2021ನೆಯ ವರುಷದಲ್ಲಿ ಕೊನೆಯ ಸಲ ಸೂರ್ಯ ಮುಳುಗಿದ. ಆಗ, ಹಿಂತಿರುಗಿ ನೋಡಿದಾಗ ಪ್ರಧಾನವಾಗಿ ಕಂಡದ್ದೇನು?
ಕೊರೋನಾ ಎಂಬ ವೈರಸ್ (ಕೋವಿಡ್ 19)ನ ಅಟ್ಟಹಾಸ. ತಾನು ಭಾರೀ ಬುದ್ಧಿವಂತ ಎಂದು ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯ ಜೀವಿಗಳನ್ನು 2020ರ ಶುರುವಿನಿಂದಲೂ ಆ ಕಣ್ಣಿಗೆ ಕಾಣದ ವೈರಸ್ ಅಟ್ಟಾಡಿಸುತ್ತಿದೆ. ಬೇರೆಬೇರೆ ವ್ಯಾಕ್ಸೀನುಗಳನ್ನು ಅಭಿವೃದ್ಧಿ ಪಡಿಸಿ, ಕೋಟಿಗಟ್ಟಲೆ ಮಾನವರಿಗೆ ಚುಚ್ಚಿದರೂ ಅದು ಕ್ಯಾರೇ ಅನ್ನುತ್ತಿಲ್ಲ. ಮಾನವನ ಪ್ರತಿಯೊಂದು ಯುಕ್ತಿಗೂ ಕೊರೋನಾ ವೈರಸ್ ರೂಪಾಂತರಗೊಂಡು ಪ್ರತಿಯುಕ್ತಿ ಹೂಡುತ್ತಿದೆ. ವರ್ಷಾಂತ್ಯದಲ್ಲಿ ಓಮಿಕ್ರಾನ್ ಎಂಬ ರೂಪಾಂತರಿಯ ಮೂಲಕ ಕೊರೋನಾ ವೈರಸ್ ದಾಂಧಲೆ ಎಬ್ಬಿಸಿದೆ.
ಕೊರೋನಾ ವೈರಸಿನ ಹೊಡೆತಕ್ಕೆ ಮಾನವ ಕುಲವೇ ತತ್ತರಿಸಿ ಹೋಗಿದೆ. 31ಡಿಸೆಂಬರ್ 2021ರ ಅಂಕೆಸಂಖ್ಯೆಗಳು ಅದು ಮಾಡಿದ ಅನಾಹುತವನ್ನು ಬಿಂಬಿಸುತ್ತಿವೆ:
ಎಲ್ಲಿ? ಜನಸಂಖ್ಯೆ (ಕೋಟಿ) ಒಟ್ಟು ಸೋಂಕಿತರು (ಕೋಟಿ) ಒಟ್ಟು ಮೃತರು (ಲಕ್ಷ)
ಜಗತ್ತು 791.71 28.69 54.46
ಯು.ಎಸ್.ಎ. 33.39 5.52 8.45
ಭಾರತ 140.06 3.48 4.81
(ಗಮನಿಸಿ: ಅತ್ಯಧಿಕ ಕೊರೋನಾ ಸಾವು ಯು.ಎಸ್.ಎ. ದೇಶದಲ್ಲಿ; ಎರಡನೇ ಅತ್ಯಧಿಕ ಸಾವು ಭಾರತದಲ್ಲಿ)
“ಈ ಬಾಲಂಗೋಚಿ ವೈರಸ್ ಏನು ಮಾಡೀತು" ಎಂದು ಸೊಕ್ಕಿನಿಂದ ಇದ್ದವರೆಲ್ಲಾ ತಮ್ಮ ಜೀವನವಿಧಾನವನ್ನೇ ಬದಲಾಯಿಸಬೇಕಾಯಿತು. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಬಂಧುಬಾಂಧವರು, ಗೆಳೆಯಗೆಳತಿಯರು, ಅಕ್ಕಪಕ್ಕದವರಲ್ಲಿ ಕೆಲವರು ಕೊರೊನಾ ವೈರಸಿಗೆ ಬಲಿಯಾದರು.
ಇದರಿಂದ ನಾವು ಕಲಿಯಬೆಕಾದ ದೊಡ್ಡ ಪಾಠ ಏನು? "ನಾವು ಯಾರೂ ಶಾಶ್ವತ ಅಲ್ಲ” ಎಂಬುದು.
ಇನ್ನಾದರೂ ನಾವು ಈ ಪಾಠ ಕಲಿಯುತ್ತೇವೆಯೇ? ವರ್ಷಾಂತ್ಯದಲ್ಲಿ, ಕರ್ನಾಟಕ ಸರಕಾರದ 15 ಅಧಿಕಾರಿಗಳ ಕಚೇರಿ ಹಾಗೂ ಮನೆಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿದಾಗ ಪತ್ತೆ ಆದದ್ದೇನು? ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಯ ಬಳಿ ಕೋಟಿಗಟ್ಟಲೆ ಬೆಲೆಬಾಳುವ ಸೊತ್ತುಗಳು: ಎಕರೆಗಟ್ಟಲೆ ಜಮೀನು, ಹತ್ತಾರು ಮನೆಸೈಟುಗಳು, ಹಲವಾರು ಮನೆ/ ಬಂಗಲೆಗಳು, ವಾಣಿಜ್ಯ ಕಟ್ಟಡಗಳು, ಕಿಲೋಗಟ್ಟಲೆ ಬಂಗಾರ ಮತ್ತು ಬೆಳ್ಳಿ, ಲಕ್ಷಗಟ್ಟಲೆ ರೂಪಾಯಿ ಬ್ಯಾಂಕ್ ಠೇವಣಿಗಳು, ಹಲವು ವಾಹನಗಳು ಇತ್ಯಾದಿ. ಇದು ಅವರು ತಮ್ಮ ಸಂಬಳದಲ್ಲಿ ಉಳಿತಾಯ ಮಾಡಿ ಗಳಿಸಿದ ಸೊತ್ತಲ್ಲ. ಬದಲಾಗಿ, ಜನಸಾಮಾನ್ಯರ ಜೀವ ಹಿಂಡಿ, ಲಂಚ ಸುಲಿದು ಆ ಹಣದಿಂದ ಗಳಿಸಿದ ಅಕ್ರಮ ಸೊತ್ತು. ಇದನ್ನೆಲ್ಲ ಈ ಲೋಕ ಬಿಟ್ಟು ಹೋಗುವಾಗ ತಮ್ಮೊಂದಿಗೆ ಒಯ್ಯುತ್ತಾರೇನು?
ಈ ವರುಷದ ಕೊನೆಯಲ್ಲಿ ಕಾನ್ಪುರ ಮತ್ತು ಕನೌಜಿನಲ್ಲಿ, ಸುಗಂಧ ವ್ಯಾಪಾರಿಯೊಬ್ಬನ ಮನೆಗಳು ಮತ್ತು ಗೋಡೌನಿನಲ್ಲಿ ಪತ್ತೆಯಾದ ಸೊತ್ತು ಎಷ್ಟು? 257 ಕೋಟಿ ರೂಪಾಯಿಗಳು! ಅದಲ್ಲದೆ, 25 ಕಿಲೋ ಬಂಗಾರ ಮತ್ತು 200 ಕಿಲೋ ಗಂಧದೆಣ್ಣೆ! ಮನೆಯ ಗೋಡೆಯೊಳಗಿನ ಸಂದೂಕಗಳಲ್ಲಿ, ನೆಲದಡಿಯ ಸಂಪುಟಗಳಲ್ಲಿ ರೂಪಾಯಿ ಐನೂರು ಹಾಗೂ ಇನ್ನೂರರ ನೋಟುಗಳ ರಾಶಿರಾಶಿ ಪ್ಯಾಕೆಟುಗಳು! ಅವನ್ನು ಎಣಿಸಲು 19 ನೋಟು-ಎಣಿಸುವ ಯಂತ್ರಗಳನ್ನು ಬಳಸಿದರೂ ಅಧಿಕಾರಿಗಳಿಗೆ 36 ಗಂಟೆ ತಗಲಿತು! ಇಷ್ಟೆಲ್ಲ ಆದ ನಂತರವೂ ಆಸಾಮಿ ಹೇಳಿದ್ದೇನು? “ಸರಕಾರಕ್ಕೆ ನಾನು ಪಾವತಿಸಬೇಕಾದ 52 ಕೋಟಿ ರೂಪಾಯಿ ತೆರಿಗೆ ಮುರಿದುಕೊಂಡು ಉಳಿದ ಹಣವನ್ನು ನನಗೆ ಹಿಂತಿರುಗಿಸಿ” ಎಂಬುದಾಗಿ.
ಕೊರೊನಾ ವೈರಸಿನಿಂದಾಗಿ, ಕೇವಲ ಎರಡೇ ವರುಷಗಳಲ್ಲಿ 54 ಲಕ್ಷಕ್ಕಿಂತ ಅಧಿಕ ಜನರು ಮೃತರಾದ ನಂತರವೂ …. ಅನ್ಯಾಯದಿಂದ ಕೋಟಿಗಟ್ಟಲೆ ರೂಪಾಯಿ ಸಂಪತ್ತು ಗುಡ್ಡೆ ಹಾಕಿಕೊಂಡು, “ಅದೆಲ್ಲವನ್ನೂ ತಾವು ಸತ್ತಾಗ ತಮ್ಮೊಂದಿಗೆ ಒಯ್ಯುತ್ತೇವೆ” ಎಂಬ ಭ್ರಮೆಯಲ್ಲಿ ಬದುಕುವವರು ಪಾಠ ಕಲಿಯೋದು ಇನ್ಯಾವಾಗ?
ತಮ್ಮ ಕೋಟಿಗಟ್ಟಲೆ ರೂಪಾಯಿ ಸೊತ್ತಿನಲ್ಲಿ, ಈ ಕೆಳಗಿನ ಯಾವುದೇ ಉದ್ದೇಶಕ್ಕೆ ಕೆಲವೇ ಸಾವಿರ ರೂಪಾಯಿ ದಾನ ಮಾಡಲಿಕ್ಕೆ ಈ ಕೋಟ್ಯಾಧೀಶರು ತಯಾರಿದ್ದಾರೆಯೇ?
-ಅನಾಥಾಶ್ರಮದ ಅನಾಥ ಮಕ್ಕಳ ಒಂದು ವಾರದ ಊಟಕ್ಕಾಗಿ
-ಕುರುಡರ ಶಾಲೆಯ ಕುರುಡ ವಿದ್ಯಾರ್ಥಿಗಳ ಒಂದು ವಾರದ ಊಟಕ್ಕಾಗಿ
-ವೃದ್ಧಾಶ್ರಮದ ವೃದ್ಧರ ಒಂದು ದಿನದ ಊಟಕ್ಕಾಗಿ
-ಆಸಿಡ್ ಧಾಳಿಯ ಬಲಿಪಶುಗಳ ಚಿಕಿತ್ಸೆಗಾಗಿ
-ಬಡಕುಟುಂಬದ ವಿದ್ಯಾರ್ಥಿಯೊಬ್ಬನ ಶಾಲೆ/ ಕಾಲೇಜಿನ ಶುಲ್ಕಕ್ಕಾಗಿ
“ಇಲ್ಲ" ಎಂದಾದರೆ, ಅವರಿಗೆ ಅಂತಹ ಒಳ್ಳೆಯ ಕೆಲಸ ಮಾಡಲು 2022ನೆಯ ಇಸವಿಯಲ್ಲಾದರೂ ಮನಸ್ಸಾಗಲಿ ಎಂದು ಹಾರೈಸೋಣ.