ನಮ್ಮ ಹೆಮ್ಮೆಯ ಭಾರತ (ಭಾಗ 95)

Vivekananda Rock Memorial & Saint Thiruvalluvar Statue, India

೯೫.ಸ್ವಾಮಿ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿ
ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ವಾವತುರೈಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ೧೯೭೦ರಲ್ಲಿ ನಿರ್ಮಿಸಲಾಯಿತು. ಇದು ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಒಟ್ಟುಗೂಡುವ ಅಮೋಘ ಸ್ಥಳ. ಇಲ್ಲಿ, ಸಾಗರದ ನಡುವೆ ಇರುವ ಶಿಲೆಯಲ್ಲಿ ಸ್ವಾಮಿ ವಿವೇಕಾನಂದರ ತಪಸ್ಸು ಮಾಡಿದ್ದರೆಂದು ಪ್ರತೀತಿ. ಇದೀಗ, ಸಾವಿರಾರು ಪ್ರವಾಸಿಗಳನ್ನು ಆಕರ್ಷಿಸುವ ಸ್ಮಾರಕ.

ಸ್ಥಳ ಪುರಾಣದ ಅನುಸಾರ, ಇದು ಶಿವನನ್ನು ಸ್ತುತಿಸುತ್ತಾ ದೇವಿ ಕುಮಾರಿ ತಪಸ್ಸು ಮಾಡಿದ ಜಾಗ. ಇಲ್ಲಿನ ಬೃಹತ್ ಶಿಲೆಯಲ್ಲಿ ಎರಡು ಮುಖ್ಯ ಕಟ್ಟಡಗಳಿವೆ: ವಿವೇಕಾನಂದ ಮಂಟಪ ಮತ್ತು ಶ್ರೀಪಾದ ಮಂಟಪ. ಯುವಜನರ ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರಪ್ರಗತಿಯ ಪ್ರಧಾನ ಉದ್ದೇಶಗಳ ಸಾಧನೆಗೆ ಮುಡಿಪಾಗಿರುವ “ವಿವೇಕಾನಂದ ಕೇಂದ್ರ”ವೂ ಇಲ್ಲಿದೆ. ಜೊತೆಗೆ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

ಜನವರಿ ೧೯೬೨ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಮದ್ರಾಸಿನ ರಾಮಕೃಷ್ಣ ಮಿಷನಿನ ಸದಸ್ಯರು, ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸುವ ಪ್ರಸ್ತಾಪ ಮಾಡಿದರು. ಅಂತಿಮವಾಗಿ, ವಿವೇಕಾನಂದ ಶಿಲಾ ಸ್ಮಾರಕ ಸಮಿತಿಯ ಸಂಘಟನಾ ಕಾರ್ಯದರ್ಶಿ ಏಕನಾಥ ರಾನಡೆ ಅವರ ಸಂಘಟನಾ ಕೌಶಲ್ಯ ಮತ್ತು ಕೊಲ್ಕತಾದ ರಾಮಕೃಷ್ಣ ಮಠದ ಸಹಕಾರದಿಂದ ಈ ಬೃಹತ್ ಸ್ಮಾರಕದ ಕನಸು ೧೯೭೦ರಲ್ಲಿ ನನಸಾಯಿತು.
ಫೋಟೋ: ವಿವೇಕಾನಂದ ಶಿಲಾ ಸ್ಮಾರಕ ಮತ್ತು ತಮಿಳು ಕವಿ ತಿರುವಳ್ಳುವರ್ ಪ್ರತಿಮೆ - ವಿಹಂಗಮ ನೋಟ