೩೮.”ಆಪರೇಷನ್ ಫ್ಲಡ್” ಎಂಬ ಭಾರತದ ಮಹಾನ್ ಕ್ಷೀರ ಕ್ರಾಂತಿ
ಅದೊಂದು ಕಾಲವಿತ್ತು - ಭಾರತದ ಹಲವು ನಗರಗಳಲ್ಲಿ ಒಂದು ಲೀಟರ್ ಹಾಲಿಗಾಗಿ ಪರದಾಡಬೇಕಾದ ಕಾಲ. ಆದರೆ ಈಗ ಭಾರತದ ಎಲ್ಲ ಮಹಾನಗರ, ನಗರ ಮತ್ತು ಹಳ್ಳಿಗಳಲ್ಲಿ ಎಷ್ಟು ಬೇಕಾದರೂ ಹಾಲು ಲಭ್ಯ. ಇದಕ್ಕೆ ಕಾರಣ ಕ್ಷೀರಕ್ರಾಂತಿ.
ಇದೆಲ್ಲ ಶುರುವಾದದ್ದು ಹಾಲಿನ ಉತ್ಪಾದನೆ ಹೆಚ್ಚಿಸಲಿಕ್ಕಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ (ಎನ್.ಡಿ.ಡಿ.ಬಿ.) ೧೯೭೦ರಲ್ಲಿ “ಆಪರೇಷನ್ ಫ್ಲಡ್” ಎಂಬ ಮಹಾಯೋಜನೆ ಜ್ಯಾರಿ ಮಾಡಿದಾಗ. ಇದು ಹಾಲಿನ ಕೊರತೆಯ ದೇಶವಾಗಿದ್ದ ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವಾಗಿ ಬದಲಾಯಿಸಿತು. ಇದರಿಂದಾಗಿ ಮಹಾನ್ ದೇಶ ಭಾರತದಲ್ಲಿ ಕೇವಲ ೩೦ ವರುಷಗಳಲ್ಲಿ ತಲಾ ಹಾಲಿನ ಲಭ್ಯತೆ ಇಮ್ಮಡಿಯಾಯಿತು; ಜೊತೆಗೆ ಹಾಲಿನ ಉತ್ಪಾದನೆ ಭಾರತದ ರೈತರ ಪ್ರಧಾನ ಆದಾಯದ ಮೂಲವಾಯಿತು.
ಗುಜರಾತಿನ ಆನಂದ್‌ನಲ್ಲಿ ಶುರುವಾದ ಹಾಲು ಉತ್ಪಾದಕರ ಸಹಕಾರಿ ಆಂದೋಲನದ ಮಾದರಿಯಲ್ಲೇ “ಆಪರೇಷನ್ ಫ್ಲಡ್” ಅನ್ನು ರೂಪಿಸಲಾಗಿತ್ತು. ಇದರ ಯಶಸ್ಸಿಗೆ ಎನ್.ಡಿ.ಡಿ.ಬಿ.ಯ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರ ಮುಂದಾಳುತನ ಪ್ರಧಾನ ಕಾರಣ. “ಅಮುಲ್" ಸ್ಥಾಪಕ ಚೇರ್-ಮನ್ ಆಗಿದ್ದ ಅವರು ಅದನ್ನು ೩೦ ವರುಷ ಮುನ್ನಡೆಸಿದವರು.
ಭಾರತದ ಲಕ್ಷಗಟ್ಟಲೆ ರೈತರಿಗೂ ಅವರ ಕುಟುಂಬಗಳಿಗೂ “ಆಪರೇಷನ್ ಫ್ಲಡ್” ಆರ್ಥಿಕ ಸ್ವಾತಂತ್ರ್ಯ ಒದಗಿಸಿತು. ಆದ್ದರಿಂದಲೇ ಜಗತ್ತಿನ ಬೇರೆ ಯಾವ ಕ್ರಾಂತಿಯೂ ಇದಕ್ಕೆ ಸಾಟಿಯಲ್ಲ.
ಫೋಟೋ: ಡಾ. ವರ್ಗೀಸ್ ಕುರಿಯನ್