ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮಹಾತ್ಮಾ ಗಾಂಧಿಯವರ ಬದುಕಿಗೆ ಹಲವು ಮುಖಗಳಿದ್ದವು. ಅವರ ಜನ್ಮದಿನದ ೧೫೨ನೇ ವರುಷದ ಇಂದಿನ ಸಂದರ್ಭದಲ್ಲಿ, ಅವುಗಳಲ್ಲಿ ಜನಜನಿತವಲ್ಲದ ಕೆಲವನ್ನು ತಿಳಿಯೋಣ.
ಕ್ರೀಡಾ ಸಂಘಟಕ: ದಕ್ಷಿಣ ಆಫ್ರಿಕಾದಲ್ಲಿದ್ದಾಗ, ದರ್ಬನ್, ಪ್ರಿಟೋರಿಯಾ ಮತ್ತು ಜೋಹಾನ್ಸ್-ಬರ್ಗಿನಲ್ಲಿ ಮೂರು ಫುಟ್ಬಾಲ್ ಕ್ಲಬ್ಗಳನ್ನು ಗಾಂಧಿ ಸ್ಥಾಪಿಸಿದ್ದರು ಎಂದು ಅಂತರರಾಷ್ಟ್ರೀಯ ಫುಟ್ಬಾಲ್ ಸಂಘಟನೆ (ಫಿಫಾ) ತಿಳಿಸಿದೆ. ಈ ಮೂರು ಫುಟ್ಬಾಲ್ ಕ್ಲಬ್ಗಳಿಗೆ "ಪ್ಯಾಸಿವ್ ರೆಸಿಸ್ಟರ್ಸ್ ಸೂಕರ್ ಕ್ಲಬ್” ಎಂಬ ಒಂದೇ ಹೆಸರು.
ದತ್ತು ಮಕ್ಕಳ ತಂದೆ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗುವಾಗ ನೈಕರ್ ಎಂಬ ಅಸ್ಪೃಶ್ಯ ಹುಡುಗನನ್ನು ಗಾಂಧಿ ಕರೆದು ತಂದಿದ್ದರು. ಲಕ್ಷ್ಮಿ ಎಂಬ ಅಸ್ಪೃಶ್ಯ ಹುಡುಗಿಯನ್ನೂ ಗಾಂಧಿ ಮಗಳಾಗಿ ದತ್ತು ಪಡೆದಿದ್ದರು. ಅನಂತರ, ೧೯೩೩ರಲ್ಲಿ ಒಬ್ಬ ಬ್ರಾಹ್ಮಣ ಯುವಕನೊಂದಿಗೆ ಲಕ್ಷ್ಮಿಯ ಮದುವೆ ಮಾಡಿದರು.
ಯುದ್ಧದಲ್ಲಿ ಭಾಗವಹಿಸಿದ ಯೋಧ: ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಬೋರ್ ಯುದ್ಧದ ಸಂದರ್ಭದಲ್ಲಿ, ಬ್ರಿಟಿಷರಿಗೆ “ಸ್ಟ್ರೆಚರ್ ವಾಹಕ”ರಾಗಿ ಸಹಕರಿಸಲಿಕ್ಕಾಗಿ ನಟಾಲ್ ಇಂಡಿಯನ್ ಅಂಬುಲೆನ್ಸ್ ಕೋರ್ ಎಂಬ ಸೈನ್ಯದಳವನ್ನು ಗಾಂಧಿ ಸಂಘಟಿಸಿದರು. ಅದರಲ್ಲಿ ೩೦೦ ಭಾರತೀಯರು ಮತ್ತು ೮೦೦ ಒಪ್ಪಂದದ ಕಾರ್ಮಿಕರು ಇದ್ದರು. ಈ ಸೈನ್ಯದಳದ ವೆಚ್ಚವನ್ನು ಅಲ್ಲಿನ ಭಾರತೀಯರು ಭರಿಸಿದರು. ಸ್ಪಿಯೋನ್ ಕೆಓಪಿ (೨೩ - ೨೪ ಜನವರಿ ೧೯೦೦ರ) ಯುದ್ಧದಲ್ಲಿ, ಈ ಸೈನ್ಯದಳದ ಯೋಧನಾಗಿ ಗಾಂಧಿ ಭಾಗವಹಿಸಿದ್ದರು. ಆ ಯುದ್ಧದಲ್ಲಿ ಗಾಂಧಿ ಸಲ್ಲಿಸಿದ ಸೇವೆಗಾಗಿ, ಅವರಿಗೆ ಕೈಸರ್-ಎ-ಹಿಂದ್ ಎಂಬ ಬಿರುದನ್ನಿತ್ತು ಬ್ರಿಟಿಷರು ಗೌರವಿಸಿದರು.
ದಯಾಮರಣ ನೀಡಿದಾತ: ಆಶ್ರಮದಲ್ಲಿ ೧೯೨೮ರಲ್ಲಿ ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದ ಒಂದು ಕರುವಿನ ಸಂಕಟ ನಿವಾರಣೆಗಾಗಿ ಅದರ ಪ್ರಾಣ ತೆಗೆದಿದ್ದರು ಗಾಂಧಿ.
ಸಂತ: ಜಗತ್ಪ್ರಸಿದ್ಧ ನಿಯತಕಾಲಿಕ "ಟೈಮ್"ನ ೧೯೩೦ರ “ವರುಷದ ವ್ಯಕ್ತಿ”ಯಾಗಿ ಗೌರವಿಸಲ್ಪಟ್ಟಿದ್ದರು ಗಾಂಧಿ. ಮೂರು ತಿಂಗಳ ನಂತರ ಇನ್ನೊಂದು ಮುಖಪುಟ ಲೇಖನದಲ್ಲಿ ಅದೇ ನಿಯತಕಾಲಿಕ ಗಾಂಧಿಯವರನ್ನು “ಸಂತ" ಎಂದು ಸಂಭೋದಿಸಿತು.
ಚಾರ್ಲಿ ಚಾಪ್ಲಿನ್ ೧೯೩೧ರಲ್ಲಿ ಗಾಂಧಿಯವರನ್ನು ಭೇಟಿಯಾಗಲು ಬಯಸಿದರು. ಅವರು ಯಾರೆಂದು ತನಗೆ ಗೊತ್ತಿಲ್ಲ ಎಂದು ಗಾಂಧಿ ತನ್ನ ಸಂಗಡಿಗರಿಗೆ ತಿಳಿಸಿದರು. ಆಗ, ಚಾರ್ಲಿ ಚಾಪ್ಲಿನರ ಜನಪ್ರಿಯತೆಯ ಬಗ್ಗೆ ಸಂಗಡಿಗರು ಗಾಂಧಿಯವರಿಗೆ ಮಾಹಿತಿ ನೀಡಿ, ಅವರ ಭೇಟಿಗೆ ದಿನಾಂಕ ಗೊತ್ತು ಪಡಿಸಿದರು. ಅನಂತರ, ಲಂಡನಿನಲ್ಲಿ ಡಾ. ಚುನಿ ಲಾಲ್ ಕಟಿಯಾಲ್ ಅವರ ಮನೆಯಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳು ಭೇಟಿಯಾದರು.
ಮಾಹಿತಿ ಸಂಗ್ರಹ: ವಾರಪತ್ರಿಕೆ "ದ ವೀಕ್" ೩೦ ಜೂನ್ ೨೦೧೯ರ "ದ ಅನ್-ನೋನ್ ಗಾಂಧಿ” ವಿಷಯದ ವಿಶೇಷ ಸಂಚಿಕೆಯ ಡೇನಿ ಲಾಲ್ ಅವರ ಬರಹ “ಮೆನಿ ಫೇಸಸ್ ಆಫ್ ಗಾಂಧಿ”