ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ಮಾತು

“ಇತರರಿಗಾಗಿ ಬದುಕುವವರೇ ಜೀವಂತ ವ್ಯಕ್ತಿಗಳು, ಉಳಿದವರು ಜೀವಂತರಾಗಿದ್ದರೂ ಸತ್ತಿರುವವರಂತೆ”  - ಇದು ಸ್ವಾಮಿ ವಿವೇಕಾನಂದರು ಗುಡುಗಿದ ಮಾತು. ಅವರ ಇಂತಹ ಇನ್ನೂ ಕೆಲವು ಮಿಂಚಿನ ಮಾತುಗಳು ಇಲ್ಲಿವೆ:

"ಎದ್ದೇಳಿ! ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ನಂತರ ಏನಾದರೂ ಒಂದು ಗುರುತನ್ನು ಬಿಟ್ಟು ಹೋಗಿ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ; ನಿನ್ನ ಕರ್ತವ್ಯ ನೀನು ಮಾಡಿಕೊಂಡು ಹೋಗು. ಜನರು ನಿನ್ನನ್ನು ಸ್ತುತಿಸಲಿ, ನಿಂದಿಸಲಿ. ಲಕ್ಷ್ಮಿಯ ಕೃಪೆ ನಿನ್ನ ಮೇಲಿರಲಿ, ಇಲ್ಲದೆ ಇರಲಿ; ಸಾವು ಯಾವಾಗಲಾದರೂ ಬರಲಿ. ಆದರೆ ನ್ಯಾಯದ ಮಾರ್ಗವನ್ನು ಮಾತ್ರ ಬಿಡಬೇಡ. ಹೇಡಿಯಾಗಿ ನೂರು ವರುಷ ಬದುಕುವುದಕ್ಕಿಂತ ಶೂರನಾಗಿ ಇಂದೇ ಸಾಯೋದು ಲೇಸು. ಭಯವೇ ಮೃತ್ಯು. ಭಯವೇ ಪಾಪ; ಭಯವೇ ಸರ್ವನಾಶ. ನಿಸ್ವಾರ್ಥಗುಣವೇ ಧರ್ಮದ ಪರೀಕ್ಷೆ. ಯಾರು ನಿಸ್ವಾರ್ಥಿಗಳೋ ಅವರು ದೇವರಿಗೆ ಹತ್ತಿರವಾಗಿರುತ್ತಾರೆ.

ಹೊಸಮಾರ್ಗದಲ್ಲಿ ಸಾಗಲು ಹಿಂಜರಿಯದಿರಿ. ಯಾರೂ ಈ ತನಕ ಮಾಡದಿರುವುದನ್ನು ಮಾಡಲು ಪ್ರಯತ್ನಿಸಿ. ದೃಢನಿರ್ಧಾರ ಮಾಡಿ. ಮಹಾನ್ ಕಾರ್ಯ ಮಾಡಲು ಮುಂದಡಿಯಿಟ್ಟಾಗ ಕಷ್ಟ, ಸೋಲು ಎದುರಾದರೆ ಹಿಂಜರಿಯಬೇಡಿ. ಬದುಕಿನ ಸೊಗಸನ್ನು ಹೆಚ್ಚಿಸುವುದು ಇಂತಹ ಪರೀಕ್ಷೆಗಳೇ ಎಂಬುದು ನೆನಪಿರಲಿ! ನಿಷ್ಕ್ರಿಯತೆಯನ್ನು ತ್ಯಜಿಸಿರಿ. ನಮ್ಮಲ್ಲಿ ಮಾತನಾಡುವವರು ಬಹಳ ಜನರಿದ್ದಾರೆ. ಆದರೆ ಕೆಲಸ ಮಾಡುವವರು ಕಡಿಮೆ. ಆದ್ದರಿಂದ, ಮಾತು ನಿಲ್ಲಿಸಿ, ಕೆಲಸದಲ್ಲಿ ತೊಡಗಿ. ಈ ಜಗತ್ತಿಗೆ ಎಂಥವರ ಅವಶ್ಯಕತೆ ಇದೆಯೆಂದರೆ, ಯಾರ ಜೀವನದಲ್ಲಿ ಜ್ವಲಂತ ಪ್ರೀತಿ ಮತ್ತು ನಿಸ್ವಾರ್ಥ ಭಾವ ತುಂಬಿದೆಯೋ ಅಂಥವರದು.

ಎಲ್ಲ ಕೆಡುಕುಗಳ ಕಾರಣವನ್ನು ಒಂದೇ ಒಂದು ಮಾತಿನಲ್ಲಿ ಹೇಳಿಬಿಡಬಹುದು - ಅದೇ ದೌರ್ಬಲ್ಯ. ಎಲ್ಲ ಪಾಪಕಾರ್ಯಗಳು ಸಂಭವಿಸುವುದಕ್ಕೂ ಮೂಲಕಾರಣ ಈ ದೌರ್ಬಲ್ಯವೇ. ಎಲ್ಲ ಸ್ವಾರ್ಥಪರತೆಗೂ ಈ ದೌರ್ಬಲ್ಯವೇ ಮೂಲಕಾರಣ. ಮನುಷ್ಯ ದುರ್ಜನನಾಗುವುದಕ್ಕೆ ಮೂಲಕಾರಣವೇ ದೌರ್ಬಲ್ಯ. ನಮ್ಮ ಅಂತರಂಗದ ಶಕ್ತಿಯನ್ನು ನಾವು ಕಂಡುಕೊಳ್ಳದಿರುವುದೇ ನಾಸ್ತಿಕತೆ. ಯಾರು ಎಂದಿಗೂ ದೌರ್ಬಲ್ಯವನ್ನು ತೋರುವುದಿಲ್ಲವೋ, ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಲ್ಲನೋ ಅವನು ಮಾತ್ರವೇ ದಿಟವಾದ ಸಂತ!

ಯುವಶಕ್ತಿಯಲ್ಲಿ ನನಗೆ ಅಪಾರವಾದ ಭರವಸೆಯಿದೆ. ನೆನಪಿಡಿ, ಸತ್ಯಸಾಕ್ಷಾತ್ಕಾರಕ್ಕೆ ಸ್ವಪ್ರಯತ್ನ ಅತ್ಯವಶ್ಯಕ. ಶಕ್ತಿಶಾಲಿಯೂ ಪೌರುಷವಂತನೂ ಆದ ನೀಚನನ್ನಾದರೂ ನಾನು ಗೌರವಿಸುತ್ತೇನೆ, ಹೇಡಿಯನ್ನಲ್ಲ. ಯುವಜನತೆಯಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ “ಹೊಸತನದ ಬಯಕೆ”ಯು ಹಳೆಯತನವನ್ನು ತಿರಸ್ಕರಿಸಲು ಅಥವಾ ಲೇವಡಿ ಮಾಡಲು ಎಡೆಮಾಡಿಕೊಡಬಾರದು. ಆಶಾವಾದವು ವಾಸ್ತವದಿಂದ ದೂರವಿರಬಾರದು, ಹುಚ್ಚು ಸಾಹಸವೂ ಆಗಿರಬಾರದು. ಅದು ವಿವೇಕಪೂರ್ಣವಾಗಿರಬೇಕು. ನಮ್ಮ ಭಾಗ್ಯದ ದಿನಗಳನ್ನು ರೂಪಿಸಿಕೊಳ್ಳಬೇಕಾದವರು ನಾವೇ. ಜೀವನವನ್ನು ಅಲ್ಲಗಳೆಯಬೇಡ, ವೈಫಲ್ಯಗಳ ಕುರಿತಾಗಿ ಕೊರಗಬೇಡ, ವಿಧಿಲಿಖಿತವನ್ನು ಶಪಿಸಬೇಡ, ಸಾಹಸದಿಂದ ಹೋರಾಡು, ಸತ್ಯಕ್ಕಾಗಿ ಬದುಕು, ಸಮಯ ಬಂದರೆ ಸತ್ಯಕ್ಕಾಗಿಯೇ ಪ್ರಾಣತ್ಯಾಗ ಮಾಡು.

ನೀನು ಮುನ್ನೂರ ಮೂವತ್ತಮೂರು ಕೋಟಿ ದೇವತೆಗಳನ್ನು ನಂಬಿಯೂ, ನಿನ್ನನ್ನು ನೀನೇ ನಂಬಲಾಗದಿದ್ದರೆ ನೀನು ನಾಸ್ತಿಕ! ನಿನ್ನನ್ನು ನೀನು ನಂಬಿದಾಗ ನಿನಗೆ ನೀನೇ ಸಹಾಯ ಮಾಡಿಕೊಳ್ಳಬಲ್ಲೆ."

ಬಹುಪಾಲು ಭಾರತೀಯರು ಇವತ್ತಿಗೂ ಗುಲಾಮಿ ಮನೋಭಾವದಿಂದ ಹೊರಬಂದಿಲ್ಲ. ವಿದೇಶದ್ದು ಏನಿದ್ದರೂ ಅವರಿಗೆ ಉತ್ತಮ! ಪಾಶ್ಚಾತ್ಯರು ಏನು ಹೇಳಿದರೂ ಅದು ಸರಿ! ನಮ್ಮ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಬದಲಾಗಿ, ವಿದ್ಯಾರ್ಥಿಗಳಿಲ್ಲದೆ ಪರದಾಡುತ್ತಿರುವ ವಿದೇಶೀ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ಹೋಗುತ್ತಾರೆ! ನಮ್ಮ ದೇಶದ ಕಂಪೆನಿಗಳಲ್ಲಿ, ಇಲಾಖೆಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ದುಡಿಯಲು ತಯಾರಿಲ್ಲದೆ, ಪರದೇಶಗಳ ಕಂಪೆನಿಗಳ ಉದ್ಯೋಗಗಳನ್ನೇ ಅರಸಿ ಹೋಗಿ, ಅಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ದುಡಿಯುತ್ತಾರೆ! ಅನಂತರ, ನಮ್ಮ ಮಹಾನ್ ದೇಶದ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಾರೆ. ನಮ್ಮ ದೇಶದ ಅಪ್ರತಿಮ ಸಾಧನೆಗಳನ್ನು ಕೀಳಾಗಿ ಕಾಣುತ್ತಾರೆ

ಕಳೆದ ಎರಡು ವರುಷಗಳಲ್ಲಿ ಕೊರೋನಾ ವೈರಸ್ (ಕೋವಿಡ್ ೧೯) ಎಂಬ ಮಹಾಮಾರಿಯ ದಾಳಿಗೆ ಇಡೀ ಜಗತ್ತೇ ತತ್ತರಿಸಿದೆ; ಆದರೆ, ೧೪೦ ಕೋಟಿಗಳಿಗಿಂತ ಅಧಿಕ ಜನಸಂಖ್ಯೆ ಇರುವ ನಮ್ಮ ದೇಶ ಅದನ್ನು ಸಮರ್ಥವಾಗಿ ಎದುರಿಸಿದೆ. ಮಾತ್ರವಲ್ಲ, ಆ ವೈರಸಿನ ಸ್ಫೋಟ ತಡೆಯಲಾಗದೆ ಕಂಗೆಟ್ಟಿರುವ ಹಲವಾರು ದೇಶಗಳಿಗೆ ವ್ಯಾಕ್ಸೀನ್ ಒದಗಿಸುತ್ತಿದೆ. ಇಂತಹ ಮಹಾನ್ ಸಾಧನೆಯೂ ಕಾಣಿಸದಂತೆ “ನಟನೆ" ಮಾಡುವ ಅಂತಹ ಟೀಕಾಕಾರರು, ಸ್ವಾಮಿ ವಿವೇಕಾನಂದರ ಸ್ಫೋಟಕ ಮಾತುಗಳನ್ನು ಮನನ ಮಾಡಬೇಕು.

ಕೇವಲ 39 ವರುಷ 5 ತಿಂಗಳು ಬದುಕಿದ್ದರು ಸ್ವಾಮಿ ವಿವೇಕಾನಂದರು (ಜನನ 12-01-1863; ನಿಧನ 4-7-1902). ಅಷ್ಟರಲ್ಲೇ ಭಾರತದ ಭವ್ಯ ಪರಂಪರೆಯ ಉದಾತ್ತ ವಿಚಾರಗಳನ್ನು ಅರೆದು ಕುಡಿದರು. ಕೈಯಲ್ಲಿ ಚಿಕ್ಕಾಸು ಇಲ್ಲದಿದ್ದರೂ ಅಮೇರಿಕಾ ಮತ್ತು ಯುರೋಪಿಗೆ ಹೋಗಿ, ಅಲ್ಲಿ ಸುಮಾರು ಮೂರೂವರೆ ವರುಷ ಹಲವಾರು ಸ್ಥಳಗಳಿಗೆ ಭೇಟಿ ನೀಡಿ, ಉಪನ್ಯಾಸಗಳನ್ನಿತ್ತು, ಭಾರತದ ವೇದಾಂತ ಜ್ನಾನವನ್ನು ಪ್ರಸಾರ ಮಾಡಿದರು. ಸಪ್ಟಂಬರ್ 1893ರಲ್ಲಿ ಚಿಕಾಗೋದಲ್ಲಿ ವಲ್ಡ್ ಪಾರ್ಲಿಮೆಂಟ್ ಆಫ್ ರಿಲಿಜಿಯನ್ಸಿನಲ್ಲಿ ಅವರು ನೀಡಿದ ವಿದ್ವತ್ಪೂರ್ಣ ಉಪನ್ಯಾಸ ಭಾರತದ ಬಗೆಗಿನ ಪಾಶ್ಚಾತ್ಯರ ತಪ್ಪುಕಲ್ಪನೆಗಳನ್ನೆಲ್ಲ ಧೂಳೀಪಟ ಮಾಡಿತು. ಅನಂತರ ಭಾರತಕ್ಕೆ ಹಿಂತಿರುಗಿ, ರಾಮಕೃಷ್ಣ ಮಿಷನ್ ಸ್ಥಾಪಿಸಿ, ಭಾರತದ ಐದು ಸಾವಿರ ವರುಷಗಳ ಪಾರಂಪರಿಕ ಜ್ನಾನವು ಮನೆಮನೆಗೂ ತಲಪಬೇಕು ಎಂಬ ಮಹದುದ್ದೇಶದಿಂದ ಕಾರ್ಯೋನ್ಮುಖರಾದರು.  ಈ ಮಹಾತ್ವಾಕಾಂಕ್ಷೆಯ ಕಾಯಕದ ಸಾಧನೆಗಾಗಿ ಯುವಶಿಷ್ಯರ ತಂಡವನ್ನೇ ಕಟ್ಟಿದರು.

ಸ್ವಾಮಿ ವಿವೇಕಾನಂದರ ಪ್ರತಿಯೊಂದು ಮಾತೂ ನಮ್ಮಲ್ಲಿ ವಿದ್ಯುದಲೆಗಳನ್ನು ಚಿಮ್ಮಿಸುತ್ತದೆ. ಯಾಕೆಂದರೆ, ಅವರು ನುಡಿದಂತೆ ನಡೆದವರು. ತಾವು ಹೇಳಿದ್ದನ್ನು ಕೆಲವೇ ವರುಷಗಳ ತಮ್ಮ ಬದುಕಿನಲ್ಲಿ ಸಾಧಿಸಿ ತೋರಿಸಿದವರು. ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ; ರಾಷ್ಟ್ರೀಯ ಯುವದಿನವಾಗಿ ಆಚರಿಸಲ್ಪಡುತ್ತಿದೆ. ಈ ಸಂದರ್ಭದಲ್ಲಿ, ಈ ಲೇಖನದ ಆರಂಭದಲ್ಲಿರುವ ಸ್ವಾಮಿ ವಿವೇಕಾನಂದರ ಗುಡುಗಿನ ಮಾತು ನಮಗೆಲ್ಲರಿಗೂ ಬದುಕಿನ ದಾರಿದೀಪವಾಗಲಿ.