯಾಸ್ ಬಳಕೆ ಬಹಳ ಕಡಿಮೆ ಇರುತ್ತದೆ.”
ಕೆಲವು ಪೂರೈಕೆದಾರರಿಗೆ "ತಾವು ಬಳಕೆದಾರರಿಗೆ “ಭಾರೀ ಉಪಕಾರ” ಮಾಡುತ್ತಿದ್ದೇವೆ" ಎಂಬ ತಪ್ಪು ಕಲ್ಪನೆ ಇದೆ. ಅಂಥವರಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಪತ್ರ ಬರೆದು ಅಥವಾ ಸಂಭಾಷಣೆ ಧ್ವನಿ ಮುದ್ರಿಸಿ ಮುಂದಡಿ ಇಡಬೇಕಾಗುತ್ತದೆ. ಆದ್ದರಿಂದ ಅವರಿಗೆ ಈ ಕೆಳಗಿನಂತೆ ಪತ್ರ ಬರೆದೆ.
ಇವರಿಂದ: ಬಳಕೆದಾರನ ವಿಳಾಸ
ಇವರಿಗೆ: ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್, ಭಾರತ್ ಗ್ಯಾಸ್ ವಿತರಕರು, ಬಿಜೈ, ಮಂಗಳೂರು
ಮಾನ್ಯರೇ,
ವಿಷಯ: ಕನ್ಸೂಮರ್ ನಂಬ್ರ 54180480 - ಕಮರ್ಷಿಯಲ್ ಗ್ಯಾಸ್ ಕನೆಕ್ಷನ್
ನಿಮ್ಮಿಂದ ಈ ಗ್ಯಾಸ್ ಸಂಪರ್ಕ ಪಡೆದಿದ್ದೆ. ಆಗ ಪಾವತಿಸಿದ್ದ ಹಣ ರೂ.3,575. ಅನಂತರ, ನಿಮ್ಮ ಆಫೀಸಿಗೆ ಫೋನ್ ಮಾಡಿ “ರಿಫಿಲ್ ಸಿಲಿಂಡರ್” ಪಡೆಯುತ್ತಿದ್ದೇನೆ.
2-9-2013ರಂದು ನಿಮ್ಮ ಆಫೀಸಿಗೆ ಶ್ರೀಮತಿ …. ಅವರು ಖುದ್ದಾಗಿ ಹೋಗಿ ರಿಫಿಲ್ ಸಿಲಿಂಡರ್ ಬುಕ್ ಮಾಡಿದ್ದರು. ಅದನ್ನು ನಮಗೆ ಮನೆಯಲ್ಲಿ ಡೆಲಿವರಿ ಮಾಡುವಾಗ, ನಾವು ಕೇಳಿದರೂ ನಿಮ್ಮ ಸಿಬ್ಬಂದಿ ರಶೀದಿ ಕೊಡಲಿಲ್ಲ.
ನಿನ್ನೆ, 14-11-2013ರಂದು ನಿಮ್ಮ ಆಫೀಸಿನ ಸಿಬ್ಬಂದಿ ನನಗೆ ಎರಡು ಸಲ ಮೊಬೈಲಿಗೆ ಫೋನ್ ಮಾಡಿದ್ದಾರೆ. ಎರಡು ಸಲವೂ “ನಿಮ್ಮ ಗ್ಯಾಸ್ ಕನೆಕ್ಷನ್ ರದ್ದು ಮಾಡುತ್ತೇವೆ” ಎಂದು ಹೇಳಿದ್ದಾರೆ.
ಯಾವ ಕಾರಣಕ್ಕಾಗಿ ನನ್ನ ಗ್ಯಾಸ್ ಸಂಪರ್ಕ ರದ್ದು ಮಾಡಲಾಗುತ್ತದೆ? ಎಂದು ನನಗೆ ಪತ್ರ ಬರೆದು ತಿಳಿಸಬೇಕಾಗಿ ವಿನಂತಿ. ಅದಲ್ಲದೆ, "ನಮ್ಮ ಆಫೀಸಿಗೆ ಬಂದು ಮಾತಾಡಿ” ಎಂದು ನಿನ್ನೆ ಫೋನಿನಲ್ಲಿ ಹೇಳಿರುತ್ತೀರಿ. ಅದಕ್ಕಾಗಿ, ನಾನು ಸ್ವತಃ ಬಂದು ಈ ಪತ್ರ ನಿಮಗೆ ಕೊಡುತ್ತಿದ್ದೇನೆ.”
ನಿಮ್ಮ ವಿಶ್ವಾಸಿ ….. (ಬಳಕೆದಾರನ ಸಹಿ)
ಅವರ ಕಚೇರಿಗೆ ಹೋಗಿ ಈ ಪತ್ರ ಕೊಟ್ಟಾಗ ಅಲ್ಲಿನ ಸಿಬ್ಬಂದಿ ಗಪ್‌ಚಿಪ್. "ಯಾರು ನನಗೆ ನಿನ್ನೆ ಫೋನ್ ಮಾಡಿದವರು?” ಎಂದು ಕೇಳಿದರೆ ಉತ್ತರವಿಲ್ಲ. "ಯಾಕೆ ನನ್ನ ಗ್ಯಾಸ್ ಕನೆಕ್ಷನ್ ರದ್ದು ಮಾಡುತ್ತೀರಿ ಎಂದು ಕಾರಣ ತಿಳಿಸಿ ಲೆಟರ್ ಕೊಡಿ. ಅನಂತರ ನಿಮ್ಮ ಮಾರ್ಕೆಟಿಂಗ್ ಆಫೀಸರ್‌ಗೆ ಲೆಟರ್ ಬರೀತೇನೆ" ಎಂದಾಗ, “ಇಲ್ಲ, ಇಲ್ಲ. ನಿಮ್ಮ ಗ್ಯಾಸ್ ಕನೆಕ್ಷನ್ ರದ್ದು ಮಾಡೋದಿಲ್ಲ" ಎಂದರು.
ಇವತ್ತು ಭಾರತ್ ಗ್ಯಾಸಿನ ಆ ಸಂಪರ್ಕ ನಾನೇ ರದ್ದು ಮಾಡಿ, ಭದ್ರತಾ ಠೇವಣಿ ವಾಪಾಸು ಪಡೆದೆ. ಆಗ ಇದೆಲ್ಲ ನೆನಪಾಯಿತು.
ನಮ್ಮ ದೇಶದಲ್ಲಿ ಹಲವಾರು ಪೂರೈಕೆದಾರರಿಗೆ ಬಳಕೆದಾರರ ಮೇಲೆ ದಬ್ಬಾಳಿಕೆ ಮಾಡುವುದು, ಬಳಕೆದಾರರನ್ನು ಸತಾಯಿಸುವುದು ಅಭ್ಯಾಸವಾಗಿದೆ. ಅನೇಕ ಬಳಕೆದಾರರಿಗೆ ಇದನ್ನೆಲ್ಲ “ಸಹಿಸಿಕೊಳ್ಳುವುದು" ಅಭ್ಯಾಸವಾಗಿದೆ. ಇದರಿಂದಾಗಿ ಪೂರೈಕೆದಾರರಲ್ಲಿ “ನಮಗೆ ಹೇಳುವವರು ಕೇಳುವವರು ಯಾರೂ ಇಲ್ಲ” ಎಂಬ ಭಾವನೆ ಬೆಳೆದಿದೆ.
ಇದನ್ನು ಬದಲಾಯಿಸಿ, ಪೂರೈಕೆದಾರರಿಂದ ದಕ್ಷ ಸೇವೆ ಪಡೆಯಬೇಕಾದರೆ, ಬಳಕೆದಾರರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ತಮ್ಮ ಹಕ್ಕುಗಳನ್ನು ಪೂರೈಕೆದಾರರು ಗೌರವಿಸದಿದ್ದಾಗ, ತಮ್ಮ ಹಕ್ಕುಸಾಧನೆಗಾಗಿ ಬಳಕೆದಾರರು ನ್ಯಾಯಬದ್ಧ ಹೋರಾಟ ಮಾಡಬೇಕಾಗುತ್ತದೆ. ಈ ಹೋರಾಟದಲ್ಲಿ “ಬಳಕೆದಾರರ ಸಂಘಟನೆ”ಗಳ ಮಾರ್ಗದರ್ಶನ ಮತ್ತು ಬೆಂಬಲ ಪಡೆಯಬಹುದು.
ಅದಲ್ಲದೆ, ಈ ಪೋರ್ಟಲಿನಲ್ಲಿ ಕೇಂದ್ರ ಸರಕಾರದ ಅನೇಕ ಇಲಾಖೆಗಳ ಮತ್ತು ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಗಳ ಹಲವು ಸೇವೆಗಳ (ರೈಲು ಸೇವೆ, ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್. ಸೇವೆ, ಪೆಟ್ರೋಲ್/ ಡೀಸಿಲ್ ಮತ್ತು ಅಡುಗೆ ಅನಿಲ ಪೂರೈಕೆದಾರರು, ಬ್ಯಾಂಕುಗಳು ಇತ್ಯಾದಿ) ಬಗ್ಗೆ ದೂರುಗಳನ್ನು ದಾಖಲಿಸಬಹುದು:
www.pgportal.gov.in
ಗಮನಿಸಿ: ಈ ದೂರುಗಳನ್ನು 45 ದಿನಗಳ ಒಳಗೆ ಇತ್ಯರ್ಥ ಪಡಿಸಲೇ ಬೇಕು. ಮೊದಲ ಸಲ ದೂರು ನೀಡುವ ಮುನ್ನ ನಿಮ್ಮ ವಿಳಾಸ, ಇ-ಮೆಯಿಲ್ ಐಡಿ ಮತ್ತು ಮೊಬೈಲ್ ಫೋನ್ ನಂಬರ್ ದಾಖಲಿಸಿ, ನೋಂದಾಯಿಸ ಬೇಕು. ಅನಂತರ, ನೀವು ದೂರು ದಾಖಲಿಸಿದಾಗ, ನಿಮಗೆ ಒಂದು ರಿಜಿಸ್ಟ್ರೇಷನ್ ನಂಬರನ್ನು ಈ ಪೋರ್ಟಲ್ ಒದಗಿಸುತ್ತದೆ. ತದನಂತರ, ಅದನ್ನು ಪೋರ್ಟಲಿನಲ್ಲಿ ನಮೂದಿಸಿ, ನಿಮ್ಮ ದೂರಿನ ವಿಲೇವಾರಿಯ ದಿನದಿನದ ಪ್ರಗತಿಯನ್ನು ಈ ಪೋರ್ಟಲಿನಲ್ಲಿಯೇ ತಿಳಿಯಬಹುದು. ನಿಮ್ಮ ದೂರಿನ ವಿಲೇವಾರಿಯ ಜವಾಬ್ದಾರಿಯನ್ನು ಯಾವ ಮೇಲಧಿಕಾರಿಗೆ ವಹಿಸಲಾಗಿದೆಯೋ ಅವರ ಹೆಸರು, ವಿಳಾಸ ಮತ್ತು ಮೊಬೈಲ್ ಫೋನ್ ನಂಬರ್ ಕೂಡ ಪೋರ್ಟಲಿನಲ್ಲಿಯೇ ಕಾಣಿಸುತ್ತದೆ. ನಿಮ್ಮ ದೂರು ವಿಲೇವಾರಿ ಆದಾಗ, ನಿಮ್ಮ ಮೊಬೈಲ್ ಫೋನಿಗೆ ಸಂದೇಶ ಮತ್ತು ಇ-ಮೆಯಿಲ್ ಸಂದೇಶ ಬಂದೇ ಬರುತ್ತದೆ. (ಇದರಿಂದ ನಿಮಗೆ ಸಮಾಧಾನ ಆಗದಿದ್ದರೆ, ಅದೇ ಪೋರ್ಟಲಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.)
ನೆನಪಿರಲಿ: ಬಳಕೆದಾರರ ಸಮಸ್ಯಾ ಪರಿಹಾರಕ್ಕಾಗಿ, ಗೊಣಗುಟ್ಟುವುದರಿಂದ ಪ್ರಯೋಜನವಿಲ್ಲ. ಬದಲಾಗಿ, ಫಲಿತಾಂಶ ನಿರ್ದೇಶಿತ ಕಾರ್ಯತಂತ್ರಗಳನ್ನು ಬಳಸಬೇಕು. "ನಿಮಗೆ ಹೇಳುವವರು ಕೇಳುವವರು ಇದ್ದಾರೆ” ಎಂಬುದನ್ನು ಪೂರೈಕೆದಾರರಿಗೆ ಮತ್ತೆಮತ್ತೆ ನೆನಪು ಮಾಡಿಸಬೇಕಾಗುತ್ತದೆ, ಅಲ್ಲವೇ?