ಮಳೆಕಾಡಿನ ಬಳ್ಳಿಯೊಂದು "ಡಿಶ್" ಆಕಾರದ ಎಲೆಗಳನ್ನು ರೂಪಿಸಿಕೊಂಡಿದೆ. ಯಾಕೆ ಗೊತ್ತೇ? ಪರಾಗಸ್ಪರ್ಶಕ್ಕಾಗಿ ಬಾವಲಿಗಳನ್ನು ಆಕರ್ಷಿಸಲು.
ಈ ಎಲೆಗಳ ಆಕಾರದಿಂದಾಗಿ ಉಂಟಾಗುವ ಸ್ಪಷ್ಟ ಪ್ರತಿಧ್ವನಿಗಳನ್ನು ಬಾವಲಿಗಳು ಎರಡು ಪಟ್ಟು ವೇಗವಾಗಿ ಗುರುತಿಸುತ್ತವೆ (ಈ ಆಕಾರವಿಲ್ಲದ ಇತರ ಎಲೆಗಳಿಂದ ಮೂಡುವ ಪ್ರತಿಧ್ವನಿಗಳಿಗೆ ಹೋಲಿಸಿದಾಗ).
ಈ ಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಮಾರ್ಕ್ ಗ್ರಾವಿಯಾ ಇವೆನಿಯಾ. ಇದರ ಹೂಗಳ ಪಕ್ಕದಲ್ಲಿರುವ ಎಲೆಗಳು ಥೇಟ್ ಡಿಶ್ ಫಲಕದಂತೆಯೇ ನಿಮ್ನವಾಗಿವೆ ಎಂಬುದನ್ನು ಸಂಶೋಧಕರು ಗಮನಿಸಿದರು. ಈ ಸಂಶೋಧನೆ ಮಾಡಿದ್ದು ಬ್ರಿಟನಿನ ಬ್ರಿಸ್ಟೋಲ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಉಲಂ ವಿಶ್ವವಿದ್ಯಾಲಯದ ವಿಜ್ನಾನಿಗಳು.
"ಎಲೆಗಳಿಂದ ಪ್ರತಿಧ್ವನಿಸುವ ಅಲೆಗಳಿಂದ ಬಳ್ಳಿ ಮತ್ತು ಬಾವಲಿಗಳು - ಇವೆರಡಕ್ಕೂ ಪ್ರಯೋಜನ" ಎನ್ನುತ್ತಾರೆ ಬ್ರಿಸ್ಟೋಲ್ ವಿಶ್ವವಿದ್ಯಾಲಯದ ಜೈವಿಕ ವಿಜ್ನಾನಗಳ ವಿಭಾಗದ ಮಾರ್ಕ್ ಹೊಲ್ಡಿರೀಡ್.
ಅದು ಬಾವಲಿಗಳ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ಪ್ರತಿ ರಾತ್ರಿ, ತಮ್ಮ ಶಕ್ತಿಯ ಅವಶ್ಯಕತೆ ಪೂರೈಸಲಿಕ್ಕಾಗಿ ಬಾವಲಿಗಳು ಈ ಹೂಗಳ ಮಕರಂದ ಸೇವಿಸಲು ನೂರಾರು ಭೇಟಿ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ, ಈ ಬಳ್ಳಿ ತೀರಾ ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ, ಇದರಲ್ಲಿ ಪರಾಗಸ್ಪರ್ಶ ಆಗಬೇಕಾದರೆ ಬಾವಲಿಯಂತೆ ಬಹಳ ಸುತ್ತಾಡುವ ಪರಾಗಸ್ಪರ್ಶಕ ಜೀವಿಗಳನ್ನು ಇದು ಆಕರ್ಷಿಸಬೇಕಾಗುತ್ತದೆ" ಎಂದು ಅವರು ವಿವರಿಸುತ್ತಾರೆ.
ಸಂಶೋಧಕರು ಈ ವಿಶೇಷ ಎಲೆಗಳ ಪ್ರತಿಧ್ವನಿಸುವ ಗುಣಗಳನ್ನು ವಿಶ್ಲೇಷಿಸಿದಾಗ ತಿಳಿದು ಬಂದ ವಿಷಯಗಳು: ಈ ಎಲೆಗಳು ಪ್ರಬಲವಾದ ಹಾಗೂ ವಿವಿಧ ದಿಕ್ಕಿಗೆ ಪಸರಿಸುವ ಪ್ರತಿಧ್ವನಿ ತರಂಗಗಳನ್ನು ವಾಪಾಸು ಕಳಿಸುತ್ತವೆ. ಆ ತರಂಗಗಳ ಧ್ವನಿ ಗುರುತು ಬಹಳ ಸ್ಫುಟವಾಗಿದ್ದು ಬಾವಲಿಗಳನ್ನು ಸುಲಭವಾಗಿ ತನ್ನೆಡೆಗೆ ಸೆಳೆಯುತ್ತದೆ.
ಕೃತಕ ಗಿಡಬಳ್ಳಿಗಳ ಹಿಂಭಾಗದಲ್ಲಿ ಅಡಗಿಸಿಟ್ಟ ಆಹಾರತಟ್ಟೆಯೊಂದನ್ನು ಪತ್ತೆ ಮಾಡಲು ಬಾವಲಿಗಳಿಗೆ ಎಷ್ಟು ಸಮಯ ತಗಲುತ್ತದೆ ಎಂದು ಸಂಶೋಧಕರು ಲೆಕ್ಕಾಚಾರ ಮಾಡಿದರು. ಕೇವಲ ಆಹಾರತಟ್ಟೆಯನ್ನು ಇಟ್ಟಾಗ, ಎಲ್ಲ ಬಾವಲಿಗಳಿಗೂ ಅದನ್ನು ಪತ್ತೆ ಮಾಡಲು ಅತ್ಯಧಿಕ ಸಮಯ ತಗಲಿತು. ಆಹಾರದ ತಟ್ಟೆಯ ಪಕ್ಕದಲ್ಲಿ ಎಲೆಯಾಕಾರದ ವಸ್ತುವನ್ನಿಟ್ಟಾಗ, ಆ ಸಮಯ ಸ್ವಲ್ಪ ಕಡಿಮೆಯಾಯಿತು.
ಆದರೆ ಡಿಶ್-ಎಲೆಯಾಕಾರದ ವಸ್ತುವನ್ನು ಆಹಾರದ ಪಕ್ಕದಲ್ಲಿಟ್ಟಾಗ, ಅದನ್ನು ಪತ್ತೆ ಮಾಡಲು ಬಾವಲಿಗಳಿಗೆ ತಗಲಿದ ಸಮಯ ಶೇಕಡಾ ೫೦ ಕಡಿಮೆಯಾಯಿತು!