೧೦೦.ಭಾರತೀಯ ನೃತ್ಯ - ಸಾವಿರಾರು ವರುಷಗಳ ಸಾಂಸ್ಕೃತಿಕ ಸಂಪತ್ತು
ಭಾರತೀಯ ನೃತ್ಯದಲ್ಲಿ ಎರಡು ಶೈಲಿಗಳು: ಶಾಸ್ತ್ರೀಯ ಮತ್ತು ಜಾನಪದ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿ ಎಂಟು ಪಾರಂಪರಿಕ ನೃತ್ಯ ಶೈಲಿಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳೆಂದು ಮಾನ್ಯ ಮಾಡುತ್ತದೆ. ಅವು: ಭರತನಾಟ್ಯ, ಕಥಕಳಿ, ಕಥಕ್, ಕುಚಿಪುಡಿ, ಒಡಿಸ್ಸಿ, ಸತ್ತ್ರಿಯ, ಮಣಿಪುರಿ ಮತ್ತು ಮೋಹಿನಿಯಾಟ್ಟಮ್.(ಫೋಟೋ: ಭರತನಾಟ್ಯ ಕಲಾವಿದೆ)
ಭರತನಾಟ್ಯ ಮತ್ತು ಇತರ ಶಾಸ್ತ್ರೀಯ ನೃತ್ಯಶೈಲಿಗಳ ಮೂಲ "ನಾಟ್ಯ ಶಾಸ್ತ್ರ" ಎಂಬ ಪುರಾತನ ಸಂಸ್ಕೃತ ಪಠ್ಯದಲ್ಲಿದೆ. ಶಾಸ್ತ್ರೀಯ ನಾಟ್ಯಶೈಲಿಗಳ ಮೇಲೆ ಹಿಂದೂ ಧರ್ಮದ ಪ್ರಭಾವ ಎದ್ದು ಕಾಣಿಸುತ್ತದೆ. ಮಹಾಶಿವನನ್ನು ನೃತ್ಯದ ಮಹಾಗುರುವೆಂದೇ ನಂಬಲಾಗಿದೆ. ಅದಕ್ಕೇ ಆತನಿಗೆ ನಟರಾಜನೆಂಬ ಹೆಸರು. ನಟರಾಜನ ಪ್ರಾಚೀನ ವಿಗ್ರಹಗಳು (ಶಿಲೆ ಮತ್ತು ತಾಮ್ರದ) ನಟರಾಜ ನರ್ತಿಸುವ ವಿವಿಧ ಭಂಗಿಗಳಲ್ಲಿವೆ. ದೇವಸ್ಥಾನಗಳಲ್ಲಿ ದೇವರ ಆರಾಧನೆಗಾಗಿ ಮತ್ತು ಅರಮನೆಗಳಲ್ಲಿ ರಾಜ ಹಾಗೂ ರಾಜಪರಿವಾರದವರ ಆಸ್ವಾದನೆಗಾಗಿ ನರ್ತಕರೂ ನರ್ತಕಿಯರೂ ನರ್ತಿಸುತ್ತಿದ್ದರು.
ಯಾವ ನೃತ್ಯ ಶೈಲಿಯ ಸಿದ್ಧಾಂತ, ತರಬೇತಿ, ನೃತ್ಯ-ಅಭಿವ್ಯಕ್ತಿಯ ವಿಧಾನ ಮತ್ತು ವಿವರಣೆಗಳು ಪ್ರಾಚೀನ ಶಾಸ್ತ್ರಿಯ ಪಠ್ಯಗಳಲ್ಲಿ, ಮುಖ್ಯವಾಗಿ "ನಾಟ್ಯ ಶಾಸ್ತ್ರ"ದಲ್ಲಿ ದಾಖಲಾಗಿವೆಯೋ ಅವನ್ನು ಶಾಸ್ತ್ರೀಯ ನೃತ್ಯಶೈಲಿಗಳೆಂದು ಒಪ್ಪಿಕೊಳ್ಳಲಾಗಿದೆ. ಈ ಶೈಲಿಗಳಲ್ಲಿ ಗುರು-ಶಿಷ್ಯ ಪರಂಪರೆಗೆ ಒತ್ತು ನೀಡಲಾಗಿದೆ. ಈ ಪರಂಪರೆ ಅನುಸರಿಸಿ ನೃತ್ಯ ಕಲಿಯುವುದು ಪ್ರಾಚೀನ ಪಠ್ಯಗಳ ಅಧ್ಯಯನ, ದೈಹಿಕ ಚಲನೆ ಮೂಲಕ ಅಭ್ಯಾಸ ಮತ್ತು ಅಭಿನಯವನ್ನು ನೃತ್ಯಕತೆ - ಸಂಗೀತಗಾರರು - ಸಂಗೀತವಾದ್ಯಗಳ ಜೊತೆ ಮೇಳೈಸಲಿಕ್ಕಾಗಿ ಕಠಿಣ ಅಭ್ಯಾಸಗಳನ್ನು ಒಳಗೊಂಡಿದೆ.
ಜಾನಪದ ನೃತ್ಯ ಶೈಲಿಗಳು ಪ್ರಧಾನವಾಗಿ ಬಾಯಿಂದ-ಬಾಯಿಗೆ ಎಂಬ ಪರಂಪರೆಯ ಮೂಲಕ ಉಳಿದು ಬೆಳೆದಿವೆ. ಇವುಗಳಲ್ಲಿ ಕೆಲವು: ಅಸ್ಸಾಮಿನ ಬಿಹು ಮತ್ತು ಬಗುರುಂಬ; ಗುಜರಾತಿನ ದಾಂಡಿಯಾ; ಹಿಮಾಚಲ ಪ್ರದೇಶದ ನಾಟಿ; ಕರ್ನಾಟಕದ ಡೊಳ್ಳು ಕುಣಿತ ಹಾಗೂ ಬೇಡರ ವೇಷ; ಕೇರಳದ ತಿರಯಾಟ್ಟಮ್ ಮತ್ತು ತೆಯ್ಯಮ್; ಒರಿಸ್ಸಾದ ದಲ್ಖಾಯಿ; ಪಂಜಾಬಿನ ಬಾಂಗ್ರಾ ಹಾಗೂ ಗಿಡ್ಡ; ರಾಜಸ್ಥಾನದ ಕಲ್ಬೆಲಿಯಾ, ಘೂಮಾರ್ ಮತ್ತು ರಾಸಿಯಾ; ಮಹಾರಾಷ್ಟ್ರದ ಲಾವಣಿ ಹಾಗೂ ಲೆಜಿಮ್. ಇವಲ್ಲದೆ, ಬುಡಕಟ್ಟು ಜನರು ತಮ್ಮದೇ ನೃತ್ಯ ಶೈಲಿಗಳನ್ನು ಉಳಿಸಿಕೊಂಡು ಬಂದಿದ್ದಾರೆ.
ಭಾರತದಲ್ಲಿ ನೃತ್ಯ ಎಂಬ ಅಭಿವ್ಯಕ್ತಿ ಕಲೆ ಸಾವಿರಾರು ವರುಷಗಳ ಮುಂಚೆ ಹುಟ್ಟಿತು. ಮಧ್ಯಪ್ರದೇಶದ ಯುನೆಸ್ಕೋ ಪಾರಂಪರಿಕ ತಾಣ ಭೀಮ್ ಬೆಟ್ಕಾದ ಗವಿಗಳಲ್ಲಿ ನೃತ್ಯದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಇವು ೧೦,೦೦೦ ವರುಷ ಹಳೆಯ ದಾಖಲೆಗಳು. ಸಿಂಧೂ ಕಣಿವೆ ನಾಗರಿಕತೆಯ ಉತ್ಖನನದಲ್ಲಿಯೂ ನೃತ್ಯಭಂಗಿಯ ಮೂರ್ತಿಗಳು ಪತ್ತೆಯಾಗಿವೆ. ವೇದಗಳಲ್ಲಂತೂ ನೃತ್ಯದ ವಿಪುಲ ಉಲ್ಲೇಖಗಳಿವೆ. ನೃತ್ಯದ ಪಠ್ಯಗಳ ಅತ್ಯಂತ ಪ್ರಾಚೀನ ಸಾಕ್ಷಿ “ನಾಟ ಸೂತ್ರಗಳು”; ಇವುಗಳ ಬಗ್ಗೆ ಪಾಣಿನಿಯ ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ. “ಸಂಸ್ಕೃತ ವ್ಯಾಕರಣ” ಬಗ್ಗೆ ಗ್ರಂಥ ರಚಿಸಿರುವ ಪಾಣಿನಿಯ ಕಾಲಾವಧಿ ಕ್ರಿ.ಪೂ. ೫೦೦ ಎಂದು ಪರಿಗಣಿಸಲಾಗಿದೆ.